ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ನೇಣಿಗೆ ಶರಣು

| Published : Jun 20 2024, 01:06 AM IST / Updated: Jun 20 2024, 01:07 AM IST

ಸಾರಾಂಶ

ಕುಂಚಾವರಂ ಸಮುದಾಯ ಆರೋಗ್ಯ ಕೇಂದ್ರ ಡಿ ಗ್ರೂಪ್‌ ಸಿಬ್ಬಂದಿ (ಸಿಎಚ್‌ಸಿ) ಒಬ್ಬರು ಡೆತ್‌ನೋಟ್‌ ಬರೆದಿಟ್ಟು ಕೇಂದ್ರ ವಸತಿ ಗೃಹದಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ನಡೆದಿದೆ ಎಂದು ಕುಂಚಾವರಂ ಠಾಣೆ ಪೊಲೀಸರು ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಚಿಂಚೋಳಿ

ತಾಲೂಕಿನ ಕುಂಚಾವರಂ ಸಮುದಾಯ ಆರೋಗ್ಯ ಕೇಂದ್ರ ಡಿ ಗ್ರೂಪ್‌ ಸಿಬ್ಬಂದಿ (ಸಿಎಚ್‌ಸಿ) ಒಬ್ಬರು ಡೆತ್‌ನೋಟ್‌ ಬರೆದಿಟ್ಟು ಕೇಂದ್ರ ವಸತಿ ಗೃಹದಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ನಡೆದಿದೆ ಎಂದು ಕುಂಚಾವರಂ ಠಾಣೆ ಪೊಲೀಸರು ತಿಳಿಸಿದ್ದಾರೆ.

ಕುಂಚಾವರಂ ಸಮುದಾಯ ಆರೋಗ್ಯ ಕೇಂದ್ರ ಡಿ ಗ್ರೂಪ್‌ ಸಿಬ್ಬಂದಿ ಮಾಲಾಶ್ರೀ ಮಲ್ಲಿನಾಥ ಪರೀಟ (೨9) ಆತ್ಮಹತ್ಯೆ ಮಾಡಿಕೊಂಡು ಸಾವನಪ್ಪಿದ್ದಾರೆ.

ಮಂಗಳವಾರ ಸೇವೆ ಸಲ್ಲಿಸಿದ ನಂತರ ಮಧ್ಯಾಹ್ನ ಊಟಕ್ಕೆ ವಸತಿ ಗೃಹಕ್ಕೆ ಹೋಗಿದ್ದಾರೆ. ಆದರೆ ಬಾಗಿಲು ಮುಚ್ಚಿದ ಬಗ್ಗೆ ಅನುಮಾನಪಟ್ಟ ಸಿಬ್ಬಂದಿ ಕಿಟಕಿಯಿಂದ ನೇಣುಬಿಗಿದ ಸ್ಥಿತಿಯಲ್ಲಿದ್ದ ಶವವನ್ನು ನೋಡಿದ್ದಾರೆ.

ಘಟನೆ ಸ್ಥಳಕ್ಕೆ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಬಾಲಾಜಿ ಪಾಟೀಲ ಪರಿಶೀಲಿಸಿದ್ದಾರೆ. ಆಳಂದ ತಾಲೂಕಿನ ಮಾದನಹಿಪ್ಪರಗಾ ಗ್ರಾಮದ ಮಾಲಾಶ್ರೀ ಕುಂಚಾವರಂ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಳೆದ ೮ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು.

ಮಾಲಾಶ್ರೀ ಆತ್ಮಹತ್ಯೆಗೂ ಮುನ್ನ ಬರೆದಿರುವ ಡೆತ್‌ನೋಟ್‌ನಲ್ಲಿ ‘ನಾನು ಜೀವನದಲ್ಲಿ ಜಿಗುಪ್ಸೆ ಹೊಂದಿದ್ದೇನೆ. ನನ್ನ ಸಾವಿಗೆ ಯಾರು ಕಾರಣರಲ್ಲ. ಪೋಸ್ಟ ಮಾರ್ಟನ ಮಾಡದೇ ನನ್ನ ಶವವನ್ನು ನನ್ನ ತಂದೆತಾಯಿಗಳಿಗೆ ಒಪ್ಪಿಸಿ’ ಎಂದು ಬರೆದಿದ್ದಾರೆ ಎಂದು ಆಸ್ಪತ್ರೆ ವೈದ್ಯಾಧಿಕಾರಿ ಡಾ. ಬಾಲಾಜಿ ಪಾಟೀಲ ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಚಿಂಚೋಳಿ ಡಿವೈಎಸ್ಪಿ, ಸಿಪಿಐ ರಾಘವೇಂದ್ರ, ಕುಂಚಾವರಂ ಪಿಎಸ್‌ಐ ಪ್ರಭಾಕರ ಪಾಟೀಲ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕುಂಚಾವರಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.