ಸಾರಾಂಶ
ಧಾರವಾಡ:
ಹುಬ್ಬಳ್ಳಿ–ಧಾರವಾಡ ಅವಳಿನಗರಗಳಲ್ಲಿ ಬೀದಿ ನಾಯಿಗಳ ಸಮೀಕ್ಷೆ ಕಾರ್ಯವನ್ನು15 ದಿನಗಳೊಳಗಾಗಿ ಆರಂಭಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ದಿವ್ಯಪ್ರಭು ಸೂಚಿಸಿದರು.ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸೋಮವಾರ ಜರುಗಿದ ಪ್ರಾಣಿ ಸಂತಾನ ನಿಯಂತ್ರಣ ಮೇಲ್ವಿಚಾರಣೆ ಮತ್ತು ಅನುಷ್ಠಾನ ಸಮಿತಿ ಅಧ್ಯಕ್ಷತೆ ವಹಿಸಿದ ಅವರು, ಪಾಲಿಕೆ ವ್ಯಾಪ್ತಿಯಲ್ಲಿ ಬೀದಿನಾಯಿಗಳ ಸಮೀಕ್ಷೆಯು ಸರ್ಕಾರೇತರ ಸಂಘ-ಸಂಸ್ಥೆಗಳ ಮೂಲಕ ಅವೈಜ್ಞಾನಿಕವಾಗಿ ನಡೆಯುತ್ತಿದೆ. ಸಾರ್ವಜನಿಕರ ಹಾಗೂ ಪ್ರಾಣಿಗಳ ಸುರಕ್ಷತೆ ದೃಷ್ಟಿಯಿಂದ ಪ್ರಾಮಾಣಿಕ ಕಾರ್ಯಾಚರಣೆ ವಿಧಾನ (ಸ್ಟಾಂಡರ್ಡ್ ಆಪರೇಟಿಂಗ್ ಪ್ರೋಸಿಜರ್) ಪ್ರಕಾರ ನುರಿತ ತಜ್ಞರಿಂದ ಸಮೀಕ್ಷೆ ಕೈಗೊಳ್ಳಬೇಕೆಂದರು.
2018ರ ಸಮೀಕ್ಷೆ ಪ್ರಕಾರ ಅವಳಿ ನಗರಗಳಲ್ಲಿ 26 ಸಾವಿರ ಹಾಗೂ ಜಿಲ್ಲೆಯಾದ್ಯಂತ 50 ಸಾವಿರ ಬೀದಿ ನಾಯಿಗಳು ಇರಬಹುದು ಎಂದು ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು. ಪಾಲಿಕೆಯಿಂದ ನಾಯಿಗಳ ಸರ್ವೇ ಹಾಗೂ ಸಂತಾನ ಚಿಕಿತ್ಸೆಗೆ ಅಗತ್ಯ ವೈಜ್ಞಾನಿಕ ಪದ್ಧತಿಯ ವಿವರಗಳನ್ನು ಟೆಂಡರ್‌ನಲ್ಲಿ ನಮೂದಿಸತಕ್ಕದ್ದು. ಸೂಕ್ತ ಸಂಘ-ಸಂಸ್ಥೆಗಳ ಹಾಗೂ ತಜ್ಞರ ಜೊತೆ ಚರ್ಚಿಸಿ ಸೂಕ್ತ ನಿಗಾವಹಿಸಿ ಒಂದು ವರ್ಷದೊಳಗೆ ಸಮೀಕ್ಷೆ ಪೂರ್ಣಗೊಳಿಸಬಹುದೆಂದು ಜಿಲ್ಲಾಧಿಕಾರಿ ತಿಳಿಸಿದರು.ಇದೇ ರೀತಿಯಲ್ಲಿ ಜಿಲ್ಲೆಯ ನಗರಸಭೆ ಹಾಗೂ ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿಗಳಲ್ಲಿಯೂ ಸಹ ಅನುದಾನವನ್ನು ಸೂಕ್ತ ರೀತಿಯಲ್ಲಿ ಬಳಸಿಕೊಂಡು ಸಮೀಕ್ಷೆ ಹಾಗೂ ಸಂತಾನ ಚಿಕಿತ್ಸೆ ಕೈಗೊಳ್ಳುವಂತೆ ಹೇಳಿದರು.
ಕನಿಷ್ಠ ಶೇ.70ರಷ್ಟು ನಾಯಿಗಳ ಜನನ ನಿಯಂತ್ರಣವನ್ನು ಹಂತ-ಹಂತವಾಗಿ ಕೈಗೊಳ್ಳಬೇಕು. ಜೊತೆಗೆ ಬಿಡಾಡಿ ದನಗಳ ಬಗ್ಗೆ ಸಹ ಕ್ರಮವಹಿಸುವಂತೆ, ಬಿಡಾಡಿ ದನಗಳನ್ನು ಗೋಶಾಲೆಗೆ ಸೇರಿಸಿ ದಂಡ ವಿಧಿಸುವ ಕ್ರಮದ ಬಗ್ಗೆ ಮಾಲಿಕರಲ್ಲಿ ಅರಿವು ಮೂಡಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.ಜಿಲ್ಲೆಯಾದ್ಯಂತ ಸೆ. 27ರ ವರೆಗೆ ರೇಬಿಸ್ ನಿರ್ಮೂಲನಾ ದಿನಾಚರಣೆಯನ್ನು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹಮ್ಮಿಕೊಂಡಿದೆ ಜಿಲ್ಲಾಧಿಕಾರಿ ತಿಳಿಸಿದರು.
ಪಾಲಿಕೆ ಮುಖ್ಯ ಪಶುವೈದ್ಯಾಧಿಕಾರಿ ಡಾ. ಎ.ಜಿ. ಕುಲಕರ್ಣಿ ಮಾತನಾಡಿ, ಬೀದಿನಾಯಿಗಳ ಸಮೀಕ್ಷೆ ಹಾಗೂ ಸಂತಾನ ನಿಯಂತ್ರಣಕ್ಕೆ ಒಟ್ಟು ₹ 1.40 ಕೋಟಿ ಟೆಂಡರ್ ಕರೆಯಲಾಗುತ್ತಿದ್ದು, ಪ್ರತಿ ನಾಯಿಯ ಶಸ್ತ್ರ ಚಿಕಿತ್ಸೆಗೆ ₹ 1650 ವೆಚ್ಚ ಸರ್ಕಾರೇತರ ಸಂಘ ಸಂಸ್ಥೆಗಳಿಗೆ ಭರಿಸಲಾಗುತ್ತಿದೆ. ಪಾಲಿಕೆ ವ್ಯಾಪ್ತಿಯಲ್ಲಿ 2024ನೇ ಸಾಲಿನಲ್ಲಿ ಈ ವರೆಗೆ 2235 ಸಂತಾನಹರಣ ಚಿಕಿತ್ಸೆ ಕೈಗೊಳ್ಳಲಾಗಿದೆಯೆಂದು ಸಭೆಗೆ ತಿಳಿಸಿದರು.ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ. ರವಿ ಸಾಲಿಗೌಡರ ಮಾತನಾಡಿದರು. ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಯ ವಾರ್ಡನ್ ಡಾ. ಹೇಮಂತ್, ಜಿಪಂ ಉಪಕಾರ್ಯದರ್ಶಿ ಬಿ.ಎಸ್. ಮೂಗನೂರಮಠ, ಎಸಿಎಫ್ ಪರಿಮಳಾ ಇದ್ದರು.