ಮತಯಂತ್ರಗಳೊಂದಿಗೆ ಮತಗಟ್ಟೆಗೆ ತೆರಳಿದ ಸಿಬ್ಬಂದಿ

| Published : Apr 26 2024, 12:55 AM IST

ಸಾರಾಂಶ

ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ೪೦ ಸಖಿ ಬೂತ್‌ಗಳನ್ನು ತಯಾರಿಸಲಾಗಿದ್ದು, ಇಲ್ಲಿ ಸಿಬ್ಬಂದಿ ಸಹಿತ ಎಲ್ಲಾ ಮಹಿಳೆಯರನ್ನೇ ನಿಯೋಜಿಸಿರುವುದರ ಜತೆಗೆ ಸಿಬ್ಬಂದಿ ಬಣ್ಣಬಣ್ಣದ ಸೀರೆ ಧರಿಸಿ ಕಾರ್ಯ ನಿರ್ವಹಿಸಲಿದ್ದಾರೆ.

ಕನ್ನಡಪ್ರಭ ವಾರ್ತೆ ಕೋಲಾರ

ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ನಡೆಸಲು ಜಿಲ್ಲೆಯಲ್ಲಿ ನಿಯೋಜನೆಗೊಂಡಿರುವ ಪೊಲೀಸರು ಸೇರಿ ೧೦೩೦೦ಕ್ಕೂ ಹೆಚ್ಚು ಸಿಬ್ಬಂದಿ ಗುರುವಾರ ಮತಯಂತ್ರ, ವಿವಿ ಪ್ಯಾಟ್ ಸೇರಿ ಮತದಾನಕ್ಕೆ ಅಗತ್ಯ ಸಲಕರಣೆಗಳೊಂದಿಗೆ ಮತಗಟ್ಟೆಗಳಿಗೆ ತೆರಳಿದ್ದು, ಜಿಲ್ಲಾಡಳಿತ ಮುಕ್ತ, ನ್ಯಾಯಸಮ್ಮತ ಮತದಾನಕ್ಕೆ ಸಕಲ ಸಿದ್ಧತೆ ನಡೆಸಿದೆ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷಾ ತಿಳಿಸಿದರು.

ಮತಗಟ್ಟೆಗಳಿಗೆ ಮೂಲಸೌಲಭ್ಯ, ಬಿಗಿ ಭದ್ರತೆ ಸೇರಿ ಎಲ್ಲಾ ಸಕಲ ವ್ಯವಸ್ಥೆಗಳನ್ನು ಒದಗಿಸಲಾಗಿದೆ, ಮತದಾನ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಈಗಾಗಲೇ ೨ ಸುತ್ತಿನ ತರಬೇತಿ ನೀಡಿದ್ದು, ಯಾವುದೇ ಗೊಂದಲಗಳಿಗೆ ಅವಕಾಶವಾಗದಂತೆ ಎಚ್ಚರವಹಿಸಲಾಗಿದೆ ಎಂದು ತಿಳಿಸಿದರು.

ವಿಧಾನಸಭಾವಾರು ಮತಗಟ್ಟೆಗಳಿಗೆ ಪಯಣ:

ವಿಧಾನಸಭಾ ಕ್ಷೇತ್ರವಾರು ಆಯಾ ತಾಲೂಕು ಕೇಂದ್ರಗಳಲ್ಲೇ ಸಿಬ್ಬಂದಿ ಮತಗಟ್ಟೆಗಳಿಗೆ ತೆರಳಲು ವ್ಯವಸ್ಥೆ ಮಾಡಿದ್ದು, ಕೋಲಾರ, ಮುಳಬಾಗಿಲು, ಮಾಲೂರು, ಬಂಗಾರಪೇಟೆ, ಕೆಜಿಎಫ್, ಚಿಂತಾಮಣಿ, ಶಿಢ್ಲಘಟ್ಟ, ಶ್ರೀನಿವಾಸಪುರಗಳ ಕಾಲೇಜು ಮೈದಾನಗಳಲ್ಲಿ ಮಸ್ಟರಿಂಗ್ ಕಾರ್ಯ ನಡೆಯಿತು.

ಎಸಿ, ತಹಸೀಲ್ದಾರ್ ನೇತೃತ್ವದಲ್ಲಿ ಮಸ್ಟರಿಂಗ್:

ಜಿಲ್ಲಾ ಕೇಂದ್ರ ಕೋಲಾರದಲ್ಲಿ ವಿಭಾಗಾಧಿಕಾರಿ ವೆಂಕಟಲಕ್ಷ್ಮೀ ಹಾಗೂ ತಹಸೀಲ್ದಾರ್ ಹರ್ಷವರ್ಧನ್ ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಮಸ್ಟರಿಂಗ್ ನೇತೃತ್ವ ವಹಿಸಿದ್ದು, ಮತಗಟ್ಟೆಗಳಿಗೆ ತೆರಳುವ ಸಿಬ್ಬಂದಿ ತಾವು ಹೋಗುತ್ತಿರುವ ಮತಗಟ್ಟೆಗಳ ಮಾಹಿತಿಯೊಂದಿಗೆ ಚುನಾವಣಾ ಆಯೋಗ ನಿಗಧಿಗೊಳಿಸಿರುವ ಮತಯಂತ್ರ, ವಿವಿಪ್ಯಾಟ್, ಕಂಟ್ರೋಲ್ ಯುನಿಟ್, ಇಂಕ್ ಮತ್ತಿತರ ದಾಖಲೆಗಳು, ಸಲಕರಣೆಗಳನ್ನು ಅಧಿಕಾರಿಗಳಿಂದ ಪಡೆದುಕೊಂಡರು.

ಮತಗಟ್ಟೆ ಸಿಬ್ಬಂದಿಗೆ ಊಟದ ವ್ಯವಸ್ಥೆ:

ಮತಗಟ್ಟೆಗಳಿಗೆ ತೆರಳುವ ಸಿಬ್ಬಂದಿ ಮತಗಟ್ಟೆಗೆ ಅಗತ್ಯವಾದ ಸಲಕರಣೆ ಪಡೆದುಕೊಂಡ ನಂತರ ಅವುಗಳನ್ನು ಪರಿಶೀಲಿಸಲು ಅನುಕೂಲವಾಗುವಂತೆ ಬಿಸಿಲಿನ ತಾಪ ತಪ್ಪಿಸಲು ಬೃಹತ್ ಶಾಮಿಯಾನ ಹಾಕಲಾಗಿದ್ದು, ಇದೇ ಜಾಗದಲ್ಲಿ ಸಿಬ್ಬಂದಿಗೆ ಮಧ್ಯಾಹ್ನದ ಭರ್ಜರಿ ಊಟ ನೀಡಿದ್ದು, ಕುಡಿಯುವ ನೀರು, ಮಜ್ಜಿಗೆ ಒದಗಿಸಲಾಯಿತು.

ಚುನವಣಾ ಸಿಬ್ಬಂದಿಯೊಂದಿಗೆ ಪ್ರತಿ ಮತಗಟ್ಟೆಗೂ ನೇಮಕಗೊಂಡಿರುವ ಪೊಲೀಸ್ ಸಿಬ್ಬಂದಿ, ಗೃಹರಕ್ಷಕರು ಸೇರಿ ಸುಮಾರು ೩೫೦೦ಕ್ಕೂ ಹೆಚ್ಚು ಮಂದಿ ಪೊಲೀಸರು ಮತದಾನ ಕೇಂದ್ರಗಳಿಗೆ ತೆರಳಿದರು.

ಮತದಾನಕ್ಕೆ ಸಿಬ್ಬಂದಿ ನೇಮಕ ಪ್ರಕ್ರಿಯೆ:

೫೦೮ ಮೈಕ್ರೋ ವೀಕ್ಷಕರು, ೧೨೩೧ ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್, ಮತಗಟ್ಟೆಗಳನ್ನು ೩+೧ ಮಂದಿ ಭದ್ರತಾ ಸಿಬ್ಬಂದಿ ಕಾವಲು ಕಾಯುವರು. ೧೬೪೦ ಮಂದಿ ನಾಗರಿಕ ಪೊಲೀಸರು,೮೮೪ ಹೋಂ ಗಾರ್ಡ್ಗಳನ್ನು ನೇಮಿಸಲಾಗಿದೆ ಎಂದು ಹೇಳಿದರು.

ಕ್ಷೇತ್ರದಾದ್ಯಂತ ೪೦ ಸಖಿ ಬೂತ್ ಗಳು:

ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ೪೦ ಸಖಿ ಬೂತ್‌ಗಳನ್ನು ತಯಾರಿಸಲಾಗಿದ್ದು, ಇಲ್ಲಿ ಸಿಬ್ಬಂದಿ ಸಹಿತ ಎಲ್ಲಾ ಮಹಿಳೆಯರನ್ನೇ ನಿಯೋಜಿಸಿರುವುದರ ಜತೆಗೆ ಸಿಬ್ಬಂದಿ ಬಣ್ಣಬಣ್ಣದ ಸೀರೆ ಧರಿಸಿ ಕಾರ್ಯ ನಿರ್ವಹಿಸಲಿದ್ದಾರೆ. ಸಖಿ ಬೂತ್‌ಗಳಲ್ಲಿ ಕಾರ್ಯನಿರ್ವಹಿಸುವ ಮಹಿಳಾ ಸಿಬ್ಬಂದಿಗೆ ಸೂಕ್ತ ಮಾರ್ಗದರ್ಶನ ನೀಡಲಾಗಿದ್ದು, ಬೂತ್‌ಗಳು ವಿಶೇಷವಾಗಿ ಸೆಳೆಯುವ ರೀತಿ ಅಲಂಕರಿಸಲು ಚುನಾವಣಾ ಆಯೋಗ ಕ್ರಮ ಕೈಗೊಂಡಿದೆ. 8 ವಿಕಲಚೇತನರ ಮತಗಟ್ಟೆಗಳು, 8 ಯುವ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.

-------------------------

ಬಾಕ್ಸ್..................................

ಒಟ್ಟು ೭೩೯೨ ಮಂದಿ ಮತಗಟ್ಟೆ ಅಧಿಕಾರಿಗಳುಜಿಲ್ಲೆಯ ಎಲ್ಲಾ ೨೦೬೦ ಮತಗಟ್ಟೆಗಳಿಗೆ ೭೩೯೨ ಮಂದಿ ಮತಗಟ್ಟೆ ಅಧಿಕಾರಿಗಳು ಕೆಲಸ ಮಾಡಲಿದ್ದು, ಪಿಆರ್‌ಒ ೧೮೪೮, ಎಪಿಆರ್‌ಒ-೧೮೪೮, ಪೋಲಿಂಗ್ ಅಧಿಕಾರಿಗಳು ೩೬೯೬ ಮಂದಿ ಇದ್ದು, ಈ ಪೈಕಿ ಮಹಿಳಾ ಸಿಬ್ಬಂದಿ ೩೯೮೦ ಇದ್ದಾರೆ. ಪುರುಷರು ೩೪೦೦ ಇದ್ದು, ಮತಗಟ್ಟೆಗಳಿಗೆ ತೆರಳಲು ಸಾರಿಗೆ ಸಂಸ್ಥೆಯ ಜಿಪಿಎಸ್ ಅಳವಡಿಸಿರುವ ೨೧೯ ಬಸ್ಸುಗಳನ್ನು ಬಳಸಲಾಗಿದೆ, ೬೩ ಸರ್ಕಾರಿ ವಾಹನಗಳು, ೧೪೩ ಖಾಸಗಿ ವಾಹನಗಳನ್ನು ಬಳಸಲಾಗಿದೆ. ಮತದಾನ ಪೂರ್ವ ಸಮೀಕ್ಷೆಗೆ ಅವಕಾಶವಿಲ್ಲ. ಖಾಸಗಿ,ಸರ್ಕಾರಿ ಸಿಬ್ಬಂದಿಗೆ ಮತದಾನಕ್ಕಾಗಿ ವೇತನ ಸಹಿತ ರಜೆ ಘೋಷಿಸಲಾಗಿದೆ. ಕೋಲಾರದ ಮಸ್ಟರಿಂಗ್ ಕೇಂದ್ರದಲ್ಲಿ ವಿಭಾಗಾಧಿಕಾರಿ ವೆಂಕಟಲಕ್ಷ್ಮೀ, ತಹಸೀಲ್ದಾರ್ ಹರ್ಷವರ್ಧನ್, ಸೆಕ್ಟರ್ ಅಧಿಕಾರಿಗಳಾದ ಗೋಪಿಕೃಷ್ಣನ್, ಟಿ.ಕೆ.ನಟರಾಜ್, ಚಂದ್ರಪ್ಪ, ಆರ್‌ಐಗಳಾದ ರಾಜೇಂದ್ರ ಪ್ರಸಾದ್,ರಮೇಶ್ ಮತ್ತಿತರರು ಮತಗಟ್ಟೆ ಸಿಬ್ಬಂದಿಗೆ ಮಾರ್ಗದರ್ಶನ ನೀಡಿದರು.

ಲೋಕಸಭಾ ವ್ಯಾಪ್ತಿಯಲ್ಲಿ ೪೪೧ ಸೂಕ್ಷ್ಮ ಮತಗಟ್ಟೆಗಳು:

ಒಟ್ಟು ೨೦೬೦ ಮತಗಟ್ಟೆಗಳಿದ್ದು, ಸಾಮಾನ್ಯ ಮತಗಟ್ಟೆಗಳಿಗೆ ಓರ್ವ ಪೊಲೀಸ್ ಪೇದೆಯನ್ನು ಕಳುಹಿಸಿದ್ದು, ಉಳಿದಂತೆ ಜಿಲ್ಲೆಯಲ್ಲಿ ಗುರುತಿಸಲಾಗಿರುವ ೪೪೧ ಸೂಕ್ಷ್ಮ, ಅತೀಸೂಕ್ಷ್ಮ ೬೧ ಮತಗಟ್ಟೆಗಳಿಗೆ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಿ, ಶಾಂತಿ,ಸುವ್ಯವಸ್ಥೆಗೆ ಹೆಚ್ಚಿನ ನಿಗಾ ವಹಿಸಲಾಗಿದೆ.

ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ೨೦೬೦ ಮತಗಟ್ಟೆಗಳಿದ್ದು, ೭ ಆಕ್ಸೆಲರಿ ಮತಗಟ್ಟೆಗಳಿವೆ, ಈ ಪೈಕಿ ೧೫೫೮ ಸಾಮಾನ್ಯ ಹಾಗೂ ೪೪೧ ಸೂಕ್ಷ್ಮ, ೬೧ ಅತೀಸೂಕ್ಷ್ಮ ಮತಗಟ್ಟೆಗಳಾಗಿವೆ. ಈಗಾಗಲೇ ೪೧೨೦ ವಿದ್ಯುನ್ಮಾನ ಮತ ಯಂತ್ರಗಳು (ಇವಿಎಂ) ಕಂಟ್ರೋಲ್ ಯೂನಿಟ್, ಬ್ಯಾಲೆಟ್ ಯೂನಿಟ್ ಹಾಗೂ ಮತ ಖಾತ್ರಿ ಉಪಕರಣಗಳ (ವಿ.ವಿ ಪ್ಯಾಟ್) ಸಿದ್ಧತೆ ಮಾಡಿಕೊಂಡಿದ್ದು, ಮೊದಲ ಹಂತದಲ್ಲಿ ಪರಿಶೀಲನೆ ಕಾರ್ಯ ನಡೆಸಿ ಸುಸಜ್ಜಿತವಾಗಿದೆ ಎಂದು ದೃಢೀಕರಿಸಿದ ಬಗ್ಗೆ ಡೀಸಿ ತಿಳಿಸಿದರು.