ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಿ: ಬೊಮ್ಮಾಯಿ ಆಗ್ರಹ

| Published : Nov 12 2025, 02:30 AM IST

ಸಾರಾಂಶ

ಕೆಲವು ತಾಲೂಕುಗಳಲ್ಲಿ ಮೆಕ್ಕೆಜೋಳ ಬೆಳೆದಿರುವ ಒಟ್ಟು ಪ್ರದೇಶದಲ್ಲಿ ಕೇವಲ ಶೇ. 10ರಷ್ಟು ನಷ್ಟ ಆಗಿದೆ ಅಂತ ಇದೆ. ಅತ್ಯಂತ ಅವೈಜ್ಞಾನಿಕ ಮತ್ತು ಸುಳ್ಳಿನಿಂದ ಕೂಡಿರುವ ಸರ್ವೇ ಮಾಡಲಾಗಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.

ಗದಗ: ರಾಜ್ಯ ಸರ್ಕಾರ ಕೂಡಲೇ ಮೆಕ್ಕೆಜೋಳ ಖರೀದಿ ಕೇಂದ್ರವನ್ನು ಆರಂಭಿಸಿ ರೈತರ ಬೇಡಿಕೆಯಂತೆ ಎಂಎಸ್‌ಪಿಗಿಂತ ಹೆಚ್ಚಿನ ಬೆಲೆಗೆ ಖರೀದಿ ಮಾಡಬೇಕು. ಇಲ್ಲದಿದ್ದರೆ ರೈತರು ಕಬ್ಬಿನ ದರಕ್ಕಾಗಿ ಮಾಡಿದ ರೀತಿ ಹೋರಾಟ ಅನಿವಾರ್ಯ ಎಂದು ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಇಡೀ ರಾಜ್ಯದಲ್ಲಿ ಮೆಕ್ಕೆಜೋಳವನ್ನು ರೈತರು ಬೆಳೆಯುತ್ತಾರೆ. ಸುಮಾರು 17 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯುತ್ತಾರೆ. ಪ್ರತಿವರ್ಷ ಮೆಕ್ಕೆಜೋಳ ಬೆಳೆಯುವ ಪ್ರದೇಶ ಹೆಚ್ಚಾಗುತ್ತಿದೆ. ಕಳೆದ ವರ್ಷ 54 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆಯಾಗಿತ್ತು. ಈ ವರ್ಷವೂ 54 ಲಕ್ಷ ಟನ್ ಉತ್ಪಾದನೆಯಾಗಿದೆ.

ಎರಡು ಲಕ್ಷ ಹೆಕ್ಟೇರ್ ಪ್ರದೇಶ ಹೆಚ್ಚಿಗೆ ಬಿತ್ತನೆಯಾದರೂ ಇಳುವರಿ ಅಷ್ಟೇ ಬಂದಿದೆ. ಸುಮಾರು 2 ಲಕ್ಷಕ್ಕಿಂತ ಹೆಚ್ಚು ಪ್ರದೇಶದಲ್ಲಿ ಗೋವಿನಜೋಳ ನಷ್ಟವಾಗಿದೆ. ಗೋವಿನ ಜೋಳ ನಷ್ಟ ಪರಿಹಾರ ನೀಡುವಲ್ಲಿ ಬಹಳಷ್ಟು ತಾರತಮ್ಯ ನಡೆಯುತ್ತಿದೆ. ಸಮರ್ಪಕವಾಗಿ ಸಮೀಕ್ಷೆ ಮಾಡಿಲ್ಲ. ಹೀಗಾಗಿ ಬಹಳಷ್ಟು ಪ್ರದೇಶಗಳು ರೈತರು ಬೆಳೆದಿದ್ದು, ಬಿಟ್ಟುಹೋಗಿದೆ.

ಕೆಲವು ತಾಲೂಕುಗಳಲ್ಲಿ ಬೆಳೆದಿರುವ ಒಟ್ಟು ಪ್ರದೇಶದಲ್ಲಿ ಕೇವಲ ಶೇ. 10ರಷ್ಟು ನಷ್ಟ ಆಗಿದೆ ಅಂತ ಇದೆ. ಅತ್ಯಂತ ಅವೈಜ್ಞಾನಿಕ ಮತ್ತು ಸುಳ್ಳಿನಿಂದ ಕೂಡಿರುವ ಸರ್ವೇ ಮಾಡಲಾಗಿದೆ. ಉದಾಹರಣೆಗೆ ಗದಗ ಜಿಲ್ಲೆಯಲ್ಲಿ ಮುಂಡರಗಿ ತಾಲೂಕಿನಲ್ಲಿ ಸರ್ವೇ ಆದರೂ ಒಂದು ಎಕರೆಯೂ ನಷ್ಟವಾಗಿಲ್ಲ ಎಂದು ವರದಿ ನೀಡಿದ್ದಾರೆ. ಹೀಗಾಗಿ ರೈತರಿಗೆ ಬಹಳಷ್ಟು ಅನ್ಯಾಯವಾಗಿದೆ. ಕ್ವಿಂಟಲ್‌ ಮೆಕ್ಕೆಜೋಳಕ್ಕೆ ₹2400 ಎಂಎಸ್‌ಪಿ ಆಗಿದೆ. ಅದು ಸಾಕಾಗುವುದಿಲ್ಲ ಎಂದು ರೈತರು ಹೋರಾಟ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಕೂಡಲೇ ಖರೀದಿ ಕೇಂದ್ರವನ್ನು ತೆರೆದು ಖರೀದಿ ಪ್ರಾರಂಭ ಮಾಡಬೇಕು ಎಂದು ಆಗ್ರಹಿಸಿದರು.

ಕೆಎಂಎಫ್ ಖರೀದಿಸಲು ಆದೇಶಿಸಲಿ: ಕೆಎಂಎಫ್‌ನವರು ಸುಮಾರು 2ರಿಂದ 2.5 ಲಕ್ಷ ಟನ್ ಮೆಕ್ಕೆಜೋಳ ಬಳಕೆ ಮಾಡುತ್ತಾರೆ. ಅದನ್ನು ಖರೀದಿಸಲು ಆದೇಶ ಮಾಡಬೇಕು. ಅವರು ವ್ಯಾಪಾರಾಸ್ಥರ ಬಳಿ ಏಜೆಂಟರ ಬಳಿ ಖರೀದಿ ಮಾಡುವ ಬದಲು ರೈತರ ಬಳಿ ಖರೀದಿಸಲು ಹೇಳಬೇಕು. ಅವರು ಸುಮಾರು 2.5 ಲಕ್ಷ ಟನ್ ಖರೀದಿ ಮಾಡಿದರೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗುತ್ತದೆ. ದರ ಹೆಚ್ಚಾಗುತ್ತದೆ. ಅದರ ಜತೆಗೆ ರಾಜ್ಯ ಸರ್ಕಾರವು ಖರೀದಿ ಪ್ರಾರಂಭ ಮಾಡಬೇಕು.

ಇಲ್ಲದಿದ್ದರೆ ರಾಜ್ಯದಲ್ಲಿ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ. ಈಗಾಗಲೇ ರೈತರು ಧರಣಿ ಮಾಡಿ ಮನವಿ ಸಲ್ಲಿಸಿದ್ದಾರೆ. ಸರ್ಕಾರ ಕೂಡಲೇ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಬೇಕು. ರೈತರ ಬೇಡಿಕೆಯಂತೆ ಎಂಎಸ್ಪಿಗಿಂತ ಹೆಚ್ಚಿನ ಬೆಲೆಗೆ ಗೋವಿನ ಜೋಳ ಖರೀದಿ ಮಾಡಬೇಕು. ಇಲ್ಲದಿದ್ದರೆ ಕಬ್ಬಿನ ದರಕ್ಕಾಗಿ ನಡೆದಂತೆ ಉಗ್ರ ಹೋರಾಡುವುದು ಅನಿವಾರ್ಯ ಎಂದು ಎಚ್ಚರಿಸಿದರು.

ಅಶಾಂತಿ ಮೂಡಿಸುವ ಶಕ್ತಿಗಳ ದಮನಕ್ಕೆ ಕ್ರಮ: ಬೊಮ್ಮಾಯಿ

ಗದಗ: ದೇಶದಲ್ಲಿ ಭಯೋತ್ಪಾದನೆ ಚಟುವಟಿಕೆ ಮಾಡಿ ಅಶಾಂತಿ ಮೂಡಿಸುವ ಈ ಶಕ್ತಿಗಳ ದಮನಕ್ಕೆ ಕೇಂದ್ರ ಸರ್ಕಾರ ಎಲ್ಲ ರೀತಿಯ ಕ್ರಮ ಕೈಗೊಳ್ಳುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ದೆಹಲಿಯಲ್ಲಿ ಬಾಂಬ್ ಸ್ಫೋಟ ಆಗಿರುವ ಬಗ್ಗೆ ತನಿಖೆ ಆರಂಭವಾಗಿದೆ. ಕಾರು ಯಾರದ್ದು, ಯಾರಿಗೆ ಮಾರಾಟವಾಗಿತ್ತು. ಅದರ ಹಿಂದೆ ಇರುವ ಭಯೋತ್ಪಾದಕರ ಸಂಪರ್ಕದ ಬಗ್ಗೆ ತನಿಖೆ ನಡೆದಿದೆ. ಬಾಂಬ್ ಸ್ಫೋಟವಾದ ನಾಲ್ಕೈದು ಗಂಟೆಯಲ್ಲೇ ಚುರುಕಾದ ಕೆಲಸ ನಡೆಸಿದ್ದಾರೆ.

ಅತೀ ಶೀಘ್ರದಲ್ಲೇ ಕೇವಲ ಕೆಂಪುಕೋಟೆಯಲ್ಲಿ ಅಲ್ಲ. ಇಡೀ ದೇಶದಲ್ಲಿ ಭಯೋತ್ಪಾದನೆ ಚಟುವಟಿಕೆ ಮಾಡಿ ಅಶಾಂತಿ ಮೂಡಿಸುವ ಈ ಶಕ್ತಿಗಳ ದಮನಕ್ಕೆ ಕೇಂದ್ರ ಸರ್ಕಾರ ಎಲ್ಲ ರೀತಿಯ ಕ್ರಮ ಕೈಗೊಳ್ಳುತ್ತಿದೆ ಎಂದರು.

ಭಾರತವನ್ನು ಹಿಂದೂರಾಷ್ಟ್ರ ಮಾಡಲು ಸಾಧ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಅವರು ತಮ್ಮ ಕುರ್ಚಿ ಉಳಿಸಿಕೊಳ್ಳಲು ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಹಿಂದೂ ರಾಷ್ಟ್ರ ಮಾಡುವುದು ಅಪ್ರಸ್ತುತ ಹೇಳಿಕೆ ಅಂತಾರೆ. ಕೇಂದ್ರದ ಮೇಲೆ ಗೂಬೆ ಕೂರಿಸುತ್ತಾರೆ. ಕುರ್ಚಿ ಉಳಿಸಿಕೊಳ್ಳಲು ಸರ್ಕಸ್‌ ಮಾಡುತ್ತಿದ್ದಾರೆ ಎಂದರು.

ದೆಹಲಿಯಲ್ಲಿ ಬಾಂಬ್ ಸ್ಫೋಟ ಆಗಿರುವುದಕ್ಕೆ ಕೇಂದ್ರ ಗೃಹ ಇಲಾಖೆ ವೈಫಲ್ಯ ಎಂದು ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ ಮಾಡಿರುವ ಆರೋಪದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಹರಿಪ್ರಸಾದಗೆ ಬೇರೆ ಉದ್ಯೋಗ ಏನಿದೆ. ಇಲ್ಲಿ ಕರ್ನಾಟಕದಲ್ಲಿ ಬೆಳಗ್ಗೆ ಎದ್ದರೆ ಎಷ್ಟೋ ಹಿಂಸಾಚಾರ ಆಗುತ್ತಿವೆ, ಎಷ್ಟು ಸಲ ಕರ್ನಾಟಕ ಸರ್ಕಾರ ವೈಫಲ್ಯ ಆಗಬಾರದು ಎಂದು ಪ್ರಶ್ನಿಸಿದರು.