ಸಾರಾಂಶ
ರಾಜ್ಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಶುಕ್ರವಾರ ಪ್ರಕಟಿಸಿದ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಶೇ. 91.12 ಫಲಿತಾಂಶದೊಂದಿಗೆ ರಾಜ್ಯಕ್ಕೇ ಪ್ರಥಮ ಸ್ಥಾನ ಪಡೆದುಕೊಂಡಿದೆ.
ಮಂಗಳೂರು : ರಾಜ್ಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಶುಕ್ರವಾರ ಪ್ರಕಟಿಸಿದ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಶೇ. 91.12 ಫಲಿತಾಂಶದೊಂದಿಗೆ ರಾಜ್ಯಕ್ಕೇ ಪ್ರಥಮ ಸ್ಥಾನ ಪಡೆದುಕೊಂಡಿದೆ.
ಕಳೆದ ವರ್ಷದ ಫಲಿತಾಂಶದಲ್ಲಿ 2ನೇ ಸ್ಥಾನದಲ್ಲಿದ್ದ ದ.ಕ. ಜಿಲ್ಲೆ 2024-25ನೇ ಸಾಲಿನಲ್ಲಿ ಮೊದಲ ಸ್ಥಾನಕ್ಕೇರಿದೆ. ಕಳೆದ ಸಾಲಿನಲ್ಲಿ ಶೇ. 92.12 ಫಲಿತಾಂಶ ದಾಖಲಾಗಿತ್ತು.2022-23ನೇ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ದ.ಕ. ಜಿಲ್ಲೆ ‘ಎ’ ಗ್ರೇಡ್‌ನೊಂದಿಗೆ 17ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.
ಶಿಕ್ಷಣ ಸಂಸ್ಥೆಗಳ ಹಬ್ ಆಗಿ ಗುರುತಿಸಿಕೊಂಡಿರುವ ದ.ಕ. ಜಿಲ್ಲೆ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷಾ ಫಲಿತಾಂಶಗಳಲ್ಲಿ ಸದಾ ಮುಂಚೂಣಿಯಲ್ಲಿರುತ್ತಿತ್ತು. ಕಳೆದ ವರ್ಷವನ್ನು ಹೊರತುಪಡಿಸಿ ಹಿಂದಿನ ಕೆಲವು ವರ್ಷಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ತೀವ್ರವಾದ ಕುಸಿತವನ್ನು ಕಂಡಿತ್ತು. ದ.ಕ. ಜಿಲ್ಲೆ ಕಳೆದ ವರ್ಷದಿಂದ ಮತ್ತೆ ಚೇತರಿಸಿಕೊಂಡು, ಈ ವರ್ಷ ಮತ್ತೆ ರಾಜ್ಯಕ್ಕೇ ಪ್ರಥಮ ಸ್ಥಾನ ಪಡೆಯುವಲ್ಲಿ ಸಫಲವಾಗಿದೆ.
ಪ್ರಸಕ್ತ ವರ್ಷ ದ.ಕ. ಜಿಲ್ಲೆಯಲ್ಲಿ 27,795 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಇದರಲ್ಲಿ 25,326 ಮಂದಿ ಉತ್ತೀರ್ಣರಾಗಿದ್ದು, ಶೇ.91.12 ಫಲಿತಾಂಶ ದಾಖಲಾಗಿದೆ. 2021- 2022 ನೇ ಶೈಕ್ಷಣಿಕ ವರ್ಷದಲ್ಲಿ ರಾಜ್ಯದಲ್ಲಿ 21 ನೇ ಸ್ಥಾನದಲ್ಲಿದ್ದ ದಕ್ಷಿಣ ಕನ್ನಡ ಜಿಲ್ಲೆ, 2022- 2023 ನೇ ಸಾಲಿನಲ್ಲಿ 17 ನೇ ಸ್ಥಾನ ತಲುಪಿತ್ತು. ಶಿಕ್ಷಣ ಕಾಶಿ ಎಂದೇ ಕರೆಸಲ್ಪಡುವ ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಕಳವಳಕಾರಿಯಾಗಿ ಕುಸಿದ ಪರಿಣಾಮ ಜಿಲ್ಲಾಮಟ್ಟದ ಅಧಿಕಾರಿಗಳು ರಾಜ್ಯ ಮಟ್ಟದ ಸಭೆಗಳಲ್ಲಿ ತೀವ್ರ ಮುಜುಗರ ಅನುಭವಿಸುವ ಪರಿಸ್ಥಿತಿ ಸೃಷ್ಟಿಯಾಗಿತ್ತು.
7 ಮಂದಿಗೆ ತಲಾ 624 ಅಂಕ:
ದ.ಕ. ಜಿಲ್ಲೆಯ ಏಳು ಮಂದಿ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಲಾ 624 ಅಂಕಗಳನ್ನು ಗಳಿಸಿದ್ದು, ರಾಜ್ಯದಲ್ಲಿ ದ್ವಿತೀಯ ಸ್ಥಾನವನ್ನು ಹಂಚಿಕೊಂಡಿದ್ದಾರೆ.
ಸುಳ್ಯ ಜೂನಿಯರ್ ಕಾಲೇಜಿನ ಸ್ರುಜನಾದಿತ್ಯಶೀಲ ಕೆ., ಮಂಗಳೂರು ಡೊಂಗರಕೇರಿ ಕೆನರಾ ಹೈಸ್ಕೂಲ್‌ನ ಶ್ರೀಲಕ್ಷ್ಮಿ ಬಿ. ಪೈ, ಪುತ್ತೂರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಚಿನ್ಮಯಿ ಎಲ್., ಸುಲ್ಯದ ಭಗವಾನ್ ಸತ್ಯಸಾಯಿ ಎಚ್‌ಎಸ್ ಶಾಲೆಯ ಕುನಾಲ್ ರವಿತೇಜ್, ಪುತ್ತೂರು ಕಾಣಿಯೂರು ಪ್ರಗತಿ ಹೈಸ್ಕೂಲ್‌ನ ಹಂಸಿಕಾ, ಸುಳ್ಯ ಬ್ಲೆಸ್ಡ್ ಕುರಿಯಾಕೋಸ್ ಹೈಸ್ಕೂಲ್‌ನ ಕೆ.ಜಿ. ಚಿರಸ್ವಿ, ಮೂಡುಬಿದಿರೆ ಎಕ್ಸಲೆಂಟ್ ಆಂಗ್ಲ ಮಾಧ್ಯಮ ಹೈಸ್ಕೂಲ್‌ನ ಸಾನ್ನಿಧ್ಯ ರಾವ್ ತಲಾ 624 ಅಂಕಗಳನ್ನು ಗಳಿಸಿದ್ದಾರೆ.
148 ಶಾಲೆಗಳಿಗೆ ಶೇ. ನೂರು ಫಲಿತಾಂಶ: ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ದ.ಕ. ಜಿಲ್ಲೆಯ ಒಟ್ಟು 148 ಶಾಲೆಗಳು ಶೇ. 100 ಫಲಿತಾಂಶ ದಾಖಲಿಸಿವೆ.
ಬಂಟ್ವಾಳ ಮತ್ತು ಮಂಗಳೂರು ದಕ್ಷಿಣದ ತಲಾ 22 ಶಾಲೆಗಳು, ಬೆಳ್ತಂಗಡಿ, ಮಂಗಳೂರು ಉತ್ತರದ ತಲಾ 27 ಶಾಲೆಗಳು, ಮೂಡಬಿದಿರೆಯ 8, ಪುತ್ತೂರಿನ 29, ಸುಳ್ಯದ 13 ಶಾಲೆಗಳು ಶೇ. 100 ಫಲಿತಾಂಶ ದಾಖಲಿಸಿವೆ.
ಸರ್ಕಾರಿ ಶಾಲೆಗಳಿಗೆ ಸಂಬಂಧಿಸಿ ದ.ಕ. ಜಿಲ್ಲೆಯಲ್ಲಿ ಶೇ 87.56 ಫಲಿತಾಂಶ ದಾಖಲಾಗಿದೆ. ಸರ್ಕಾರಿ ಶಾಲೆಗಳಿಂದ ಪರೀಕ್ಷೆ ಬರೆದ ಒಟ್ಟು 8,507 ವಿದ್ಯಾರ್ಥಿಗಳಲ್ಲಿ 7,449 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಬಂಟ್ವಾಳದಲ್ಲಿ ಶೇ. 84.27, ಬೆಳ್ತಂಗಡಿಯಲ್ಲಿ ಶೇ. 92.67, ಮಂಗಳೂರು ಉತ್ತರದಲ್ಲಿ ಶೇ. 86.23, ಮಂಗಳೂರು ದಕ್ಷಿಣದಲ್ಲಿ ಶೇ. 82.06, ಮೂಡುಬಿದಿರೆಯಲ್ಲಿ ಶೇ. 87.46, ಪುತ್ತೂರಿನಲ್ಲಿ ಶೇ. 90.87 ಹಾಗೂ ಸುಳ್ಯದ ಸರ್ಕಾರಿ ಶಾಲೆಗಳಲ್ಲಿ ಶೇ. 87.45 ಫಲಿತಾಂಶ ದಾಖಲಾಗಿದೆ.
ಅನುದಾನಿತ ಶಾಲೆಗಳಿಗೆ ಸಂಬಂಧಿಸಿ ಜಿಲ್ಲೆಯಲ್ಲಿ ಶೇ. 89.76 ಫಲಿತಾಂಶ ದಾಖಲಾಗಿದೆ. ಅನುದಾನ ರಹಿತ ಶಾಲೆಗಳಿಂದ ಒಟ್ಟು 7,360 ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದು 6,849 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ. ಬಂಟ್ವಾಳದಲ್ಲಿ ಶೇ. 85.02, ಬೆಳ್ತಂಗಡಿ ಶೇ. 88.17, ಮಂಗಳೂರು ಉತ್ತರ ಶೇ. 90.78, ಮಂಗಳೂರು ದಕ್ಷಿಣ ಶೇ. 90.05, ಮೂಡುಬಿದಿರೆಯಲ್ಲಿ ಶೇ. 87.07, ಪುತ್ತೂರಿನಲ್ಲಿ ಶೇ. 93.29, ಸುಳ್ಯದಲ್ಲಿ ಶೇ. 91.91 ಫಲಿತಾಂಶ ದಾಖಲಾಗಿದೆ.
ಅನುದಾನ ರಹಿತ ಶಾಲೆಗಳಲ್ಲಿ ಜಿಲ್ಲೆಯಲ್ಲಿ ಶೇ. 94.59 ಫಲಿತಾಂಶ ದಾಖಲಾಗಿದ್ದು, ಪರೀಕ್ಷೆ ಬರೆದ 11,659 ವಿದ್ಯಾರ್ಥಿಗಳಲ್ಲಿ 11,028 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಬಂಟ್ವಾಳ ಶೇ. 92.21, ಬೆಳ್ತಂಗಡಿ 95.76, ಮಂಗಳೂರು ಉತ್ತರದಲ್ಲಿ ಶೇ. 94.23, ಮಂಗಳೂರು ದಕ್ಷಿಣದಲ್ಲಿ ಶೇ. 92.07, ಮೂಡುಬಿದಿರೆಯಲ್ಲಿ 97.55, ಪುತ್ತೂರಿನಲ್ಲಿ ಶೇ. 96.89, ಸುಳ್ಯದಲ್ಲಿ 98.59 ಫಲಿತಾಂಶ ದಾಖಲಾಗಿದೆ.ತುಳು ಭಾಷಾ 818 ವಿದ್ಯಾರ್ಥಿಗಳು ಪಾಸ್‌ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 818 ವಿದ್ಯಾರ್ಥಿಗಳು ತುಳು ಭಾಷಾ ವಿಷಯದಲ್ಲಿ ತೇರ್ಗಡೆಯಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಉಡುಪಿಯ ಪ್ರೌಢಶಾಲೆಯಲ್ಲಿ ತೃತೀಯ ಭಾಷೆಯಾಗಿ ತುಳು ಭಾಷೆಯನ್ನು ಆಯ್ದಕೊಂಡು 847 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಈ ಪೈಕಿ 818 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. 317 ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಪಡೆದಿದ್ದಾರೆ. ತುಳು ಪಠ್ಯವನ್ನು ಆಯ್ದುಕೊಂಡ ವಿದ್ಯಾರ್ಥಿಗಳಿಗೆ ಹಾಗೂ ತುಳುಭಾಷಾ ಶಿಕ್ಷಕರಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಅಭಿನಂದನೆ ಸಲ್ಲಿಸಿದ್ದಾರೆ.