ಸೌಹಾರ್ದತೆಯಿಂದ ಕಬ್ಬು ನುರಿಸುವ ಕಾರ್ಯ ಪ್ರಾರಂಭಿಸಿ: ಜಿಲ್ಲಾಧಿಕಾರಿ ಸಂಗಪ್ಪ

| Published : Oct 24 2025, 01:00 AM IST

ಸೌಹಾರ್ದತೆಯಿಂದ ಕಬ್ಬು ನುರಿಸುವ ಕಾರ್ಯ ಪ್ರಾರಂಭಿಸಿ: ಜಿಲ್ಲಾಧಿಕಾರಿ ಸಂಗಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಸಕ್ತ ಹಂಗಾಮಿಗೆ ಜಿಲ್ಲೆಯ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯವರು ರೈತರ ನಡುವೆ ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ಸೌಹಾರ್ದಯುತವಾಗಿ ಕಬ್ಬು ನುರಿಸುವ ಕಾರ್ಯ ಪ್ರಾರಂಭಿಸುವಂತೆ ಜಿಲ್ಲಾಧಿಕಾರಿ ಸಂಗಪ್ಪ ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಪ್ರಸಕ್ತ ಹಂಗಾಮಿಗೆ ಜಿಲ್ಲೆಯ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯವರು ರೈತರ ನಡುವೆ ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ಸೌಹಾರ್ದಯುತವಾಗಿ ಕಬ್ಬು ನುರಿಸುವ ಕಾರ್ಯ ಪ್ರಾರಂಭಿಸುವಂತೆ ಜಿಲ್ಲಾಧಿಕಾರಿ ಸಂಗಪ್ಪ ಸಲಹೆ ನೀಡಿದರು.

ಜಿಲ್ಲಾಡಳಿತ ಭವನದಲ್ಲಿರುವ ನೂತನ ಆಡಿಟೋರಿಯಂ ಹಾಲ್‌ನಲ್ಲಿ ಗುರುವಾರ ಪ್ರಸಕ್ತ ಸಾಲಿನ ಕಬ್ಬು ಅರೆಯುವ ಹಂಗಾಮು ಪ್ರಾರಂಭಿಸುವ ಕುರಿತು ಸಕ್ಕರೆ ಕಾರ್ಖಾನೆಗಳ ಮಾಲೀಕರು ಹಾಗೂ ರೈತರೊಂದಿಗೆ ಜರುಗಿದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲ್ಲಿಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕಾರ್ಖಾನೆಯವರು ರೈತರ ಜೊತೆಗೆ ಸಭೆ ನಡೆಸಿ, ದರ ಘೋಷಣೆ ಬಳಿಕವೇ ಕಬ್ಬು ನುರಿಸುವ ಕಾರ್ಯ ಪ್ರಾರಂಭಿಸಲು ತಿಳಿಸಿದರು.

ಸರ್ಕಾರ ಘೋಷಿಸಿದ ಎಫ್ಆರ್‌ಪಿ ದರವನ್ನು ರೈತರು ಒಪ್ಪದ ಕಾರಣ ಕಾರ್ಖಾನೆಯ ಆಡಳಿತ ಮಂಡಳಿಯವರು ಹಾಗೂ ರೈತರ ಜೊತೆ ಮಾತುಕತೆ ನಡೆಸಿ ದರ ಘೋಷಣೆ ಮಾಡಿದ ನಂತರವೇ ಕಾರ್ಖಾನೆ ಪ್ರಾರಂಭಿಸಲಾಗುವುದೆಂದು ತಿಳಿಸಿದ್ದಾರೆ. ಕಬ್ಬು ಕಟಾವು ಮತ್ತು ಸಾಗಾಣಿಕೆ ವೆಚ್ಚಕ್ಕೆ ಸಂಬಂಧಿಸಿದಂತೆ ಪರಿಷ್ಕೃತ ಮಾರ್ಗಸೂಚಿಗಳನ್ನು ಸರ್ಕಾರ ಹೊರಡಿಸಿದ್ದು, ಕಾರ್ಖಾನೆಯವರು ಪಾಲನೆ ಮಾಡಬೇಕು. ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಾರದ ರೀತಿಯಲ್ಲಿ ಕಬ್ಬು ನುರಿಸುವ ಕಾರ್ಯ ಪ್ರಾರಂಭಿಸುವಂತೆ ಕಾರ್ಖಾನೆಯ ಆಡಳಿತ ಮಂಡಳಿಯವರಿಗೆ ಸಲಹೆ ತಿಳಿಸಿದರು.

ಕಳೆದ ಹಂಗಾಮಿನಲ್ಲಿ ಸಕ್ಕರೆ ಕಾರ್ಖಾನೆ ಮತ್ತು ರೈತರ ನಡುವೆ ಮಾಡಿಕೊಂಡ ಎಫ್.ಆರ್.ಪಿಗಿಂತ ಹೆಚ್ಚುವರಿ ದರದ ಬಾಕಿ ಬಿಲ್‌ ಪಾವತಿಸಿದ ನಂತರವೇ ಪ್ರಸಕ್ತ ಹಂಗಾಮಿನಲ್ಲಿ ಕಾರ್ಖಾನೆಯವರು ಪಾವತಿಸುವಂತೆ ರೈತರು ಬೇಡಿಕೆ ಇಟ್ಟಿದ್ದು, ಬಾಕಿ ಉಳಿಸಿಕೊಂಡ ಕಾರ್ಖಾನೆಗಳು ಕೂಡಲೇ ಪಾವತಿ ಮಾಡಬೇಕು. ಕಬ್ಬು ಕಟಾವು ಮತ್ತು ಸಾಗಾಣಿಕೆ ವೆಚ್ಚವನ್ನು ಸರ್ಕಾರದ ಮಾರ್ಗಸೂಚಿಯ ಪ್ರಕಾರ ಪಾವತಿಗೆ ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿ ಸೂಚಿಸಿದರು.ಕಾರ್ಖಾನೆ ಆಡಳಿತ ಮಂಡಳಿಯ ಪ್ರತಿನಿಧಿಗಳು ತಮಗೆ ಆಗುತ್ತಿರುವ ತೊಂದರೆಗಳನ್ನು ಸಭೆಗೆ ತಿಳಿಸಿದರು.ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್, ಜಿಪಂ ಸಿಇಒ ಶಶಿಧರ ಕುರೇರ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ, ಬೆಳಗಾವಿ ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ಸಿ.ಬಿ. ಪಾಟೀಲ, ಆಹಾರ ಇಲಾಖೆ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ ಸೇರಿದಂತೆ ರೈತರು ಹಾಗೂ ವಿವಿಧ ಕಾರ್ಖಾನೆಗಳ ಮಾಲೀಕರು, ವ್ಯವಸ್ಥಾಪಕ ನಿರ್ದೇಶಕರು ಉಪಸ್ಥಿತರಿದ್ದರು.

ರೈತರ ಬೇಡಿಕೆಗಳು: ರೈತರು ಸಭೆಯಲ್ಲಿ ಸಕ್ಕರೆ ಕಾರ್ಖಾನೆಯವರು ಯಾವ ಯಂತ್ರದಲ್ಲಿ ಕಬ್ಬನ್ನು ತೂಕ ಮಾಡುತ್ತಾರೋ ಅದೇ ಯಂತ್ರದಲ್ಲಿ ಸಕ್ಕರೆ ಕೂಡ ತೂಕ ಮಾಡಿ ಕಳುಹಿಸಬೇಕು. ಕಡ್ಡಾಯವಾಗಿ ಎಲ್ಲ ಕಡೆ ಸಿಸಿ ಕ್ಯಾಮೆರಾ ಅಳವಡಿಸಿ ಪಾರದರ್ಶಕತೆ ತರಬೇಕು. ಒಂದು ಕಾರ್ಖಾನೆಯಿಂದ ಇನ್ನೊಂದು ಕಾರ್ಖಾನೆಗೆ ಬೇರೆ ಬೇರೆ ದರ ನಿಗದಿಯಾಗಿದ್ದು, ಒಂದೇ ದರ ನಿಗದಿ ಮಾಡಬೇಕು. ಹಿಂದಿನ ಹಂಗಾಮಿನಲ್ಲಿ ಪಾವತಿಸಿಲ್ಲ. ಬಡ್ಡಿ ಸೇರಿಸಿ ನೀಡುವಂತೆ ಬೇಡಿಕೆ ಇಟ್ಟರು.