ಚೆನ್ನಬಸವೇಶ್ವರ ಮಹಾರಥೋತ್ಸವಕ್ಕೆ ಚಾಲನೆ

| Published : Aug 02 2024, 12:56 AM IST

ಚೆನ್ನಬಸವೇಶ್ವರ ಮಹಾರಥೋತ್ಸವಕ್ಕೆ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಬನ್ನಿಕೊಪ್ಪ ಗ್ರಾಮದ ಭಕ್ತರ ಭಕ್ತಿ ಅಪಾರವಾಗಿದೆ.

ಗವಿಸಿದ್ದೇಶ್ವರ ಜಾತ್ರಾ ವೈಭವ ಬನ್ನಿಕೊಪ್ಪದಲ್ಲೂ ಮೇಳೈಸಲಿ: ಗವಿಶ್ರೀ ಅಭಿಮತ

ಕನ್ನಡಪ್ರಭ ವಾರ್ತೆ ಕುಕನೂರು

ಬನ್ನಿಕೊಪ್ಪ ಗ್ರಾಮದ ಭಕ್ತರ ಭಕ್ತಿ ಅಪಾರವಾಗಿದೆ. ಕೊಪ್ಪಳ ಗವಿಮಠದ ಶ್ರೀ ಗವಿಸಿದ್ದೇಶ್ವರ ಜಾತ್ರಾ ವೈಭವದಂತೆ ಗ್ರಾಮದ ಭಕ್ತರ ಭಕ್ತಿಯಿಂದ ಬನ್ನಿಕೊಪ್ಪದ ರಥೋತ್ಸವ ಸಹ ಅದ್ದೂರಿಯಾಗಿ ಗವಿಸಿದ್ದಪ್ಪಜ್ಜನ ಜಾತ್ರೆ ತರಹವೇ ಜರುಗಲಿ ಎಂದು ಕೊಪ್ಪಳ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಆಶಯ ವ್ಯಕ್ತಪಡಿಸಿದರು.

ತಾಲೂಕಿನ ಬನ್ನಿಕೊಪ್ಪ ಗ್ರಾಮದಲ್ಲಿ ಜರುಗಿದ ಶ್ರೀ ಹಿರೇಸಿಂದೋಗಿ ಶ್ರೀ ಚೆನ್ನಬಸವೇಶ್ವರ ಶಾಖಾಮಠದ 16ನೇ ವರ್ಷದ ಮಹಾರಥೋತ್ಸವಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದ ಅವರು, ಒಂದು ಗ್ರಾಮದ ಜಾತ್ರೆ ಎಂದರೆ ಅದು ಆ ಗ್ರಾಮದ ಭಕ್ತರ ಭಕ್ತಿಯ ಸಂಕೇತ. ಇಡೀ ಗ್ರಾಮವೇ ಒಗ್ಗಟ್ಟಾಗಿ ದೇವರ ಬಳಿ ಭಕ್ತಿ ಇರಿಸಿ ಜಾತ್ರೆ ಮಾಡುವುದು ಸುಲಭದ ಮಾತಲ್ಲ. ಮನಸ್ಸು, ದೇಹವನ್ನು ದೇವರಿಗೆ ಅರ್ಪಿಸಿ ಭಕ್ತಿ ಮೆರೆಯುವುದೇ ದೈವ ಸಾಕ್ಷಾತ್ಕಾರ. ಅಂತಹ ದೈವ ಸಾಕ್ಷಾತ್ಕಾರವನ್ನು ಬನ್ನಿಕೊಪ್ಪ ಗ್ರಾಮಸ್ಥರು ತಮ್ಮ ಭಕ್ತಿಯನ್ನು ದೇವರಿಗೆ ಸಮರ್ಪಿಸಿ ಅತ್ಯಂತ ಶ್ರದ್ಧಾ, ಭಕ್ತಿಯಿಂದ ಜಾತ್ರೆ ಮಾಡುತ್ತಿರುವುದು ಹೆಮ್ಮೆ ಸಂಗತಿ ಎಂದರು.

ಹೆತ್ತವರನ್ನು, ಅನ್ನ ನೀಡುವ ರೈತರನ್ನು, ವಿದ್ಯೆ ಕಲಿಸುವ ಗುರುವನ್ನು, ಸೈನಿಕರನ್ನು, ಹಿರಿಯರನ್ನು ಗೌರವಿಸುವ ಕಾರ್ಯ ಆಗಬೇಕು. ಮನುಷ್ಯ ಜನ್ಮ ಸಾರ್ಥಕ ಆಗಬೇಕಾದರೆ ಬದುಕಿನಲ್ಲಿ ಪ್ರಾಮಾಣಿಕತೆಯ ಹಾದಿ ಎಂದಿಗೂ ಬಿಡಬಾರದು. ನಿತ್ಯ ಕಾಯಕಯೋಗದಲ್ಲಿ ಬದುಕಿ ಮಾದರಿಯಾಗಬೇಕು. ದೇವರು ನೀಡಿದ ಈ ಉಸಿರಿಗೆ ನಿಜ ಬೆಲೆ ಬರುವುದು ಸತ್ಯ, ನಿಷ್ಠೆಯ ಬದುಕು ಬಾಳಿದಾಗ ಮಾತ್ರ ಎಂದರು.

ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಮುಂಡರಗಿಯ ಅನ್ನದಾನೀಶ್ವರ ಮಠದ ಶ್ರೀ ಡಾ. ನಾಡೋಜ ಅನ್ನದಾನೀಶ್ವರ ಸ್ವಾಮೀಜಿ , ಬದುಕಿನಲ್ಲಿ ಎಲ್ಲವನ್ನು ಕೊಟ್ಟಿರುವ ಭಗವಂತನನ್ನು ಸ್ಮರಿಸುವ ಕಾರ್ಯ ಈ ಮಹಾರಥೋತ್ಸವ ಆಗಿದೆ. ಚನ್ನಬವೇಶ್ವರರು ಇಲ್ಲಿ ಅನುಷ್ಠಾನ ಮಾಡಿ ಗ್ರಾಮದ ಶ್ರೇಯಸ್ಸಿಗೆ ಆಶೀರ್ವದಿಸಿದ್ದಾರೆ. ಬನ್ನಿಕೊಪ್ಪದ ಜಾತ್ರೆ ವರ್ಷದಿಂದ ವರ್ಷಕ್ಕೆ ಮೆರಗು ಪಡೆಯುತ್ತಿದೆ. ಗ್ರಾಮದಲ್ಲಿ ದೇವಸ್ಥಾನ ನಿರ್ಮಾಣ ಮಾಡಿ ಗೋಪುರ ಕಟ್ಟಿರುವುದು ನಿಜಕ್ಕೂ ಭಕ್ತಿ ಸಂಕೇತ ಎಂದರು.

ಹಿರೇಸಿಂದೋಗಿ, ಬನ್ನಿಕೊಪ್ಪ ಕಪ್ಪತಮಠದ ಶ್ರೀ ಚಿದಾನಂದ ಸ್ವಾಮೀಜಿ ಹಾಗೂ ಹರಗುರು ಚರಮೂರ್ತಿಗಳು ಸಾನಿಧ್ಯ ವಹಿಸಿದ್ದರು. ಅಪಾರ ಭಕ್ತವೃಂದ ರಥೋತ್ಸವ ವೇಳೆ ನೆರೆದಿತ್ತು. ಬೆಳಗ್ಗೆಯಿಂದ ಗ್ರಾಮದ ಶ್ರೀ ಚನ್ನಬಸವೇಶ್ವರ ಶಾಖಾಮಠದಲ್ಲಿ ಭಕ್ತರು ಪೂಜೆ, ನೈವೇದ್ಯ ಸಲ್ಲಿಸಿ ಭಕ್ತಿ ಮರೆದರು. ಅನ್ನಸಂತರ್ಪಣೆ ಜರುಗಿತು. ಸಂಜೆ ಆಗುತ್ತಿದ್ದಂತೆ ಬನ್ನಿಕೊಪ್ಪ ಸೇರಿದಂತೆ ಸುತ್ತಮುತ್ತಲಿನ ನಾನಾ ಗ್ರಾಮದ ಅಪಾರ ಭಕ್ತವೃಂದ ಸಾಕ್ಷಿಯಾಗಿ ಮಹಾರಥೋತ್ಸವ ಜರುಗಿತು. ರಥ ಸಾಗುತ್ತಿದ್ದಂತೆ ಭಕ್ತರು ಉತ್ತತ್ತಿ, ಬಾಳೆ ಹಣ್ಣು ಸಮರ್ಪಿಸಿ ಭಕ್ತಿ ಮರೆದರು. ಶ್ರೀ ಚೆನ್ನಬಸವೇಶ್ವರ ಮಹಾರಾಜಕೀ ಜೈ ಅನ್ನುವ ಜಯಘೋಷಗಳು ಮುಗಿಲು ಮುಟ್ಟಿದ್ದವು. ಕಳೆದ ನಾಲ್ಕಾರು ದಿನಗಳಿಂದ ಗ್ರಾಮದಲ್ಲಿ ಮಹಾರಥೋತ್ಸವ ಪ್ರಯುಕ್ತ ನಾನಾ ಧಾರ್ಮಿಕ ಕಾರ್ಯಕ್ರಮ ಜರುಗಿದವು.