ಗದಗ: 2026ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಜಿಲ್ಲೆ ಕಳೆದ ಸಾಲಿಗಿಂತ ಒಂದು ಸ್ಥಾನ ಮೇಲಿದ್ದು, 16ನೇ ಸ್ಥಾನ ಪಡೆದುಕೊಂಡು ಕಳೆದ ಬಾರಿಗಿಂತ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಗಣನೀಯ ಸುಧಾರಣೆ ಕಂಡಿದ್ದು, ಶೇ. 95.24ರಷ್ಟು ಪ್ರಗತಿ ದಾಖಲಿಸಿದೆ.
ಜಿಲ್ಲೆಯ ಒಟ್ಟು 14612 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅವರಲ್ಲಿ 13916 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇದರೊಂದಿಗೆ ಜಿಲ್ಲೆಯ ಒಟ್ಟು ಫಲಿತಾಂಶ ಪ್ರಮಾಣ ಶೇ. 95.24ರಷ್ಟಾಗಿದ್ದು, ಇದು ರಾಜ್ಯದ ಸರಾಸರಿ ಶೇ. 91.60ಕ್ಕಿಂತ ಹೆಚ್ಚಾಗಿದೆ.125 ಶಾಲೆಗಳು ಶೇ. 100: ಜಿಲ್ಲೆಯ 316 ಪ್ರೌಢಶಾಲೆಗಳ ಪೈಕಿ 125 ಶಾಲೆಗಳು ಶೇ.100 ಫಲಿತಾಂಶ ದಾಖಲಿಸಿರುವುದು ವಿಶೇಷ. ಕೇವಲ ಒಂದು ಶಾಲೆಯಲ್ಲಿ ಮಾತ್ರ ಶೇ. 60ಕ್ಕಿಂತ ಕಡಿಮೆ ಫಲಿತಾಂಶ ಕಂಡುಬಂದಿದೆ. ಕಳೆದ ಬಾರಿಗೆ ಹೊಲಿಸಿದರೆ ಇದು ಜಿಲ್ಲೆಯ ಶಿಕ್ಷಣ ವ್ಯವಸ್ಥೆಯ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ. ಈ ಪೈಕಿ 63 ಸರ್ಕಾರಿ ಶಾಲೆಗಳು, 29 ಅನುದಾನಿತ, ಅನುದಾನರಹಿತ 33 ಶಾಲೆಗಳು ಶೇ. 100ರಷ್ಟು ಫಲಿತಾಂಶ ಬಂದಿದೆ.
ಲಿಂಗವಾರು ಫಲಿತಾಂಶವನ್ನು ಗಮನಿಸಿದರೆ, ವಿದ್ಯಾರ್ಥಿಗಳಲ್ಲಿ 7028 ವಿದ್ಯಾರ್ಥಿಗಳು ಹಾಜರಾಗಿದ್ದು, 6508 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ(ಶೇ. 92.60). ವಿದ್ಯಾರ್ಥಿನಿಯರಲ್ಲಿ 7584 ವಿದ್ಯಾರ್ಥಿನಿಯರು ಹಾಜರಾಗಿದ್ದು, 7408 ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ(ಶೇ. 97.68). ಈ ಮೂಲಕ ಜಿಲ್ಲೆಯಲ್ಲಿ ಹೆಣ್ಣುಮಕ್ಕಳೇ ಮುಂಚೂಣಿಯಲ್ಲಿದ್ದು, ಉತ್ತಮ ಸಾಧನೆ ತೋರಿದ್ದಾರೆ.ವೈಯಕ್ತಿಕ ಸಾಧನೆ: ರೋಣ ತಾಲೂಕಿನ ಇಟಗಿ ಸರ್ಕಾರಿ ಆದರ್ಶ ವಿದ್ಯಾಲಯದ ವಿದ್ಯಾರ್ಥಿ ಪ್ರವೀಣಕುಮಾರ್ ಈರಪ್ಪ ಸೊಬಗಿನ 622 ಅಂಕ(ಶೇ. 99.52) ಪಡೆದು ಪ್ರಥಮ ಸ್ಥಾನ ಪಡೆದಿದ್ದಾರೆ. ಮುಂಡರಗಿ ತಾಲೂಕಿನ ಸಂಧ್ಯಾ ಭೋಜಪ್ಪ ಲಮಾಣಿ 621 ಅಂಕ(ಶೇ. 99.36) ಪಡೆದು ದ್ವಿತೀಯ, ಸುಷ್ಮಾ ತವರೆಪ್ಪ ನಾಯಕ್ ಹಾಗೂ ರೇವಂತ್ ರೆಡ್ಡಿ ನಾಗರಾಜ್ ಇಬ್ಬರೂ 620 ಅಂಕ(ಶೇ. 99.20) ತೃತೀಯ ಸ್ಥಾನ ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ.
ಮುಂಡರಗಿ ಪ್ರಥಮ: ಮುಂಡರಗಿ ತಾಲೂಕು ಶೇ. 97.47 ಫಲಿತಾಂಶದೊಂದಿಗೆ ಪ್ರಥಮ ಸ್ಥಾನದಲ್ಲಿದ್ದು, ಶಿರಹಟ್ಟಿ(ಶೇ. 96.31) ದ್ವಿತೀಯ ಸ್ಥಾನದಲ್ಲಿದೆ. ಗದಗ ಗ್ರಾಮೀಣ(ಶೇ. 95.65), ನರಗುಂದ(ಶೇ. 95.55), ರೋಣ(ಶೇ. 94.51) ಹಾಗೂ ಗದಗ ನಗರ(ಶೇ. 92.80) ಕ್ರಮವಾಗಿ ಮುಂದುವರಿದಿವೆ.
ಮಾಧ್ಯಮವಾರು ಫಲಿತಾಂಶ: ಇಂಗ್ಲಿಷ್ ಮಾಧ್ಯಮದ ವಿದ್ಯಾರ್ಥಿಗಳು ಶೇ. 97.78 ಫಲಿತಾಂಶದೊಂದಿಗೆ ಮುಂಚೂಣಿಯಲ್ಲಿದ್ದು, ಕನ್ನಡ ಮಾಧ್ಯಮದಲ್ಲಿ ಶೇ. 94.56 ಹಾಗೂ ಉರ್ದು ಮಾಧ್ಯಮದಲ್ಲಿ ಶೇ. 90.79 ಫಲಿತಾಂಶ ದಾಖಲಾಗಿದೆ. ಕನ್ನಡ ಮಾಧ್ಯಮದಲ್ಲಿ ರೋಣ ತಾಲೂಕಿನ ಪದ್ಮಾವತಿ ಮಾರುತಿ ಶಾಬಡಿ 619 ಅಂಕಗಳೊಂದಿಗೆ(ಶೇ. 99.04) ಪ್ರಥಮ ಸ್ಥಾನ ಪಡೆದಿದ್ದಾರೆ. ಶಿರಹಟ್ಟಿ ತಾಲೂಕಿನ ಸ್ನೇಹಾ ಶರಣಪ್ಪ ಕರಜಗಿ 618 ಅಂಕ(ಶೇ. 98.88) ಪಡೆದು ದ್ವಿತೀಯ. ಅದೇ ತಾಲೂಕಿನ ಕಾರ್ತಿಕರಡ್ಡಿ ವೀರೇಶರಡ್ಡಿ ಕಮರಡ್ಡಿ 615 ಅಂಕ(ಶೇ. 98.4) ಗಳಿಸಿ ತೃತೀಯ ಸ್ಥಾನ ಪಡೆದಿದ್ದಾರೆ.
ಇಂಗ್ಲಿಷ್ ಮಾಧ್ಯಮದಲ್ಲಿ ರೋಣ ತಾಲೂಕಿನ ಪ್ರವೀಣ್ ಕುಮಾರ್ ಸೊಬಗಿನ್ 622 ಅಂಕ(ಶೇ. 99.52) ಗಳಿಸಿ ಪ್ರಥಮ, ಮುಂಡರಗಿ ತಾಲೂಕಿನ ಸಂಧ್ಯಾ ಭೋಜಪ್ಪ ಲಮಾಣಿ 621 ಅಂಕ(ಶೇ. 99.36) ಪಡೆದು ದ್ವಿತೀಯ, ರೋಣದ ಸುಷ್ಮಾ ತವರೇಪ್ಪ ನಾಯಕ ಹಾಗೂ ಮುಂಡರಗಿಯ ರೇವಂತ್ ರೆಡ್ಡಿ ನಾಗರಾಜ್ ಇಬ್ಬರೂ 620 ಅಂಕ(ಶೇ. 99.2) ಪಡೆದು ತೃತೀಯ ಸ್ಥಾನ ಹಂಚಿಕೊಂಡಿದ್ದಾರೆ.ಉರ್ದು ಮಾಧ್ಯಮದಲ್ಲಿ ಗದಗ ನಗರ ಪ್ರದೇಶದ ಅಲಿಯಾ ಮಕ್ತುಂಸಾಬ್ ಕುಕನೂರು 602 ಅಂಕ(ಶೇ. 96.32) ಗಳಿಸಿ ಪ್ರಥಮ, ಆಫ್ರಿನ್ ಬಾನು ಅಮೀನ್ಸಾಬ್ ಗುಡಸಾಲ್ಮಣಿ 599 ಅಂಕ(ಶೇ. 95.84) ದ್ವಿತೀಯ ಹಾಗೂ ರೋಣ ತಾಲೂಕಿನ ಅರ್ಷಿಯಾ ಜಹಾಂಗೀರ್ಬಾದಶಾ ಮುಲ್ಲಾ 594 ಅಂಕ(ಶೇ. 95.04) ಪಡೆದು ತೃತೀಯ ಸ್ಥಾನ ಗಳಿಸುವ ಮೂಲಕ ಜಿಲ್ಲೆಯ ವಿದ್ಯಾರ್ಥಿಗಳು ವಿಷಯವಾರು ಉತ್ತಮ ಸಾಧನೆ ತೋರಿದ್ದಾರೆ.
ಗ್ರಾಮೀಣ ಮತ್ತು ನಗರ ಪ್ರದೇಶಗಳ ಹೋಲಿಕೆಯಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿನಿಯರು ಶೇ. 97.91 ಸಾಧನೆ ಮಾಡಿದ್ದು, ನಗರ ಭಾಗದ ವಿದ್ಯಾರ್ಥಿನಿಯರು ಶೇ. 96.70 ಫಲಿತಾಂಶ ದಾಖಲಿಸುವ ಮೂಲಕ ನಗರ ಪ್ರದೇಶದ ವಿದ್ಯಾರ್ಥಿನಿಯರಿಗಿಂತ ಗ್ರಾಮೀಣ ಭಾಗದ ವಿದ್ಯಾರ್ಥಿನಿಯರು ಒಂದು ಕೈ ಮೇಲಿದ್ದಾರೆ.ಒಟ್ಟಾರೆ ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶವು ವಿದ್ಯಾರ್ಥಿಗಳ ಪರಿಶ್ರಮ, ಶಿಕ್ಷಕರ ಮಾರ್ಗದರ್ಶನ ಮತ್ತು ಶಿಕ್ಷಣ ಇಲಾಖೆಯ ಸಮರ್ಪಿತ ಕಾರ್ಯದ ಫಲವಾಗಿ ಹೊರಹೊಮ್ಮಿದ್ದು, ಜಿಲ್ಲೆಯ ಶಿಕ್ಷಣ ಕ್ಷೇತ್ರಕ್ಕೆ ಮತ್ತಷ್ಟು ಉತ್ತೇಜನ ನೀಡುವಂತಾಗಿದೆ.