ಸಾರಾಂಶ
ಅಂಕೋಲಾ: ಪಟ್ಟಣದ ಜೈಹಿಂದ ಪ್ರೌಢಶಾಲೆಯ ಮುಂಭಾಗದಲ್ಲಿ ಏಕಾಏಕಿ ಗೂಡಂಗಡಿ ತೆರವು ಕಾರ್ಯಾಚರಣೆ ವೇಳೆ ಆಡಳಿತ ಮಂಡಳಿಯ ಸದಸ್ಯರು ಮತ್ತು ಅಧಿಕಾರಿಗಳ ಹೈಡ್ರಾಮಾ ಸೃಷ್ಟಿಯಾದ ಘಟನೆ ಗುರುವಾರ ನಡೆದಿದೆ. ತೆರವಿಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆ ಕಾರ್ಯಾಚರಣೆ ಸ್ಥಗಿತಗೊಳಿಸಲಾಯಿತು.ಈ ಬಗ್ಗೆ ಆಟೋ ರಿಕ್ಷಾ ಚಾಲಕರ ಸಂಘವು ಪುರಸಭೆ ಹಾಗೂ ಜಿಲ್ಲಾಧಿಕಾರಿಗೆ ಮನವಿ ನೀಡಿ ಒತ್ತಾಯಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಗೂಡಂಗಡಿ ತೆರವುಗೊಳಿಸುವಂತೆ ಜಿಲ್ಲಾಧಿಕಾರಿಗಳಿಂದ ದೊರೆತ ಅಜ್ಞೆಯ ಅನುಸಾರ ಮುಖ್ಯಾಧಿಕಾರಿ ಎಚ್. ಅಕ್ಷತಾ ಗೂಡಂಗಡಿ ತೆರವುಗೊಳಿಸಲು ಪುರಸಭೆಯ ವಾಹನ ಸಮೇತ ಗುರುವಾರ ಸ್ಥಳಕ್ಕೆ ಆಗಮಿಸಿದ್ದರು.
ಬಹಿರಂಗ ವಾಕ್ಸಮರ: ಗೂಡಂಗಡಿ ತೆರವುಗೊಳಿಸುವ ಮಾಹಿತಿ ದೊರೆತ ತಕ್ಷಣವೇ ಪುರಸಭೆ ಜನಪ್ರತಿನಿಧಿಗಳು ಬೆಳಗ್ಗೆ 11 ಗಂಟೆಗೆ ಸ್ಥಳದಲ್ಲಿ ಜಮಾಯಿಸಿದ್ದರು. ಅಧಿಕಾರಿಗಳು ಬಂದು ಅಂಗಡಿ ಮುಟ್ಟುತ್ತಿದ್ದಂತೆ ಆಕ್ರೋಶಗೊಂಡ ಜನಪ್ರತಿನಿಧಿಗಳು ಮಾತಿನ ಕಾಳಗಕ್ಕಿಳಿದರು. ಗೂಡಂಗಡಿ ಯಾವುದೇ ಕಾರಣಕ್ಕೂ ತೆಗೆಯುವ ಪ್ರಶ್ನೆಯೇ ಇಲ್ಲ. ಜಿಲ್ಲಾಧಿಕಾರಿಗಳ ಜತೆಗೆ ಮಾತನಾಡುತ್ತೇವೆ. ಅಲ್ಲಿಯವರೆಗೆ ಅಂಗಡಿ ಸ್ಥಳಂತರಿಸದಂತೆ ತಾಕೀತು ಮಾಡಿದರು.ಇದಕ್ಕೆ ಜಗ್ಗದ ಮುಖ್ಯಾಧಿಕಾರಿ ಅಕ್ಷತಾ ಪೊಲೀಸ್ ರಕ್ಷಣೆಯೊಂದಿಗೆ ಅಂಗಡಿ ತೆಗೆಯುವ ಪ್ರಯತ್ನ ನಡೆಸಿದರು. ಪುರಸಭೆಯ ಮಾಜಿ ಅಧ್ಯಕ್ಷ ರಾಜೇಂದ್ರ ನಾಯ್ಕ ಮಧ್ಯಪ್ರವೇಶಿಸಿ, ಪಟ್ಟಣದಲ್ಲಿ 200ಕ್ಕೂ ಹೆಚ್ಚು ಗೂಡಂಗಡಿಗಳಿವೆ. ಆದರೂ ನೀವು ಅವುಗಳ ಬಗ್ಗೆ ಚಕಾರ ಎತ್ತಿಲ್ಲ. ಅದರೆ ಇದೊಂದೆ ಅಂಗಡಿಯ ಮೇಲೆ ಮಾತ್ರ ನಿಮ್ಮ ಪೌರುಷ ತೋರಿಸುತ್ತಿದ್ದೀರಾ. ತೆಗೆಯುವುದಾದರೆ ಅನಧಿಕೃತವಾಗಿ ಇಟ್ಟಿರುವ ಎಲ್ಲ ಅಂಗಡಿಗಳನ್ನು ತೆಗೆಯಿರಿ. ಇಲ್ಲವಾದರೆ ಜಿಲ್ಲಾಧಿಕಾರಿಗಳ ಜತೆ ಮಾತುಕತೆ ಆಗುವವರೆಗೆ ಸುಮ್ಮನಿರಿ. ಈ ಕುರಿತು ಜನಪ್ರತಿನಿಧಿಗಳ ತುರ್ತು ಸಭೆ ನಡೆಸಿ ತೀರ್ಮಾನ ಕೈಗೊಳ್ಳಿ ಎಂದರು.
ಈ ಸಂದರ್ಭದಲ್ಲಿ ಕೆಲ ಜನಪ್ರತಿನಿಧಿಗಳು ಮುಖ್ಯಾಧಿಕಾರಿಯವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಅಷ್ಟು ಹೊತ್ತಿಗಾಗಲೇ ಪುರಸಭೆ ಅಧ್ಯಕ್ಷ ಸೂರಜ ನಾಯ್ಕ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಅಂಗಡಿ ಅಲ್ಲಿಂದ ತೆಗೆಯದಂತೆ ಅವರ ಮನವೊಲಿಸಿದ ಹಿನ್ನೆಲೆ ಸದ್ಯದ ಮಟ್ಟಿಗೆ ಅಂಗಡಿ ಅಲ್ಲಿಂದ ಸ್ಥಳಾಂತರಿಸದಂತೆ ತಿಳಿಸಿದ್ದು, ಪುರಸಭಗೆ ಅಧಿಕಾರಿಗಳು ಅಲ್ಲಿಂದ ವಾಪಸ್ ತೆರಳಿದ್ದಾರೆ.ಈ ಸಂದರ್ಭದಲ್ಲಿ ಪುರಸಭೆಯ ಸದಸ್ಯರಾದ ವಿಶ್ವನಾಥ ನಾಯ್ಕ, ಜಯಪ್ರಕಾಶ ನಾಯ್ಕ, ಜಯಾ ನಾಯ್ಕ, ತಾರಾ ನಾಯ್ಕ, ಸವಿತಾ ನಾಯಕ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು. ಅಂಗಡಿ ಇಡುವಾಗ ಪಡೆಯದ ಅನುಮತಿ ತೆರವು ಮಾಡುವಾಗ ಏಕೆ?
ಗೂಡಂಗಡಿ ತೆರವು ಸಂದರ್ಭದಲ್ಲಿ ಪುರಸಭೆಯಿಂದಾಗಲಿ ಅಥವಾ ಯಾವುದೇ ಸಂಬಂಧಿಸಿದ ಇಲಾಖೆಯಿಂದಾಗಲಿ ಯಾವುದೇ ಅನುಮತಿ ಪಡೆಯದೆ ಅಂಗಡಿ ಇಡಲಾಗಿದೆ. ಅದರೆ ಅದೇ ಅಂಗಡಿಯನ್ನು ತೆರವು ಮಾಡುವ ಸಂದರ್ಭದಲ್ಲಿ ಮಾತ್ರ ಮೇಲಧಿಕಾರಿಗಳ ಅಪ್ಪಣೆ ಕೇಳುತ್ತಿರುವುದು ಏಕೆ ಎಂದು ಪೊಲೀಸ್ ಅಧಿಕಾರಿಗಳು ಹಾಗೂ ಆಟೋ ಚಾಲಕರು ಪ್ರಶ್ನಿಸಿದರು.ಅಷ್ಟೊತ್ತಿಗಾಗಲೇ ಜಿಲ್ಲಾಧಿಕಾರಿಗಳ ತೀರ್ಮಾನದ ಅನ್ವಯ ವಿಷಯ ತಾತ್ಕಾಲಿಕ ಶಮನ ಪಡೆಯಿತು. ಮುಂದಿನ ದಿನಗಳಲ್ಲಿ ಈ ಪ್ರಕರಣ ಯಾವ ತಿರುವು ಪಡೆಯುತ್ತದೆ, ಅನಧಿಕೃತ ಗೂಡಂಗಡಿಗಳ ಭವಿಷ್ಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.