ಸಾರಾಂಶ
ಶಿವಾನಂದ ಗೊಂಬಿ
ಹುಬ್ಬಳ್ಳಿ:ಧಾರವಾಡ ಜಿಲ್ಲೆಗಿರುವ ಹೆಸರು ವಿದ್ಯಾಕಾಶಿ. ಆದರೆ, ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆ ಮಾತ್ರ ಹಿಂದೆ. ಈ ಫಲಿತಾಂಶವನ್ನು ಹೇಗಾದರೂ ಮಾಡಿ ಹೆಚ್ಚಿಸಲೇಬೇಕು. ರಾಜ್ಯದ ಟಾಪ್-10ನಲ್ಲಿ ಜಿಲ್ಲೆಯೂ ಬರುವಂತಾಗಬೇಕು ಎಂಬ ಉದ್ದೇಶದಿಂದ ಸಾರ್ವಜನಿಕ ಶಿಕ್ಷಣ ಇಲಾಖೆ ಪಣ ತೊಟ್ಟಿದೆ. ಮಿಷನ್ ವಿದ್ಯಾಕಾಶಿ ಹೆಸರಲ್ಲಿ ಯೋಜನೆ ರೂಪಿಸಿ ಸ್ವತಃ ಜಿಲ್ಲಾಧಿಕಾರಿಗಳೇ ಅಖಾಡಕ್ಕಿಳಿದಿದ್ದಾರೆ.
ಕಳೆದ ವರ್ಷ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಧಾರವಾಡ 22ನೇ ಸ್ಥಾನದಲ್ಲಿತ್ತು. ಹಲವು ವರ್ಷಗಳಿಂದ ಎಷ್ಟೇ ಪ್ರಯತ್ನ ಪಟ್ಟರೂ 20ಕ್ಕಿಂತ ಕಡಿಮೆ ಸ್ಥಾನ ಪಡೆಯಲು ಜಿಲ್ಲೆಗೆ ಸಾಧ್ಯವಾಗುತ್ತಲೇ ಇಲ್ಲ. ಈ ವರ್ಷ ರಾಜ್ಯದಲ್ಲಿ ಮೊದಲ ಹತ್ತು ಸ್ಥಾನಗಳಲ್ಲಿ ಒಂದು ಸ್ಥಾನವನ್ನಾದರೂ ಪಡೆಯಲೇಬೇಕು ಎಂಬ ಹುಮ್ಮಸ್ಸಿನಿಂದ ಶಿಕ್ಷಣ ಇಲಾಖೆಯೂ ವಿನೂತನ ಯೋಜನೆ ಹಾಕಿಕೊಂಡು ಶ್ರಮಿಸುತ್ತಿದೆ. ಜಿಲ್ಲಾಧಿಕಾರಿಗಳೇ "ಮಿಷನ್ ವಿದ್ಯಾಕಾಶಿ " ಎಂಬ ಯೋಜನೆ ರೂಪಿಸಿದ್ದಾರೆ.ಏನೇನು ಪ್ರಯತ್ನ:
ಪ್ರತಿನಿತ್ಯ ಎಲ್ಲ ಶಾಲೆಗಳಲ್ಲಿ ಬೆಳಗ್ಗೆ 9.30ರಿಂದ 10.30ರ ವರೆಗೆ ರೂಢಿ ಪರೀಕ್ಷೆ ನಡೆಸಲಾಗುತ್ತಿದೆ. 25 ಅಂಕಗಳಿಗೆ ಉತ್ತರಿಸಬೇಕು. ಇನ್ನು ಕಲಿಕೆಯಲ್ಲಿ ಹಿಂದುಳಿದ ಅಂದರೆ ಉತ್ತೀರ್ಣವಾಗುವುದು ಕಷ್ಟ ಎಂಬಂತಹ ಮಕ್ಕಳಿಗೆ ಅಕ್ಷರ ಅಭ್ಯಾಸ, ಪರೀಕ್ಷೆ ಬಗ್ಗೆ ಸರಿಯಾದ ತಿಳಿವಳಿಕೆ ನೀಡುವುದಕ್ಕಾಗಿ "ಪರೀಕ್ಷಾ ಪ್ಯಾಕೇಜ್ " ನೀಡಲಾಗಿದೆ. ಪ್ರತಿನಿತ್ಯ ಮಕ್ಕಳು 6 ವಿಷಯಗಳ ಪರೀಕ್ಷೆಯನ್ನು ಮನೆಯಲ್ಲಿ ಬರೆದುಕೊಂಡು ಬರಬೇಕು. ಮರುದಿನ ಶಿಕ್ಷಕರು ಅದನ್ನು ಪರಿಶೀಲಿಸಿ ಕೊಡಬೇಕು. ಇನ್ನು ಸೋಮವಾರದಿಂದ ಶುಕ್ರವಾರದ ವರೆಗೆ ಇಂತಿಷ್ಟು ಅಂಕಗಳೆಂದು ನಿಗದಿಪಡಿಸಿ ಪರೀಕ್ಷೆಯ ರೂಢಿ ಮಾಡಿಸಲಾಗುತ್ತಿದೆ. ಶನಿವಾರ ಅದರ ಮೇಲೆ ಪರೀಕ್ಷೆ ನಡೆಸಲಾಗುತ್ತದೆ. ಇದು ಅಂತಿಮ ಪರೀಕ್ಷೆ ಬರುವವರೆಗೂ ಈ ರೀತಿ ಪರೀಕ್ಷೆ ನಡೆಸಲಾಗುತ್ತದೆ. ಈ ಮೂಲಕ ಪರೀಕ್ಷಾ ಭಯ ಹೋಗಲಾಡಿಸುವುದು. ಜತೆಗೆ ಮಕ್ಕಳ ಕಲಿಕಾ ಮಟ್ಟವನ್ನು ಹೆಚ್ಚಿಸುವುದು.ಟಾಪರ್ಸ್‌ಗೆ ಕಾರ್ಯಾಗಾರ:
ಜಿಲ್ಲೆಯಲ್ಲಿ 28,669 ಮಕ್ಕಳು ಪರೀಕ್ಷೆ ಬರೆಯಲಿದ್ದಾರೆ. ಇದರಲ್ಲಿ 12 ಸಾವಿರ ಮಕ್ಕಳು ಅತ್ಯುತ್ತಮ ಎಂದು ಪರಿಗಣಿಸಲಾಗಿದೆ. ಈ ಪೈಕಿ ಟಾಪರ್ಸ್ ಅಂದರೆ 100ಕ್ಕೆ ನೂರಕ್ಕೆ ನೂರು ಅಂಕ ಪಡೆಯಬಲ್ಲ ಸಾಮರ್ಥ್ಯವುಳ್ಳ ಮಕ್ಕಳೆಂದು ಪ್ರತಿ ತಾಲೂಕಿನಿಂದ 30 ಮಕ್ಕಳಂತೆ ಜಿಲ್ಲೆಯಲ್ಲಿ 140 ಮಕ್ಕಳನ್ನು ಗುರುತಿಸಲಾಗಿದೆ. ಈ ಮಕ್ಕಳಿಗೆ 100ಕ್ಕೆ ನೂರರಷ್ಟು ಅಂಕ ಪಡೆಯಬೇಕೆಂದರೆ ಉತ್ತರ ಹೇಗೆ ಬರೆಯಬೇಕು? ಬರಹ ಶುದ್ಧವಾಗಿರಬೇಕು. ನೀಟಾಗಿ ಉತ್ತರ ಬರೆಯುವುದು ಹೇಗೆ ಎಂಬುದನ್ನು ಹಿಂದಿನ ವರ್ಷಗಳಲ್ಲಿ ರಾಜ್ಯದಲ್ಲಿ ಟಾಪ್ ಆಗಿರುವ ಉತ್ತರ ಪತ್ರಿಕೆಗಳನ್ನು ಪ್ರದರ್ಶಿಸಲಾಗುತ್ತದೆ. ಇದಕ್ಕಾಗಿ ತಾಲೂಕು ಮಟ್ಟದಲ್ಲಿ ಕಾರ್ಯಾಗಾರ ನಡೆಸಲಾಗುತ್ತಿದೆ. ಜಿಲ್ಲಾ ಮಟ್ಟದಲ್ಲೂ 2 ಕಾರ್ಯಾಗಾರ ನಡೆಸಲಾಗುತ್ತಿದೆ. ಒಂದು ಕಾರ್ಯಾಗಾರ ಈಗಾಗಲೇ ಮುಗಿದಿದೆ. ಜಿಲ್ಲಾಮಟ್ಟದ ಕಾರ್ಯಾಗಾರದಲ್ಲಿ ಜಿಲ್ಲಾಧಿಕಾರಿಗಳೇ ಮಕ್ಕಳಿಗೆ ಪರೀಕ್ಷೆಯ ಕುರಿತು ಮಾರ್ಗದರ್ಶನ ನೀಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.ಶಾಲೆಗಳಿಗೆ ಭೇಟಿ:
ಶಿಕ್ಷಕರಿಗೂ ಕಾರ್ಯಾಗಾರ ನಡೆಸಿ ಕೆಲ ಸಲಹೆ-ಸೂಚನೆ ನೀಡಲಾಗಿದೆ. ಶಾಲೆಗಳಿಗೆ ಜಿಲ್ಲಾಧಿಕಾರಿಗಳೇ ಭೇಟಿ ನೀಡಿ ಅಲ್ಲಿನ ಕಲಿಕಾ ಮಟ್ಟವನ್ನು ಪರಿಶೀಲಿಸುತ್ತಿದ್ದಾರೆ. ಜಿಲ್ಲೆಯ ಫಲಿತಾಂಶ ಹೆಚ್ಚಿಸಲು ವಿನೂತನ ಯೋಜನೆ ರೂಪಿಸಿರುವ ಜಿಲ್ಲಾಧಿಕಾರಿ ದಿವ್ಯಪ್ರಭು ಅವರು, ಶಿಕ್ಷಕರಿಗೆ ಸುಮ್ಮನೆ ಕುಳಿತುಕೊಳ್ಳಲು ಬಿಡುತ್ತಿಲ್ಲ. ತಾವೂ ಸುಮ್ಮನೆ ಕುಳಿತುಕೊಳ್ಳದೇ ಪರೀಕ್ಷೆಯೆಂಬ ಅಖಾಡಕ್ಕಿಳಿದಿರುವುದಂತೂ ಸತ್ಯ.ಡಿಸಿ ಮನೆಗೆ ಮಕ್ಕಳ ಭೇಟಿ:140 ಜನ ಟಾಪರ್ಸ್‌ನಲ್ಲೇ ಮತ್ತೆ 20 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಈ ಮಕ್ಕಳು ಜಿಲ್ಲಾಧಿಕಾರಿ ಮನೆಗೆ ಭೇಟಿ ನೀಡಲಿದ್ದಾರೆ. ಜಿಲ್ಲಾಧಿಕಾರಿಗಳು ಆಯೋಜಿಸಿರುವ ಔತಣಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಲ್ಲಿ ಸಂವಾದ ಕೂಡ ನಡೆಸಲಿದ್ದಾರೆ. ಫೆ. 17ರಂದು ಈ ಕಾರ್ಯಕ್ರಮ ನಡೆಯಲಿದೆ. ಜಿಲ್ಲಾಧಿಕಾರಿ ಬದುಕು ಮಕ್ಕಳಿಗೆ ಪ್ರೇರಣೆಯಾಗಲಿ ಇನ್ನು ಚೆನ್ನಾಗಿ ಓದಲಿ ಎಂಬ ಉದ್ದೇಶದಿಂದ ಇದನ್ನು ಆಯೋಜಿಸಲಾಗಿದೆ ಎಂದು ಡಿಡಿಪಿಐ ಎಸ್.ಎಸ್. ಕೆಳದಿಮಠ ತಿಳಿಸುತ್ತಾರೆಈ ಸಲ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆಯನ್ನು ಟಾಪ್-10 ಸ್ಥಾನಗಳಲ್ಲಿ ತರಬೇಕು ಎಂಬ ಉದ್ದೇಶದಿಂದ ಹಲವು ವಿನೂತನ ಯೋಜನೆಗಳನ್ನು ಹಾಕಿಕೊಂಡು ಕೆಲಸ ಮಾಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿಗಳು ಮಾರ್ಗದರ್ಶನ ನೀಡುತ್ತಿದ್ದಾರೆ. ಫೆ.17ಕ್ಕೆ 20 ವಿದ್ಯಾರ್ಥಿಗಳು ಜಿಲ್ಲಾಧಿಕಾರಿಗಳ ಮನೆಗೂ ಭೇಟಿ ನೀಡಲಿದ್ದಾರೆ ಎಂದು ಡಿಡಿಪಿಐ ಎಸ್.ಎಸ್. ಕೆಳದಿಮಠ ಹೇಳಿದರು.