ಸಾರಾಂಶ
ಹೊಲದಲ್ಲಿ ನೀರು ನಿಂತಿದ್ದು, ಕೃಷಿ ಚಟುವಟಿಕೆ ಸಾಧ್ಯವಾಗುತ್ತಿಲ್ಲ.
ಕೊಟ್ಟೂರು: ತಾಲೂಕಿನೆಲ್ಲೆಡೆ ಬುಧವಾರದಿಂದ ಉತ್ತಮ ಮಳೆಯಾಗುತ್ತಿದೆ. ನಿತ್ಯ ಸಂಜೆ ವೇಳೆಗೆ ಮಳೆ ಬೀಳುತ್ತಿದೆ. ಹೊಲದಲ್ಲಿ ನೀರು ನಿಂತಿದ್ದು, ಕೃಷಿ ಚಟುವಟಿಕೆ ಸಾಧ್ಯವಾಗುತ್ತಿಲ್ಲ.ಈಗಾಗಲೇ ರೈತರು ಬಿತ್ತನೆ ಕಾರ್ಯ ಮಾಡಲು ಕೃಷಿ ಭೂಮಿ ಹದ ಮಾಡಿಕೊಂಡು ಕಾಯುತ್ತಿದ್ದಾರೆ. ಗುರುವಾರ ರಾತ್ರಿ ಕೊಟ್ಟೂರು ಪಟ್ಟಣದಲ್ಲಿ 36.2 ಮಿ.ಮೀ. ಮಳೆ ಬಂದಿದೆ. ತಾಲೂಕಿನ ಅಂಬಳಿ ಗ್ರಾಮದಲ್ಲಿ ಬುಧವಾರ ಗಾಳಿ-ಮಳೆಗೆ ನಂದಿಬೇವೂರು ಕೊಟ್ರಪ್ಪ ಎಂಬವರ ಮನೆ ಛಾವಣಿ ಕಿತ್ತು ಹೋಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ತಾಲೂಕಿನ ಗಜಾಪುರ ಗ್ರಾಮದಲ್ಲಿ ಬಾರಿಕರ ರಾಮಪ್ಪ ಅವರ ತೋಟದಲ್ಲಿ ತೆಂಗಿನಮರಗಳಿಗೆ ಸಿಡಿಲು ಬಡಿದು ಹಾನಿಯಾಗಿದೆ. ಮೋತಿಕಲ್ ತಾಂಡಾದ ಬಳಿಯ ಇದ್ಲಿಕಟ್ಟಿ ಹಳ್ಳ ಮತ್ತಿತರ ಹಳ್ಳ-ಕೊಳ್ಳಗಳು, ಕೃಷಿ ಹೊಂಡಗಳು, ಗೋಕಟ್ಟೆಗಳು ತುಂಬಿವೆ.₹5 ಲಕ್ಷ ಚೆಕ್ ವಿತರಣೆ: ತಾಲೂಕಿನ ದೂಪದಹಳ್ಳಿಯಲ್ಲಿ ಸಿಡಿಲಿನ ಬಡಿತಕ್ಕೆ ಕುರಿಗಾಹಿ ಡಿ.ಮದ್ದಾನಕುಮಾರ್ ಕೊಟ್ರೇಶಪ್ಪ ಅಸುನೀಗಿದ್ದ ಹಿನ್ನೆಲೆಯಲ್ಲಿ ಶಾಸಕ ಕೆ.ನೇಮಿರಾಜ ನಾಯ್ಕ ಶುಕ್ರವಾರ ಅವರ ನಿವಾಸಕ್ಕೆ ಭೇಟಿ ನೀಡಿ ಸರ್ಕಾರದಿಂದ ಪ್ರಕೃತಿ ವಿಕೋಪ ನೆರವಿನ ₹5 ಲಕ್ಷಗಳ ಚೆಕ್‌ನ್ನು ಮೃತನ ತಾಯಿಗೆ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿದರು.
ತಹಸೀಲ್ದಾರ್ ಅಮರೇಶ ಜಿ.ಕೆ., ಜಿಪಂ ಮಾಜಿ ಸದಸ್ಯ ಎಂ.ಎಂ.ಜೆ. ಹರ್ಷವರ್ಧನ್, ಎಪಿಎಂಸಿ ಮಾಜಿ ಅಧ್ಯಕ್ಷ ಬೂದಿ ಶಿವಕುಮಾರ್, ಜೆಡಿಎಸ್ ಅಧ್ಯಕ್ಷ ವೈ.ಮಲ್ಲಿಕಾರ್ಜುನ್, ಮುಖಂಡರಾದ ಕೋಗಳಿ ಕೊಟ್ರೇಶ್, ಕಂದಾಯ ಪರಿವೀಕ್ಷಕ ಹಾಲಸ್ವಾಮಿ ಇದ್ದರು.