ಸಾರಾಂಶ
ಧಾರವಾಡ: ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಶುಕ್ರವಾರದಿಂದ ಶುರುವಾಗಿದ್ದು, ಪ್ರಥಮ ಪರೀಕ್ಷೆಗಾಗಿ ಮಾಳಮಡ್ಡಿ ಕೆ.ಇ. ಬೋರ್ಡ್ ಶಾಲೆ, ಬಾಸೆಲ್ ಮಿಶನ್ ಶಾಲೆಗಳಲ್ಲಿ ಸ್ಥಾಪಿಸಿರುವ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ್ದ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಸ್ವಾಗತ ಕೋರಲಾಯಿತು.
ಜಿಲ್ಲಾಧಿಕಾರಿ ದಿವ್ಯಪ್ರಭು, ಜಿಪಂ ಸಿಇಒ ಭುವನೇಶ ಪಾಟೀಲ ಹಾಗೂ ಶಿಕ್ಷಣ ಪ್ರೇಮಿಗಳು ಕೆಂಪು ಹಾಸಿಗೆ ಹಾಸಿ, ಗುಲಾಬಿ ಹೂವು, ಪೆನ್ನು ಮತ್ತು ಸಿಹಿ ನೀಡಿ ಸ್ವಾಗತಿಸಿದರು. ನಂತರ ಜಿಲ್ಲಾಧಿಕಾರಿಗಳು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಕಳೆದ ಒಂದು ವರ್ಷದಿಂದ ಮಿಷನ್ ವಿದ್ಯಾ ಕಾಶಿ ಮೂಲಕ ವಿವಿಧ ರೀತಿಯ ಪರೀಕ್ಷೆ, ವಿಶೇಷ ಕಾರ್ಯಕ್ರಮಗಳನ್ನು ಮಾಡಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯುತ್ತಿದ್ದಾರೆ. ವಿಶೇಷವಾಗಿ ಪರೀಕ್ಷೆಯನ್ನು ಒಂದು ಹಬ್ಬದ ವಾತಾವರಣ ಸೃಷ್ಟಿ ಮಾಡಬೇಕು ಎಂದು ಈ ವಾತಾವರಣ ಕಲ್ಪಿಸಲಾಗಿದೆ ಎಂದರು.ಈ ವಿಶೇಷ ಸ್ವಾಗತಕ್ಕೆ ಮಕ್ಕಳಿಗೂ ತುಂಬಾ ಖುಷಿ ಅನ್ನಿಸಿದೆ. ತುಂಬಾ ಪ್ರೀತಿಯಿಂದ ನಮ್ಮ ಜತೆ ಸೆಲ್ಫಿ ತೆಗೆದುಕೊಂಡು ಪರೀಕ್ಷೆ ಬರೆಯಲು ಹೋದರು. ಜಿಲ್ಲೆಗೆ ಒಂದು ಒಳ್ಳೆಯ ಹೆಸರನ್ನು ತೆಗೆದುಕೊಂಡು ಬರುವಂತಾಗಲಿ ಎಂದರು.
ಜಿಪಂ ಸಿಇಒ ಭುವನೇಶ ಪಾಟೀಲ ಸಹ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಹೂವು ನೀಡಿ, ಶುಭ ಹಾರೈಸಿದರು. ನಂತರ ಇಬ್ಬರೂ ಅಧಿಕಾರಿಗಳು ಪರೀಕ್ಷಾ ಕೊಠಡಿಗಳಿಗೆ ತೆರಳಿ ಸಿದ್ಧತೆಗಳನ್ನು ಪರಿಶೀಲಿಸಿದರು.ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಸಿಂದಗಿ, ಕಾರ್ಯಕ್ರಮ ಸಂಚಾಲಕರಾದ ವಿನಾಯಕ ಜೋಶಿ, ಕೆ.ಇ. ಬೋರ್ಡ್ ಸಂಸ್ಥೆಯ ಕಾರ್ಯದರ್ಶಿ ಡಿ.ಎಸ್. ರಾಜಪುರೋಹಿತ, ವಿಶೇಷ ಅಭಿವೃದ್ಧಿ ಅಧಿಕಾರಿ ಗುರುರಾಜ ಜಮಖಂಡಿ, ಪ್ರಾಚಾರ್ಯ ಎನ್.ಎಸ್. ಗೋವಿಂದರೆಡ್ಡಿ, ಅಸೋಸಿಯೇಶನ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್ ಅಧ್ಯಕ್ಷ ಸುನಿಲ ಬಾಗೇವಾಡಿ, ಶಿಕ್ಷಣಪ್ರೇಮಿಗಳಾದ ನಾಗೇಶ ಅಣ್ಣಿಗೇರಿ, ವಿಷ್ಣು ಕೊಲ್ಲಹಳ್ಳಿ, ಸುಭೋದ ಶಿಕ್ಷಣ ಸಮಿತಿ ಅಧ್ಯಕ್ಷ ಗಿರಿಧರ ಕಿನ್ನಾಳ ಮತ್ತಿತರು ಇದ್ದರು.
ಪರೀಕ್ಷಾ ಹಾಜರಾತಿಪ್ರಸಕ್ತ ಸಾಲಿನ ಎಸ್ಸೆಸ್ಲೆಲ್ಸಿ ಪರೀಕ್ಷೆಯ ಪ್ರಥಮ ಭಾಷೆ ಪರೀಕ್ಷೆಗೆ 437 ವಿದ್ಯಾರ್ಥಿಗಳು ಗೈರಾಗಿದ್ದು, 28,130 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಎಸ್. ಕೆಳದಿಮಠ ಅವರು ತಿಳಿಸಿದ್ದಾರೆ.