ಜನರ ಕೈಗೆ ಸಿಗದ ಬಳ್ಳಾರಿ ಜಿಲ್ಲೆ ಕಾಂಗ್ರೆಸ್‌ ಶಾಸಕರು!

| Published : May 20 2025, 01:51 AM IST

ಜನರ ಕೈಗೆ ಸಿಗದ ಬಳ್ಳಾರಿ ಜಿಲ್ಲೆ ಕಾಂಗ್ರೆಸ್‌ ಶಾಸಕರು!
Share this Article
  • FB
  • TW
  • Linkdin
  • Email

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ತುಂಬಿದ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಸಂಭ್ರಮ ಮನೆ ಮಾಡಿದ್ದರೆ, ಬಳ್ಳಾರಿಯಲ್ಲಿ ಮಾತ್ರ ನೀರಸ ವಾತಾವರಣವಿದೆ.

ಐವರು ಕಾಂಗ್ರೆಸ್‌ ಶಾಸಕರಿದ್ದರೂ ಯಾವ ಪ್ರಯೋಜನವೂ ಆಗಿಲ್ಲ

ಪಾಲಿಕೆ ಕಳಪೆ ಆಡಳಿತದಿಂದ ರೋಸಿಹೋದ ನಾಗರಿಕರು

ಮಂಜುನಾಥ ಕೆ.ಎಂ.

ಕನ್ನಡಪ್ರಭ ವಾರ್ತೆ ಬಳ್ಳಾರಿ

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ತುಂಬಿದ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಸಂಭ್ರಮ ಮನೆ ಮಾಡಿದ್ದರೆ, ಬಳ್ಳಾರಿಯಲ್ಲಿ ಮಾತ್ರ ನೀರಸ ವಾತಾವರಣವಿದೆ.

ಕಾರಣ, ಜಿಲ್ಲೆಯ ಯಾವುದೇ ಕಾಂಗ್ರೆಸ್‌ ಶಾಸಕರು ಜನತೆಯ ಕೈಗೆ ಸಿಗುತ್ತಿಲ್ಲ. ಅವರ ಅಳಲು ಆಲಿಸುತ್ತಿಲ್ಲ. ಅಭಿವೃದ್ಧಿ ಕಾರ್ಯಗಳನ್ನಂತೂ ಕೇಳುವಂತೆಯೇ ಇಲ್ಲ. ಹೀಗಿರುವಾಗ ಸಂಭ್ರಮ ಎಲ್ಲಿಂದ ಬರಬೇಕು?

ಬಳ್ಳಾರಿ ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಸಂಸದ, ರಾಜ್ಯಸಭಾ ಸದಸ್ಯ ಸೇರಿದಂತೆ ಗಣಿ ಜಿಲ್ಲೆಯಲ್ಲಿ ಕಾಂಗ್ರೆಸ್ ಜನಪ್ರತಿನಿಧಿಗಳ ದೊಡ್ಡ ಪಡೆಯೇ ಇದೆ. ಜಿಲ್ಲೆಯ ಬಹುತೇಕ ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್‌ ಆಡಳಿತದಲ್ಲಿದೆ. ಆದಾಗ್ಯೂ ಸಮಸ್ಯೆ ಮತ್ತು ಅಭಿವೃದ್ದಿಯ ಕುರಿತಂತೆ ಜನತೆಯೊಂದಿಗೆ ಸಂಹನವೇ ನಡೆಯುತ್ತಿಲ್ಲ. ಹಾಗಾಗಿ ಸರ್ಕಾರ ಇದ್ದೂ ಇಲ್ಲದಂತಾಗಿದೆ. ಐವರು ಕಾಂಗ್ರೆಸ್‌ ಶಾಸಕರನ್ನು ಆಯ್ಕೆ ಮಾಡಿದ ಜಿಲ್ಲೆಯ ಜನತೆ ಪರಿತಪಿಸುತ್ತಿದ್ದಾರೆ.

ಬಳ್ಳಾರಿ ನಗರದ ಕಥೆ:

ಬಳ್ಳಾರಿ ಹೆಸರಿಗಷ್ಟೇ ಮಹಾನಗರ, ಸೌಲಭ್ಯದ ದೃಷ್ಟಿಯಿಂದ ಈ ನಗರ ಪುರಸಭೆ, ನಗರಸಭೆಗಿಂತಲೂ ಹಿಂದುಳಿದಿದೆ. ಇಲ್ಲಿನ ಮಹಾನಗರ ಪಾಲಿಕೆ ಕಾಂಗ್ರೆಸ್ ಆಡಳಿತದಲ್ಲಿದ್ದರೂ ನಗರದ ಜನರಿಗೆ ಕನಿಷ್ಠ ಮೂಲ ಸೌಕರ್ಯಗಳನ್ನು ಕಲ್ಪಿಸಲು ಪಾಲಿಕೆಯಿಂದಾಗಿಲ್ಲ. ಕುಡಿಯುವ ನೀರು ಸಮರ್ಪಕ ವಿತರಣೆ, ರಸ್ತೆಗಳ ಸುಧಾರಣೆ, ವಿದ್ಯುತ್ ದೀಪಗಳ ನಿರ್ವಹಣೆಯಿಂದ ಅತ್ಯಂತ ಕಳಪೆಯಾಗಿರುವ ಪಾಲಿಕೆ ಆಡಳಿತದಿಂದ ಜನರು ರೋಸಿ ಹೋಗಿದ್ದಾರೆ.

ರಾಜ ಕಾಲುವೆಗಳಲ್ಲಿ ತುಂಬಿಕೊಂಡಿರುವ ತ್ಯಾಜ್ಯವನ್ನು ಹೊರತೆಗೆಯುವ ಕಾಳಜಿಯ ಕೆಲಸವಾಗಿಲ್ಲ. ಕೊಳಚೆ ನೀರು ಸಂಸ್ಕರಣ ಘಟಕ ನಿರ್ವಹಣೆಯಲ್ಲಿ ಕೋಟ್ಯಂತರ ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದ್ದು, ಇದು ಪಾಲಿಕೆಯ ಆಡಳಿತ ವೈಖರಿಗೆ ಹಿಡಿದ ಕನ್ನಡಿ. ಆದರೆ, ಸ್ಥಳೀಯ ಶಾಸಕರಿಗೆ ಈ ಬಗ್ಗೆ ಯಾವ ಕಾಳಜಿಯೂ ಕಂಡು ಬಂದಿಲ್ಲ.

ಬಳ್ಳಾರಿ ರಸ್ತೆಗಳಲ್ಲಿ ಓಡಾಡುವುದು ಎಂದರೆ ಸರ್ಕಸ್ ಮಾಡಿದ ಅನುಭವ. ಬೈಕ್ ಸವಾರ ಒಂದು ಚೂರು ಯಾಮಾರಿದರೂ ಗುಂಡಿಗೆ ಬೀಳುವುದು ಖಚಿತ. ಅಷ್ಟರಮಟ್ಟಿಗೆ ಬಳ್ಳಾರಿ ರಸ್ತೆಗಳು ಮೈಕೊಡವಿಕೊಂಡು ಒದ್ದಾಡುತ್ತಿವೆ. ರಸ್ತೆ ಅಪಘಾತದಿಂದಾಗಿಯೇ ವರ್ಷದಲ್ಲಿ ಹತ್ತಾರು ಜನ ಪ್ರಾಣ ಕಳೆದುಕೊಳ್ಳುತ್ತಾರೆ. ಆದರೆ, ರಸ್ತೆಗಳ ಸುಧಾರಣೆಯ ಕ್ರಮಗಳಂತೂ ಈ ವರೆಗೆ ಕಂಡು ಬಂದಿಲ್ಲ. ಹೀಗೆ ಬಳ್ಳಾರಿಯ ಸಮಸ್ಯೆಗಳು ಪಟ್ಟಿ ಮಾಡುತ್ತಾ ಹೋದರೆ ನೂರರ ಅಂಕಿ ದಾಟುತ್ತವೆ. ಕಾಳಜಿ ತೆಗೆದುಕೊಳ್ಳಬೇಕಾದ ಜನಪ್ರತಿನಿಧಿಗಳು ತಾವು ಅಭಿವೃದ್ಧಿಯ ಹರಿಕಾರರು ಎಂಬ ಭ್ರಮೆಯಲ್ಲಿದ್ದಾರೆ ಎಂಬಂತೆ ಗೋಚರಿಸುತ್ತದೆ.

ಗ್ರಾಮೀಣ ಕ್ಷೇತ್ರದ ಗೋಳು:

ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕ ಬಿ. ನಾಗೇಂದ್ರ ಅವರು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬ್ಯಾಂಕ್ ಖಾತೆಯಿಂದ ಅಕ್ರಮವಾಗಿ ಹಣ ವರ್ಗಾವಣೆ ಪ್ರಕರಣದಿಂದ ಜೈಲು ಪಾಲಾಗಿ, ಬಳಿಕ ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ. ಅವರು ಗ್ರಾಮೀಣ ಕ್ಷೇತ್ರಕ್ಕೆ ಭೇಟಿ ನೀಡುವುದೇ ಅಪರೂಪ ಎಂಬ ಆರೋಪಗಳನ್ನು ತಳ್ಳಿ ಹಾಕುವಂತಿಲ್ಲ. ಪ್ರಕರಣ ಬಳಿಕ ಹೆಚ್ಚು ಸಮಯ ಬೆಂಗಳೂರಿನಲ್ಲಿಯೇ ಕಳೆದ ನಾಗೇಂದ್ರ, ಕ್ಷೇತ್ರದಿಂದ ದೂರ ಉಳಿದಿದ್ದೇ ಹೆಚ್ಚು. ಇದೀಗ ಜಿಲ್ಲಾ ಸಚಿವರಾಗಿ ಬಳ್ಳಾರಿಗೆ ಬರುವ ಹುಮ್ಮಸ್ಸಿನಲ್ಲಿರುವ ನಾಗೇಂದ್ರ ಅವರು ಸಚಿವರಾಗಿದ್ದೂ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದು ಎಷ್ಟು? ಎಂಬ ಪ್ರಶ್ನೆ ಮೂಡಿದೆ.

ಕೈಗೆ ಸಿಗದ ಶಾಸಕ:

ಬತ್ತದ ನಾಡು ಎಂದೇ ಹೆಸರಾಗಿರುವ ಸಿರುಗುಪ್ಪ ವಿಧಾನಸಭಾ ಕ್ಷೇತ್ರದಲ್ಲಿ ಹತ್ತಾರು ಸಮಸ್ಯೆಗಳು ತಾಂಡವವಾಡುತ್ತಿವೆ. ಸಿರುಗುಪ್ಪ ಪಟ್ಟಣಕ್ಕಿಂತಲೂ ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಮೂಲ ಸೌಕರ್ಯಗಳಿಗಾಗಿ ಒದ್ದಾಡುವ ಸ್ಥಿತಿಯಿದೆ. ಆದರೆ, ಶಾಸಕ ಜನರಿಗೆ ಸಿಗುವುದೇ ಅಪರೂಪ. ಹೆಚ್ಚು ಸಮಯವನ್ನು ಬೆಂಗಳೂರು ಮತ್ತಿತರ ಕಡೆಗಳಲ್ಲಿ ಮಾತ್ರ ಹೆಚ್ಚು ಕಾಣಿಸಿಕೊಳ್ಳುವ ಸಿರುಗುಪ್ಪ ಶಾಸಕರ ನಡೆಯ ಬಗ್ಗೆ ಸ್ಥಳೀಯರಲ್ಲಿ ತೀವ್ರ ಬೇಸರವಿದೆ. ಅಭಿವೃದ್ಧಿ ಬಗ್ಗೆ ಯೋಚನೆಗಳಿಲ್ಲದ ಶಾಸಕನ ಆಯ್ಕೆಯಿಂದ ಪರಿತಪಿಸುವಂತಾಗಿದೆ ಎಂದು ಜನರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಅನ್ನಪೂರ್ಣ ಹೊಸಬರು:

ಸಂಡೂರು ವಿಧಾನಸಭಾ ಕ್ಷೇತ್ರದಿಂದ ಆಯ್ಕೆಗೊಂಡಿರುವ ಈ. ಅನ್ನಪೂರ್ಣಾ ಅವರಿಗೆ ಪತಿ ಈ. ತುಕಾರಾಂ ಅವರದ್ದೇ ಬಲ. ಹಲವು ಬಾರಿ ಶಾಸಕರಾಗಿ ಆಯ್ಕೆಗೊಂಡು ಜನರ ನಾಡಿಮಿಡಿತ ಗೊತ್ತಿರುವ ತುಕಾರಾಂ ಅವರು ಅನ್ನಪೂರ್ಣಾ ಅವರಿಗೆ ಮಾರ್ಗದರ್ಶನ ಮಾಡುತ್ತಿದ್ದು, ಅನ್ನಪೂರ್ಣಾ ಅವರು ಬರುವ ದಿನಗಳಲ್ಲಿ ರಾಜಕೀಯವಾಗಿ ಪಳಗಿ ಅಭಿವೃದ್ಧಿಯ ಮುನ್ನುಡಿ ಬರೆಯುತ್ತಾರೆ ಎಂಬ ನಿರೀಕ್ಷೆಯಿದೆ. ಮೂಲ ಸೌಕರ್ಯದ ವಿಚಾರದಲ್ಲಿ ಸಂಡೂರು ಪಟ್ಟಣ ಒಂದಿಷ್ಟು ಸುಧಾರಣೆಗೊಂಡಿದ್ದರೂ ಹಳ್ಳಿ ಭಾಗದಲ್ಲಿ ಸಮಸ್ಯೆಗಳು ಇದ್ದೇ ಇದೆ.

ಕಂಪ್ಲಿ ವಿಧಾನಸಭಾ ಕ್ಷೇತ್ರ ಇದಕ್ಕೆ ಹೊರತಲ್ಲ. ಗ್ರಾಮೀಣ ಭಾಗದಲ್ಲಿ ಮೂಲ ಸೌಕರ್ಯಗಳಿಗಾಗಿ ಪರದಾಡುವ ಸ್ಥಿತಿಯಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗಲೂ ಜಿಲ್ಲೆಯ ಪ್ರಗತಿಗೆ ಯಾವುದೇ ಅನುಕೂಲವಾಗಲಿಲ್ಲ. ಜನರ ಸಮಸ್ಯೆಗಳಿಗೆ ಇತಿಶ್ರೀ ಹಾಡಲಾಗಲಿಲ್ಲ ಎಂಬ ಕೊರಗು ಜಿಲ್ಲೆಯ ಜನರದ್ದು.