ಕನ್ನಡಪ್ರಭ ವಾರ್ತೆ ಮದ್ದೂರು

ಗ್ರಾಮೀಣ ಭಾಗದಲ್ಲಿ ಕಳೆದ ಹಲವು ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ಕಾಮಗಾರಿಗಳನ್ನು ಪೂರ್ಣಗೊಳಿಸಿ ಸ್ಥಳೀಯ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು ವಿವಿಧ ಇಲಾಖೆಗಳ ಅನುದಾನವನ್ನು ಹಂತಹಂತವಾಗಿ ಬಿಡುಗಡೆಗೊಳಿಸಿ ಅಭಿವೃದ್ಧಿಗೆ ವೇಗ ಕಲ್ಪಿಸಿರುವುದಾಗಿ ಶಾಸಕ ಕೆ.ಎಂ.ಉದಯ್ ತಿಳಿಸಿದರು.

ತಾಲೂಕಿನ ಕುದರಗುಂಡಿ, ಬೋರಾಪುರ, ಗ್ರಾಮಗಳ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಬಿಡುಗಡೆಯಾಗಿರುವ 40 ಲಕ್ಷ ರು. ವೆಚ್ಚದ ಕಾಮಗಾರಿಗೆ ಗುದ್ದಲಿ ಪುಜೆ ನೆರವೇರಿಸಿ ಮಾತನಾಡಿ, ಕಳೆದ ಎರಡು ದಶಕಗಳಿಂದಲೂ ತಾಲೂಕಿನಾದ್ಯಂತ ಅಭಿವೃದ್ಧಿ ಕಾಮಗಾರಿಗಳು ಸಮರ್ಪಕವಾಗಿ ಕೈಗೊಳ್ಳದ ಹಿನ್ನೆಲೆಯಲ್ಲಿ ಗ್ರಾಮಗಳು ಅಭಿವೃದ್ಧಿಯಿಂದ ಕುಂಠಿತಗೊಳ್ಳಲು ಕಾರಣವಾಗಿದೆ ಎಂದರು.

ಪ್ರತಿ ಗ್ರಾಮದಲ್ಲೂ ಒಂದಿಲ್ಲ ಒಂದು ಸಮಸ್ಯೆಗಳು ಕಂಡುಬರುತ್ತಿದೆ. ಈ ಹಿಂದೆ ಅಧಿಕಾರ ನಡೆಸಿದ ಅಧಿಕಾರಸ್ಥ ರಾಜಕಾರಣಿಗಳು ಮತ್ತು ಅಧಿಕಾರಿಗಳು ಸಮರ್ಪಕ ಯೋಜನೆ ಇಲ್ಲದ ಕಾರಣ ಇಷ್ಟೆಲ್ಲ ಅದ್ವಾನಗಳಿಗೆ ಕಾರಣವಾಗಿವೆ ಎಂದು ದೂರಿದರು.

ತಾವು ಶಾಸಕರಾದ ಬಳಿಕ ತಮ್ಮ ಅವಧಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ವಿವಿಧ ಇಲಾಖೆಗಳ ಅನುದಾನ ಹಂಚಿಕೆ ಮಾಡಿ ಪ್ರತಿ ಗ್ರಾಮದಲ್ಲೂ ಕಾಮಗಾರಿಗಳನ್ನು ಕೈಗೊಂಡು ಸ್ಥಳೀಯ ನಿವಾಸಿಗಳಿಗೆ ಅನುಕೂಲ ಕಲ್ಪಿಸಿ ಬಹಳಷ್ಟು ವರ್ಷಗಳಿಂದಲೂ ನೆನಗುದಿಗೆ ಬಿದ್ದಿದ್ದ ಕಾಮಗಾರಿಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದರು.


ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಮದ್ದೂರು ಕ್ಷೇತ್ರಕ್ಕೆ ನಿರೀಕ್ಷೆಗೂ ಮೀರಿದ ಅನುದಾನವನ್ನು ತಂದು ಸುಮಾರು ಎರಡು ಸಾವಿರ ಕೋಟಿ ರು. ವೆಚ್ಚದಲ್ಲಿ ನೀರಾವರಿ, ರಸ್ತೆ ಅಭಿವೃದ್ಧಿ, ವಿದ್ಯುತ್, ನಾಲೆಗಳ ಆಧುನೀಕರಣ, ಕೆರೆಕಟ್ಟೆಗಳ ಪುನಃಶ್ವೇತನ, ಏತನೀರಾವರಿ ಯೋಜನೆ, ಶಿಂಷಾನದಿಗೆ ಅಡ್ಡಲಾಗಿ ಚೆಕ್‌ಡ್ಯಾಂ ನಿರ್ಮಾಣ, ಇನ್ನಿತರ ಕಾಮಗಾರಿಗಳನ್ನು ಕೈಗೊಂಡು ಮಾದರಿ ಕ್ಷೇತ್ರವನ್ನಾಗಿಸಲು ಹಗಲಿರುಳು ಶ್ರಮಿಸುತ್ತಿರುವುದಾಗಿ ತಿಳಿಸಿದರು.

ಕ್ಷೇತ್ರದ ಜನರು ತಮ್ಮ ಮೇಲೆ ಅಪಾರ ನಂಬಿಕೆ, ವಿಶ್ವಾಸವಿಟ್ಟು ಪ್ರಥಮ ಬಾರಿಗೆ ತಮ್ಮನ್ನು ಶಾಸಕರನ್ನಾಗಿ ಆಯ್ಕೆ ಮಾಡಿದ್ದು, ಅವರ ನಂಬಿಕೆಗೆ ಚ್ಯುತಿ ಬಾರದಂತೆ, ಶ್ರದ್ಧೆ, ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿ ಕ್ಷೇತ್ರದ ಅಭಿವೃದ್ಧಿಗೆ ವಿವಿಧ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ಅನುದಾನ ಬಿಡುಗಡೆಗೊಳಿಸಿರುವುದಾಗಿ ಹೇಳಿದರು.

ಈ ವೇಳೆ ಎಪಿಎಂಸಿ ಮಾಜಿ ಅಧ್ಯಕ್ಷ ನಾಗೇಶ್, ಸ್ಥಳೀಯ ಮುಖಂಡರಾದ ಕುದರಗುಂಡಿ ಶ್ರೀಧರ್, ಗ್ರಾಪಂ ಮಾಜಿ ಅಧ್ಯಕ್ಷ ಜಯರಾಮು, ಸತೀಶ್, ಶೇಖರ್‌ಗೌಡ, ಡಿ.ಜೆ.ಮಲ್ಲೇಶ್, ಪ್ರಕಾಶ್, ರಾಜೇಶ್, ಚಿಕ್ಕಯ್ಯ, ವಿಜಯ್, ಧ್ರುವಕುಮಾರ್, ನಯನ, ಆನಂದ, ಪ್ರಕಾಶ್, ಕಾಂಗ್ರೇಸ್ ಯುವಘಟಕದ ಅಧ್ಯಕ್ಷ ಹಿತೇಶ್‌ಗೌಡ ಇತರರಿದ್ದರು.