ಮಂಜೂರು ಕಾಮಕಾರಿಗಳನ್ನು ತ್ವರಿತವಾಗಿ ಆರಂಭಿಸಿ

| Published : Jun 20 2024, 01:17 AM IST

ಮಂಜೂರು ಕಾಮಕಾರಿಗಳನ್ನು ತ್ವರಿತವಾಗಿ ಆರಂಭಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿ ರಾಷ್ಟ್ರೀಯ ಹೆದ್ದಾರಿ, ರಿಂಗ್ ರಸ್ತೆ, ಘನತ್ಯಾಜ್ಯ ನಿರ್ವಹಣಾ ಘಟಕ, ನಿರಂತರ ನೀರು ಸರಬರಾಜು ಸೇರಿದಂತೆ ಈಗಾಗಲೇ ಜಿಲ್ಲೆಗೆ ಮಂಜೂರಾಗಿರುವ ಬೃಹತ್ ಯೋಜನೆಗಳಿಗೆ ಸಂಬಂಧಿಸಿದ ಕಾಮಗಾರಿಗಳನ್ನು ತಕ್ಷಣವೇ ಆರಂಭಿಸಿ ಸಕಾಲದಲ್ಲಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಸೌಕರ್ಯ ಕಲ್ಪಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ರಾಷ್ಟ್ರೀಯ ಹೆದ್ದಾರಿ, ರಿಂಗ್ ರಸ್ತೆ, ಘನತ್ಯಾಜ್ಯ ನಿರ್ವಹಣಾ ಘಟಕ, ನಿರಂತರ ನೀರು ಸರಬರಾಜು ಸೇರಿದಂತೆ ಈಗಾಗಲೇ ಜಿಲ್ಲೆಗೆ ಮಂಜೂರಾಗಿರುವ ಬೃಹತ್ ಯೋಜನೆಗಳಿಗೆ ಸಂಬಂಧಿಸಿದ ಕಾಮಗಾರಿಗಳನ್ನು ತಕ್ಷಣವೇ ಆರಂಭಿಸಿ ಸಕಾಲದಲ್ಲಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಸೌಕರ್ಯ ಕಲ್ಪಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಮಹಾನಗರ ಪಾಲಿಕೆ ಕಚೇರಿಯಲ್ಲಿ ಬುಧವಾರ ನನೆಗುದಿಗೆ ಬಿದ್ದಿರುವ ಪ್ರಮುಖ ಯೋಜನೆ ಪ್ರಗತಿ ಕುರಿತು ನಡೆದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಕೆಲವು ಕಾಮಗಾರಿಗಳಿಗೆ ಸ್ಥಳೀಯರ ವಿರೋಧ ಕಂಡುಬಂದಿದೆ. ಅಂತಹ‌ ಕಡೆ ಅವರ ಮನವೊಲಿಸಬೇಕು. ಅಗತ್ಯಬಿದ್ದರೆ ಪೊಲೀಸ್ ಭದ್ರತೆಯೊಂದಿಗೆ ಕಾಮಗಾರಿಗಳನ್ನು ಮುಂದುವರಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.

ಭೂಸ್ವಾಧೀನ ಹಾಗೂ ಸ್ಥಳೀಯರ ವಿರೋಧದ ಹಿನ್ನೆಲೆಯಲ್ಲಿ ಕೆಲವೊಂದು ಯೋಜನೆಗಳು ಹತ್ತಾರು ವರ್ಷಗಳಿಂದ ನನೆಗುದಿಗೆ ಬಿದ್ದಿವೆ. ಇದರಿಂದ ಸಾರ್ವಜನಿಕರಿಗೆ ಉತ್ತಮ ಸೌಕರ್ಯಗಳನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಚಾಲ್ತಿಯಲ್ಲಿರುವ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಡೆಂಘೀ ಹಾಗೂ ಕಾಲರಾ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ಭ್ರೂಣಹತ್ಯೆಗೆ ಸಂಬಂಧಿಸಿದಂತೆ ನಿಗಾ ವಹಿಸಬೇಕು. ನಿರಂತರ ನೀರು ಸರಬರಾಜು ಯೋಜನೆಯ ಕಾಮಗಾರಿಗಳನ್ನು ಚುರುಕುಗೊಳಿಸಬೇಕು ಎಂದು ಗುತ್ತಿಗೆದಾರ ಸಂಸ್ಥೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ಶಾಸಕ‌ ಆಸಿಫ್(ರಾಜು) ಸೇಠ್ ಮಾತನಾಡಿ, ಹಳೆ ಪಿ.ಬಿ.ರಸ್ತೆ, ಸಿವಿಲ್ ಆಸ್ಪತ್ರೆ ಬಳಿಯ ಕಾಮಗಾರಿ ಬಳಿಕ ರಸ್ತೆ ಮತ್ತು ಪೈಪ್ ಲೈನ್ ದುರಸ್ತಿ ಮಾಡಿಲ್ಲ. ಇದರಿಂದ ಸಾರ್ವಜನಿಕರಿಗೆ ನಡೆದಾಡಲು ತೊಂದರೆಯಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಹುದಲಿ‌ ಮೇಲ್ಸೇತುವೆಯ ಪರಿಷ್ಕೃತ ಯೋಜನೆಯ ಪ್ರತಿ ಸಲ್ಲಿಸುವಂತೆ ಸಚಿವ ಸತೀಶ್ ಜಾರಕಿಹೊಳಿ ಅವರು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

ಸದ್ಯಕ್ಕೆ ರೇಷನ್ ಕಾರ್ಡ್‌ಗಳನ್ನು ನೀಡಲಾಗುತ್ತಿಲ್ಲ. ಸರ್ಕಾರದ ಅನುಮೋದನೆ ದೊರೆತ ತಕ್ಷಣವೇ ರೇಷನ್ ಕಾರ್ಡ್‌ಗಳನ್ನು ನೀಡಬೇಕು ಮತ್ತು ಕಾರ್ಡುಗಳ ಸಂಖ್ಯೆಗೆ ಅನುಗುಣವಾಗಿ ಅಗತ್ಯಾನುಸಾರ ಪಡಿತರ ಅಂಗಡಿಗಳಿಗೆ ಪರವಾನಗಿ ನೀಡಬೇಕು. ವೈದ್ಯಕೀಯ ತುರ್ತು ಇದ್ದರೆ ಬಿಪಿಎಲ್ ಕಾರ್ಡ್‌ಗಳನ್ನು ನೀಡಬೇಕು ಎಂದು ಹೇಳಿದರು.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ‌ ನಿರ್ದೇಶಕ ಶ್ರೀಶೈಲ್ ಕಂಕಣವಾಡಿ, ವೈದ್ಯಕೀಯ ತುರ್ತು ಸಂಬಂಧಿಂತೆ 160 ಅರ್ಜಿಗಳು ಬಾಕಿ ಉಳಿದಿವೆ ಎಂದು ಸಭೆಗೆ ಮಾಹಿತಿ ನೀಡಿದರು. ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮಾತನಾಡಿ, ಸಂಭವನೀಯ ಪ್ರವಾಹ ನಿರ್ವಹಣೆಗೆ ಸಂಬಂಧಿಸಿದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ವಿವರಿಸಿದರು. ತಾಲೂಕುವಾರು ನೋಡಲ್ ಅಧಿಕಾರಿಗಳು ನಿರಂತರವಾಗಿ ಸಭೆಗಳನ್ನು ನಡೆಸುವ ಮೂಲಕ ಗ್ರಾಮ ಮಟ್ಟದಲ್ಲೂ ತಂಡಗಳನ್ನು ರಚಿಸಿಕೊಂಡು ಪರಿಸ್ಥಿತಿಯ ಮೇಲೆ ನಿರಂತರ ನಿಗಾ ವಹಿಸಲಾಗಿದೆ. ತುರ್ತು ರಕ್ಷಣಾ ತಂಡಗಳು ಸನ್ನದ್ಧವಾಗಿವೆ ಎಂದು ತಿಳಿಸಿದರು.

ಸಭೆಯಲ್ಲಿ ಶಾಸಕರಾದ ಆಸಿಫ್(ರಾಜು) ಸೇಠ್, ವಿಶ್ವಾಸ್ ವೈದ್ಯ, ಬುಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಮಹಾನಗರ ಪಾಲಿಕೆಯ ಆಯುಕ್ತ ಅಶೋಕ ದುಡಗುಂಟಿ ಮತ್ತಿತರರು ಉಪಸ್ಥಿತರಿದ್ದರು.

-----------ಬಾಕ್ಸ್‌...

ಮೇವು ಖರೀದಿಯಲ್ಲಿ ಅಕ್ರಮ ನಡೆದಿದ್ದರೆ ಕ್ರಮ ಖಚಿತಕನ್ನಡಪ್ರಭ ವಾರ್ತೆ ಬೆಳಗಾವಿಪಶು ಸಂಗೋಪನೆ ಇಲಾಖೆಯಲ್ಲಿ ಮೇವು ಖರೀದಿಯಲ್ಲಿ ಅಕ್ರಮ ನಡೆದಿದೆ ಎಂಬ ಬಗ್ಗೆ ಯಾರು ದೂರು ನೀಡಿಲ್ಲ. ಹಾಗೇನಾದರೂ ಅಕ್ರಮ ನಡೆದಿದ್ದರೆ ಈ ಕುರಿತು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್‌ ಅವರಿಗೆ ಸೂಕ್ತ ತನಿಖೆ ನಡೆಸಿ ಕ್ರಮಕೈಗೊಳ್ಳಲು ಸೂಚಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿ ತಿಳಿಸಿದರು.ಇಲ್ಲಿನ ಮಹಾನಗರ ಪಾಲಿಕೆ ಕಚೇರಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಪಶು ಸಂಗೋಪನೆ ಇಲಾಖೆಯಲ್ಲಿ ಮೇವು ಖರೀದಿಗೆ ಮಂಜೂರಾದ ₹ 6 ಕೋಟಿ ಅನುದಾನಲ್ಲಿ ಅಕ್ರಮ ನಡೆದಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಪಶು ಸಂಗೋಪನೆ ಇಲಾಖೆಯಲ್ಲಿ ಮೇವು ಖರೀದಿಯಲ್ಲಿ ಅಕ್ರಮ ನಡೆದಿದೆ ಎಂಬ ಬಗ್ಗೆ ನಮ್ಮ ಗಮನಕ್ಕೆ ಇಲ್ಲ. ಈ ಕುರಿತು ಶೀಘ್ರವೇ ಜಿಲ್ಲಾಧಿಕಾರಿಗಳು ತನಿಖೆ ನಡೆಸಿ ವರದಿ ಸಲ್ಲಿಸಲು ತಿಳಿಸುತ್ತೇನೆ ಎಂದರು.ದಿನದ 24 ಗಂಟೆ ನೀರು ಸರಬರಾಜು ನಿರ್ವಹಣೆ ಕಾಮಗಾರಿ ನಡೆಸುತ್ತಿರುವ ಎಲ್‌ ಆ್ಯಂಡ್‌ ಟಿ ಕಂಪನಿಯಿಂದ ಜನರಿಗೆ ತೊಂದರೆಯಾಗುತ್ತಿರುವುದು ನಿಜ. ಎಲ್‌ ಆ್ಯಂಡ್‌ ಟಿ ಕಂಪನಿಯವರಿಗೆ ಸಾಕಷ್ಟು ಬಾರಿ ಹೇಳಿದ್ದೇವೆ. ನೀರಿನ ಪೈಪ್‌ಲೈನ್‌ಗಳನ್ನು ಅಳವಡಿಸಲು ಅಗೆದ ರಸ್ತೆಗಳನ್ನು ಅವರೇ ಸರಿಪಡಿಸುತ್ತಾರೆ ಎಂದರು.ಅಭಿವೃದ್ಧಿ ಕಡೆಗಣನೆಗೆ ಸರ್ಕಾರ, ಮಂತ್ರಿಗಳು, ಶಾಸಕರಷ್ಟೇ ಹೊಣೆ ಆಗಲ್ಲ. ಯಾವುದೇ ಅಭಿವೃದ್ಧಿ ಕಾಮಗಾರಿಗಳಿರಲಿ, ಕಾಮಗಾರಿಗಳು ವಿಳಂಬವಾದರೆ ಸರ್ಕಾರ, ಮಂತ್ರಿಗಳು, ಶಾಸಕರಷ್ಟೇ ಹೊಣೆ ಮಾಡಲು ಆಗಲ್ಲ. ಅಧಿಕಾರಿಗಳು ಪಾತ್ರ ಪ್ರಮುಖವಾಗಿದೆ. ಹೀಗಾಗಿ ಅಭಿವೃದ್ಧಿ ವಿಷಯದಲ್ಲಿ ನಿರ್ಲಕ್ಷ್ಯವಹಿಸಬಾರದೆಂದು ತಿಳಿಸಿದರು.ಈ ಸಂದರ್ಭದಲ್ಲಿ ಶಾಸಕರಾದ ಆಸೀಪ್‌(ರಾಜು) ಸೇಠ್‌, ವಿಶ್ವಾಸ ವೈದ್ಯ, ಬುಡಾ ಅಧ್ಯಕ್ಷ ಲಕ್ಷ್ಮಣರಾವ್‌ ಚಿಂಗಳೆ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.ಕನ್ನಡಪ್ರಭ ವಾರ್ತೆ ಬೆಳಗಾವಿರಾಷ್ಟ್ರೀಯ ಹೆದ್ದಾರಿ, ರಿಂಗ್ ರಸ್ತೆ, ಘನತ್ಯಾಜ್ಯ ನಿರ್ವಹಣಾ ಘಟಕ, ನಿರಂತರ ನೀರು ಸರಬರಾಜು ಸೇರಿದಂತೆ ಈಗಾಗಲೇ ಜಿಲ್ಲೆಗೆ ಮಂಜೂರಾಗಿರುವ ಬೃಹತ್ ಯೋಜನೆಗಳಿಗೆ ಸಂಬಂಧಿಸಿದ ಕಾಮಗಾರಿಗಳನ್ನು ತಕ್ಷಣವೇ ಆರಂಭಿಸಿ ಸಕಾಲದಲ್ಲಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಸೌಕರ್ಯ ಕಲ್ಪಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.