ಸಾರಾಂಶ
ಮಡಿಕೇರಿ : ರಾಜ್ಯ ಸರ್ಕಾರ ಮಿತಿ ಮೀರಿ ಸಾಲ ಮಾಡಿ ರಾಜ್ಯವನ್ನು ದಿವಾಳಿ ಮಾಡಿದೆ. ಯಾವ ಸಾಧನೆಗೆಂದು ಕಾಂಗ್ರೆಸ್ ಸಾಧನಾ ಸಮಾವೇಶ ಆಯೋಜಿಸುತ್ತಿದೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದ ಪ್ರತೀ ವ್ಯಕ್ತಿಯ ಮೇಲೆ 12 ಸಾವಿರ ರು. ಸಾಲದ ಹೊರೆಯಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದ ಜನತೆಗೆ ನೀಡಿರುವ ಕೊಡುಗೆ ಇದು. ಸರ್ಕಾರಕ್ಕೆ ಎರಡು ವರ್ಷ ತುಂಬಿದ ಹಿನ್ನೆಲೆಯಲ್ಲಿ ಮಂಗಳವಾರ ಸಾಧನಾ ಸಮಾವೇಶ ಆಯೋಜಿಸಲಾಗಿದೆ. ಯಾವ ಸಾಧನೆ ಮಾಡಿದ್ದಾರೆಂದು ಈ ಸಮಾವೇಶ ಎಂದು ವ್ಯಂಗ್ಯವಾಡಿದರು.
ಶಕ್ತಿ ಯೋಜನೆಯಿಂದಾಗಿ ಲಾಭದಲ್ಲಿದ್ದ ಕೆಎಸ್‌ಆರ್‌ಟಿ ನಷ್ಟದಲ್ಲಿ ಮುಳುಗಿದೆ. ಡ್ರೈವರ್, ಕಂಡಕ್ಟರ್‌ಗಳಿಗೆ ವೇತನ ಕೊಡಲೂ ಸಾಧ್ಯವಾಗದ ಹೀನಾಯ ಸ್ಥಿತಿಗೆ ಸರ್ಕಾರ ತಲುಪಿದೆ. ಅನ್ನಭಾಗ್ಯ ಯೋಜನೆಗೆ ಅಕ್ಕಿಯನ್ನು ಕೇಂದ್ರದಿಂದ ಖರೀದಿಸಲು ಕೂಡ ರಾಜ್ಯ ಸರ್ಕಾರದ ಬಳಿ ಹಣವಿಲ್ಲ. ಉಚಿತ ಕರೆಂಟ್ ಕೊಡುತ್ತೇವೆಂದು ಹೇಳಿಕೊಂಡ ಸರ್ಕಾರ ಸರಿಯಾಗಿ ಕರೆಂಟ್ ಕೂಡ ಕೊಡುತ್ತಿಲ್ಲ. ವಿದ್ಯುತ್ ನಿಗಮಗಳು ನಷ್ಟದಲ್ಲಿ ಮುಳುಗುವಂತಾಗಿದೆ. ಸಿದ್ದರಾಮಯ್ಯ ಅವರ ಮುಖ್ಯಮಂತ್ರಿ ಕುರ್ಚಿ ಉಳಿದದ್ದೇ ಕಾಂಗ್ರೆಸ್‌ನ ಎರಡು ವರ್ಷಗಳ ಸಾಧನೆಯಾಗಿದೆ ಎಂದು ಪ್ರತಾಪ್ ಸಿಂಹ ಟೀಕಿಸಿದರು.
ರಾಜ್ಯವ್ಯಾಪಿ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳಿಗೆ ಚುನಾವಣೆಯನ್ನೇ ನಡೆಸಲು ಕಾಂಗ್ರೆಸ್ ಸರ್ಕಾರಕ್ಕೆ ಇನ್ನೂ ಸಾಧ್ಯವಾಗಿಲ್ಲ. ವಿನಯ್ ಸೋಮಯ್ಯ ಸಾವಿಗೆ ಕಾರಣನಾದ ಕಾಂಗ್ರೆಸ್ಸಿಗನನ್ನು ಬಂಧಿಸಲು ಇನ್ನೂ ಸಾಧ್ಯವಾಗಿಲ್ಲ. ಶಾಸಕರ ಕೃಪಾಕಟಾಕ್ಷ ಈ ವ್ಯಕ್ತಿಯ ಮೇಲಿದೆ. ಮೂರ್ನಾಡಿನಲ್ಲಿ ಮಹಿಳಾ ಪೊಲೀಸ್ ಮೇಲೆಯೇ ಕಾಂಗ್ರೆಸ್ ಮುಖಂಡನೋರ್ವನಿಂದ ಹಲ್ಲೆ ನಡೆದರೂ ಕ್ರಮ ಕೈಗೊಂಡಿಲ್ಲ. ಕೊಡಗು ವಿಶ್ವವಿದ್ಯಾನಿಲಯಕ್ಕೆ ಬಾಗಿಲು ಹಾಕಲು ಮುಂದಾಗಿರುವುದು ಕೂಡ ಕಾಂಗ್ರೆಸ್ ಸರ್ಕಾರದ 2 ವರ್ಷಗಳ ಸಾಧನೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎರಡು ವರ್ಷದಲ್ಲಿ ಪಂಚ ಗ್ಯಾರೆಂಟಿಯ ಬಗ್ಗೆಯ ಬೊಗಳೆ ಬಿಟ್ಟಿದ್ದೇ ಹೊರತು ಬೇರೇನೂ ಇಲ್ಲ. ಬ್ರಾಂಡ್ ಬೆಂಗಳೂರು ಸ್ಥಿತಿ, ಬೀಚ್ ಬೆಂಗಳೂರು ಆಗಿದೆ. ಡಿಕೆಶಿ ಅದರ ಬಗ್ಗೆ ಸಮಾವೇಶದಲ್ಲಿ ಹೇಳುತ್ತಾರೆಯೇ? ಗೃಹ ಲಕ್ಷ್ಮೀ ಹಣ ಬಂದಿರದೇ ಇರುವುದಕ್ಕೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಆಕ್ಸಿಡೆಂಟ್ ಆಗಿದ್ದಕ್ಕೆ ಹಾಕಲಿಲ್ಲ ಎನ್ನುತ್ತಾರಾ? ಸಿದ್ದರಾಮಯ್ಯ 14 ಸೈಟ್ ನುಂಗಿದನ್ನು ಸಾಧನಾ ಸಮಾವೇಶದಲ್ಲಿ ಹೇಳುತ್ತೀರಾ? ಕಾಂಗ್ರೆಸ್ ಸರ್ಕಾರದಲ್ಲಿ 60 ಪರ್ಸೆಂಟ್ ಕಮಿಷನ್ ಇದೆ ಎಂದ ಕೆಂಪಣ್ಣನನ್ನು ಸಾಯಿಸಿದರು ಎಂದು ಆರೋಪಿಸಿದರು.
ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ಎರಡು ವರ್ಷಗಳಲ್ಲಿ ಕೊಡಗಿನ ಅಭಿವೃದ್ಧಿಗೆ ಇಬ್ಬರೂ ಶಾಸಕರು ತಂದಿರುವ ಅನುದಾನದ ಪೂರ್ಣ ಮಾಹಿತಿ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.
ಮಾಜಿ ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ಕಾಂಗ್ರೆಸ್ ಸರ್ಕಾರ ಯಾವುದೇ ಸಾಧನೆ ಮಾಡದೇ ಹೋದರೂ ಸಾಧನೆ ಮಾಡಿದ್ದೇವೆ ಎಂದು ಬೊಗಳೆ ಬಿಡಲು ಸಾಧನಾ ಸಮಾವೇಶ ಆಯೋಜಿಸಿದೆ. ಕೊಡಗಿನ ಜನತೆಯನ್ನು ಶಾಸಕರು ಎಲ್ಲ ಸಂದರ್ಭದಲ್ಲಿ ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ. ಕೊಡಗಿನ ಜನತೆಗೂ ಸತ್ಯದ ಅರಿವಾಗುತ್ತಿದೆ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ಬಗೆಗಿನ ಪೋಸ್ಟರ್ ಬಿಡುಗಡೆಗೊಳಿಸಲಾಯಿತು.
ಕೊಡಗು ಬಿಜೆಪಿ ಅಧ್ಯಕ್ಷ ನಾಪಂಡ ರವಿಕಾಳಪ್ಪ, ಪ್ರಧಾನ ಕಾರ್ಯದರ್ಶಿಗಳಾದ ಮಹೇಶ್ ಜೈನಿ, ನೆಲ್ಲೀರ ಚಲನ್ ಇದ್ದರು.
ಕಾಂಗ್ರೆಸ್ ವಿರುದ್ಧ ಅಸಮಾಧಾನ:
ಸರ್ವ ಪಕ್ಷಗಳ ಸಂಸದರ ನಿಯೋಗದಲ್ಲಿ ಶಶಿ ತರೂರು ಅವರನ್ನು ನೇಮಿಸಿರುವುದಕ್ಕೆ ಕಾಂಗ್ರೆಸ್ ವಿರೋಧ ಬಗ್ಗೆ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ, ಕಾಂಗ್ರೆಸ್ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿತ್ತು. ದುರಾದೃಷ್ಟವಶಾತ್ ಇಟೆಲಿಯಲ್ಲಿ ಹುಟ್ಟಿದ ಸೋನಿಯಾಗಾಂಧಿ, ಇಟಲಿಯ ಸೋನಿಯಾ ಗಾಂಧಿಯ ಮಗ ರಾಹುಲ್ ಗಾಂಧಿ ಅವರ ಕೈಯಲ್ಲಿ ಕಾಂಗ್ರೆಸ್ ಚುಕ್ಕಾಣಿ ಇದೆ. ಹಾಗಾಗಿ ದೇಶದ ವಿಷಯ ಬಂದಾಗ ಅವರು ಪಕ್ಷ ಭೇದ ಮರೆತು ದೇಶದ ಪರ ನಿಲ್ಲಲ್ಲ. ಆ ಮನಸ್ಥಿತಿ ವಿದೇಶಿ ಮೂಲದವರಿಗೆ ಅರ್ಥವಾಗುತ್ತಿಲ್ಲ ಎಂದು ಕಿಡಿಕಾರಿದರು.
ನರಸಿಂಹರಾವ್ ಈ ದೇಶದ ಪ್ರಧಾನಿಯಾಗದ್ದರು. ಆಗ ಕಾಶ್ಮೀರದ ವಿಚಾರದಲ್ಲಿ ವಿಶ್ವ ಸಂಸ್ಥೆಯಲ್ಲಿ ನಿರ್ಣಯ ಅಂಗೀಕರಿಸುವಂತೆ ಪಾಕಿಸ್ತಾನ ಮನವಿ ಮಾಡಿತ್ತು. ಆಗ ಭಾರತ ಪರವಾಗಿ ವಕಾಲತ್ತು ವಹಿಸಲು ಅಟಲ್ ಬಿಹಾರಿ ವಾಜಪೇಯಿ ಅವರನ್ನು ಕಳುಹಿಸಲಾಗಿತ್ತು. 2008ರಲ್ಲಿ ಮುಂಬೈ ಅಟ್ಯಾಕ್ ಆಗಿತ್ತು. ಆಗ ಮನಮೋಹನ್ ಸಿಂಗ್ ಅವರು ಇದೇ ರೀತಿ ನಿಯೋಗಗಳನ್ನು ಬೇರೆ ದೇಶಗಳಿಗೆ ಕಳುಹಿಸಿದ್ದರು. ಅದರಲ್ಲಿ ಎಲ್ಲ ಪಕ್ಷಗಳೂ ಇದ್ದವು. ಅದೇ ರೀತಿ ಮೋದಿ ಅವರು ಕಳುಹಿಸುತ್ತಿದ್ದಾರೆ ಎಂದರು.
ಆಪರೇಷನ್ ಸಿಂದೂರ್ ಅನಿವಾರ್ಯತೆ ಏನಿತ್ತು. ಪಾಕಿಸ್ತಾನದ ದೂರ್ತತನ ಏನಿತ್ತು ಎಂದು ಹೇಳಲು 7 ತಂಡ ಮಾಡಿದ್ದಾರೆ. ಅದರಲ್ಲಿ ಮೊದಲ ಟೀಂಗೆ ಶಶಿ ತರೂರ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಶಶಿತರೂರ್ ಈ ಹಿಂದೆ ವಿಶ್ವ ಸಂಸ್ಥೆಯಲ್ಲಿ ಕೆಲಸ ಮಾಡಿದವರು. ಬಹಳ ಅದ್ಭುತವಾಗಿ ಮಾತನಾಡಬಲ್ಲವರು. ಹೀಗಾಗಿ ಅವರ ಜೊತೆಗೆ ಬೇರೆ ಬೇರೆ ಕಾಂಗ್ರೆಸ್ ನಾಯಕರನ್ನು ಕಳುಹಿಸಲಾಗಿದೆ. ಇದು ದೇಶದ ನಿಲುವನ್ನು ಜಗತ್ತಿಗೆ ಹೇಳುವುದಕ್ಕಾಗಿ ಸಂಸದರನ್ನು ಈ ಸಮಿತಿಗೆ ಹಾಕಲಾಗಿದೆ. ಇದು ಚುನಾವಣೆ ಸ್ಪರ್ಧೆಗೆ ಕಳುಹಿಸುತ್ತಿಲ್ಲ. ಇದು ಕಾಂಗ್ರೆಸ್ ಅಥವಾ ಬಿಜೆಪಿ ಮೇಲೋ ಎಂದು ತೋರಿಸುವುದಕ್ಕೆ ಕಳುಹಿಸುತ್ತಿಲ್ಲ. ದೇಶದ ಪರವಾಗಿ ಕಳುಹಿಸಲಾಗುತ್ತಿದೆ. ಈ ಕನಿಷ್ಠ ಜ್ಞಾನ ಇಟಲಿ ಮೂಲದವರಿಗೆ ಅರ್ಥವಾಗುವುದಿಲ್ಲ ಎಂದು ಆರೋಪಿಸಿದರು.