ಗೋವಿನಜೋಳ ಖರೀದಿ ಕೇಂದ್ರ ಆರಂಭಿಸಿ: ಮುನೇನಕೊಪ್ಪ

| Published : Nov 16 2025, 02:15 AM IST

ಗೋವಿನಜೋಳ ಖರೀದಿ ಕೇಂದ್ರ ಆರಂಭಿಸಿ: ಮುನೇನಕೊಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ರೈತರು ಬೀಜ, ರಸಗೊಬ್ಬರ, ಕ್ರಿಮಿನಾಶಕ ಔಷಧಿ, ಕೃಷಿ ಕಾರ್ಮಿರಿಗೆ ಸೇರಿದಂತೆ ಎಕರೆಗೆ ₹30 ರಿಂದ ₹40 ಸಾವಿರ ಖರ್ಚು ಮಾಡಿ ಬಿತ್ತನೆ ಮಾಡಿದ ಗೋವಿನಜೋಳ, ಈರುಳ್ಳಿ ಸೇರಿ ಇನ್ನಿತರ ಬೆಳೆಗಳು ಅತಿವೃಷ್ಟಿಯಿಂದ ಹಾನಿಯಾಗಿವೆ.

ನವಲಗುಂದ:

ಗೋವಿನಜೋಳ ಬೆಲೆ ನಿಗದಿ, ಖರೀದಿ ಕೇಂದ್ರ ಪ್ರಾರಂಭಿಸುವುದು ಹಾಗೂ ಬೆಳೆ ಪರಿಹಾರವನ್ನು ಸಮರ್ಪಕವಾಗಿ ವಿತರಿಸಲು ಒತ್ತಾಯಿಸಿ ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ನೇತೃತ್ವದಲ್ಲಿ ಬಿಜೆಪಿ ನವಲಗುಂದ ಮಂಡಲದಿಂದ ಶನಿವಾರ ಒಂದು ದಿನದ ಸಾಂಕೇತಿಕ ಧರಣಿ ಸತ್ಯಾಗ್ರಹ ನಡೆಸಲಾಯಿತು.

ಈ ವೇಳೆ ಮಾತನಾಡಿದ ಶಂಕರ ಪಾಟೀಲ ಮುನೇನಕೊಪ್ಪ, ರೈತರು ಬೀಜ, ರಸಗೊಬ್ಬರ, ಕ್ರಿಮಿನಾಶಕ ಔಷಧಿ, ಕೃಷಿ ಕಾರ್ಮಿರಿಗೆ ಸೇರಿದಂತೆ ಎಕರೆಗೆ ₹30 ರಿಂದ ₹40 ಸಾವಿರ ಖರ್ಚು ಮಾಡಿ ಬಿತ್ತನೆ ಮಾಡಿದ ಗೋವಿನಜೋಳ, ಈರುಳ್ಳಿ ಸೇರಿ ಇನ್ನಿತರ ಬೆಳೆಗಳು ಅತಿವೃಷ್ಟಿಯಿಂದ ಹಾನಿಯಾಗಿವೆ. ಈಗ ಅಳಿದುಳಿದ ಗೋವಿನಜೋಳ ಮಾರಾಟ ಮಾಡಬೇಕೆಂದರೆ ಅವುಗಳ ಬೆಲೆ ಸಂಪೂರ್ಣ ಕುಸಿತ ಕಂಡಿದ್ದು ರೈತನಿಗೆ ಗಾಯದ ಮೇಲೆ ಬರೆ ಎಳೆದಂತಹ ಪರಸ್ಥಿತಿ ಉಂಟಾಗಿದೆ ಎಂದರು.

ಅತಿವೃಷ್ಟಿಯಿಂದಾಗಿ ಬಿತ್ತನೆಗಾಗಿ ಸಾಲ ಶೂಲ ಮಾಡಿ ಖರ್ಚು ಮಾಡಿದ ಹಣ ಮರಳಿ ಬರದೇ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿ ರೈತರು ಸಾಲದ ಸುಳಿಯಿಂದಾಗಿ ತೀವ್ರ ತೊಂದರೆ ಅನುಭವಿಸುವಂತಾಗಿದೆ. ಕೇಂದ್ರ ಸರ್ಕಾರ ₹ 2400 ಬೆಂಬಲ ಬೆಲೆ ನಿಗದಿ ಮಾಡಿದ್ದು, ಸದ್ಯ ಮಾರುಕಟ್ಟೆಯಲ್ಲಿ ಗೋವಿನಜೋಳ ಬೆಲೆ ₹ 1600ಕ್ಕೆ ಕುಸಿದಿದೆ. ಕೂಡಲೇ ರಾಜ್ಯ ಸರ್ಕಾರ ಖರೀದಿ ಕೇಂದ್ರ ಪ್ರಾರಂಭಿಸಿ ರೈತರ ಕಷ್ಟಕ್ಕೆ ಸ್ಪಂದಿಸಬೇಕು. ಆದರೆ, ಸರ್ಕಾರ ರೈತರ ಜತೆಗೆ ನಿಲ್ಲುವ ಮನಸ್ಥಿತಿ ಕಾಣಿಸುತ್ತಿಲ್ಲ ಹಾಗೂ ದಲ್ಲಾಳಿಗಳಿಗೆ ಬೆಂಬಲವಾಗಿ ನಿಂತಂತೆ ಕಾಣಿಸುತ್ತಿದೆ ಎಂದು ಮುನೇನಕೊಪ್ಪ ಆರೋಪಿಸಿದರು.

ಕೇಂದ್ರ ಸರ್ಕಾರದ ಎಂಎಸ್‌ಪಿ ದರ ₹2400 ಹಾಗೂ ರಾಜ್ಯ ಸರ್ಕಾರದ ಪ್ರೋತ್ಸಾಹಧನ ₹600 ಸೇರಿಸಿ ಒಟ್ಟು ₹3 ಸಾವಿರ ಪ್ರತಿ ಕ್ವಿಂಟಲ್‌ಗೆ ದರ ನಿಗದಿ ಹಾಗೂ ಹಾನಿಯಾದ ಎಲ್ಲ ಬೆಳೆಗಳಿಗೂ ಪರಿಹಾರ ವಿತರಿಸಿ ರೈತರ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿದರು.

ಬಳಿಕ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಈ ವೇಳೆ ಮಂಡಲ ಅಧ್ಯಕ್ಷ ಗಂಗಪ್ಪ ಮನಮಿ, ಪ್ರಭು ಇಬ್ರಾಹಿಂಪುರ, ಜಯಪ್ರಕಾಶ ಬದಾಮಿ, ನಾಗೇಶ ಮುದಿಗೌಡ್ರ, ಷಣ್ಮುಖ ಗುರಿಕಾರ, ಮಂಜುನಾಥ ಗಣಿ, ಸಿದ್ದಣ್ಣ ಕಿಟಗೇರಿ, ಸಿದ್ದನಗೌಡ ಪಾಟೀಲ್, ಬಸವರಾಜ ಕಟ್ಟಿಮನಿ, ದೇವರಾಜ ದಾಡಿಭಾವಿ, ಅಂದಾನಯ್ಯ ಹಿರೇಮಠ, ಬಸವರಾಜ ಚಕ್ರಸಾಲಿ, ಮಹಾಂತೇಶ ಕಲಾಲ, ಶರಣಪ್ಪ ಹಕ್ಕರಕಿ, ಬಸವರಾಜ ಕಾತರಕಿ ಸೇರಿದಂತೆ ರೈತ ಮೋರ್ಚಾ ಪದಾಧಿಕಾರಿಗಳು, ಪಕ್ಷದ ಕಾರ್ಯಕರ್ತರು, ರೈತರು ಉಪಸ್ಥಿತರಿದ್ದರು.

ಕಬ್ಬುಬೆಳೆಗಾರರು ಬೀದಿಗಿಳಿಯಲು ಸಿದ್ದರಾಮಯ್ಯ ಕಾರಣ

ರಾಜ್ಯದಲ್ಲಿ ಕಬ್ಬು ಬೆಳೆಗಾರರು ಬೀದಿಗಿಳಿದು ಹೋರಾಟ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇರ ಕಾರಣ. ರೈತರ ಸಮಸ್ಯೆ ಪರಿಹರಿಸುವಲ್ಲಿ ಸರ್ಕಾರ, ಸಕ್ಕರೆ ಸಚಿವರು ಸಂಪೂರ್ಣ ವಿಫಲವಾಗಿದ್ದಾರೆ ಎಂದು ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಆರೋಪಿಸಿದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ಹಿಂದೆ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದ ವೇಳೆ ನಾನು ಸಕ್ಕರೆ ಸಚಿವನಾಗಿದ್ದೆ. ಆಗ ರೈತರೊಂದಿಗೆ ಹಲವು ಬಾರಿ ಸಭೆ ಮಾಡಿ ಅವರ ಸಮಸ್ಯೆ ಆಲಿಸಿದ್ದೆ. ಒಂದು ಬಾರಿಯೂ ಮುಖ್ಯಮಂತ್ರಿಗಳನ್ನು ಸಭೆಗೆ ಕರೆಯದಂತೆ ರೈತರ ಸಮಸ್ಯೆ ಪರಿಹರಿಸಿದ್ದೆ. ಆದರೆ, ಈಗಿನ ಸಕ್ಕರೆ ಸಚಿವರು ಹಾಗೂ ರಾಜ್ಯ ಸರ್ಕಾರ ರೈತರನ್ನು ಸಮಾಧಾನಪಡಿಸುವಲ್ಲಿ ಎಡವಿದೆ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.

ರಾಜ್ಯ ಸರ್ಕಾರ ಕಬ್ಬಿನ ವಿಚಾರದಲ್ಲಿ ರೈತ ವಿರೋಧಿ ನೀತಿ ಅನುಸರಿಸಿದೆ. ಕಾರ್ಖಾನೆಗಳಿಂದ ರೈತರಿಗೆ ಸಾವಿರಾರು ಕೋಟಿ ರುಪಾಯಿ ಬಿಲ್‌ ಬಾಕಿಯಿದೆ. ರೈತರು ಇಂದು ತೀವ್ರ ಸಂಕಷ್ಟದಲ್ಲಿದ್ದು, ಸರ್ಕಾರ ಮೊದಲು ಅವರ ಸಮಸ್ಯೆ ಪರಿಹರಿಸುವ ಕಾರ್ಯ ಮಾಡಲಿ ಎಂದರು.