ಪಟ್ಟಣದ ಪುರಸಭೆ ಕಲಾ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಂದ ತೆಗೆದುಕೊಂಡ ಪರೀಕ್ಷಾ ಶುಲ್ಕವನ್ನು ಕಾಲೇಜು ಸಿಬ್ಬಂದಿ ವಿಶ್ವವಿದ್ಯಾಲಯಕ್ಕೆ ಕಟ್ಟದೆ ಇರುವ ಕಾರಣ 5 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಪ್ರವೇಶ ಪತ್ರಗಳು ಬರದೆ ಇರುವುದರಿಂದ ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತರಾಗಿದ್ದು, ಘಟನೆ ಖಂಡಿಸಿ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಕಾಲೇಜು ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಲಕ್ಷ್ಮೇಶ್ವರ
ಪಟ್ಟಣದ ಪುರಸಭೆ ಕಲಾ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಂದ ತೆಗೆದುಕೊಂಡ ಪರೀಕ್ಷಾ ಶುಲ್ಕವನ್ನು ಕಾಲೇಜು ಸಿಬ್ಬಂದಿ ವಿಶ್ವವಿದ್ಯಾಲಯಕ್ಕೆ ಕಟ್ಟದೆ ಇರುವ ಕಾರಣ 5 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಪ್ರವೇಶ ಪತ್ರಗಳು ಬರದೆ ಇರುವುದರಿಂದ ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತರಾಗಿದ್ದು, ಘಟನೆ ಖಂಡಿಸಿ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಕಾಲೇಜು ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.ಈ ವೇಳೆ ಎಬಿವಿಪಿಯ ಜಿಲ್ಲಾ ಸಂಚಾಲಕ ಅಭಿಷೇಕ ಉಮಚಗಿ ಮಾತನಾಡಿ, ಐದು ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕವನ್ನು ಕಾಲೇಜಿನ ಸಿಬ್ಬಂದಿಗಳ ಕೈಯಲ್ಲಿ ಹಣವನ್ನು ಕೊಡಲಾಗಿತ್ತು. ಈ ಹಣವನ್ನು ಕಾಲೇಜು ಸಿಬ್ಬಂದಿ ವಿಶ್ವವಿದ್ಯಾಲಯಕ್ಕೆ ಪಾವತಿಸಬೇಕಾಗಿತ್ತು. ಆದರೆ ಹಣ ಪಾವತಿ ಆಗಿಲ್ಲ. ಹೀಗಾಗಿ ಈಗ ವಿದ್ಯಾಥಿಗಳಿಗೆ ಪರೀಕ್ಷೆ ಬರೆಯಲು ಪ್ರವೇಶ ಪತ್ರಗಳು ಬಂದಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳ ಒಂದು ಸೆಮಿಸ್ಟರ್ ಸಮಯ ವ್ಯರ್ಥವಾಗಿದೆ. ಇದು ವಿಧ್ಯಾರ್ಥಿಗಳನ್ನು ಪರೀಕ್ಷೆಯಿಂದ ವಂಚಿತರನ್ನಾಗಿ ಮಾಡಿದೆ. ಇದಕ್ಕೆ ಪ್ರಾಚಾರ್ಯರೆ ಹೊಣೆಯಾಗಿದ್ದಾರೆ, ವಿಶ್ವವಿದ್ಯಾಲಯ ಮಟ್ಟದಲ್ಲಿ ವಿಶೇಷ ಪ್ರಯತ್ನ ಮಾಡಿ ಕ್ರಮಕ್ಕೆ ಮುಂದಾಗಬೇಕು, ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು, ಇಲ್ಲದಿದ್ದಲ್ಲಿ ಸೋಮವಾರದೊಳಗಾಗಿ ಸಮಸ್ಯೆ ಬಗೆಹರಿಯದಿದ್ದಲ್ಲಿ ಕಾಲೇಜಿಗೆ ಬೀಗ ಜಡಿದು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಈ ಕುರಿತು ಪ್ರಾಚಾರ್ಯ ವಿ.ಎನ್. ನಾಗಶೆಟ್ಟಿ ಅವರನ್ನು ಸಂಪರ್ಕಿಸಿದಾಗ ವಿದ್ಯಾರ್ಥಿಗಳೇ ಆನ್ಲೈನ್ ಮೂಲಕ ಪರೀಕ್ಷಾ ಶುಲ್ಕ ವಿಶ್ವವಿದ್ಯಾಲಯಕ್ಕೆ ಪಾವತಿಸಿ ರಸೀದಿಯನ್ನು ಕಾಲೇಜಿಗೆ ಮುಟ್ಟಿಸಬೇಕು. ಆದರೆ ವಿದ್ಯಾರ್ಥಿಗಳು ತಮ್ಮ ಪರೀಕ್ಷಾ ಶುಲ್ಕವನ್ನು ಕಾಲೇಜಿನ ಸಿಪಾಯಿ ಕಡೆ ಕೊಟ್ಟಿದ್ದಾರೆ. ಸದ್ಯ ಸಿಪಾಯಿ ಕಾಲೇಜಿಗೆ ಬಂದಿಲ್ಲ. ಇದರಿಂದಾಗಿ ಸಮಸ್ಯೆ ಉಂಟಾಗಿದೆ. ಈ ಕುರಿತಂತೆ ನಾವು ವಿಶ್ವವಿದ್ಯಾಲಯಕ್ಕೆ ಮನವಿ ಮಾಡಿದ್ದು, ಪ್ರಯತ್ನ ಮಾಡುತ್ತಿದ್ದೇವೆ. ಇದು ನಮ್ಮ ನಜರಚೂಕಿನಿಂದ ಆಗಿರುವ ಸಮಸ್ಯೆಯಾಗಿದ್ದು, ಅದನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ ಎಂದು ತಿಳಿಸಿದರು.ಪ್ರತಿಭಟನೆಯಲ್ಲಿ ಪ್ರೀತಮ್ ರಾಜೋಳಿ, ವಿನಾಯಕ ಕುಂಬಾರ, ಸಿಕಂದರ ಪರಿಟ್, ವಿನಯ ಸಪಡ್ಲ, ಅಜಿರ್ ಶಿರಹಟ್ಟಿ, ಪೂಜಾ ತಳವಾರ, ಫಾತಿಮಾ ಸನದಿ, ಕಿರಣ್ ಲಮಾಣಿ, ಹನುಮಂತ ಕುರಿ, ಸಚಿನ ಭಜಂತ್ರಿ, ಪ್ರಜ್ವಲ್ ಧರ್ಮರ ಮತ್ತಿತರರು ಇದ್ದರು.
