ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ತಾಲೂಕಿನ ಎಲ್ಲಾ ಹೋಬಳಿ ಕೇಂದ್ರ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಕೈಗಾರಿಕೆಗಳನ್ನು ಆರಂಭಿಸುವ ಮೂಲಕ ಗ್ರಾಮೀಣ ಜನರಿಗೆ ಉದ್ಯೋಗ ನೀಡಬೇಕು ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯ ಉಪಾಧ್ಯಕ್ಷ ಜಿ.ಎನ್.ನಾಗರಾಜು ಒತ್ತಾಯಿಸಿದರು.ಪಟ್ಟಣದ ಡಾ.ಬಿ.ಅರ್.ಅಂಬೇಡ್ಕರ್ ಭವನದಲ್ಲಿ ನಡೆದ ಕೃಷಿಕೂಲಿಕಾರರ ಮತ್ತು ಗ್ರಾಮೀಣ ಕಾರ್ಮಿಕರ 9ನೇ ತಾಲೂಕು ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಹಳ್ಳಿಗಾಡಿನ ಜನರು ಜೀವನ ನಿರ್ವಹಣೆಗಾಗಿ ಉದ್ಯೋಗವನ್ನಾರಸಿ ಪಟ್ಟಣಕ್ಕೆ ವಲಸೆ ಹೋಗುತ್ತಿದ್ದಾರೆ. ಕೆಲಸ ಮಾಡುವ ಸ್ಥಳಗಳಲ್ಲಿ ಮೂಲ ಸೌಲಭ್ಯವಿಲ್ಲದೇ ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಈ ಎಲ್ಲಾ ಸಮಸ್ಯೆ ತಪ್ಪಿಸಲು ತಾಲೂಕಿನಲ್ಲಿ ಕಾರ್ಖಾನೆ ಸ್ಥಾಪಿಸಲು ಜನಪ್ರತಿನಿಧಿಗಳನ್ನು ಒತ್ತಾಯಿಸಬೇಕು ಎಂದು ಕರೆ ನೀಡಿದರು.
ಕೇಂದ್ರ ಸರ್ಕಾರ ಉದ್ಯೋಗ ಖಾತ್ರಿ ಯೋಜನೆ ಕಡಿತಗೊಳಿಸುವ ಹುನ್ನಾರ ನಡೆಸುತ್ತಿದೆ. ಯೋಜನೆ ಉಳಿಸಲು ಕೂಲಿಕಾರರು ಒಗ್ಗಟ್ಟು ಪ್ರದರ್ಶಿಸಬೇಕಿದೆ. ಹೋರಾಟದಿಂದ ಮಾತ್ರ ಕೂಲಿಗಾರರ ಹಕ್ಕುಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದರು.ಪ್ರಾಂತ ಕೃಷಿಕೂಲಿಕಾರರ ಸಂಘದ ರಾಜ್ಯಾಧ್ಯಕ್ಷ ಎಂ.ಪುಟ್ಟುಮಾದು ಮಾತನಾಡಿ, ಸರ್ಕಾರಗಳ ನಿರ್ಲಕ್ಷ್ಯದಿಂದ ಬಡವರಿಗೆ ನಿವೇಶನ ಇಲ್ಲದೇ ಸಾವಿರಾರು ಕುಟುಂಬಗಳು ಬೀದಿಯಲ್ಲಿ ಬಿದ್ದಿವೆ. ಸಮರ್ಪಕ ಉದ್ಯೋಗ, ಕೂಲಿ ನೀಡುವಲ್ಲಿ ವಿಫಲ ಕಂಡಿವೆ. ಸಂವಿಧಾನಾತ್ಮಕವಾಗಿ ಕೂಲಿಗಾರರಿಗೆ ಸಿಗಬೇಕಾದ ಸೌಲಭ್ಯಕ್ಕಾಗಿ ಒಂದೂಗೂಡಿ ಹೋರಾಟ ನಡೆಸಬೇಕಿದೆ ಎಂದರು.
ಅನರ್ಹರ ಬಿಪಿಎಲ್ ಕಾರ್ಡ್ ಗಳನ್ನು ಕಡಿತ ಮಾಡುವ ಹೆಸರಿನಲ್ಲಿ ಬಡವರ ಬಿಪಿಎಲ್ ಕಾರ್ಡ್ ರದ್ದು ಮಾಡುವುದನ್ನು ನಿಲ್ಲಿಸಿ ಈಗಾಗಲೇ ಕಡಿತ ಮಾಡಿರುವ ಕಾರ್ಡ್ ಗಳನ್ನು ಮುಂದುವರೆಸಬೇಕು. ಕೃಷಿಕೂಲಿಕಾರರಿಗೆ 200 ದಿನ ಕೆಲಸ 600 ಕೂಲಿ ನೀಡಬೇಕು ಎಂದು ಆಗ್ರಹಿಸಿದರು.ನಿವೇಶನ ರಹಿತರಿಗೆ ನಿವೇಶನ, ಹಕ್ಕುಪತ್ರ, ವಸತಿ ಸೌಲಭ್ಯ ಕಲ್ಪಿಸಬೇಕು. ಗ್ರಾಮೀಣ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸುವ ಜೊತಗೆ ಆಗತ್ಯ ಸಿಬ್ಬಂದಿಯನ್ನು ನೇಮಕ ಮಾಡಬೇಕೆಂದು ಒತ್ತಾಯಿಸಿದರು.
ಸಮ್ಮೇಳನದಲ್ಲಿ ಕೃಷಿಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ ಶಿವಮಲ್ಲಯ್ಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮಕ್ಕೂ ಮುನ್ನಾ ನೂರಾರು ಕೃಷಿಕೂಲಿಕಾರರು ಪುರಸಭೆ ಕಚೇರಿಯಿಂದ ಮೆರವಣಿಗೆ ಮೂಲಕ ಡಾ. ಬಿ.ಆರ್.ಅಂಬೇಡ್ಕರ್ ಭವನ ತಲುಪಿದರು. ಸಭೆಯಲ್ಲಿ ಮುಖಂಡರಾದ ಟಿ.ಎಲ್.ಕೃಷ್ಣೇಗೌಡ, ಬಿ.ಹನುಮೇಶ್, ಕೆ.ಬಸವರಾಜು, ಎನ್.ಸುರೇಂದ್ರ, ಎನ್. ಲಿಂಗರಾಜುಮೂರ್ತಿ, ಆರ್.ಕೃಷ್ಣ, ದೊಡ್ಡಮರಿಗೌಡ, ಸರೋಜಮ್ಮ, ಪುಟ್ಟಮಾದೇಗೌಡ, ಟಿ.ಎಚ್.ಆನಂದ್, ಲಕ್ಷ್ಮಿ, ರಾಮಯ್ಯ ಸೇರಿದಂತೆ ಇತರರು ಇದ್ದರು.;Resize=(128,128))
;Resize=(128,128))