ಗೋವಿನಜೋಳ ಖರೀದಿ ಕೇಂದ್ರ ಆರಂಭಿಸಿ

| Published : Nov 22 2025, 02:15 AM IST

ಸಾರಾಂಶ

ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ರಾಜ್ಯ ಸರ್ಕಾರ ರೈತರ ಅನುಕೂಲಕ್ಕಾಗಿ ₹3000 ಬೆಂಬಲ ಬೆಲೆ ನಿಗದಿಪಡಿಸಿ ಗೋವಿನಜೊಳ ಖರೀದಿಸಬೇಕೆಂದು ಹಲವಾರು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ರೈತರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ.

ನವಲಗುಂದ:

ಸರ್ಕಾರ ಬೆಂಬಲ ಬೆಲೆಯಡಿ ಗೋವಿನಜೋಳ ಖರೀದಿ ಕೇಂದ್ರ ಆರಂಭಿಸಲು ಒತ್ತಾಯಿಸಿ ರಾಜ್ಯ ರೈತ ಸೇನೆ ನೇತೃತ್ವದಲ್ಲಿ ರೈತರು ಶುಕ್ರವಾರದಿಂದ ಇಲ್ಲಿನ ರೈತ ಹುತಾತ್ಮ ಸ್ಮಾರಕದ ಎದುರು ಆಮರಣ ಉಪವಾಸ ಆರಂಭಿಸಿದ್ದಾರೆ.ಈ ವೇಳೆ ರೈತ ಸೇನೆ ರಾಜ್ಯಾಧ್ಯಕ್ಷ ಶಂಕ್ರಪ್ಪ ಅಂಬಲಿ ಮಾತನಾಡಿ, ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿಯಿಂದಾಗಿ ರೈತರ ಬೆಳೆಗಳು ಹಾಳಾಗಿವೆ. ಜತೆಗೆ ಎಕರೆಗೆ ₹35ರಿಂದ ₹ 40 ಸಾವಿರ ಖರ್ಚು ಮಾಡಿ ಗೋವಿನಜೋಳ ಬಿತ್ತನೆ ಮಾಡಿದ್ದು, ಫಸಲು ಕೊಯ್ಲಿಗೆ ಬಂದಾಗಿನಿಂದ ಮಾರುಕಟ್ಟೆಯಲ್ಲಿ ಕೇವಲ ₹1600 ಮಾತ್ರ ಇದ್ದುದರಿಂದ ರೈತರು ಕಂಗಾಲಾಗಿದ್ದಾರೆ ಎಂದರು.

ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ರಾಜ್ಯ ಸರ್ಕಾರ ರೈತರ ಅನುಕೂಲಕ್ಕಾಗಿ ₹3000 ಬೆಂಬಲ ಬೆಲೆ ನಿಗದಿಪಡಿಸಿ ಗೋವಿನಜೊಳ ಖರೀದಿಸಬೇಕೆಂದು ಹಲವಾರು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ರೈತರು ಬೀದಿಗಿಳಿದು ಹೋರಾಟ ಮಾಡುವ ಸಂಬರ್ಭ ಬಂದೊದಗಿದೆ. ಸರ್ಕಾರ ಇನ್ನಾದರೂ ಎಚ್ಚೆತ್ತು ಗೋವಿನಜೋಳಕ್ಕೆ ಬೆಂಬಲ ಬೆಲೆ ಘೋಷಣೆ ಮಾಡಿ ಖರೀದಿ ಕೇಂದ್ರ ಆರಂಭಿಸಬೇಕು ಎಂದು ಒತ್ತಾಯಿಸಿದರು.

ಈಗಾಗಲೇ ಸರ್ಕಾರ ಬೆಂಬಲ ಬೆಲೆಯಡಿ ಹೆಸರು ಬೆಳೆಗೆ ಖರೀದಿ ಕೇಂದ್ರ ಆರಂಭಿಸಿದ್ದರೂ ಅಧಿಕಾರಿಗಳು ಹೆಸರಿನ ಗುಣಮಟ್ಟವಿಲ್ಲ ಎಂದು ಖರೀದಿ ಮಾಡಲು ತಿರಸ್ಕರಿಸುತ್ತಿದ್ದಾರೆ. ಹೀಗಾಗಿ ರೈತರು ತೊಂದರೆ ಅನುಭವಿಸುತ್ತಿದ್ದು ಸರ್ಕಾರವೇ ರೈತರು ಬೆಳೆದ ಹೆಸರನ್ನು ಖರೀದಿಸಲು ಮುಂದಾಗಲಿ ಎಂದ ಅವರು, ಗೋವಿನಜೋಳ ಖರೀದಿ ಕೇಂದ್ರ ಆರಂಭಿಸುವ ವರೆಗೂ ಆಮರಣ ಉಪವಾಸ ಮುಂದುವರಿಸುವುದಾಗಿ ತಿಳಿಸಿದರು.

ರೈತ ಮುಖಂಡರಾದ ಲೋಕನಾಥ ಹೆಬಸೂರ, ಶಿವಾನಂದ ಕರಿಗಾರ ಮಾತನಾಡಿದರು. ರಘುನಾಥ ನಡುವಿನಮನಿ, ನಿಂಗಪ್ಪ ಬಡಿಗೇರ, ವೆಂಕಪ್ಪ ಸಂಜೀವನರ, ಮುತ್ತುರಾಜ ಹೊಸಗೂರ, ಶೇಖಪ್ಪ ಬೆಳಹಾರ, ನಾಗರಾಜ ಹಡಪದ, ನಾಗಪ್ಪ ಬಡಕಲಿ, ಸಿದ್ದಲಿಂಗಪ್ಪ ಮಾಳಣ್ಣವರ, ಭರಮಪ್ಪ ಚಲವಾದಿ, ಅರುಣಕುಮಾರ ಪಟ್ಟಣಶೆಟ್ಟಿ, ಗುರುನಾಥ ನಾಯ್ಕರ, ಕೃಷ್ಣರಡ್ಡಿ ಕುರಹಟ್ಟಿ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.

ಶೀಘ್ರ ಖರೀದಿ ಕೇಂದ್ರ ಪ್ರಾರಂಭ

ರೈತರು ಗೋವಿನಜೋಳ ಖರೀದಿ ಕೇಂದ್ರ ಪ್ರಾರಂಭಿಸುವಂತೆ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ನಫೇಡ್‌ ಹಾಗೂ ಕೆಎಂಎಫ್ ವತಿಯಿಂದ ಖರೀದಿಸಲು ಕ್ರಮಕೈಗೊಳ್ಳಲಾಗುವುದು. ಹೆಸರು ಕಾಳು ಖರೀದಿ ಕೇಂದ್ರ ಎಲ್ಲಡೆ ಪ್ರಾರಂಭಿಸಿದ್ದು ಕೇಂದ್ರದಲ್ಲಿ ಕೇವಲ ಎಫ್ಇಕ್ಯೂ ಮಾದರಿಯ ಹೆಸರು ಮಾತ್ರ ಖರೀದಿಸಲು ಅಧಿಕಾರಿಗಳು ಹೇಳುತ್ತಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರದಿಂದ ಈ ನಿಯಮ ಬದಲಾಯಿಸಲು ನಿಯೋಗ ಕೊಂಡೊಯ್ಯಬೇಕೆಂದು ಸಿಎಂ ಭೇಟಿ ಮಾಡಿ ಒತ್ತಾಯಿಸಿದ್ದೇನೆ. ಖರೀದಿ ಪ್ರಾರಂಭಿಸಲು ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ ಎಂದು ಶಾಸಕ ಎನ್.ಎಚ್. ಕೋನರಡ್ಡಿ "ಕನ್ನಡಪ್ರಭ "ಕ್ಕೆ ಮಾಹಿತಿ ನೀಡಿದರು.