ಶ್ರೀರಂಗಪಟ್ಟಣ ದಸರಾ ಉತ್ಸವಕ್ಕೆ ಭರದಿಂದ ಸಾಗಿದ ವೇದಿಕೆ ನಿರ್ಮಾಣ ಕಾರ್ಯ

| Published : Sep 29 2024, 01:35 AM IST

ಶ್ರೀರಂಗಪಟ್ಟಣ ದಸರಾ ಉತ್ಸವಕ್ಕೆ ಭರದಿಂದ ಸಾಗಿದ ವೇದಿಕೆ ನಿರ್ಮಾಣ ಕಾರ್ಯ
Share this Article
  • FB
  • TW
  • Linkdin
  • Email

ಸಾರಾಂಶ

ದಸರಾ ಉತ್ಸವ ಆರಂಭಗೊಳ್ಳುವ ಶ್ರೀರಂಗಪಟ್ಟಣ ತಾಲೂಕಿನ ಕಿರಂಗೂರು ಗ್ರಾಮದ ಬಳಿ ಇರುವ ಬನ್ನಿ ಮಂಟಪವನ್ನು ಈಗಾಗಲೇ ಸ್ವಚ್ಛಗೊಳಿಸಿ ಸುಣ್ಣ-ಬಣ್ಣ ಬಳಿಯುವ ಕಾರ್ಯಕ್ಕೆ ಮುಂದಾಗಿದೆ. ಮಂಟಪದ ಸುತ್ತಲೂ ಉದ್ಯಾನ ವನದಂತೆ ಹಸಿರು ಹಾಸಿನ ಹುಲ್ಲು ಹೊದಿಕೆ, ಬಣ್ಣ ಬಣ್ಣದ ವಿದ್ಯುತ್ ದೀಪಗಳ ಅಲಂಕಾರ ಮಾಡಲು ಸಿದ್ಧತೆ ಕಾರ್ಯಗಳು ನಡೆಯುತ್ತಿವೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಪಟ್ಟಣದಲ್ಲಿ ಅ.4ರಿಂದ 4 ದಿನಗಳ ಕಾಲ ನಡೆಯುವ ದಸರಾ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ಬೃಹತ್ ವೇದಿಕೆ ನಿರ್ಮಾಣ ಕಾರ್ಯ ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯ ಮೈದಾನದಲ್ಲಿ ಭರದಿಂದ ಸಾಗಿದೆ.

ದಸರಾ ಉತ್ಸವ ಆರಂಭಗೊಳ್ಳುವ ತಾಲೂಕಿನ ಕಿರಂಗೂರು ಗ್ರಾಮದ ಬಳಿ ಇರುವ ಬನ್ನಿ ಮಂಟಪವನ್ನು ಈಗಾಗಲೇ ಸ್ವಚ್ಛಗೊಳಿಸಿ ಸುಣ್ಣ-ಬಣ್ಣ ಬಳಿಯುವ ಕಾರ್ಯಕ್ಕೆ ಮುಂದಾಗಿದೆ. ಮಂಟಪದ ಸುತ್ತಲೂ ಉದ್ಯಾನ ವನದಂತೆ ಹಸಿರು ಹಾಸಿನ ಹುಲ್ಲು ಹೊದಿಕೆ, ಬಣ್ಣ ಬಣ್ಣದ ವಿದ್ಯುತ್ ದೀಪಗಳ ಅಲಂಕಾರ ಮಾಡಲು ಸಿದ್ಧತೆ ಕಾರ್ಯಗಳು ನಡೆಯುತ್ತಿವೆ.

ಜಿಲ್ಲಾಡಳಿತ ಹಾಗೂ ಜಿಪಂನಿಂದ ದಸರಾ ಆಚರಿಸಲು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಅಂಬಾರಿ ಮೆರವಣಿಗೆ ವೀಕ್ಷಣೆಗೆ ಬರುವ ಸಾರ್ವಜನಿಕರು ಕುಳಿತು ನೋಡಲು ವಿಶೇಷ ಆಸನಗಳ ವ್ಯವಸ್ಥೆ. ಹಾಗೆಯೇ ಅಂಬಾರಿ ಮೆರವಣಿಗೆ ಸಾಗುವ ಬೆಂಗಳೂರು ಮೈಸೂರು ಹೆದ್ದಾರಿ ಸೇರಿದಂತೆ ಪಟ್ಟಣದ ಮುಖ್ಯ ರಸ್ತೆಯನ್ನು ವಿಶೇಷ ದೀಪಾಲಂಕಾರಗಳಿಂದ ಸಿಂಗರಿಸುವ ಜೊತೆಗೆ ಶ್ರಿರಂಗನಾಥಸ್ವಾಮಿ ದೇವಾಲಯದ ಎದುರುಗಿನ ರಸ್ತೆ ಹಾಗೂ ಪ್ರಮುಖ ವೃತ್ತಗಳಲ್ಲಿ ವಿಶೇಷ ವಿದ್ಯುತ್ ಅಲಂಕಾರಗಳಿಂದ ಅಲಂಕರಿಸಲಾಗುತ್ತಿದೆ.

ಪುಸ್ತಕ ಪ್ರದರ್ಶನ:

ವೇದಿಕೆಯ ಒಂದೆಡೆ ಈ ಬಾರಿ ಪುಸ್ತಕ ಪ್ರದರ್ಶನ ಏರ್ಪಡಿಸಲಾಗುತ್ತಿದೆ. ದಸರಾ ಗತವೈಭವ ಬಿಂಬಿಸುವ ಚಿತ್ರಗಳ ಪ್ರದರ್ಶನವೂ ಅಲ್ಲಿ ಇರುತ್ತದೆ. ಮತ್ತೊಂದು ಕಡೆ ಆಹಾರ ಮೇಳ ನಡೆಯುವ ಮಳಿಗೆಗಳ ನಿರ್ಮಾಣ ಕಾರ್ಯ ಸಹ ನಡೆಯುತ್ತಿದೆ.

ಪಟ್ಟಣ ಪ್ರಮುಖ ವೃತ್ತಗಳು ಮತ್ತು ಬೀದಿಗಳಲ್ಲಿ ಕರ್ನಾಟಕದ ಧ್ವಜಗಳನ್ನು ಹಾಕಲಾಗುತ್ತದೆ. ಮುಖ್ಯ ಬೀದಿಗಳು ಮತ್ತು ವೃತ್ತಗಳನ್ನು ತಳಿರು ತೋರಣ ಹಾಗೂ ವಿದ್ಯುತ್ ದೀಪಗಳಿಂದ ವಿಶೇಷ ಅಲಂಕಾರ ಮಾಡುವಂತೆ ಅಲಂಕಾರ ಸಮಿತಿಗೆ ಸೂಚಿಸಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ಬರುವ ಎಲ್ಲಾ ಕಲಾವಿದರಿಗೆ ಊಟದ ವ್ಯವಸ್ಥೆ ಮಾಡಲಾಗುತ್ತದೆ.

ಜಂಬುಸವಾರಿ ಮೆರವಣಿಗೆಗೆ ಚಾಲನೆ:

ಶ್ರೀರಂಗಪಟ್ಟಣದ ಕಿರಂಗೂರು ಬನ್ನಿಮಂಟಪದಲ್ಲಿ ಅ.4ರ ಮಧ್ಯಾಹ್ನ 12.30 ಕ್ಕೆ ನಂದಿಧ್ವಜ ಪೂಜೆ ಹಾಗೂ ಮಧ್ಯಾಹ್ನ 2.30 ರಿಂದ 3.15 ರವರೆಗೆ ಸಲ್ಲುವ ಶುಭಮಕರ ಲಗ್ನದಲ್ಲಿ ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಗೆ ಅಗ್ರಪೂಜೆ ಹಾಗೂ ಜಂಭೂ ಸವಾರಿ ಮೆರವಣಿಗೆಗೆ ನಟ ಹ್ಯಾಟ್ರಿಕ್ ಹೀರೊ ಡಾ. ಶಿವರಾಜಕುಮಾರ್ ಚಾಲನೆ ನೀಡಲಿದ್ದಾರೆ.