ಸಾರಾಂಶ
ತಾಲೂಕಿನ ಪ್ರತಿ ಪ್ರೌಢಶಾಲೆಯ ಗರಿಷ್ಠ ಅಂಕ ಗಳಿಕೆಯ ಮೂರು ವಿದ್ಯಾರ್ಥಿಗಳಿಗೆ ಸನ್ಮಾನ । ಶಂಭುಲಿಂಗೇಶ್ವರ ಎಜುಕೇಷನ್ ಟ್ರಸ್ಟ್ನಿಂದ ಅಭಿನಂದನೆ
ಕನ್ನಡಪ್ರಭ ವಾರ್ತೆ ಪಾಂಡವಪುರತಾಲೂಕಿನ ಜಯಂತಿನಗರದ ಶಂಭುಲಿಂಗೇಶ್ವರ ಎಜುಕೇಷನ್ ಟ್ರಸ್ಟ್ ಮತ್ತು ಪದವಿ ಪೂರ್ವ ಕಾಲೇಜು ಸಂಯುಕ್ತಾಶ್ರಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದ ತಾಲೂಕಿನ ಪ್ರತಿಯೊಂದು ಪ್ರೌಢಶಾಲೆಯ ಮೂವರು ವಿದ್ಯಾರ್ಥಿಗಳಿಗೆ ಕಾಲೇಜು ಸಭಾಂಗಣದಲ್ಲಿ ಆಡಳಿತ ಮಂಡಳಿ ವತಿಯಿಂದ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.
ಮುರಾರ್ಜಿ, ಆದರ್ಶ, ಕಿತ್ತೂರು ರಾಣಿ ಚೆನ್ನಮ್ಮ, ಅಂಬೇಡ್ಕರ್ ವಸತಿ ಶಾಲೆಗಳು ಸೇರಿ ಅನುದಾನಿತ ಮತ್ತು ಅನುದಾನ ರಹಿತ ಒಟ್ಟು48 ಪ್ರೌಢ ಶಾಲೆಗಳಲ್ಲಿನ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದ ಒಟ್ಟು 144 ವಿದ್ಯಾರ್ಥಿಗಳಿಗೆ ದಿ.ಎ.ಎನ್.ಮಾಯಣ್ಣೇಗೌಡ ಎರೇಗೌಡನಹಳ್ಳಿ, ಕೆ.ಆರ್.ಪುಟ್ಟೇಗೌಡ ಕೆನ್ನಾಳು ಹಾಗೂ ತೊಟ್ಟಿಲು ಪುಟ್ಟೇಗೌಡ ಹುಲಿವಾನ ಇವರ ಹೆಸರಿನಲ್ಲಿ ಪ್ರತಿಭಾ ಪುರಸ್ಕಾರ ನೀಡಲಾಯಿತು. ತಾಲೂಕಿನ ವಿವಿಧ ಶಾಲೆಗಳಿಂದ ಪಾಲಕರೊಂದಿಗೆ ಆಗಮಿಸಿದ ವಿದ್ಯಾರ್ಥಿಗಳು ಪ್ರತಿಭಾ ಪುರಸ್ಕಾರ ಸ್ವೀಕರಿಸಿ ಸಂತಸ ವ್ಯಕ್ತಪಡಿಸಿದರು.ಇದೇ ವೇಳೆ ಶಂಭುಲಿಂಗೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿ ಪಿಯುಸಿ ವಿಜ್ಷಾನ ವಿಭಾಗದಲ್ಲಿ ಗರಿಷ್ಠ ಅಂಕ ಗಳಿಸಿರುವ ವಿದ್ಯಾರ್ಥಿಗಳಾದ ಎಂ.ಕೀರ್ತನಾ (92.33), ವೈ.ಪಿ.ದರ್ಶಿನಿ (ಶೇ.88), ತನ್ಮಯಿ (ಶೇ.88), ಪ್ರಿಯಾ (86.33), ಡಿ.ಆರ್.ರಕ್ಷಿತಾ (ಶೇ.86) ಅವರಿಗೂ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಶಂಭುಲಿಂಗೇಶ್ವರ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎಂ.ಪಂಚಲಿಂಗೇಗೌಡ ಮಾತನಾಡಿ, ಶಿಕ್ಷಣ ಸಂಸ್ಥೆ ಪ್ರತಿವರ್ಷ ಒಂದಿಲ್ಲೊಂದು ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದೆ. ಜತೆಗೆ ಗೇಮ್ಸ್, ಅಥ್ಲೆಟಿಕ್ಸ್, ಮ್ಯಾರಥಾನ್, ಗುಡ್ಡಗಾಡು ಓಟ, ಚರ್ಚಾ ಸ್ಪರ್ಧೆ ಇನ್ನಿತರ ಚಟುವಟಿಕೆಗಳು ಕೂಡ ನಿರಂತರವಾಗಿವೆ ಎಂದರು.ಇಡೀ ಜಿಲ್ಲೆಗೆ ನಮ್ಮ ಶಿಕ್ಷಣ ಸಂಸ್ಥೆಯಲ್ಲೇ ಮೊದಲು 5 ತರಬೇತಿ ಕಾಲೇಜುಗಳನ್ನು ತೆರೆಯಲಾಯಿತು. ರಾಷ್ಟ್ರೀಯ ಯೋಗ ತರಬೇತಿ ಕಾರ್ಯಾಗಾರವನ್ನು 3 ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.
ಸರಕಾರಿ ಪದವಿ ಪೂರ್ವ ಕಾಲೇಜು ಮುಖ್ಯ ಶಿಕ್ಷಕ ಮಹದೇವಪ್ಪ ಮಾತನಾಡಿ, ಹಿಂದಿನ ಎಲ್ಲಾ ವರ್ಷಗಳಿಗಿಂತ ಈ ವರ್ಷದ ಪರೀಕ್ಷೆ ಕ್ಲಿಷ್ಟಕರವಾಗಿತ್ತು. ವಿದ್ಯಾರ್ಥಿಗಳು ನೈಜ ಪರೀಕ್ಷೆ ಎದುರಿಸಿದ್ದಾರೆ. ಪ್ರರಿಶ್ರಮ ಮತ್ತು ಧೈರ್ಯ ಇದ್ದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಸಾಧಕರಿಗೆ ಧೈರ್ಯ, ಹಂಬಲ ಮತ್ತು ತವಕ ಬೇಕಿದೆ ಎಂದು ತಿಳಿಸಿದರು.ಮೊಬೈಲ್ ಹಾವಳಿಯಿಂದ ಮಕ್ಕಳು ಒಳ್ಳೆಯದಕ್ಕಿಂತ ಕೆಟ್ಟದನ್ನು ಅವಲಂಭಿಸುವುದು ಹೆಚ್ಚಾಗಿದೆ. ಮಕ್ಕಳು ಓದಿನ ಜತೆಗೆ ಸಂಸ್ಕಾರವನ್ನು ಕಲಿಯಬೇಕು. ನಮ್ಮವರು ಬದುಕನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದ ಕಾರಣ ಸಂಸ್ಕಾರ ಹಾಳಾಗುತ್ತಿದೆ. ನಮ್ಮ ಮಾತು ಮತ್ತು ನಡವಳಿಕೆ ಯಾರಿಗೂ ನೋವು ಕೊಡಬಾರದು. ಪಾಲಕರು ಇದನ್ನು ಮಕ್ಕಳಿಗೆ ಹೇಳಿಕೊಡಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಹೊನ್ನರಾಜು, ಸಂಘಟನಾ ಕಾರ್ಯದರ್ಶಿ ಆರ್.ವಿ.ಸೌಮ್ಯ, ಆಡಳಿತಾಧಿಕಾರಿ ಪಿ.ಅಕ್ಷಯ್, ಶಶಿ, ರಾಜುಗೌಡ, ಡಿಎಂಎಸ್ ಜ್ಞಾನ ಕುಟೀರ ವಿದ್ಯಾಸಂಸ್ಥೆ ಮುಖ್ಯ ಶಿಕ್ಷಕ ಜಗದೀಶ್, ಕೆ.ಆರ್.ಮೋಹನ್‌ರಾಜು ಇತರರು ಇದ್ದರು.----------
12ಕೆಎಂಎನ್ ಡಿ14ಪಾಂಡವಪುರ ಜಯಂತಿನಗರದ ಶಂಭುಲಿಂಗೇಶ್ವರ ಶಿಕ್ಷಣ ಸಂಸ್ಥೆಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದ ಎಲ್ಲಾ ಪ್ರೌಢಶಾಲೆಯ ಮೂವರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.