ಸಾರಾಂಶ
ಐದು ಹಗಲು, ಐದು ರಾತ್ರಿ ಅಪಾರ ಜನಸಂದಣಿಯ ನಡುವೆ ಜರುಗುವ ಜಾತ್ರೆಯಲ್ಲಿ ಒಂದೊಂದು ದಿನವು ಒಂದೊಂದು ವಿಶೇಷ ಆಚರಣೆಗಳು ನಡೆಯುತ್ತವೆ. ಮೊದಲ ದಿನ ಚಂದ್ರಮಂಡಲ ಒಂದು ಬೆಳಕಿನ ಆಚರಣೆ ಇದು ಹುಣ್ಣಿಮೆಯ ದಿನ ಮಧ್ಯರಾತ್ರಿ ನಡೆಯಲಿದೆ.
ಕನ್ನಡಪ್ರಭ ವಾರ್ತೆ ಹನೂರು
ವಿಶಿಷ್ಟ ಆಚರಣೆ ಮತ್ತು ವಿಭಿನ್ನ ಸಂಸ್ಕೃತಿಯ ಮೂಲಕ ರಾಜ್ಯದ ಗಮನ ಸೆಳೆದಿರುವ ಚಿಕ್ಕಲ್ಲೂರು ಜಾತ್ರೆಗೆ ಸಕಲ ಸಿದ್ಧತೆ ಭರದಿಂದ ಸಾಗಿದ್ದು, ಐದು ದಿನಗಳ ಕಾಲ ನಡೆಯುವ ವಿಜೃಂಭಣೆಯ ಜಾತ್ರೆಗೆ ಗುರುವಾರ ರಾತ್ರಿ ಜರುಗುವ ಚಂದ್ರಮಂಡಲೋತ್ಸದ ಮೂಲಕ ವಿದ್ಯುಕ್ತ ಚಾಲನೆ ದೊರೆಯಲಿದೆ.ಐದು ಹಗಲು, ಐದು ರಾತ್ರಿ ಅಪಾರ ಜನಸಂದಣಿಯ ನಡುವೆ ಜರುಗುವ ಜಾತ್ರೆಯಲ್ಲಿ ಒಂದೊಂದು ದಿನವು ಒಂದೊಂದು ವಿಶೇಷ ಆಚರಣೆಗಳು ನಡೆಯುತ್ತವೆ. ಮೊದಲ ದಿನ ಚಂದ್ರಮಂಡಲ ಒಂದು ಬೆಳಕಿನ ಆಚರಣೆ ಇದು ಹುಣ್ಣಿಮೆಯ ದಿನ ಮಧ್ಯರಾತ್ರಿ ನಡೆಯಲಿದೆ. ಎರಡನೇ ದಿನ ಧರೆಗೆ ದೊಡ್ಡವರು ಎಂದು ಕರೆಯುವ ದೊಡ್ಡಮ್ಮತಾಯಿ ಮತ್ತು ರಾಚಾಪ್ಪಾಜಿ ಅವರಿಗೆ ಸಲ್ಲಿಸುವ ಸೇವೆ. ಮೂರನೇ ದಿನ ಮುಡಿಸೇವೆ ಅಥವಾ ನೀಲಗಾರರ ಧೀಕ್ಷೆ, ನಾಲ್ಕನೇ ದಿನ ಪಂಕ್ತಿಸೇವೆ (ಸಿದ್ಧರ ಸೇವೆ), ಐದನೇ ದಿನ ಮುತ್ತತ್ತಿರಾಯನ ಸೇವೆ ಅಥವಾ ಕಡೆಬಾಗಿಲ ಸೇವೆಯೊಂದಿಗೆ ಜಾತ್ರೆಗೆ ತೆರಬೀಳುತ್ತದೆ.
ಹಲುಗೂರು ಭಿಕ್ಷೆ ಬಳಿಕ ಒಕ್ಕಲು ಪಡೆದ ಕಾರಣ ಏಳು ಗ್ರಾಮಗಳ ಜನರು ಒಟ್ಟಾಗಿ ಸೇರಿ ಆಚರಿಸುವ ಈ ಆಚರಣೆಯಲ್ಲಿ ಚಂದ್ರಮಂಡಲೋತ್ಸವಕ್ಕೆ ವಿಶೇಷ ಆದ್ಯತೆ ಇದೆ. ಚಿಕ್ಕಲ್ಲೂರು ಸುತ್ತಮುತ್ತಲಿನ ಬಾಣೂರು, ಬಾಳಗುಣಸೆ, ತೆಳ್ಳನೂರು, ಮಸ್ಕಯ್ಯನದೊಡ್ಡಿ, ಸುಂಡ್ರಳ್ಳಿ, ಕೊತ್ತನೂರು ಗ್ರಾಮಗಳ ಕುಲೇಳು ಹದಿನೆಂಟು ಸಮುದಾಯಗಳು ಒಟ್ಟಾಗಿ ಸೇರಿ ಆಚರಿಸುವ ವಿಶಿಷ್ಟ ಆಚರಣೆಯೆ ಚಂದ್ರಮಂಡಲ ಉತ್ಸವ. ಈ ಉತ್ಸವಕ್ಕೆ ಒಂದೊಂದು ಸಮುದಾಯದ ಜನರು ಒಂದೊಂದು ಸೇವೆ ಸಲ್ಲಿಸುವ ನಿಯಮವಿದೆ. ಚಂದ್ರಮಂಡಲವೆಂಬ ಬಿದಿರಿನ ಕಿರೀಟ, ತೇರಿನ ಜ್ಯೋತಿಯ ಆಕೃತಿ ನಿರ್ಮಾಣಕ್ಕೆ ತೆಳ್ಳನೂರು ಗ್ರಾಮದ ಜನರು ಬೊಂಬು, ಬಿದಿರು, ಅಚ್ಚೆ ನೀಡಿದರೆ, ಮಸ್ಕಯ್ಯನದೊಡ್ಡಿ ಗ್ರಾಮಸ್ಥರು ಎಣ್ಣೆ, ಪೆಂಜು, ಬಾಣೂರು ಹಾಗೂ ಬಾಳಗುಣಸೆ ಗ್ರಾಮದವರು ಮಡಿ ಬಟ್ಟೆಯನ್ನು ನೀಡುತ್ತಾರೆ. ಹೀಗೆ ಎಲ್ಲ ಗ್ರಾಮಗಳು ನೀಡಿದ ವಸ್ತುಗಳನ್ನು ಸಂಗ್ರಹಿಸಿ ಶಾಗ್ಯ ಗ್ರಾಮದ ಗುರುಮನೆ ನೀಲಗಾರರು ಚಂದ್ರಮಂಡಲವನ್ನು ತಯಾರಿಸುತ್ತಾರೆ.ಶಾಗ್ಯ ಗ್ರಾಮದವರಿಗೆ ಸೀಮಿತ
ಪ್ರತಿ ವರ್ಷ ಚಂದ್ರಮಂಡಲ ಕಟ್ಟುವ ಜವಾಬ್ದಾರಿ ಶಾಗ್ಯ ಗ್ರಾಮಸ್ಥರದ್ದು, ಜಾತ್ರೆಯ ಮೊದಲನೆ ದಿನವಾದ ಚಂದ್ರಮಂಡಲ ಉತ್ಸವ, ಕೊನೆಯ ದಿನವಾದ ಕಡೆ ಬಾಗಿಲ ಸೇವೆಯವರೆಗೂ ಈ ಗ್ರಾಮದ ಜನರು ಸಕ್ರಿಯವಾಗಿ ಭಾಗವಹಿಸುತ್ತಾರೆ. ಜಾತ್ರೆಯ ಕೊನೆಯ ದಿನವಾದ ಬಾಗಿಲ ಸೇವೆಯಲ್ಲಿ ಇವರಿಗೆ ಮಠದ ವತಿಯಿಂದ ವಿಶೇಷ ಆತಿಥ್ಯವನ್ನು ನೀಡಿ ಗೌರವಿಸಲಾಗುತ್ತದೆ. ಸುಪ್ರಸಿದ್ಧ ಚಿಕ್ಕಲ್ಲೂರು ಜಾತ್ರೆ ಆರಂಭಗೊಳ್ಳುವುದು ಹಾಗೂ ತೆರೆ ಬೀಳುವುದು ಶಾಗ್ಯ ಗ್ರಾಮಸ್ಥರಿಂದಲೇ ಎಂಬುದು ಮತ್ತೊಂದು ವಿಶೇಷವಾಗಿದೆ.ಬಿಗಿ ಪಹರೆ
ಪ್ರಖ್ಯಾತಿ ಪಡೆದಿರುವ ಚಿಕ್ಕಲೂರು ಜಾತ್ರೆ ಮಹೋತ್ಸವದ ಐದು ದಿನಗಳವರಗೆ ಜಿಲ್ಲಾ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮದೊಂದಿಗೆ ಕರ್ತವ್ಯಕ್ಕೆ ನಿಯೋಜನೆಗೊಳಿಸಲಾಗಿದೆ. ಡಿವೈಎಸ್ಪಿ 3, 9 ಪಿಎಸ್ಐ, 37 ಸಹಾಯಕ ಸಬ್ ಇನ್ಸ್‌ಪೆಕ್ಟರ್, 57 ಮುಖ್ಯ ಪೊಲೀಸ್ ಪೇದೆಗಳು ಸೇರಿದಂತೆ ಪೊಲೀಸ್ ಸಿಬ್ಬಂದಿ, ಹೋಂ ಗಾರ್ಡ್, ಡಿಆರ್ ವಾಹನ, ಕೆಎಸ್ಆರ್ಪಿಸಿ ವಾಹನ ಚಿಕ್ಕಲೂರು ಜಾತ್ರೆಯಲ್ಲಿ ಕರ್ತವ್ಯ ನಿರ್ವಹಿಸಲಿವೆ. ಪ್ರಾಣಿಬಲಿ ನಿಷೇಧ ಇರುವುದರಿಂದ ಪೊಲೀಸ್ ನಿಯೋಜನೆಗೊಳಿಸಿ ಮತ್ತಿಪುರ, ಕೊತ್ತನೂರು, ಬಾಲಗುಣಸೆ ಹಾಗೂ ರಾಚಪ್ಪಾಜಿನಗರ ಸ್ಥಳಗಳಲ್ಲಿ ಚೆಕ್ ಪೋಸ್ಟ್ ಅನ್ನು ತೆರೆಯಲಾಗಿದ್ದು ಗುರುವಾರದಿಂದ ಹೆಚ್ಚಿನ ಪೊಲೀಸ್ ಬಂದುಬಸ್ತ್ ಕಲ್ಪಿಸುವ ಮೂಲಕ ಪೊಲೀಸ್ ಇಲಾಖೆ ಬಿಗಿ ಪಹರೆ ಏರ್ಪಡಿಸಿದೆ.