ಸಾರಾಂಶ
ಪೇರಲ, ಜವಾರಿ ಬಾರೆಹಣ್ಣು, ಅಡಕೆ, ಲೀಚಿ ಹಣ್ಣು, ಡ್ರ್ಯಾಗನ್, ಮಾವು, ತೆಂಗು, ಬಾಳೆ, ಲಿಂಬೆ, ನೆರಲೆ ಹಣ್ಣು, ಚಿಕ್ಕು, ಪಪ್ಪಾಯಿ ಹಣ್ಣು, ಉತ್ತಮ ಈರುಳ್ಳಿ, ಮೆಣಸಿನಕಾಯಿ ಸೇರಿದಂತೆ ಹಲವಾರು ತೋಟಗಾರಿಕೆ ಬೆಳೆಗಳನ್ನು ಬೆಳೆದು ಯುವ ರೈತರು ಸಫಲರಾಗಿದ್ದಾರೆ
ಡಂಬಳ: ಈ ಭಾಗದಲ್ಲಿ ತೋಟಗಾರಿಕೆ ಮಹಾವಿದ್ಯಾಲಯ ಆರಂಭವಾದಗರೆ ಯುವ ರೈತರು ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ರೋಣ ಶಾಸಕ ಜಿ.ಎಸ್. ಪಾಟೀಲ್ ಹೇಳಿದರು.
ಡಂಬಳ ಹೋಬಳಿ ಭಾಗದಲ್ಲಿ ತೋಟಗಾರಿಕೆ ಮಹಾವಿದ್ಯಾಲಯ ಆರಂಭಿಸಲು ಪೂರಕ ವಾತಾವರಣ ಇದೆಯೋ ಇಲ್ಲವೋ ಎನ್ನುವ ಕುರಿತು ಪರಿಶೀಲನೆಗೆ ಆಗಮಿಸಿದ ಪ್ರೊ. ಎಸ್.ಬಿ. ದಂಡಿನ ನೇತೃತ್ವದ ಕೃಷಿ ವಿಜ್ಞಾನಿಗಳ ಸಮಿತಿ ಎದುರು ಅವರು ತಮ್ಮ ಆಶಯ ವ್ಯಕ್ತಪಡಿಸಿದರು. ಡಾ. ತೋಂಟದ ಸಿದ್ದಲಿಂಗ ಶ್ರೀಗಳು ವ್ಯವಸಾಯ ಮತ್ತು ತೋಟಗಾರಿಕೆಯ ಬಗ್ಗೆ ಒತ್ತು ಕೊಟ್ಟು ತಾವೆ ಸ್ವತಃ ದಾಳಿಂಬೆ, ಬಾರಿಹಣ್ಣು ಬೆಳೆದು ರೈತರಿಗೆ ಪ್ರೋತ್ಸಾಹ ನೀಡಿದ್ದರು. ಎಲ್ಲ ಮಾದರಿಯ ಹಣ್ಣು ಬೆಳೆಯಲು ಇಲ್ಲಿ ಪೂರಕ ವಾತಾವರಣವಿದೆ ಎಂದು ಹೇಳಿದರು.ಸಚಿವ ಎಚ್.ಕೆ. ಪಾಟೀಲ್ ಹಾಗೂ ತಾವು ಈ ಭಾಗದಲ್ಲಿ ತೋಟಗಾರಿಕೆ ಮಹಾವಿದ್ಯಾಲಯ ಆರಂಭಿಸಬೇಕು ಎಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ ಹಿನ್ನೆಲೆಯಲ್ಲಿ ನೈಜ ವರದಿ ಪಡೆಯಲು ಸಮಿತಿ ಆಗಮಿಸಿದೆ ಎಂದು ಅವರು ರೈತರೆದುರು ಸ್ಪಷ್ಟಪಡಿಸಿದರು.
ಈ ಭಾಗದಲ್ಲಿ ಪೇರಲ, ಜವಾರಿ ಬಾರೆಹಣ್ಣು, ಅಡಕೆ, ಲೀಚಿ ಹಣ್ಣು, ಡ್ರ್ಯಾಗನ್, ಮಾವು, ತೆಂಗು, ಬಾಳೆ, ಲಿಂಬೆ, ನೆರಲೆ ಹಣ್ಣು, ಚಿಕ್ಕು, ಪಪ್ಪಾಯಿ ಹಣ್ಣು, ಉತ್ತಮ ಈರುಳ್ಳಿ, ಮೆಣಸಿನಕಾಯಿ ಸೇರಿದಂತೆ ಹಲವಾರು ತೋಟಗಾರಿಕೆ ಬೆಳೆಗಳನ್ನು ಬೆಳೆದು ಯುವ ರೈತರು ಸಫಲರಾಗಿದ್ದಾರೆ. ಈ ಭಾಗದಲ್ಲಿ 400 ಎಕರೆ ವಿಸ್ತಾರದ ಬೃಹತ್ ಕೆರೆಯಿದ್ದು, 3 ಸಾವಿರ ಎಕರೆಗೂ ಹೆಚ್ಚು ಪ್ರದೇಶದಲ್ಲಿ ರೈತರು ಈ ನೀರು ಬಳಸಿ ಉತ್ತಮ ಬೆಳೆ ಪಡೆಯುತ್ತಿದ್ದಾರೆ. ಅಷ್ಟೇ ಅಲ್ಲದೆ ತಾಮ್ರುಗುಂಡಿ ಕೆರೆ, ಪೇಠಾ ಆಲೂರ ಕೆರೆ, ಜಂತ್ಲಿ ಶಿರೂರ ಕೆರೆ ಹಾಗೂ ಬೋರ್‌ವೆಲ್‌ಗಳ ಮೂಲಕ ರೈತರು ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ತೋಟಗಾರಿಕೆ ಮಹಾವಿದ್ಯಾಲಯ ಪ್ರಾರಂಭವಾದರೆ ವಿದ್ಯಾರ್ಥಿಗಳಿಗೆ ಪೂರಕ ವಾತಾವರಣ ಇರಲಿದೆ ಮತ್ತು ಈ ಭಾಗದ ಯುವ ರೈತರಿಗೆ ಅನುಕೂಲವಾಗಲಿದೆ ಎಂದು ಹೇಳಿದರು. ಇದಕ್ಕೆ ಬೇಕಾಗುವ 60 ಎಕರೆ ಭೂಮಿಯನ್ನು ಕೊಡಲು ನಾವು ಸಿದ್ಧರಿದ್ದೇವೆ. ತೋಟಗಾರಿಕೆ ಮಹಾವಿದ್ಯಾಲಯ ತೆರೆಯಲು ಸರ್ಕಾರ ಅನುಮತಿ ಕೊಡುತ್ತದೆ ಎನ್ನುವ ಆಶಾಭಾವನೆ ಇದೆ ಎಂದು ಹೇಳಿದರು.ತೋಟಗಾರಿಕೆ ವಿಜ್ಞಾನಿಗಳು ತೋಟಗಾರಿಕೆ ಬೆಳೆಗಳನ್ನು ವೀಕ್ಷಿಸಿದರು.
ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯಯದ ಡೀನ್ ಡಾ. ರವೀಂದ್ರ ಮುಲಗೆ, ಧಾರವಾಡದ ಕೃಷಿ ವಿಶ್ವವಿದ್ಯಾಲಯದ ವಿಸ್ತೀರ್ಣ ನಿರ್ದೇಶಕ ಡಾ. ಎಸ್.ಎಸ್. ಅಂಗಡಿ, ತಾಂತ್ರಿಕ ಸಲಹೆಗಾರ ಅಜಯಕುಮಾರ ದಪ್ಪತ್ತರದಾರ, ಮುಂಡರಗಿ ತೋಟಗಾರಿಕೆ ಇಲಾಖೆ ನಿರ್ದೇಶಕ ಎಂ.ಎಂ. ತಾಂಬೋಟಿ, ಕಂದಾಯ ಅಧಿಕಾರಿ ಪ್ರಭು ಬಾಗಲಿ, ರೈತರಾದ ಗೋಣಿಬಸಪ್ಪ ಕೋರ್ಲಹಳ್ಳಿ, ವಿ.ಟಿ. ಮೇಟಿ, ವಿ.ಎಸ್. ಯರಾಶಿ, ಮಹೇಶ ಗಡಗಿ, ಸೋಮಣ್ಣ ಗುಡ್ಡದ, ಬಸುರಡ್ಡಿ ಬಂಡಿಹಾಳ, ಸಿದ್ದಪ್ಪ ನಂಜಪ್ಪನವರ, ಮರಿಯಪ್ಪ ಸಿದ್ದಣ್ಣವರ, ಬಸುರಾಜ ಪೂಜಾರ, ಸುರೇಶ ಗಡಗಿ, ಜಾಕೀರ ಮೂಲಿಮನಿ, ಸಿದ್ದಪ್ಪ ಹಡಪದ, ಕುಬೇರಪ್ಪ ಕೊಳ್ಳಾರ, ಬಾಬು ಮೂಲಿಮನಿ, ಬಾಬುಸಾಬ ಸರಕಾವಾಸ, ಮಾರುತಿ ಹೊಂಬಳ, ಅನಿಲ ಪಲ್ಲೇದ ಹಾಗೂ ರೈತರು ಇದ್ದರು.