ಕುಕನೂರು: ಶಾಲಾ ಆರಂಭೋತ್ಸವ ಮನೆಯ ಹಬ್ಬದಂತೆ ಸಂಭ್ರಮದಿಂದ ಕೂಡಿರಲಿ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸೋಮಶೇಖರಗೌಡ ಪಾಟೀಲ್ ಹೇಳಿದರು.

ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಶಾಲಾ ಪ್ರಾರಂಭೋತ್ಸವ ಪ್ರಯುಕ್ತ ಕುಕನೂರು ಮತ್ತು ಯಲಬುರ್ಗಾ ತಾಲೂಕಿನ ಅನುದಾನಿತ ಮತ್ತು ಅನುದಾನರಹಿತ ಹಾಗೂ ಸರ್ಕಾರಿ ಶಾಲೆಗಳ ಮುಖ್ಯೋಪಾಧ್ಯಾಯರೊಡನೆ ಜರುಗಿದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಶಾಲಾ ಆರಂಭದ ದಿನಗಳು ಸಂತಸದಿಂದ ಕೂಡಿರಲಿ. ಮಕ್ಕಳಿಗೆ ಶಾಲಾ ಆರಂಭ ಉತ್ಸಾಹದಾಯಕವಾಗಿರಲಿ, ಶಾಲಾ ಆವರಣ, ಕೊಠಡಿಗಳನ್ನು ಸ್ವಚ್ಛಗೊಳಿಸಬೇಕು. ಶಾಲೆಯ ಶೌಚಾಲಯಗಳನ್ನು ಸ್ವಚ್ಛಗೊಳಿಸಬೇಕು. ಶಾಲಾ ಆರಂಭದ ದಿನ ಮೇ 29ರಿಂದ ಶಿಕ್ಷಕರು ಕಡ್ಡಾಯವಾಗಿ ಶಾಲೆಗೆ ಬರಬೇಕು. ಶಾಲಾ ಪ್ರಾರಂಭೋತ್ಸವ ಹಾಗೂ ದಾಖಲಾತಿ ಆಂದೋಲನ ಕಡ್ಡಾಯವಾಗಿ ಮಾಡಬೇಕು ಎಂದರು.

ಶಾಲಾ ಪ್ರಾರಂಭೋತ್ಸವ ದಿನದಂದು ತಳಿರು-ತೋರಣಗಳಿಂದ ಶಾಲೆಯನ್ನು ಸಿಂಗರಿಸಿ, ಮಕ್ಕಳಿಗೆ ಉಚಿತ ಪಠ್ಯಪುಸ್ತಕ, ಸಮವಸ್ತ್ರ ನೀಡಿ, ಸಿಹಿ ವಿತರಿಸಬೇಕು. ಮೊದಲನೇ ದಿನದಿಂದಲೇ ಪಾಠ ಪ್ರಾರಂಭವಾಗಬೇಕು. ಶಾಲಾ ಪ್ರಾರಂಭಿಕ್ಕಿಂತಲೂ ಪೂರ್ವದಿಂದಲೇ ಮುಖ್ಯಗುರುಗಳು ತಮ್ಮ ಸಿಬ್ಬಂದಿಯೊಂದಿಗೆ ಚರ್ಚಿಸಿ, ವರ್ಗ ವೇಳಾಪಟ್ಟಿ, ಸಂಯುಕ್ತ ವೇಳಾಪಟ್ಟಿ, ವಾರ್ಷಿಕ ಕ್ರಿಯಾಯೋಜನೆ, ಪಾಠಟಿಪ್ಪಣಿ, ಶೈಕ್ಷಣಿಕ ವೇಳಾಪಟ್ಟಿ, ಶಾಲಾ ಪಂಚಾಂಗ, ಶೈಕ್ಷಣಿಕ ಹಾಗೂ ಭೌತಿಕ ಸಂಸ್ಥಾಯೋಜನೆ, ಲಘು ಹಾಗೂ ದೀರ್ಘ ಯೋಜನೆಗಳನ್ನು ಪೂರ್ವದಲ್ಲಿಯೇ ತಯಾರಿಸಿಕೊಳ್ಳಬೇಕು ಎಂದು ಹೇಳಿದರು.

ಬಿಇಒ ಅಶೋಕಗೌಡ ಮಾತನಾಡಿ, ಜೂನ್ ಮಾಹೆಯಿಂದ ಮಳೆ ಅಧಿಕವಾಗುವುದರಿಂದ ಶಾಲೆಯ ಮೇಲ್ಚಾವಣಿ ಮೇಲೆ ಬಿದ್ದಿರುವ ಕಸ, ಕಡ್ಡಿ ಹಾಗೂ ಇತರ ತ್ಯಾಜ್ಯ ಸ್ವಚ್ಛಗೊಳಿಸಬೇಕು. ಶಾಲೆಯಲ್ಲಿರುವ ಅನುಪಯುಕ್ತ ವಸ್ತುಗಳನ್ನು ವಿಲೇವಾರಿ ಮಾಡಬೇಕು. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಶಾಲೆಯ ಎಲ್ಲ ತರಗತಿ ಕೋಣೆಗಳನ್ನು ಸ್ವಚ್ಛಗೊಳಿಸಬೇಕು ಎಂದರು.

ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಟಿ.ಜೆ. ದಾನಿ ಮಾತನಾಡಿ, ಶಾಲೆಯ ಅಡುಗೆ ಕೋಣೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಬೇಕು. ಬಿಸಿಯೂಟದ ಪರಿಕರಗಳನ್ನು ಹಾಗೂ ಶೇಖರಿಸಿಟ್ಟ ಆಹಾರ ಧಾನ್ಯಗಳನ್ನು ಶುದ್ಧೀಕರಿಸಿ, ಮಕ್ಕಳಿಗೆ ಶುಚಿ ರುಚಿ ಆಹಾರ ಸಿದ್ಧಪಡಿಸಿ, ಯಾವುದೇ ಅವಘಡಗಳಾಗದಂತೆ ಕ್ರಮವಹಿಸಬೇಕು. ಮಕ್ಕಳ ಬಿಸಿಯೂಟದ ಸಂದರ್ಭದಲ್ಲಿ ಉಳಿಯುವ ಆಹಾರ ತ್ಯಾಜ್ಯವನ್ನು ಆವರಣದಲ್ಲಿ ಚೆಲ್ಲಾಡದೇ, ಒಂದು ಕಸದ ತೊಟ್ಟಿಯಲ್ಲಿ ಸಂಗ್ರಹಿಸಿ, ವಿಲೇವಾರಿ ಮಾಡಬೇಕು ಎಂದು ಹೇಳಿದರು.


ಮನಿರಾಬಾದ್ ಡಯಟಿನ ಅಧಿಕಾರಿಗಳು, ಯಲಬುರ್ಗಾ ಇಸಿಒ ಶರಣಗೌಡ ಪಾಟೀಲ್, ಪ್ರಮುಖರಾದ ಸಂಗಪ್ಪ ಕಿಂದ್ರಿ, ಶಿವಪ್ಪ ಈಬೇರಿ, ಎಸ್. ಮಕಾಂದರ್, ಶಕುಂತಲಾ ಲ್ಟೀಲ್, ಗೊಣೆಪ್ಪ ಹಂದ್ರಾಳ, ಎಚ್.ಎ. ನದಾಫ್, ಫೀರಸಾಬ್ ದಫೇದಾರ್, ಶೇಖಪ್ಪ ದಾಸರ, ದೇವಿಂದ್ರಪ್ಪ ಕುದರಿಮೋತಿ, ಮುಖ್ಯಶಿಕ್ಷಕ ವರ್ಗದವರಿದ್ದರು.