ಪತ್ರಿಕೆ ಹಂಚುತ್ತಲೇ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸುವ ವಿದ್ಯಾರ್ಥಿಗೆ ಪಾನಘಂಟಿ ಫೌಂಡೇಶನ್ ವತಿಯಿಂದ ಪ್ರತಿವರ್ಷ ವಿದ್ಯಾರ್ಥಿವೇತನ ನೀಡಲಾಗುವುದು ಎಂದು ಫೌಂಡೇಶನ್ ಪ್ರಧಾನ ಕಾರ್ಯದರ್ಶಿ ಶಾರದಾ ಪಾನಘಂಟಿ ಘೋಷಿಸಿದರು.

ಕನ್ನಡಪ್ರಭ- ಏಷ್ಯಾನೆಟ್ ಸಹಯೋಗದಲ್ಲಿ ಪ್ರತಿವರ್ಷ ವಿತರಣೆ: ಶಾರದಾ ಪಾನಘಂಟಿ

ಕನ್ನಡಪ್ರಭ ವಾರ್ತೆ ಕೊಪ್ಪಳ

ಪತ್ರಿಕೆ ಹಂಚುತ್ತಲೇ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸುವ ವಿದ್ಯಾರ್ಥಿಗೆ ಪಾನಘಂಟಿ ಫೌಂಡೇಶನ್ ವತಿಯಿಂದ ಪ್ರತಿವರ್ಷ ವಿದ್ಯಾರ್ಥಿವೇತನ ನೀಡಲಾಗುವುದು ಎಂದು ಫೌಂಡೇಶನ್ ಪ್ರಧಾನ ಕಾರ್ಯದರ್ಶಿ ಶಾರದಾ ಪಾನಘಂಟಿ ಘೋಷಿಸಿದರು.

ಭಾಗ್ಯನಗರದ ವಿದ್ಯಾವಿಕಾಸ ಶಾಲೆಯಲ್ಲಿ ಕನ್ನಡಪ್ರಭ, ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗೂ ಪಾನಘಂಟಿ ಫೌಂಡೇಶನ್ ಸಹಯೋಗದಲ್ಲಿ ಆಯೋಜಿಸಿದ್ದ ಪತ್ರಿಕೆ ವಿತರಿಸುವ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪತ್ರಿಕೆ ವಿತರಿಸುವ ವಿದ್ಯಾರ್ಥಿಗಳ ಕಷ್ಟವನ್ನು ಪ್ರತಿನಿತ್ಯ ನೋಡುತ್ತಿದ್ದೇನೆ. ಬೆಳಗಿನ ಜಾವ ಸೈಕಲ್‌ನಲ್ಲಿ ಮನೆಮನೆಗೆ ಪತ್ರಿಕೆ ವಿತರಿಸುವ ವಿದ್ಯಾರ್ಥಿಗಳಿಗೆ ಏನಾದರೂ ನೆರವು ನೀಡಬೇಕು ಎಂಬ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ. ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್ ವತಿಯಿಂದ ಪತ್ರಿಕಾ ವಿತರಕರ ದಿನಾಚರಣೆ ಆಯೋಜಿಸಿದ ಸಂದರ್ಭದಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಮುಂದಿನ ದಿನಗಳಲ್ಲೂ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸಲಾಗುವುದು ಎಂದರು.

ಅಂಗನವಾಡಿ ಮಕ್ಕಳಿಗೂ ಸಮವಸ್ತ್ರ ವಿತರಿಸಿರುವುದು ಸಂತಸ ತಂದಿದೆ. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ಪ್ರತಿವರ್ಷ ಒಂದು ದಿನದ ಕಾರ್ಯಾಗಾರ ಆಯೋಜಿಸಲಾಗುತ್ತಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮ ಉದ್ಘಾಟಿಸಿ ಕನ್ನಡಪ್ರಭ ಮುಖ್ಯ ವರದಿಗಾರ ಸೋಮರಡ್ಡಿ ಅಳವಂಡಿ ಮಾತನಾಡಿ, ಪಾನಘಂಟಿ ಫೌಂಡೇಶನ್ ವತಿಯಿಂದ ಹಲವು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಪತ್ರಿಕೆ ವಿತರಿಸುವ ವಿದ್ಯಾರ್ಥಿಗಳನ್ನು ಗುರುತಿಸಿ ಬ್ಯಾಗ್ ವಿತರಿಸಿರುವುದು ಶ್ಲಾಘನೀಯ ಎಂದರು.

ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದ ಶಿವಾನಿ ಗವಿಸಿದ್ದಯ್ಯ ಬೆಣಕಲಮಠ ಅವರನ್ನು ಸನ್ಮಾನಿಸಲಾಯಿತು. ಉಪನ್ಯಾಸಕಿ ಅರುಣಾ ಬೆಣಕಲಮಠ, ಗವಿಸಿದ್ದಯ್ಯ, ಇನ್ನರ್‌ವೀಲ್ ಕ್ಲಬ್ ಸದಸ್ಯೆ ಜಯಮಾಲಾ ಶೆಡ್ಮಿ, ವೀರಾಜ್, ವೇದಾಂತ, ಮಹಾಲಕ್ಷ್ಮಿ ಪಾನಘಂಟಿ, ಸಂಪದ ಪಾನಘಂಟಿ, ಗವಿರಾಜ ಕಂದಾರಿ, ಮಂಜುನಾಥ ಟಪಾಲ, ನಾಗರಾಜ ಕಲಾಲ, ಮೆಹಬೂಬ್ ಸಾ, ಪರಶುರಾಮ, ರಮೇಶ ಚಕ್ರಸಾಲಿ, ನಾಗರಾಜ ಉಂಕಿ, ವಸಂತಿ ಶ್ಯಾವಿ, ಮಹಿಬೂಬ ಮನಿಯಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಬಸವರಾಜ ಬೆಲ್ಲದ ನಿರೂಪಿಸಿದರು. ಮೋಹನ ಕೋರ ಸ್ವಾಗತಿಸಿದರು.

ಫೋಟೋ ಶಿರ್ಷಿಕೆ:

ಭಾಗ್ಯನಗರದ ವಿದ್ಯಾವಿಕಾಸ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾನಘಂಟಿ ಫೌಂಡೇಶನ್ ವತಿಯಿಂದ ಪತ್ರಿಕೆ ವಿತರಿಸುವ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಿಸಲಾಯಿತು.