ರಾಜ್ಯ ಬಿಜೆಪಿ ಕುಟುಂಬ ರಾಜಕಾರಣದಲ್ಲಿ ಸಿಲುಕಿದೆ: ಕೆ.ಎಸ್.ಈಶ್ವರಪ್ಪ

| Published : Mar 27 2024, 01:00 AM IST / Updated: Mar 27 2024, 02:47 PM IST

ರಾಜ್ಯ ಬಿಜೆಪಿ ಕುಟುಂಬ ರಾಜಕಾರಣದಲ್ಲಿ ಸಿಲುಕಿದೆ: ಕೆ.ಎಸ್.ಈಶ್ವರಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ತಾಯಿಯಂತೆ ಭಾವಿಸಿದ ರಾಜ್ಯ ಬಿಜೆಪಿ ಇಂದು ಕುಟುಂಬ ರಾಜಕಾರಣಕ್ಕೆ ಸಿಲುಕಿರುವುದು ನೋಡಲಾಗುತ್ತಿಲ್ಲ. ಹಲವು ಬಾರಿ ಬೇಸರವಾದರೂ ಪಕ್ಷದ ಕಾರಣದಿಂದ ಸುಮ್ಮನಾಗಿದ್ದೆ. ಆದರೆ ಇದೀಗ ಕಾಲ ಕೂಡಿಬಂದಿದ್ದು, ಹೋರಾಟಕ್ಕೆ ಮುಂದಾಗಿದ್ದೇನೆ. ಚುನಾವಣೆಗಾಗಿ ಮಾತ್ರ ಪಕ್ಷ. 

ಕನ್ನಡಪ್ರಭವಾರ್ತೆ ಭದ್ರಾವತಿ

ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೈಗೆ ಬಿಜೆಪಿ ಕೊಟ್ಟರೆ ಅಧಿಕಾರ ಬರುತ್ತದೆ ಎಂದು ವರಿಷ್ಠರ ದಿಕ್ಕು ತಪ್ಪಿಸಲಾಗುತ್ತಿದೆ. ಇದರಿಂದಾಗಿ ದಲಿತರು, ಹಿಂದುಳಿದವರಿಗೆ ಅನ್ಯಾಯವಾಗುತ್ತಿದ್ದು, ಪ್ರಸ್ತುತ ಪಕ್ಷದ ಏಳಿಗೆಗೆ ಶ್ರಮಿಸಿದವರಿಗೆ ಅಧಿಕಾರ ನೀಡಬೇಕಿರುವುದು ಮುಖ್ಯ ಎಂದು ಬಿಜೆಪಿ ಬಂಡಾಯ ಸಂಭಾವ್ಯ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಹೇಳಿದರು.

ಮಂಗಳವಾರ ಸಿದ್ಧರೂಢನಗರದ ಧರ್ಮಶ್ರೀ ಸಭಾ ಭವನದಲ್ಲಿ ಕೆ.ಎಸ್.ಈಶ್ವರಪ್ಪ ಬೆಂಬಲಿಗರು ಆಯೋಜಿಸಿದ್ದ ಈಶ್ವರಪ್ಪ ನಡೆ-ಹಿಂದುತ್ವದ ಕಡೆ ಕಾರ್ಯಕ್ರಮದಲ್ಲಿ ಮಾತನಾಡಿ ತಾಯಿಯಂತೆ ಭಾವಿಸಿದ ರಾಜ್ಯ ಬಿಜೆಪಿ ಇಂದು ಕುಟುಂಬ ರಾಜಕಾರಣಕ್ಕೆ ಸಿಲುಕಿರುವುದು ನೋಡಲಾಗುತ್ತಿಲ್ಲ. ಹಲವು ಬಾರಿ ಬೇಸರವಾದರೂ ಪಕ್ಷದ ಕಾರಣದಿಂದ ಸುಮ್ಮನಾಗಿದ್ದೆ. ಆದರೆ ಇದೀಗ ಕಾಲ ಕೂಡಿಬಂದಿದ್ದು, ಹೋರಾಟಕ್ಕೆ ಮುಂದಾಗಿದ್ದೇನೆ. ಚುನಾವಣೆಗಾಗಿ ಮಾತ್ರ ಪಕ್ಷ. ನಂತರ ಎಲ್ಲರೂ ನಮ್ಮವರು. ಇದೀಗ ನನ್ನ ಹೋರಾಟಕ್ಕೆ ಎಲ್ಲರೂ ಬೆಂಬಲ ನೀಡುತ್ತಿರುವುದು ಸಂತಸ ತಂದಿದೆ ಎಂದರು.

ನಾನು ಎಂಪಿಎಂ- ವಿಐಎಸ್‌ಎಲ್ ಕಾರ್ಖಾನೆಗಳ ವಿಚಾರದಲ್ಲಿ ಭರವಸೆ ನೀಡುವುದಿಲ್ಲ. ಬದಲಾಗಿ ಎಲ್ಲರೊಂದಿಗೆ ಚರ್ಚಿಸಿ ಆಗಬೇಕಾದ ಕೆಲಸಗಳನ್ನು ಪ್ರಾಮಾಣಿಕವಾಗಿ ನನ್ನ ಕರ್ತವ್ಯ ಎಂದು ಭಾವಿಸಿ ನಿರ್ವಹಿಸುತ್ತೇನೆ. ಭದ್ರಾವತಿ ಜನತೆಗೆ ಈಶ್ವರಪ್ಪನ ಮೇಲೆ ವಿಶ್ವಾಸವಿದೆ. ನನಗೆ ಭದ್ರಾವತಿ ಜನರ ಮೇಲೆ ವಿಶ್ವಾಸವಿದೆ ಎಂದರು.

ಮುಖಂಡ ಸಿ. ಮಹೇಶ್ ಕುಮಾರ್ ಮಾತನಾಡಿ, ಕೆ.ಎಸ್.ಈಶ್ವರಪ್ಪನವರ ಸ್ಪರ್ಧೆ ಖಚಿತವಾಗಲಿ. ನಂತರ ಅಭಿವೃದ್ಧಿಯ ಹರಿಕಾರರ ಕಥೆ ಏನೆಂದು ನಾವು ಜನರಿಗೆ ಮನವರಿಕೆ ಮಾಡುತ್ತೇವೆ ಎಂದರು.

ಕಾರ್ಯಕ್ರಮದಲ್ಲಿ ಮುಖಂಡರಾದ ಸುರೇಶ್, ಎಂ. ಪ್ರಭಾಕರ್, ತ್ಯಾಗರಾಜ್, ಮಾರುತಿ, ಬಿ.ಎಸ್. ನಾರಾಯಣಪ್ಪ, ಹೇಮಾವತಿ, ಶಾರದಮ್ಮ, ಮಂಜುನಾಥ್, ಬಸವರಾಜ್, ರಂಗೋಜಿರಾವ್ ಸೇರಿ ಇನ್ನಿತರರಿದ್ದರು.