ಕಬ್ಬಿಗೆ ದರ ನಿಗದಿ ಬಳಿಕವೇ ಕಾರ್ಖಾನೆ ಆರಂಭಿಸಿ

| Published : Oct 25 2024, 12:47 AM IST

ಸಾರಾಂಶ

ಕಳೆದ ಬಾರಿ ಮೈಲಾರ ಸಕ್ಕರೆ ಕಾರ್ಖಾನೆಯಿಂದ ರೈತರ ಪ್ರತಿ ಟನ್‌ ಕಬ್ಬಿಗೆ ₹457 ದರ ನೀಡಿತ್ತು.

ಹೂವಿನಹಡಗಲಿ: ರೈತರು ಬೆಳೆದ ಕಬ್ಬು ಕಟಾವು ಮಾಡುವ ಮುನ್ನವೇ ಸಕ್ಕರೆ ಕಾರ್ಖಾನೆಯ ಮಾಲೀಕರು ದರ ನಿಗದಿ ಮಾಡಬೇಕು. ಕಾರ್ಖಾನೆ ಅಧಿಕಾರಿಗಳು ಹೇಳಿದ ದರಕ್ಕೆ ರೈತರು ಕಬ್ಬು ಕೊಡುವುದಿಲ್ಲ. ದರ ನಿಗದಿ ನಂತರವೇ ಕಾರ್ಖಾನೆ ಆರಂಭ ಮಾಡಬೇಕೆಂದು ರೈತರು ಪಟ್ಟು ಹಿಡಿದರು.

ಇಲ್ಲಿನ ತಾಲೂಕು ಕಚೇರಿಯಲ್ಲಿ ಕಬ್ಬು ಬೆಳೆಗಾರರು, ಸಕ್ಕರೆ ಕಾರ್ಖಾನೆಯ ಅಧಿಕಾರಿಗಳು ಮತ್ತು ತಾಲೂಕು ಆಡಳಿತ ಸಹಯೋಗದಲ್ಲಿ ಆಯೋಜಿಸಿದ್ದ ಕಬ್ಬು ಬೆಳೆಗಾರರ ಸಭೆಯಲ್ಲಿ ರೈತರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.ಕಳೆದ ಬಾರಿ ಮೈಲಾರ ಸಕ್ಕರೆ ಕಾರ್ಖಾನೆಯಿಂದ ರೈತರ ಪ್ರತಿ ಟನ್‌ ಕಬ್ಬಿಗೆ ₹457 ದರ ನೀಡಿತ್ತು. ಆದರೆ ಮುಂಡರಗಿ ವಿಜಯನಗರ ಸಕ್ಕರೆ ಕಾರ್ಖಾನೆ ಮಾಲೀಕರು, ದರ ತಾರತಮ್ಯ ಮಾಡಿ ಈವರೆಗೂ ರೈತರ ಪ್ರತಿ ಟನ್‌ಗೆ ನೀಡಬೇಕಿದ್ದ ₹57 ಹಣ ನೀಡಿಲ್ಲ. ಅವರ ಕಾರ್ಖಾನೆಗೆ ಯಾವ ರೈತರೂ ಕಬ್ಬು ಕಳಿಸುವಂತಿಲ್ಲ ಎಂದು ರೈತರು ಕಾರ್ಖಾನೆಯ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

ಯಾವುದೇ ಕಾರಣಕ್ಕೂ ಕಳೆದ ಬಾರಿಯ ಪ್ರತಿ ಟನ್‌ಗೆ ನೀಡಬೇಕಿದ್ದ ₹57 ನೀಡಲು ಸಾಧ್ಯವಿಲ್ಲ ಎಂದು ಕಾರ್ಖಾನೆಯ ಡಿಜಿಎಂ ಮಂಜುನಾಥ ಹೇಳಿದಾಗ, ನಿಮ್ಮ ಕಾರ್ಖಾನೆಗೆ ಒಂದು ತುಂಡು ಕಬ್ಬು ಕಳಿಸುವುದಿಲ್ಲ. ನಮ್ಮೂರಿನ ಕಬ್ಬು ಬೆಳೆಗಾರರ ಪ್ರದೇಶದ ಕಚೇರಿಯನ್ನು ಬೀಗ ಹಾಕುವ ಜತೆಗೆ, ರಸ್ತೆ ಬಂದ್‌ ಮಾಡಿ ಕಾರ್ಖಾನೆಗೂ ಮುತ್ತಿಗೆ ಹಾಕುತ್ತೇವೆ. ರೈತರು ನಿಮಗೆ ಬಿಟ್ಟಿ ಬಿದ್ದಿಲ್ಲ. ಮೆಕ್ಕೆಜೋಳಕ್ಕೆ ಸಿಗುವ ದರ ಕಬ್ಬಿಗೂ ಸಿಗುತ್ತಿಲ್ಲ. 12 ತಿಂಗಳು ಬೆಳೆಸಿ ಇವರು ಹೇಳಿದ ದರಕ್ಕೆ ಕಬ್ಬು ನೀಡುವ ಸ್ಥಿತಿ ತಂದಿದ್ದಾರೆ. ದರ ಹೆಚ್ಚಿಗೆ ನೀಡುವ ಕಾರ್ಖಾನೆಗೆ ಕಬ್ಬು ಕಳಿಸುತ್ತೇವೆ. ಯಾರ ವಿರುದ್ಧ ಕ್ರಮ ಕೈಗೊಳ್ಳುತ್ತಾರೆಯೋ ನಾವೂ ನೋಡಿಕೊಳ್ಳುತ್ತೇವೆಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ಕಬ್ಬಿನಲ್ಲಿ ಸಕ್ಕರೆ ಪ್ರಮಾಣದಂತೆ ದರ ನಿಗದಿ ಮಾಡುತ್ತಾರೆ. ಆದರೆ ಯಾವ ರೈತರ ಮುಂದೆ ಪರೀಕ್ಷೆ ಮಾಡಿದ್ದಾರೆ? ತಮಗೆ ಮನ ಬಂದಂತೆ ರೈತರನ್ನು ಸುಲಿಗೆ ಮಾಡುತ್ತಿದ್ದಾರೆ. ತಹಸೀಲ್ದಾರ್‌ ಕೂಡ ಅವರಿಗೆ ಎಚ್ಚರಿಕೆ ನೀಡಬೇಕು ಎಂದು ಒತ್ತಾಯಿಸಿದರು.

ಕಬ್ಬಿನ ದರ ನಿರ್ಧಾರ ಸಭೆಯಾಗಿದ್ದು, ಕಾರ್ಖಾನೆಯವರು ಈವರೆಗೂ ದರ ನಿಗದಿ ಮಾಡಿಲ್ಲ. ದರ ನಿಗದಿ ಮಾಡುವವರೆಗೂ ಕಬ್ಬು ಕಟಾವು ಹಾಗೂ ಕಾರ್ಖಾನೆ ಆರಂಭಿಸುವಂತಿಲ್ಲ. ರೈತರಿಂದ ಗೊಂದಲದಲ್ಲಿ ಕಬ್ಬು ಖರೀದಿ ಮಾಡಬೇಡಿ, ಅಂತಿಮ ದರ ನಿಗದಿಯ ನಂತರದಲ್ಲೇ ಕಬ್ಬು ಕಟಾವು ಮಾಡಬೇಕು. ಈ ನಿರ್ಧಾರವನ್ನು ಕಾರ್ಖಾನೆ ಮಾಲೀಕರು ಬದಲಿಸಿದರೆ ನಿಮ್ಮ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ತಹಸೀಲ್ದಾರ್‌ ಜಿ.ಸಂತೋಷಕುಮಾರ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಹಾಲೇಶ, ಹನುಮಂತಪ್ಪ, ಕೋಡಿಬಾಳ್‌, ಚಂದ್ರಪ್ಪ ಕೋಡಬಾಳ್‌, ಮಂಜುನಾಥ, ಭಾರತೀಯ ಕಿಸಾನ್‌ ಸಂಘದ ಅಧ್ಯಕ್ಷ ವಿ.ಬಿ.ಕೊಟ್ರೇಶ, ದುರುಗಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.