ಸಾರಾಂಶ
ಮಂಡ್ಯ ಮಂಜುನಾಥ
ಕನ್ನಡಪ್ರಭ ವಾರ್ತೆ ಮಂಡ್ಯಮಂಡ್ಯ ತಾಲೂಕು ಪಂಚಾಯ್ತಿಯಲ್ಲಿ ಸಿಬ್ಬಂದಿ ಕೊರತೆ ತೀವ್ರವಾಗಿ ಬಾಧಿಸುತ್ತಿದ್ದು, ಕೆಲಸದ ಒತ್ತಡ ದಿನೇ ದಿನೇ ಹೆಚ್ಚುತ್ತಿದೆ. ನಿಯೋಜನೆ ಮೇಲೆ ನೇಮಕಗೊಂಡವರು ಪಾರ್ಶ್ವವಾಯು, ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಇಬ್ಬರು ಎಫ್‌ಡಿಸಿಗಳ ಪೈಕಿ ಒಬ್ಬರು ಕಾಲುಮುರಿತಕ್ಕೊಳಗಾಗಿದ್ದಾರೆ. ಕೆಲವರು ನಿವೃತ್ತಿ ಅಂಚಿನಲ್ಲಿದ್ದಾರೆ. ಇದರಿಂದ ತಾಪಂ ಕಚೇರಿ ಕೆಲಸಗಳು ಕುಂಟುತ್ತಾ ತೆವಳುತ್ತಾ ಸಾಗಿದ್ದು, ಕೋಮಾ ಸ್ಥಿತಿಗೆ ತಲುಪುವಂತಾಗಿದೆ.
ಮಂಡ್ಯ ತಾಪಂ ಕಚೇರಿಗೆ ಮಂಜೂರಾಗಿರುವ ೨೫ ಹುದ್ದೆಗಳಲ್ಲಿ ೧೦ ಮಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ೧೫ ಹುದ್ದೆಗಳು ಖಾಲಿ ಇವೆ. ಇದರಲ್ಲಿ ಕಾರ್ಯನಿರ್ವಹಿಸುತ್ತಿರುವವರೂ ಅನಾರೋಗ್ಯ, ಪಾರ್ಶ್ವವಾಯು ಹಾಗೂ ಅಪಘಾತದಿಂದ ಕಾಲುಮುರಿತಕ್ಕೊಳಗಾಗಿ ನಾಲ್ವರು ಬಳಲುತ್ತಿದ್ದು, ಕೇವಲ ಆರು ಮಂದಿ ಎಲ್ಲಾ ಕಾರ್ಯವನ್ನು ನಿರ್ವಹಿಸುವಂತಾಗಿದೆ.ಮುಂದಿನ ಎರಡು ತಿಂಗಳಲ್ಲಿ ನಿಯೋಜನೆಗೆ ಬಂದವರೂ ಸೇರಿದಂತೆ ತಾಪಂನ ಪ್ರಥಮ ದರ್ಜೆ ಸಹಾಯಕರು ಒಬ್ಬರು ನಿವೃತ್ತರಾಗುತ್ತಿರುವುದರಿಂದ ಸಾರ್ವಜನಿಕರ ಕೆಲಸಗಳು ಹಳ್ಳಹಿಡಿಯುವಂತ ಸ್ಥಿತಿ ಎದುರಾಗಿದೆ.
ಅಧಿಕಾರಿ ವರ್ಗದವರ ಪೈಕಿ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ, ಸಹಾಯಕ ಲೆಕ್ಕಾಧಿಕಾರಿ, ತಾಲೂಕು ಯೋಜನಾಧಿಕಾರಿ, ವ್ಯವಸ್ಥಾಪಕರು ಹೊರತುಪಡಿಸಿದರೆ ಸಹಾಯಕ ನಿರ್ದೇಶಕರ ಎರಡು ಹುದ್ದೆಗಳು ಖಾಲಿ ಉಳಿದಿವೆ.ಲಿಪಿಕ ಹುದ್ದೆಗಳ ಪೈಕಿ ಎರಡು ಪ್ರಥಮ ದರ್ಜೆ ಲೆಕ್ಕ ಸಹಾಯಕರ ಹುದ್ದೆ ಖಾಲಿ ಉಳಿದಿವೆ. ಪ್ರಗತಿ ಸಹಾಯಕರ ಒಂದು ಹುದ್ದೆ ಭರ್ತಿಯಾಗಿಲ್ಲ. ಒಂದು ಶೀಘ್ರ ಲಿಪಿಗಾರರ ಹುದ್ದೆಯೂ ಖಾಲಿ ಬಿದ್ದಿದೆ. ಎರಡು ದ್ವಿತೀಯ ದರ್ಜೆ ಸಹಾಯಕರನ್ನೂ ನೇಮಿಸಿಲ್ಲ. ಹೊರಗುತ್ತಿಗೆ ಆಧಾರದ ಮೇಲೆ ಇಬ್ಬರು ಬೆರಳಚ್ಚುಗಾರರು ಕಾರ್ಯನಿರ್ವಹಿಸುತ್ತಿದ್ದಾರೆ.
ಪ್ರಥಮ ದರ್ಜೆ ಸಹಾಯಕರ ಎರಡು ಹುದ್ದೆಗಳಲ್ಲಿ ಎನ್.ಗೀತಾ ಎಂಬುವರು ಕಾಲು ಮುರಿತಕ್ಕೊಳಗಾಗಿ ರಜೆಯ ಮೇಲಿದ್ದಾರೆ. ಅವರು ಈ ವರ್ಷ ಜುಲೈ ಮಾಹೆಯಲ್ಲಿ ನಿವೃತ್ತಿಯಾಗುತ್ತಿದ್ದಾರೆ.ಜಿಲ್ಲಾ ಪಂಚಾಯ್ತಿ ಆದೇಶದಂತೆ ನಿಯೋಜನೆ ಮೇಲೆ ತಾಲೂಕು ಪಂಚಾಯ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೂವರು ಪಿಡಿಒಗಳಲ್ಲಿ ಮದ್ದೂರು ತಾಲೂಕು ಕೆ.ಶೆಟ್ಟಹಳ್ಳಿ ಗ್ರಾಪಂ ಪಿಡಿಒ ಎಚ್.ಬಸವರಾಜು ಅವರು ಪಾರ್ಶ್ವವಾಯು ಪೀಡಿತರಾಗಿದ್ದು ಮೇ ತಿಂಗಳಲ್ಲಿ ನಿವೃತ್ತರಾಗುತ್ತಿದ್ದಾರೆ. ಶ್ರೀರಂಗಪಟ್ಟಣ ತಾಲೂಕು ತಡಗವಾಡಿ ಗ್ರಾಪಂ ಪಿಡಿಒ ಎಂ.ಗೌರಮ್ಮ ಕೂಡ ಪಾರ್ಶ್ವವಾಯು ಪೀಡಿತರಾಗಿರುವುದರಿಂದ ಟಪಾಲು ಶಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಮಂಡ್ಯ ತಾಲೂಕು ಗಾಣದಾಳು ಗ್ರಾಪಂ ಪಿಡಿಒ ಬಿ.ಎನ್.ನಂದೀಶ್ ಅನಾರೋಗ್ಯ ಪೀಡಿತರಾಗಿ ಪದೇ ಪದೇ ರಜೆಯ ಮೇಲೆ ತೆರಳುತ್ತಿದ್ದು, ಸಣ್ಣಪುಟ್ಟ ಕಾರ್ಯಗಳನ್ನಷ್ಟೇ ನಿರ್ವಹಿಸುತ್ತಿದ್ದಾರೆ. ಈ ಮೂವರು ನಿವೃತ್ತಿಯ ಅಂಚಿನಲ್ಲಿದ್ದು, ಅನಾರೋಗ್ಯದಿಂದ ಬಳಲುತ್ತಿರುವುದರಿಂದ ಇವರಿಂದ ಹೆಚ್ಚಿನ ಕಾರ್ಯ ನಿರೀಕ್ಷಿಸಲಾಗುತ್ತಿಲ್ಲ ಎಂಬ ಸಂಗತಿಯನ್ನು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಅವರಿಗೆ ಪತ್ರ ಮುಖೇನ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಮನಕ್ಕೆ ತಂದಿದ್ದಾರೆ.ತಾಪಂನಲ್ಲಿ ಖಾಲಿ ಇರುವ ೭ ಲಿಪಿಕ ಹುದ್ದೆಗಳಿಗೆ ಪ್ರಸ್ತುತ ವಿವಿಧ ಗ್ರಾಪಂಗಳ ಮೂವರು ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ಕಾರ್ಯನಿರ್ವಹಿಸುತ್ತಿದ್ದಾರೆ. ಮಂಡ್ಯ ತಾಲೂಕು ಶಿವಳ್ಳಿ ಗ್ರಾಪಂನ ಸಿ.ಎನ್.ಯೋಗೇಶ್ವರಿ ನರೇಗಾ, ಕುಡಿಯುವ ನೀರು, ಎಸ್‌ಬಿಎಂ ಹಾಗೂ ಇತರೆ ಯೋಜನೆಗಳನ್ನು ನಿರ್ವಹಿಸುತ್ತಿದ್ದಾರೆ. ಎಚ್.ಮಲ್ಲೀಗೆರೆ ಗ್ರಾಪಂನ ಬಿ.ಸಿ.ಪ್ರಶಾಂತ್ ಅವರು ಎನ್‌ಆರ್‌ಎಲ್‌ಎಂ ಯೋಜನೆ, ಅನಿರ್ಬಂಧಿತ ಅನುದಾನ, ಗ್ರಾಪಂ ಜಮಾಬಂದಿ, ಅಭಿಲೇಖಾಲಯ ನಿರ್ವಹಣೆ, ತಾಪಂ ಡಿಸಿ ಬಿಲ್ ಮತ್ತು ಇತರೆ ಯೋಜನೆಗಳನ್ನು ನಿರ್ವಹಿಸುತ್ತಿದ್ದರೆ, ಸಂತೆಕಸಲಗೆರೆ ಗ್ರಾಪಂನ ಸಿ.ವಿ.ಜಯಲಕ್ಷ್ಮೀ ಐಪಿಜಿಆರ್‌ಎಸ್, ಇ-ಸ್ವತ್ತು, ಗ್ರಾಪಂ ೧೪ ಮತ್ತು ೧೫ನೇ ಹಣಕಾಸು ಯೋಜನೆ, ಗ್ರಾಪಂ, ಬಜೆಟ್, ತಾಪಂ ವಾರ್ಷಿಕ ಲೆಕ್ಕಪತ್ರಗಳು, ಗ್ರಾಪಂ ಅಡ್‌ಹಾಕ್ ಹಾಗೂ ಇತರೆ ಯೋಜನೆಗಳನ್ನು ನಿರ್ವಹಿಸುತ್ತಿದ್ದಾರೆ.
ನೌಕರರ ಕೊರತೆಯಿಂದ ಲೋಕಾಯುಕ್ತ ಪ್ರಕರಣಗಳು, ಕಾರ್ಯನಿರ್ವಾಹಕ ಅಧಿಕಾರಿಗಳ ನ್ಯಾಯಾಲಯದ ಪ್ರಕರಣಗಳು, ಮಾಹಿತಿ ಹಕ್ಕು ಅರ್ಜಿಗಳು, ಸಾರ್ವಜನಿಕ ದೂರು, ಮನವಿಗಳು ಮತ್ತು ಲೆಕ್ಕ ಶಾಖೆಗೆ ಸಂಬಂಧಿಸಿದ ಕಾರ್ಯಗಳನ್ನು ನಿರ್ವಹಿಸಲು ವಿಳಂಬವಾಗುತ್ತಿದೆ. ಸಾರ್ವಜನಿಕ ಕೆಲಸ-ಕಾರ್ಯಗಳಿಗೂ ಹಿನ್ನಡೆಯಾಗುತ್ತಿದೆ. ಪ್ರತಿ ನೌಕರರು ಎರಡು ಹುದ್ದೆಗಳ ಪ್ರಭಾರ ಒತ್ತಡದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಕೊತ್ತತ್ತಿ ಹಾಗೂ ಬೂದನೂರು ಗ್ರಾಪಂನಲ್ಲಿ ಪೂರ್ಣ ಸಿಬ್ಬಂದಿ ಇರುವುದರಿಂದ ಆಡಳಿತಾತ್ಮಕ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ತಾಪಂ ಕಚೇರಿ ದ್ವಿತೀಯ ದರ್ಜೆ ಲೆಕ್ಕ ಸಹಾಯಕರನ್ನಾಗಿ ನಿಯೋಜಿಸುವಂತೆ ಜಿಪಂ ಸಿಇಒ ಅವರನ್ನು ಕೋರಿದ್ದಾರೆ.ಹುದ್ದೆ ಭರ್ತಿಗೆ ಯತ್ನಿಸದ ನಾಲ್ವರು ಶಾಸಕರುಮಂಡ್ಯ ತಾಲೂಕು ಪಂಚಾಯ್ತಿ ವ್ಯಾಪ್ತಿಗೆ ನಾಲ್ವರು ಶಾಸಕರು ಒಳಪಡುತ್ತಾರಾದರೂ ನೌಕರರ ಕೊರತೆಯಿಂದ ಆಡಳಿತಾತ್ಮಕ ಮತ್ತು ಸಾರ್ವಜನಿಕ ಕೆಲಸಗಳಿಗೆ ಹಿನ್ನಡೆಯಾಗುತ್ತಿದ್ದರೂ ಹುದ್ದೆ ಭರ್ತಿ ಸಂಬಂಧ ಇದುವರೆಗೂ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡದಿರುವುದು ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿದೆ.
ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ಆಯ್ಕೆಯಾಗಿರುವ ದಿನೇಶ್ ಗೂಳಿಗೌಡ, ಮಂಡ್ಯ ಕ್ಷೇತ್ರದ ಶಾಸಕ ಪಿ.ರವಿಕುಮಾರ್, ಶ್ರೀರಂಗಪಟ್ಟಣ ಕ್ಷೇತ್ರದ ರಮೇಶ್ ಬಂಡಿಸಿದ್ದೇಗೌಡ, ಮೇಲುಕೋಟೆ ಕ್ಷೇತ್ರದ ದರ್ಶನ್ ಪುಟ್ಟಣ್ಣಯ್ಯ ಅವರು ಸರ್ಕಾರದಿಂದ ಖಾಲಿ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಸದನದಲ್ಲೂ ದನಿ ಎತ್ತುವುದಿಲ್ಲ. ಸರ್ಕಾರದೊಂದಿಗೆ ಪತ್ರ ವ್ಯವಹಾರವನ್ನೂ ಮಾಡದಿರುವುದು ಜನತೆಯಲ್ಲಿ ಬೇಸರ ಮೂಡಿಸಿದೆ.ಕರ್ನಾಟಕ ಐದನೇ ಹಣಕಾಸು ಆಯೋಗದ ಅಧ್ಯಕ್ಷರು ಬಂದ ಸಮಯದಲ್ಲೂ ಸ್ಥಳೀಯ ಸಂಸ್ಥೆಗಳಾದ ಜಿಪಂ, ತಾಪಂ, ಗ್ರಾಪಂಗಳಲ್ಲಿರುವ ಸಿಬ್ಬಂದಿ ಕೊರತೆಯನ್ನು ನೀಗಿಸಲು ಶಿಫಾರಸು ಮಾಡುವಂತೆಯೂ ಅಧಿಕಾರಿಗಳು ಗಮನಸೆಳೆದಿದ್ದಾರೆ. ಆದರೆ, ಖಾಲಿ ಇರುವ ಹುದ್ದೆಗಳ ಭರ್ತಿಗೆ ಸರ್ಕಾರ ಇಚ್ಛಾಶಕ್ತಿ, ಬದ್ಧತೆ ಪ್ರದರ್ಶಿಸಬೇಕಿದೆ.ಮಂಡ್ಯ ತಾಲೂಕು ಪಂಚಾಯ್ತಿಯಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಇವೆ. ಕೆಲವರು ಅನಾರೋಗ್ಯದಿಂದ ಬಳಲುತ್ತಾ ನಿವೃತ್ತಿಯ ಅಂಚಿನಲ್ಲಿದ್ದಾರೆ. ಕೆಲಸದ ಒತ್ತಡ ಹೆಚ್ಚಾಗಿರುವುದರಿಂದ ಗ್ರಾಮ ಪಂಚಾಯ್ತಿಯಿಂದ ನೌಕರರನ್ನು ನೇಮಿಸಿಕೊಡುವಂತೆ ಜಿಪಂ ಸಿಇಒಗೆ ಪತ್ರ ಬರೆದಿದ್ದೇನೆ.
- ಎಚ್.ಎಸ್.ವೀಣಾ, ಕಾರ್ಯನಿರ್ವಾಹಕ ಅಧಿಕಾರಿ, ತಾಪಂ