ರಾಜ್ಯ ಬಜೆಟ್ ಬೇವು-ಬೆಲ್ಲದಂತಿದೆ: ಡಾ. ತೋಂಟದ ಶ್ರೀಗಳು

| Published : Mar 08 2025, 12:31 AM IST

ರಾಜ್ಯ ಬಜೆಟ್ ಬೇವು-ಬೆಲ್ಲದಂತಿದೆ: ಡಾ. ತೋಂಟದ ಶ್ರೀಗಳು
Share this Article
  • FB
  • TW
  • Linkdin
  • Email

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶುಕ್ರವಾರ ಮಂಡಿಸಿರುವ ರಾಜ್ಯ ಬಜೆಟ್ ಬೇವು-ಬೆಲ್ಲಗಳ ಸಮ್ಮಿಶ್ರಣದಂತಿದೆ ಎಂದು ಡಂಬಳ-ಗದಗ ತೋಂಟದಾರ್ಯ ಸಂಸ್ಥಾನಮಠದ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಗದಗ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶುಕ್ರವಾರ ಮಂಡಿಸಿರುವ ರಾಜ್ಯ ಬಜೆಟ್ ಬೇವು-ಬೆಲ್ಲಗಳ ಸಮ್ಮಿಶ್ರಣದಂತಿದೆ ಎಂದು ಡಂಬಳ-ಗದಗ ತೋಂಟದಾರ್ಯ ಸಂಸ್ಥಾನಮಠದ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಬಜೆಟ್‌ನಲ್ಲಿ ಶಿಕ್ಷಣ, ಆರೋಗ್ಯ, ಕೃಷಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳಿಗೆ ಅಧಿಕ ಪ್ರಮಾಣದಲ್ಲಿ ಹಣವನ್ನು ಮೀಸಲಾಗಿರಿಸಿರುವುದು ತುಂಬ ಸಂತೋಷದ ಸಂಗತಿಯಾಗಿದೆ. ಗದಗ ಜಿಲ್ಲೆಯ ಮಟ್ಟಿಗೆ ಹೇಳಿಕೊಳ್ಳುವಂತಹ ಸಂತೋಷವೇನೂ ಇಲ್ಲ. ಡಂಬಳದಲ್ಲಿ ತೋಟಗಾರಿಕೆ ಮಹಾವಿದ್ಯಾಲಯದ ಸ್ಥಾಪನೆಯೊಂದನ್ನು ಬಿಟ್ಟರೆ ಬೇರೆ ಯಾವುದೂ ಕೊಡುಗೆಗಳಿಲ್ಲದಿರುವುದು, ಈ ಭಾಗದ ಜನತೆಗೆ ಬಹಳಷ್ಟು ನಿರಾಸೆಯಾಗಿದೆ. ಸಿಹಿಗಿಂತ ಕಹಿಯೇ ಅಧಿಕ ಎನ್ನುವಂತಾಗಿದೆ ಎಂದಿದ್ದಾರೆ.

ಗದಗ ವಾಣಿಜ್ಯೋದ್ಯಮ ಸಂಸ್ಥೆಯ ಪದಾಧಿಕಾರಿಗಳು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಈ ಭಾಗದಲ್ಲಿ ಕೃಷಿ ಆಧಾರಿತ ಉದ್ದಿಮೆ ಹಾಗೂ ನೀರಾವರಿ ಯೋಜನೆಗಳನ್ನು ಕಾರ್ಯಗತಗೊಳಿಸಲು ಕೇಳಿಕೊಂಡಿದ್ದರು. ಕಪ್ಪತಗುಡ್ಡವನ್ನು ವನ್ಯಜೀವಿಧಾಮವೆಂದು ಘೋಷಿಸಿ ಹಲವು ವರ್ಷಗಳೇ ಗತಿಸಿವೆ. ಅದಕ್ಕೆ ನಯಾಪೈಸೆಯನ್ನೂ ಮೀಸಲಾಗಿರಿಸಿಲ್ಲ. ಫುಡ್‌ಪಾರ್ಕ್ ಘೋಷಣೆಯಾಗಬಹುದೆಂಬ ನಿರೀಕ್ಷೆ ಈ ಬಾರಿಯೂ ಹುಸಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಪ್ರಮುಖ ಲಿಂಗಾಯತ ಮಠಾಧಿಪತಿಗಳು ಮತ್ತು ಗಣ್ಯರು ಬಜೆಟ್ ಪೂರ್ವದಲ್ಲಿ ಹಣಕಾಸು ಮಂತ್ರಿಗಳೂ ಆಗಿರುವ ಮುಖ್ಯಮಂತ್ರಿಗಳನ್ನು ಖುದ್ದಾಗಿ ಭೇಟಿ ಮಾಡಿ ಹಲವಾರು ಬೇಡಿಕೆಗಳನ್ನು ಮಂಡಿಸಿದ್ದರು. ವಚನ ಅಧ್ಯಯನ ಕೇಂದ್ರವನ್ನು ಸ್ಥಾಪಿಸಲಾಗುವುದು ಎಂಬ ಘೋಷಣೆ ಮಾತ್ರ ಆಗಿದೆಯೇ ಹೊರತು ಅದಕ್ಕಾಗಿ ಪ್ರತ್ಯೇಕ ಅನುದಾನ ಘೋಷಣೆಯಾಗಿಲ್ಲ. ಗದಗ ನಗರದಲ್ಲಿ ಅರ್ಧಕ್ಕೆ ನಿಂತಿರುವ ನಾಡೋಜ ಡಾ. ಪುಟ್ಟರಾಜ ಗವಾಯಿಗಳ ಸ್ಮಾರಕ ಭವನ ಪೂರ್ಣಗೊಳಿಸುವುದಾಗಲಿ, ಕನ್ನಡದ ಕುಲಗುರು ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳವರ ಸ್ಮಾರಕ ಕನ್ನಡ ಭವನ ನಿರ್ಮಾಣದ ವಿಷಯವಾಗಲಿ ಬಜೆಟ್‌ನಲ್ಲಿ ಪ್ರಸ್ತಾಪವಾಗದೇ ಇರುವುದು ಜನರಲ್ಲಿ ನಿರಾಶೆಯನ್ನುಂಟು ಮಾಡಿದೆ. ಇನ್ನೂ ಕಾಲ ಮಿಂಚಿಲ್ಲ. ಅಭಿವೃದ್ಧಿಯಿಂದ ವಂಚಿತವಾಗಿರುವ ಗದಗ ಜಿಲ್ಲೆಯ ಕಡೆಗೆ ಸರಕಾರ ಗಮನಹರಿಸಬೇಕು ಎಂದು ಶ್ರೀಗಳು ಆಗ್ರಹಿಸಿದ್ದಾರೆ.