ವರದಿ ನೀಡುವಂತೆ ಜಿಪಂ ಸಿಇಒ ಕೀರ್ತನಾಗೆ ಕೋಟಾ ಶ್ರೀನಿವಾಸ್ ಪೂಜಾರಿ ಸೂಚನೆ । ದಿಶಾ ಸಭೆಯಲ್ಲಿ ಜಲಜೀವನ್ ಮಿಷನ್ ಕಾಮಗಾರಿ ಬಗ್ಗೆ ಅಸಮಧಾನ ।
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಜಲಜೀವನ ಮಿಷನ್ ಯೋಜನೆ ಹಾಗೂ ಕಾಮಗಾರಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಸ್ಟ್ಯಾಂಪ್ ಪೇಪರ್ ಅವ್ಯವಹಾರ ಕುರಿತು ‘ಸಾಮಾಜಿಕ ಆಡಿಟ್’ ನಡೆಸಲು ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಅಧ್ಯಕ್ಷ ಕೋಟಾ ಶ್ರೀನಿವಾಸ್ ಪೂಜಾರಿ ನಿರ್ದೇಶಿಸಿದ್ದಾರೆ.
ಗುರುವಾರ ಜಿಪಂ ಸಭಾಂಗಣದಲ್ಲಿ ಆಯೋಜಿಸಿದ್ದ ದಿಶಾ ಸಭೆಯಲ್ಲಿ ಶಾಸಕರು ಹಾಗೂ ಸಭೆ ಸದಸ್ಯರು ಜಲಜೀವನ್ ಮಿಷನ್ ಕಾಮಗಾರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಮಾನದಂಡಗಳ ಪ್ರಕಾರ ಕಾಮಗಾರಿ ನಡೆಸುತ್ತಿಲ್ಲ. 60 ಮೀ. ಕೊಳವೆ ಅಳವಡಿಸಿ 150 ಮೀ. ಬಿಲ್ ಮಾಡಲಾಗಿದೆ. ಒಪ್ಪಂದದ ಕರಾರು ಪತ್ರಗಳೇ ನಕಲಿ ಆಗಿವೆ. ನೀರಿನ ಮೂಲ ಇಲ್ಲದೇ ಯೋಜನೆ ರೂಪಿಸಲಾಗಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಕೋಟಾ ಶ್ರೀನಿವಾಸ್ ಪೂಜಾರಿ ಸಾಮಾಜಿಕ ಆಡಿಟ್ ನಡೆಸಿ ವರದಿ ನೀಡುವಂತೆ ಜಿಪಂ ಸಿಇಒ ಕೀರ್ತನಾ ಅವರಿಗೆ ಸೂಚಿಸಿದರು.ಮಾಹಿತಿ ಹಕ್ಕಿನಡಿ ಅಧಿಕಾರಿಗಳಿಗೆ ಬ್ಲಾಕ್ ಮೇಲ್: ತಮ್ಮಯ್ಯ ಆರೋಪ
ಜಲಜೀವನ್ ಮಿಷನ್ ಯೋಜನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಎಷ್ಟು ಅನುದಾನ ಬಿಡುಗಡೆಯಾಗಿದೆ ಎಂದು ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಶಾಸಕ ಎಚ್.ಡಿ.ತಮ್ಮಯ್ಯ ಸೂಚಿಸಿದರು.
ಕೇಂದ್ರ ಸರ್ಕಾರದಿಂದ ಹಣ ಬಿಡುಗಡೆಯಾಗಿಲ್ಲ. ರಾಜ್ಯ ಸರ್ಕಾರ ಸುಮಾರು ₹24 ಕೋಟಿ ಬಿಡುಗಡೆ ಮಾಡಿದೆ ಎಂದು ಅಧಿಕಾರಿ ಮಾಹಿತಿ ನೀಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದಲ್ಲಿ ಈ ಯೋಜನೆ ಅನುಷ್ಠಾನ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರದಿಂದ ಯಾಕೆ ಅನುದಾನ ಬಿಡುಗಡೆ ಆಗಿಲ್ಲ. ವರದಿ ಸಲ್ಲಿಸಿ ಅನುದಾನ ಪಡೆಯುವಂತೆ ಸೂಚಿಸಿದರು.ಈ ವೇಳೆ ದಿಶಾ ನಾಮನಿರ್ದೇಶಿಸಿತ ಸದಸ್ಯ ಕಲ್ಮರುಡಪ್ಪ, ಕೇಂದ್ರ ಸರ್ಕಾರ ಬಿಡುಗಡೆ ಮಾಡಬಾರದು ಎನ್ನುತ್ತಿದ್ದಂತೆ, ಶಾಸಕ ತಮ್ಮಯ್ಯ, ನಾಮನಿರ್ದೇಶಿತ ಸದಸ್ಯರು ತಮ್ಮ ಅಧಿಕಾರ ವ್ಯಾಪ್ತಿ ತಿಳಿದುಕೊಂಡು ಮಾತನಾಡಬೇಕು. ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡಬಾರದು ಎಂದು ಹೇಳುವಂತಿಲ್ಲ ಎಂದರು.
ಹಾಗೇ ಮಾತು ಮುಂದುವರಿಸಿದ ಶಾಸಕ ತಮ್ಮಯ್ಯ, ಕೆಲವು ನಾಮನಿರ್ದೇಶಿತ ಸದಸ್ಯರು ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಕೆ ಮಾಡಿ ಅಧಿಕಾರಿಗಳನ್ನು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪ ಮಾಡಿದರು.ಸ್ಟ್ಯಾಂಪ್ ಪೇಪರ್ ಹಗರಣ:
ಜಲಜೀವನ್ ಮಿಷನ್ ಕಾಮಗಾರಿಗೆ ಸಂಬಂಧಿಸಿದಂತೆ 2021ರಿಂದ ಸುಮಾರು 9 ಕಾಮಗಾರಿಗೆ ಮಾಡಿಕೊಂಡ ಕರಾರು ಪತ್ರಗಳು ನಕಲಿ ಆಗಿವೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ನಾಮನಿರ್ದೇಶಿತ ಸದಸ್ಯರು ಸಭೆ ಗಮನಕ್ಕೆ ತಂದರು. ಆಗ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ, ಮತ್ತೊಂದು ನಕಲಿ ಚಾಪಾಕಾಗದ ಹಗರಣ ನಡೆದಿರುವಂತೆ ಕಾಣುತ್ತಿದೆ. ಈ ಬಗ್ಗೆ ಪರಿಶೀಲನೆ ಮಾಡುವಂತೆ ಜಿಪಂ ಸಿಇಓಗೆ ಸೂಚಿಸಿದರು.ಸಭೆಯಲ್ಲಿ ವಿಧಾನಪರಿಷತ್ ಸದಸ್ಯರಾದ ಸಿ.ಟಿ.ರವಿ, ಎಸ್.ಎಲ್.ಭೋಜೇಗೌಡ, ಜಿಲ್ಲಾಧಿಕಾರಿ ನಾಗರಾಜ್, ಜಿಪಂ ಸಿಇಒ ಕೀರ್ತನಾ ಇದ್ದರು.
---ಬಾಕ್ಸ್---ಸಭೆಗೆ ಅಧಿಕಾರಿಗಳ ಗೈರು ಕ್ರಮಕ್ಕೆ ಸೂಚನೆ
ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ದಿಶಾ ಸಭೆ ಆರಂಭಿಸಿದಾಗ ಶಾಸಕರು, ವಿಧಾನಪರಿಷತ್ ಸದಸ್ಯರು, ಜಿಲ್ಲಾಧಿಕಾರಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಗೈರಾಗಿದ್ದರು. ತದ ನಂತರ ಜಿಲ್ಲಾಧಿಕಾರಿ, ಶಾಸಕ, ವಿಧಾನಪರಿಷತ್ ಸದಸ್ಯರು ಆಗಮಿಸಿದರು.ಯಾವುದೇ ತುರ್ತು ಹಾಗೂ ಅನುಮತಿ ಇಲ್ಲದೇ ಸಭೆಗೆ ಗೈರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂಸದ ಹಾಗೂ ದಿಶಾ ಅಧ್ಯಕ್ಷ ಕೋಟಾ ಶ್ರೀನಿವಾಸ್ ಪೂಜಾರಿ ಸೂಚಿಸಿದರು.-- ಬಾಕ್ಸ್ --
ಕಸ ವಿಲೇವಾರಿ ಅರಿಯಲು ಪಿಡಿಒಗಳು ಶಿಲಾಂಗ್ ಪ್ರವಾಸಜಿಲ್ಲೆಯ ಗ್ರಾಪಂ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಸಂಬಂಧಿಸಿದಂತೆ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ (ಪಿಡಿಓ) ತಂಡ ಮೇಘಾಲಯದ ಶಿಲಾಂಗ್‌ಗೆ ಭೇಟಿ ನೀಡಿ ಅಧ್ಯಯನ ನಡೆಸಲು ಜಿಪಂ ಸಿಇಒ ಅನುಮತಿ ಕೇಳಿದರು. ಸಭೆಯಲ್ಲಿ ಸಂಸದರು ಅನುಮೋದನೆ ನೀಡಿದರು.
---ಬಾಕ್ಸ್---ಖಾಸಗಿ ಶಾಲೆ ನವೀಕರಣದಲ್ಲಿ ಭ್ರಷ್ಟಾಚಾರಜಿಲ್ಲೆಯಲ್ಲಿ ಕಳೆದ ವರ್ಷನೋಂದಣಿಯಾದ 16 ಖಾಸಗಿ ಶಾಲೆಗಳಲ್ಲಿ ನಾಲ್ಕು ಶಾಲೆಗಳಿಗೆ ಮಾತ್ರ ಮಾನ್ಯತೆ ನೀಡಲಾಗಿದೆ. 12 ಶಾಲೆಗಳಿಗೆ ನೀಡಿಲ್ಲ. ಎಫ್‌ಆರ್ ಹಾಗೂ ಆರ್‌ಆರ್ ಪ್ರಮಾಣ ಪತ್ರ ಇಲ್ಲದಿದ್ದರೂ ಮಾನ್ಯತೆ ನೀಡಲಾಗಿದೆ. ಒಂದೇ ಕಾಂಪೌಂಡ್‌ನಲ್ಲಿ ಎರಡೆರಡು ಶಾಲೆ ಆರಂಭಿಸಲು ಅನುಮತಿ ನೀಡಲಾಗಿದೆ. ಶಿಕ್ಷಣ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂದು ದಿಶಾ ನಾಮನಿರ್ದೇಶಿತ ಸದಸ್ಯ ಕಲ್ಮರುಡಪ್ಪ ಆರೋಪಿಸಿದರು.---ಬಾಕ್ಸ್---ಸ್ಮಾರ್ಟ್ ಕ್ಲಾಸ್ ಕಾಮಗಾರಿ ಇಲ್ಲದ ಶೇ.90 ರಷ್ಟು ಹಣ ಬಿಡುಗಡೆ ಸುಮಾರು ₹40 ಲಕ್ಷ ವೆಚ್ಚದಲ್ಲಿ 8 ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿತ್ತು. ಆದರೆ, ಒಂದೇ ಒಂದು ಸ್ಮಾರ್ಟ್ ಬೋರ್ಡ್ ಅಳವಡಿಕೆ ಮಾಡಿಲ್ಲ ಆದರೂ, ಶೇ.90ರಷ್ಟು ಹಣ ಈಗಾಗಲೇ ಗುತ್ತಿಗೆದಾರರಿಗೆ ಬಿಡುಗಡೆ ಮಾಡಲಾಗಿದೆ. ಈ ಬಗ್ಗೆ ತನಿಖೆ ನಡೆಸಬೇಕು. ಜತೆಗೆ, ಸ್ಮಾರ್ಟ್ ಕ್ಲಾಸ್ ಯೋಜನೆಗೆ ಸಂಬಂಧಿಸಿದ ಕಡತಗಳನ್ನು ಭದ್ರ ಪಡಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಕಲ್ಮರುಡಪ್ಪ ಮನವಿ ಮಾಡಿದರು.