ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಪ್ರಸಕ್ತ ಶೈಕ್ಷಣಿಕ ಸಾಲಿನ ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆ ಮಾ.21 ರಿಂದ ಪ್ರಾರಂಭಗೊಂಡು, ಏ.4 ರವರೆಗೆ ಜರುಗಲಿವೆ. ಜಿಲ್ಲೆಯ 24,416 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು ಇದಕ್ಕಾಗಿ 82 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.ಚಳ್ಳಕೆರೆ ತಾಲೂಕಿನಲ್ಲಿ 20 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಿದ್ದು, 5,472 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಚಿತ್ರದುರ್ಗ ತಾಲೂಕಿನಲ್ಲಿ 22 ಪರೀಕ್ಷಾ ಕೇಂದ್ರಗಳಿದ್ದು, 6,635 ವಿದ್ಯಾರ್ಥಿಗಳು, ಹಿರಿಯೂರಿನ 13 ಕೇಂದ್ರಗಳಲ್ಲಿ 3,677 ವಿದ್ಯಾರ್ಥಿಗಳು, ಹೊಳಲ್ಕೆರೆ ತಾಲೂಕಿನಲ್ಲಿ 8 ಕೇಂದ್ರಗಳಲ್ಲಿ 854 ವಿದ್ಯಾರ್ಥಿಗಳು. ಹೊಸದುರ್ಗ ತಾಲೂಕಿನಲ್ಲಿ 11 ಪರೀಕ್ಷಾ ಕೇಂದ್ರಗಳಲ್ಲಿ 3,195 ವಿದ್ಯಾರ್ಥಿಗಳು ಹಾಗೂ ಮೊಳಕಾಲ್ಮೂರು ತಾಲೂಕಿನಲ್ಲಿ 8 ಕೇಂದ್ರಗಳಲ್ಲಿ 2,583 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದರು.
ಪರೀಕ್ಷೆಯ ಪಾವಿತ್ರತೆ ಕಾಪಾಡಲು ಚಿತ್ರದುರ್ಗ ಜಿಪಂ ಕಚೇರಿಯಲ್ಲಿ ಕೇಂದ್ರೀಕೃತ ವೀಕ್ಷಣಾ ಘಟಕ ಸ್ಥಾಪಿಸಿದ್ದು, ಒಟ್ಟು 24 ಅಧಿಕಾರಿ, ಸಿಬ್ಬಂದಿ ಒಳಗೊಂಡ ನೋಡಲ್ ಅಧಿಕಾರಿಗಳು ಮತ್ತು ವೀಕ್ಷಕರ ತಂಡ ರಚಿಸಲಾಗಿದೆ. ಇದರ ಜೊತೆಗೆ ತಾಂತ್ರಿಕ ಸಹಾಯಕರನ್ನು ಕೂಡ ನಿಯೋಜಿಸಲಾಗಿದೆ. ಜಿಪಂ ಸಿಇಒ ಅವರನ್ನು ಕೇಂದ್ರೀಕೃತ ವೀಕ್ಷಣಾ ಘಟಕಕಕ್ಕೆ ಉಸ್ತುವಾರಿ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದರು.ಒಟ್ಟು 82 ಪರೀಕ್ಷಾ ಕೇಂದ್ರಗಳಲ್ಲಿನ 1,135 ಕೊಠಡಿಗಳಿಗೆ ವೆಬ್ ಕಾಸ್ಟಿಂಗ್‍ಗಾಗಿ ಸಿಸಿಟಿವಿ ಅಳವಡಿಸಲಾಗಿದೆ. ಈ ಕೇಂದ್ರಗಳಿಗೆ ಪ್ರಶ್ನೆಪತ್ರಿಕೆ ವಿತರಿಸಲು ಹಾಗೂ ಉತ್ತರ ಪತ್ರಿಕೆಗಳನ್ನು ಹಿಂಪಡೆದು ಸಂಬಂಧಪಟ್ಟ ಹಂತಕ್ಕೆ ತಲುಪಿಸಲು 35 ಮಾರ್ಗಾಧಿಕಾರಿಗಳನ್ನು ಈಗಾಗಲೆ ನೇಮಕ ಮಾಡಿಕೊಳ್ಳಲಾಗಿದ್ದು, ಈ ತಂಡಕ್ಕೆ ಸಶಸ್ತ್ರ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲು ಕ್ರಮ ಕೈಗೊಳ್ಳಲಾಗಿದೆ.
ಪರೀಕ್ಷಾ ಕೇಂದ್ರಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ಇಲಾಖೆಯ ಸಿಬ್ಬಂದಿ, ತಜ್ಞರನ್ನು ಪ್ರಥಮ ಚಿಕಿತ್ಸಾ ವ್ಯವಸ್ಥೆಯೊಂದಿಗೆ ನಿಯೋಜಿಸಲು ಅಗತ್ಯ ಕ್ರಮ ವಹಿಸಲಾಗಿದೆ. ಪರೀಕ್ಷಾ ಪಾವಿತ್ರ್ಯತೆ ಕಾಪಾಡಲು ಹಾಗೂ ಪರೀಕ್ಷಾ ಸುರಕ್ಷತಾ ಹಿತದೃಷ್ಟಿಯಿಂದ ಜಿಲ್ಲೆಯ ಎಲ್ಲ ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀ. ವ್ಯಾಪ್ತಿಯಲ್ಲಿ ಪರೀಕ್ಷಾ ಅವಧಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಪರೀಕ್ಷಾ ಸಮಯಗಳಲ್ಲಿ ವಿದ್ಯುತ್ ಅಡಚಣೆಯಾಗದಂತೆ ನೋಡಿಕೊಳ್ಳಲು ಬೆಸ್ಕಾಂ ಕಾರ್ಯಪಾಲಕ ಅಭಿಯಂತರರಿಗೆ ನಿರ್ದೇಶನ ನೀಡಲಾಗಿದೆ ಎಂದಿದ್ದಾರೆ.ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಸಿಸಿ ಟಿವಿ, ವೆಬ್‍ಕಾಸ್ಟಿಂಗ್ ಸೇರಿದಂತೆ ಅನ್ಯ ವಿಷಯಗಳ ಬಗ್ಗೆ ಅನಗತ್ಯ ಆಲೋಚನೆ ಮಾಡದೆ, ಅಭ್ಯಾಸದ ಕಡೆ, ಉತ್ತಮ ರೀತಿಯಲ್ಲಿ ಪರೀಕ್ಷೆ ಬರೆಯುವತ್ತ ತಮ್ಮ ಗಮನ ಕೇಂದ್ರೀಕರಿಸಬೇಕು. ಯಾವುದೇ ಊಹಾಪೋಹ ಹಾಗೂ ವದಂತಿಗಳಿಗೆ ಕಿವಿಗೊಡದೆ, ಆತ್ಮವಿಶ್ವಾಸದಿಂದ ಪರೀಕ್ಷೆ ಬರೆದು, ಜಿಲ್ಲೆಗೆ ಉತ್ತಮ ಫಲಿತಾಂಶ ತರಬೇಕು ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಮನವಿ ಮಾಡಿದ್ದಾರೆ.
ವಿದ್ಯಾರ್ಥಿಗಳಿಗೆ ಶುಭಕೋರಿದ ಜಿಲ್ಲಾಧಿಕಾರಿ
ಎಸ್‍ಎಸ್‍ಎಲ್‍ಸಿ ಪರೀಕ್ಷೆಯು ವಿದ್ಯಾರ್ಥಿ ಜೀವನದ ಒಂದು ಪ್ರಮುಖ ಘಟ್ಟವಾಗಿದ್ದು, ಹಬ್ಬದಂತೆ ಆಚರಣೆ ಮಾಡಬೇಕು. ಪರೀಕ್ಷೆ ಬರೆಯುವ ಎಲ್ಲ ವಿದ್ಯಾರ್ಥಿಗಳಿಗೆ ಒಳಿತಾಗಲಿ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಶುಭ ಕೋರಿದ್ದಾರೆ.ಪರೀಕ್ಷೆ ಸಮೀಪಿಸಿತೆಂದು ಆತಂಕ ಬೇಡ, ನಿಮ್ಮಗಳ ದಿನನಿತ್ಯ ಕಾರ್ಯಗಳ ಜೊತೆಗೆ ಓದುವ ಅವಧಿ ಹೆಚ್ಚಿಸಿಕೊಳ್ಳಿ. ಶಿಕ್ಷಣ ಇಲಾಖೆ ನಡೆಸಿರುವ ಅನೇಕ ವಿಷಯ ಸಾಮರ್ಥ್ಯ ಬೆಳೆಸಿಕೊಳ್ಳುವ ಕಾರ್ಯಾಗಾರಗಳು ಮತ್ತು ಪೂರ್ವ ಸಿದ್ಧತಾ ಪರೀಕ್ಷೆಗಳು ನಿಮ್ಮನ್ನು ಸಬಲರನ್ನಾಗಿಸಿವೆ. ನೀವು ಸುಲಭವಾಗಿ ಪರೀಕ್ಷೆಯನ್ನು ಬರೆಯಲು ಸಮರ್ಥರಾಗಿದ್ದೀರಾ ಎಂದು ನಂಬಿದ್ದೇವೆ.
ಪರೀಕ್ಷಾ ಸಮಯದ 30 ನಿಮಿಷ ಮುಂಚೆಯೇ ಕೇಂದ್ರದಲ್ಲಿ ಇರುವುದನ್ನು ಮರೆಯಬೇಡಿ. ಪ್ರವೇಶ ಪತ್ರ ನಿಮ್ಮೊಂದಿಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಪ್ರಶ್ನೆ ಪತ್ರಿಕೆಯನ್ನು ಮೊದಲು ಚೆನ್ನಾಗಿ ಓದುವುದನ್ನು ಮರೆಯಬೇಡಿ, ಆತ್ಮವಿಶ್ವಾಸದಿಂದ ಪರೀಕ್ಷೆಯನ್ನು ಬರೆದು ಉತ್ತಮ ಫಲಿತಾಂಶ ಪಡೆಯುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಸ್ ಶುಭ ಹಾರೈಸಿದ್ದಾರೆ.