ನರೇಗಾ ಕಾಮಗಾರಿ ಸಕಾಲದಲ್ಲಿ ಆರಂಭಿಸಿ ಪೂರ್ಣಗೊಳಿಸಿ: ಭೀಮಪ್ಪ ಲಾಳಿ

| Published : Feb 27 2025, 12:33 AM IST

ಸಾರಾಂಶ

ಗ್ರಾಮೀಣ ಭಾಗದ ಅಭಿವೃದ್ಧಿಗಾಗಿ ಇರುವ ನರೇಗಾ ಯೋಜನೆಯನ್ನು ನಿರ್ಲಕ್ಷ್ಯ ಮಾಡದೇ, ಸಂಬಂಧಪಟ್ಟ ಅಧಿಕಾರಿಗಳು ಕಾಮಗಾರಿಯನ್ನು ಸಕಾಲದ ಆರಂಭಿಸಿ, ಪೂರ್ಣಗೊಳಿಸಬೇಕು.

ತಾಪಂ ಸಾಮಾನ್ಯ ಸಭೆಯಲ್ಲಿ ಜಿಪಂ ಯೋಜನಾ ನಿರ್ದೇಶಕ

ಕನ್ನಡಪ್ರಭ ವಾರ್ತೆ ಹೂವಿನಹಡಗಲಿ

ಗ್ರಾಮೀಣ ಭಾಗದ ಅಭಿವೃದ್ಧಿಗಾಗಿ ಇರುವ ನರೇಗಾ ಯೋಜನೆಯನ್ನು ನಿರ್ಲಕ್ಷ್ಯ ಮಾಡದೇ, ಸಂಬಂಧಪಟ್ಟ ಅಧಿಕಾರಿಗಳು ಕಾಮಗಾರಿಯನ್ನು ಸಕಾಲದ ಆರಂಭಿಸಿ, ಪೂರ್ಣಗೊಳಿಸಬೇಕೆಂದು ಜಿಪಂ ಯೋಜನಾ ನಿರ್ದೇಶಕ ಭೀಮಪ್ಪ ಲಾಳಿ ಹೇಳಿದರು.

ಇಲ್ಲಿನ ತಾಲೂಕು ಪಂಚಾಯಿತಿ ರಾಜೀವ್‌ ಗಾಂಧಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ತಾಪಂ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಾನ್ಯರ ಮಸಲವಾಡ ಮತ್ತು ಚಿಕ್ಕ ಕೊಳಚಿ ಗ್ರಾಮದಲ್ಲಿ 2 ನರೇಗಾ ಕಾಮಗಾರಿಗಳನ್ನು ಕೂಡಲೇ ಆರಂಭಿಸಿ ಪ್ರಗತಿ ಸಾಧಿಸಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ಇಲಾಖೆಗೆ ನೀಡಿರುವ ಅನುದಾನದಲ್ಲಿ, ತಾಲೂಕಿನ ವಿವಿಧ ಗ್ರಾಮಗಳ ಅಂಗನವಾಡಿ ಕೇಂದ್ರಗಳ ದುರಸ್ತಿ ಮತ್ತು ವಿದ್ಯುತ್‌ ಸಂಪರ್ಕ ವ್ಯವಸ್ಥೆಯನ್ನು ಕೂಡಲೇ ಮಾಡಬೇಕಿದೆ. ಈವರೆಗೂ 82 ಕಾಮಗಾರಿಗಳಲ್ಲಿ 62 ಕಾಮಗಾರಿಗಳು ಪೂರ್ಣಗೊಂಡಿವೆ. ಇದರಲ್ಲಿ 11 ಕೇಂದ್ರಗಳಿಗೆ ವಿದ್ಯುತ್‌ ಮೀಟರ್‌ ಅಳವಡಿಕೆಯಾಗಿದೆ. ಉಳಿದವು ಇನ್ನು ಕಾಮಗಾರಿ ಬಾಕಿ ಇದೆ. ಈ ರೀತಿ ಕಾಮಗಾರಿಗಳ ಬಗ್ಗೆ ಅಧಿಕಾರಿಗಳು ವಿಳಂಬ ಮಾಡಿದರೇ ಹೇಗೆ? ತಾಪಂ ಲಿಂಕ್‌ ಡಾಕ್ಯುಮೆಂಟ್‌ನಲ್ಲಿರುವ ಕಾಮಗಾರಿಗಳನ್ನು ಸಕಾಲದಲ್ಲಿ ಮುಗಿಸಬೇಕು. ಇಲ್ಲದಿದ್ದರೇ ಅನುದಾನ ವಾಪಸ್‌ ಹೋದರೇ ಯಾರು ಹೊಣೆ? ಸಂಬಂಧಪಟ್ಟ ಗುತ್ತಿಗೆದಾರರಿಗೆ ಹೇಳಿ ಕಾಮಗಾರಿ ಪೂರ್ಣಗೊಳಿಸಿ ಎಂದರು.

ಶಾಲೆಯಿಂದ ಹೊರಗೆ ಇರುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ಕುರಿತು ಬಿಇಒ ಹಾಗೂ ಶಿಕ್ಷಕರು ಗಮನ ಹರಿಸಬೇಕಿದೆ ಎಂದರು.

ಬಿಇಒ ಮಹೇಶ ಪೂಜಾರ ಮಾತನಾಡಿ, ಈಗಾಗಲೇ ಎಸ್ಸೆಸ್ಸೆಲ್ಸಿ ಮಕ್ಕಳ ಉತ್ತಮ ಫಲಿತಾಂಶಕ್ಕಾಗಿ ತಾಲೂಕಿನ 7 ಗ್ರಾಮಗಳಲ್ಲಿ ಬಾಲಕರಿಗಾಗಿ ರಾತ್ರಿ ಶಾಲೆ ತೆರೆಯಲಾಗಿದೆ, 32 ಶಾಲೆಗಳಲ್ಲಿ ಶೌಚಾಲಯಗಳ ಕೊರತೆ ಇದೆ. ಈಗಾಗಲೇ 49 ಕಡೆಗಳಲ್ಲಿ ಕಾಮಗಾರಿ ಮುಗಿದಿದೆ. ಆದರೆ ಇನ್ನು ಕೆಲವೆಡೆಗಳಲ್ಲಿ 2 ವರ್ಷದಿಂದ ನಡೆಯುತ್ತಿರುವ ನರೇಗಾ ಕಾಮಗಾರಿ ಅಪೂರ್ಣಗೊಂಡಿವೆ. ತಾಲೂಕಿನ 10 ಕಡೆಗಳಲ್ಲಿ ಋತುಮಾನ ಶಾಲೆಗಳನ್ನು ಆರಂಭಿಸಬೇಕೆಂದು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಹೇಳಿದರು.

ತಾಪಂ ಇಒ ಎಂ.ಉಮೇಶ ಮಾತನಾಡಿ, ಸಿಂಗಟಾಲೂರು ಏತ ನೀರಾವರಿ ಯೋಜನೆಯ ಕಾಲುವೆಗಳು ಸಾಕಷ್ಟು ಕಡೆಗಳಲ್ಲಿ ದುರಸ್ತಿಯಾಗಿವೆ. ಅವುಗಳನ್ನು ಆ ಇಲಾಖೆಯಿಂದ ದುರಸ್ತಿ ಮಾಡಲು ಅನುದಾನ ನೀಡಿಲ್ಲ, ಆಯಾ ಗ್ರಾಪಂ ವ್ಯಾಪ್ತಿಗೆ ಬರುವ ಕಾಲುವೆಗಳನ್ನು ಆಯಾ ಗ್ರಾಪಂನ ನರೇಗಾ ಅನುದಾನದಡಿ ಕ್ರಿಯಾ ಯೋಜನೆ ಮಾಡಿ ಕಾಮಗಾರಿ ಮಾಡಲು ನಾವು ಸಿದ್ದರಿದ್ದೇವೆ ಆದರೆ, ಆ ಇಲಾಖೆಯ ಅಧಿಕಾರಿಗಳು ಆಸಕ್ತಿ ತೋರುತ್ತಿಲ್ಲ, ಈ ಕುರಿತು ಪ್ರತ್ಯೇಕವಾಗಿ ಸಭೆ ಮಾಡಿ ಚರ್ಚಿಸಿ ಕ್ರಮ ಕೈಗೊಳ್ಳಬೇಕಿದೆ ಎಂದರು.

ಈ ಕುರಿತು ಆದ್ಯತೆ ಆಧಾರದ ಮೇಲೆ ಕಾಲುವೆಗಳನ್ನು ದುರಸ್ತಿ ಮಾಡಿಸುವ, ಕಾರ್ಯಕ್ಕೆ ಮುಂದಾಗುತ್ತೇವೆಂದು ಭೀಮಪ್ಪ ಲಾಳಿ ಹೇಳಿದರು.