ಅಂಗನವಾಡಿಯಲ್ಲಿಯೇ ಎಲ್‌ಕೆಜಿ, ಯುಕೆಜಿ ಆರಂಭಿಸಲಿ

| Published : Jun 14 2024, 01:04 AM IST

ಸಾರಾಂಶ

ರಾಜ್ಯ ಸರ್ಕಾರ ಪ್ರಾಥಮಿಕ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸಲು ಹೊರಟಿದ್ದು ಸರಿಯಲ್ಲ.

ಕರ್ನಾಟಕ ಅಂಗನವಾಡಿ ನೌಕರರ ಸಂಘದ ತಾಲೂಕು ಸಮಿತಿ ವತಿಯಿಂದ ಪ್ರತಿಭಟನೆ

ಕನ್ನಡಪ್ರಭ ವಾರ್ತೆ ಯಲಬುರ್ಗಾ

ನಾಲ್ಕು ವರ್ಷದೊಳಗಿನ ಮಕ್ಕಳಿಗೆ ಆರ್‌ಡಿಪಿಆರ್ ರೂಪಿಸುವ ಕಾರ್ಯಕ್ರಮ ಮತ್ತು ನಾಲ್ಕರಿಂದ ಆರು ವರ್ಷದೊಳಗಿನ ಮಕ್ಕಳಿಗೆ ಶಿಕ್ಷಣ ಇಲಾಖೆ ರೂಪಿಸುವ ಯೋಜನೆಗಳನ್ನು ನಿಲ್ಲಿಸುವಂತೆ ಆಗ್ರಹಿಸಿ ಗುರುವಾರ ಪಟ್ಟಣದಲ್ಲಿ ಕರ್ನಾಟಕ ಅಂಗನವಾಡಿ ನೌಕರರ ಸಂಘದ ತಾಲೂಕು ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿ ಶಾಸಕರ ಆಪ್ತ ಸಹಾಯಕರಿಗೆ ಮನವಿ ಸಲ್ಲಿಸಲಾಯಿತು.

ತಾಲೂಕು ಅಧ್ಯಕ್ಷೆ ಲಲಿತಾ ಅರಳಿ ಮಾತನಾಡಿ, ೧೯೯೦ರಲ್ಲಿ ವಿಶ್ವಸಂಸ್ಥೆ ಎಲ್ಲರಿಗೂ ಶಿಕ್ಷಣ ಎಂಬುದನ್ನು ಘೋಷಿಸಿದ ನಂತರ ಹಲವು ವರ್ಷಗಳ ನಂತರ ಸಮಾಜದಲ್ಲಿ ಶಿಕ್ಷಣ ಆದ್ಯತೆಯ ವಿಷಯವಾಗಿದೆ. ಇದೀಗ ರಾಜ್ಯ ಸರ್ಕಾರ ಪ್ರಾಥಮಿಕ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸಲು ಹೊರಟಿದ್ದು ಸರಿಯಲ್ಲ, ಶಿಕ್ಷಣ ಇಲಾಖೆಯಲ್ಲಿ ಈಗಾಗಲೇ ೩೬ ಸಾವಿರ ಶಿಕ್ಷಕರಿಲ್ಲ, ಶಾಲಾ ಕಟ್ಟಡಗಳಿಲ್ಲದ ಪರಿಸ್ಥಿತಿ ಇದೆ. ಸರ್ಕಾರ ಈಗಾಗಲೇ ಆರ್ಥಿಕ ಮುಗ್ಗಟ್ಟಿನಲ್ಲಿರುವಾಗ ಇಂತಹ ಯೋಜನೆಗಳಿಂದ ಇರುವ ಮೂಲ ಯೋಜನೆಗೆ ಧಕ್ಕೆಯಾಗುತ್ತಿದೆ. ಹಾಗಾಗಿ ಇದನ್ನು ಕೈ ಬಿಡಬೇಕು. ಬದಲಾಗಿ ಅಂಗನವಾಡಿ ಕೇಂದ್ರಗಳಲ್ಲಿಯೇ ಎಲ್‌ಕೆಜಿ, ಯುಕೆಜಿ ಆರಂಭಿಸಿ, ಅಂಗನವಾಡಿ ಕಾರ್ಯಕರ್ತೆಯರನ್ನೇ ನೇಮಿಸಿಕೊಳ್ಳಬೇಕು ಎಂದರು.

ಅಂಗನವಾಡಿ ಕೇಂದ್ರಗಳಿಗೆ ಬರುವ ೩ರಿಂದ ೬ ವರ್ಷದ ಮಕ್ಕಳಲ್ಲಿ ೪ರಿಂದ ೬ ವರ್ಷದ ಮಕ್ಕಳು ಶಿಕ್ಷಣ ಇಲಾಖೆಗೆ ಬಂದರೆ ಅಂಗನವಾಡಿ ಕೇಂದ್ರಕ್ಕೆ ಬರುವ ಮಕ್ಕಳು ಯಾರು, ಆಗ ಅಂಗನವಾಡಿ ಕೇಂದ್ರಗಳು ಮುಚ್ಚಿ ಹೋಗುತ್ತವೆ. ಆದ್ದರಿಂದ ಯೋಜನೆ ಕೈ ಬಿಡಬೇಕು. ಇಲ್ಲದಿದ್ದರೆ ಮುಂದಿನ ದಿನಮಾನಗಳಲ್ಲಿ ರಾಜ್ಯಾದಂತೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.ಶಾಸಕರ ಆಪ್ತ ಸಹಾಯಕ ರಮೇಶ ಕೊಣ್ಣೂರು ಮನವಿ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಪಾರ್ವತಿ ಚಲವಾದಿ, ಗಂಗಮ್ಮ ಗಾಂಜಿ, ಗೌರಮ್ಮ ಬೇಲೇರಿ, ಯಲ್ಲು ಭಾಯಿ, ಬಸಮ್ಮ ಉಣಚಗೇರಿ, ಸುಮಿತ್ರಾ ಹಗೇದಾಳ, ಪಾರ್ವತಿ, ಹುಲಿಗೆವ್ವ, ಸುಮಿತ್ರಾ ಕೆಂಪಳ್ಳಿ, ವೇದಾ ದೇಸಾಯಿ, ಜಯಶ್ರೀ ವಜ್ರಬಂಡಿ, ಲಲಿತಾ ದೇಸಾಯಿ, ಗಿರೀಜಾ ಕಲ್ಲೂರ, ಮಲ್ಲಮ್ಮ ಗುಡಿಸಲಮನಿ, ಶಮಶಾದ ಬೇಗಂ, ಗೀತಾ ಮತ್ತಿತರರು ಇದ್ದರು.