ರಂಗನಟಿ ಸುಜಾತಾ ಶೆಟ್ಟಿಗೆ ವಿಶ್ವರಂಗ ಪುರಸ್ಕಾರ ಪ್ರದಾನ

| Published : Mar 31 2024, 02:06 AM IST

ರಂಗನಟಿ ಸುಜಾತಾ ಶೆಟ್ಟಿಗೆ ವಿಶ್ವರಂಗ ಪುರಸ್ಕಾರ ಪ್ರದಾನ
Share this Article
  • FB
  • TW
  • Linkdin
  • Email

ಸಾರಾಂಶ

ಸುಜಾತ ಶೆಟ್ಟಿ ನಟಿ, ನಿರ್ದೇಶಕಿ, ನಿರೂಪಕಿಯಾಗಿ ನಾಟಕ, ರೂಪಕ, ಚಲನಚಿತ್ರಗಳಲ್ಲಿ ಪಾತ್ರಗಳಿಗೆ ಜೀವ ತುಂಬಿದ್ದಾರೆ.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ರಂಗ ಪ್ರತಿಭೆ, ಮಹಾವೀರ ಕಾಲೇಜಿನ ಸಮಾಜಶಾಸ್ತ್ರ ಉಪನ್ಯಾಸಕಿ ಸುಜಾತಾ ಶೆಟ್ಟಿ ಅವರಿಗೆ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ಮತ್ತು ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್, ಉಡುಪಿ ಶಾಖೆ ಜಂಟಿಯಾಗಿ ನಟನಾ ವಿಭಾಗದಲ್ಲಿ ಕೊಡ ಮಾಡುವ ಮಲಬಾರ್ ವಿಶ್ವ ರಂಗ ಪುರಸ್ಕಾರ- ೨೦೨೪ ನೀಡಿ ಗೌರವಿಸಿದೆ.

ಸುಜಾತ ಶೆಟ್ಟಿ ನಟಿ, ನಿರ್ದೇಶಕಿ, ನಿರೂಪಕಿಯಾಗಿ ನಾಟಕ, ರೂಪಕ, ಚಲನಚಿತ್ರಗಳಲ್ಲಿ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಮಕ್ಕಳಿಗಾಗಿ ಸಣ್ಣ ನಾಟಕಗಳ ರಚನೆ, ನಿರ್ದೇಶನ, ರೂಪಕಗಳ ರಚನೆ, ಕಾರ್ಯಕ್ರಮ ನಿರೂಪಣೆ , ವ್ಯಕ್ತಿತ್ವ ವಿಕಸನದ ಸಂಪನ್ಮೂಲ ವ್ಯಕ್ತಿ ಹೀಗೆ ಹಲವಾರು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅಂಗರ ಎಂಬ ತುಳು ನಾಟಕದಲ್ಲಿ ಅಭಿನಯದೊಂದಿಗೆ ಆರಂಭವಾಗಿದ್ದ ಇವರ ರಂಗ ಪಯಣ ಉಡುಪಿಯ ಯಶಸ್ವಿ ನಾಟಕ ನಾಗಮಂಡಲ ನಾಟಕದಲ್ಲಿ ಅವರ ಅದ್ಭುತ ಅಭಿನಯ ಮರೆಯಲಾಗದ್ದು.

‘ಹಸಿರು ನಾಡಿನಲ್ಲಿ ಕೆಂಪು ಹಾದಿ’ ಎನ್ನುವ ಪೊಲೀಸ್‌ ಇಲಾಖೆ ನಡೆಸಿಕೊಟ್ಟ ನಕ್ಸಲ್ ಜಾಗೃತಿಯ ನಾಟಕದಲ್ಲೂ ಇವರ ಅಭಿನಯ ಜನಮನ ಗೆದ್ದಿತ್ತು. ೧೨ಕ್ಕೂ ಮಿಕ್ಕಿದ ಕಿರು ಚಿತ್ರಗಳು ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ಬಾಚಿಕೊಂಡು ಜಾಲತಾಣಗಳಲ್ಲಿ ಓಡಾಡುತ್ತಿವೆ.

ಭೂಮಿ, ಸಿಂಧೂರ, ಪ್ರೀತಿಯಿಂದ ಹೀಗೆ ೧೩ಕ್ಕೂ ಹೆಚ್ಚಿನ ಧಾರವಾಹಿಗಳು, ಕೋಟಿ ಚೆನ್ನಯ, ಗುಲಾಬಿ ಟಾಕೀಸ್, ರಿಕ್ಕಿ , ಮದಿಪು ಹೀಗೆ ಹತ್ತಕ್ಕೂ ಮಿಕ್ಕಿದ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಸುಜಾತಾ ಶೆಟ್ಟಿ ಅವರು ಮುಖ್ಯ ಭೂಮಿಕೆಯಲ್ಲಿ ನಟಿಸಿದ ‘ಮದಿಪು’ ಎಂಬ ತುಳುಚಿತ್ರ ಅಂತಾರಾಷ್ಟ್ರೀಯ ಮಟ್ಟದ ಅತ್ಯುತ್ತಮ ಪ್ರಾದೇಶಿಕ ಚಿತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅದೇ ರೀತಿ ಚಿತ್ರರಂಗದ ಸಾಹಿತಿ, ನಾಟಕಕಾರ ಗಿರೀಶ್ ಕಾಸರವಳ್ಳಿಯವರ ನಿರ್ದೇಶನದ, ಸುಜಾತ ಶೆಟ್ಟಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡ ‘ಇಲ್ಲಿರಲಾರೆ ಅಲ್ಲಿಗೂ ಹೋಗಲಾರೆ’ ಎಂಬ ಚಿತ್ರಕ್ಕೆ ಸ್ಪೇನ್‌ನಲ್ಲಿ ಬೆಸ್ಟ್ ಜ್ಯೂರಿ ಅವಾರ್ಡ್ ದೊರಕಿರುವುದು ಗಮನಾರ್ಹ.