ಸಾರಾಂಶ
ಸರ್ಕಾರಗಳು ಬದಲಾದರೂ ಬದಲಾಗದ ಜಿಲ್ಲೆಯ ಅಭಿವೃದ್ಧಿ ಚಿತ್ರಣ । ಜಿಲ್ಲೆಯ ಪ್ರಗತಿಯ ರೂಪು-ರೇಷೆಗಳು ಅನಾವರಣಗೊಳ್ಳುವುದೇ? । ಅನ್ನದಾತರ ಬೇಡಿಕೆ ಈಡೇರಿಸಲು ಒತ್ತಾಯ ।
ಕನ್ನಡಪ್ರಭ ವಾರ್ತೆ ಮಂಡ್ಯದಶಕಗಳಿಂದ ಜಿಲ್ಲೆಯ ಅಭಿವೃದ್ಧಿ ಕುರಿತಂತೆ ನಿರೀಕ್ಷೆಗಳೇನೋ ನೂರಾರಿವೆ. ಆದರೆ, ಪ್ರತಿ ಬಜೆಟ್‌ನಲ್ಲೂ ನಿರಾಸೆ ಕಟ್ಟಿಟ್ಟ ಬುತ್ತಿಯಾಗಿದೆ. ಸರ್ಕಾರಗಳು ಬದಲಾದರೂ ಜಿಲ್ಲೆಯ ಅಭಿವೃದ್ಧಿ ಚಿತ್ರಣ ಮಾತ್ರ ಬದಲಾಗುತ್ತಿಲ್ಲ. ಜಿಲ್ಲೆಯ ಅಭಿವೃದ್ಧಿ ಬಗ್ಗೆ ಬೊಬ್ಬೆ ಹಾಕುತ್ತಿದ್ದ ಕಾಂಗ್ರೆಸ್ ಅಧಿಕಾರ ಸೂತ್ರ ಹಿಡಿದು ವರ್ಷ ಸಮೀಪಿಸುತ್ತಿದ್ದರೂ ಅಭಿವೃದ್ಧಿಯಲ್ಲಿ ಮಹತ್ವದ ಬದಲಾವಣೆಯೇನೂ ಕಂಡುಬಂದಿಲ್ಲ.
ಇದೇ ಸಮಯಕ್ಕೆ ಶುಕ್ರವಾರ (ಫೆ.೧೬) ಮಂಡನೆಯಾಗುವ ಬಜೆಟ್‌ನಲ್ಲಿ ಮತ್ತೊಮ್ಮೆ ಜಿಲ್ಲೆಗೆ ಸರ್ಕಾರದಿಂದ ಏನಾದರೂ ಕೊಡುಗೆ ಸಿಗಬಹುದೆಂಬ ನಿರೀಕ್ಷೆಯ ಕನಸುಗಳು ಗರಿಗೆದರಿವೆ. ಸಕ್ಕರೆ ನಾಡಿನ ಪ್ರಗತಿಯ ರೂಪು-ರೇಷೆಗಳು ಬಜೆಟ್‌ನಲ್ಲಿ ಅನಾವರಣಗೊಳ್ಳಲಿವೆಯೇ ಎನ್ನುವ ಕುತೂಹಲ ಎಲ್ಲರಲ್ಲೂ ಮೂಡಿದೆ.ಜಿಲ್ಲೆಯ ಅಭಿವೃದ್ಧಿ ಬಗೆಗಿನ ಇಚ್ಛಾಶಕ್ತಿ ಪ್ರದರ್ಶನಕ್ಕೆ ಕಾಂಗ್ರೆಸ್‌ಗೆ ಮತ್ತೊಂದು ಅವಕಾಶ ದೊರಕಿದೆ. ಜಿಲ್ಲೆಯ ಅಭಿವೃದ್ಧಿಗೆ ಜೆಡಿಎಸ್ ಕೊಡುಗೆ ಶೂನ್ಯ ಎಂದು ಗಟ್ಟಿಯಾಗಿ ಕೂಗಿ ಹೇಳುವ ಕಾಂಗ್ರೆಸ್ ತನ್ನ ಕೊಡುಗೆಗಳ ಸಾಕ್ಷಿಗುಡ್ಡೆಗಳನ್ನು ವಿಪಕ್ಷದವರಿಗೆ ಪ್ರದರ್ಶಿಸಬೇಕಿದೆ. ಆ ನಿಟ್ಟಿನಲ್ಲಿ ಪ್ರಗತಿಯ ನಿರೀಕ್ಷೆಗಳಲ್ಲಿ ಪ್ರಮುಖವಾದವನ್ನಾದರೂ ಜಾರಿಗೊಳಿಸಬಹುದೆಂಬ ಆಶಾಭಾವನೆಯಲ್ಲಿ ಜನರೂ ಇದ್ದಾರೆ. ಅದಕ್ಕೆ ಸರ್ಕಾರದ ಸ್ಪಂದನೆ ಹೇಗಿರಲಿದೆ ಎನ್ನುವುದು ಶುಕ್ರವಾರ ಬಹಿರಂಗಗೊಳ್ಳಲಿದೆ.
ಮೈಷುಗರ್ ಸುಧಾರಣೆ:ಸರ್ಕಾರ ರಚನೆಯಾದ ಹತ್ತು ದಿನದಲ್ಲೇ ಮೈಷುಗರ್‌ಗೆ ೫೦ ಕೋಟಿ ರು. ಹಣ ಬಿಡುಗಡೆಗೊಳಿಸಿದ ಕಾಂಗ್ರೆಸ್ ಸರ್ಕಾರ ಮೈಷುಗರ್ ಸ್ಥಿತಿಯಲ್ಲಿ ಕೊಂಚ ಸುಧಾರಣೆ ತಂದಿರುವುದಂತೂ ಸತ್ಯ. ಕಳೆದ ಏಳು ವರ್ಷಗಳಿಗೆ ಹೋಲಿಸಿದರೆ ಕಾರ್ಖಾನೆ ಎಲ್ಲರ ಗಮನಸೆಳೆಯುವಂತೆ ಕಾರ್ಯನಿರ್ವಹಿಸಿದೆ. ಕಳೆದ ವರ್ಷ ಕಂಪನಿ ೨.೩೯ ಲಕ್ಷ ಟನ್ ಕಬ್ಬು ಅರೆದಿದ್ದು, ಶೇ.೮.೫ರಷ್ಟು ಸಕ್ಕರೆ ಇಳುವರಿ ಬಂದಿದೆ. ಸಹ ವಿದ್ಯುತ್ ಘಟಕವನ್ನು ಪ್ರಾರಂಭ ಮಾಡಿ ೧೨.೨೧ ಸಾವಿರ ಯುನಿಟ್ ವಿದ್ಯುತ್ ಉತ್ಪಾದನೆ ಮಾಡಿರುತ್ತಾರೆ. ಇದರಲ್ಲಿ ೪.೯೩ ಯುನಿಟ್ ವಿದ್ಯುತ್ ಇಲಾಖೆ ಈಗಾಗಲೇ ಚೆಸ್ಕಾಂಗೆ ಸರಬರಾಜು ಮಾಡಲಾಗಿದೆ. ವಿದ್ಯುತ್ ಉತ್ಪಾದನೆಯಲ್ಲೂ ಹಂತ ಹಂತವಾಗಿ ಪ್ರಗತಿ ಸಾಧಿಸುತ್ತಿದೆ. ಆದರೆ, ಸಕ್ಕರೆ ಉತ್ಪಾದನೆಯೊಂದರಿಂದಲೇ ಕಾರ್ಖಾನೆ ಸ್ಥಿತಿ ಬದಲಾಗುವುದಿಲ್ಲ. ಕಂಪನಿಯ ಪುನಶ್ಚೇತನದ ದೃಷ್ಟಿಯಿಂದ ಸಹ ವಿದ್ಯುತ್ ಘಟಕ, ಎಥನಾಲ್ ಘಟಕ ಆರಂಭಿಸಬೇಕಿದೆ. ಅದಕ್ಕೆ ಪೂರಕವಾಗಿ ಸರ್ಕಾರ ಬಜೆಟ್‌ನಲ್ಲಿ ಹಣ ಮೀಸಲಿಡಬಹುದೆಂಬ ನಿರೀಕ್ಷೆ ಮೂಡಿದೆ.
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ :ಮಿಮ್ಸ್ ಆಸ್ಪತ್ರೆ ಜಾಗದಲ್ಲಿರುವ ತಮಿಳು ಕಾಲೋನಿಯನ್ನು ತೆರವುಗೊಳಿಸುವ ಪ್ರಕ್ರಿಯೆಗಳು ಸ್ಥಗಿತಗೊಂಡಿವೆ. ಇದರಿಂದ ಆಸ್ಪತ್ರೆಗೆ ವಿಶಾಲವಾದ ಸ್ಥಳಾವಕಾಶ ದೊರಕಿಸಲು ಸಾಧ್ಯವಾಗಿಲ್ಲ. ಪರಿಣಾಮ ಬಹು ವರ್ಷಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕನಸು ಕನಸಾಗಿಯೇ ಉಳಿದಿದೆ. ಇದರ ಜೊತೆಗೆ ಫೆರಿಫೆರಲ್ ಕ್ಯಾನ್ಸರ್ ಆಸ್ಪತ್ರೆಗೂ ಹೊಸ ರೂಪ ನೀಡುವುದಕ್ಕೆ ಸರ್ಕಾರ ೫ ಕೋಟಿ ರು. ಬಿಡುಗಡೆ ಮಾಡಿದ್ದರೂ ಪ್ರಗತಿದಾಯಕವಾಗಿ ಚಟುವಟಿಕೆಗಳು ನಡೆಯುತ್ತಿಲ್ಲ. ಹೀಗಾಗಿ ಕ್ಯಾನ್ಸರ್ ಆಸ್ಪತ್ರೆಯೇ ಕ್ಯಾನ್ಸರ್ ಪೀಡಿತವಾಗಿ ನರಳುತ್ತಿದೆ.ವರ್ತುಲ ರಸ್ತೆ:
ಮಂಡ್ಯಕ್ಕೊಂದು ವರ್ತುಲ ರಸ್ತೆಯ ಅವಶ್ಯಕತೆ ಇದೆ. ಮಂಡ್ಯದ ಹೊರವಲಯದಲ್ಲಿ ನಿರ್ಮಿಸಿರುವ ಬೈಪಾಸ್ ರಸ್ತೆಯನ್ನು ಸಂಪರ್ಕಿಸುವಂತೆ ಮತ್ತೊಂದು ಬದಿಯಲ್ಲೂ ರಸ್ತೆಯನ್ನು ನಿರ್ಮಿಸಿದಲ್ಲಿ ನಗರದ ಬೆಳವಣಿಗೆಗೆ ಹೆಚ್ಚು ಅನುಕೂಲವಾಗಲಿದೆ. ವರ್ತುಲ ರಸ್ತೆಯಿಂದ ನಗರದ ಸೌಂದರ್ಯವೂ ಹೆಚ್ಚುತ್ತದೆ ಎನ್ನುವುದು ಹದಿನೈದು ವರ್ಷಗಳಿಂದ ಕೇಳಿಬರುತ್ತಿರುವ ಮಾತು. ಮತ್ತೊಂದು ಬದಿಯಲ್ಲಿ ರಸ್ತೆ ನಿರ್ಮಿಸಲು ಸರ್ವೇ ನಡೆಸಿ ಜಾಗ ಗುರುತುಪಡಿಸಿ ೧೮ ವರ್ಷಗಳಾಗಿದ್ದರೂ ಇದುವರೆಗೂ ರಸ್ತೆ ನಿರ್ಮಾಣವಾಗದಿರುವುದು ವಿಪರ್ಯಾಸ.ರಸ್ತೆಗಳ ಅಭಿವೃದ್ಧಿ:
ಮಂಡ್ಯ ನಗರದ ರಸ್ತೆಗಳ ಸ್ಥಿತಿಯನ್ನಂತೂ ಕೇಳುವಂತೆಯೇ ಇಲ್ಲ. ಗುಂಡಿಗಳ ಆಗರವಾಗಿರುವ ರಸ್ತೆಗಳಿಂದ ಮುಕ್ತಿ ಎಂದು ಸಿಗುವುದೋ ಎಂಬ ನಿರೀಕ್ಷೆಯಲ್ಲೇ ಜನರು ಕಾಲ ನೂಕುತ್ತಿದ್ದಾರೆ. ಪ್ರಮುಖ ರಸ್ತೆಗಳೂ ಸೇರಿದಂತೆ ಬಡಾವಣೆಯ ರಸ್ತೆಗಳೆಲ್ಲವೂ ಹಾಳಾಗಿದೆ. ನಗರೋತ್ಥಾನ ಯೋಜನೆಯಡಿ ನಗರದ ಬೆರಳೆಣಿಕೆ ರಸ್ತೆಗಳು ಅಭಿವೃದ್ಧಿಗೊಂಡಿವೆ. ಬಹುತೇಕ ರಸ್ತೆಗಳು ಅಭಿವೃದ್ಧಿಯಿಂದ ವಂಚಿತವಾಗಿವೆ. ಕನಿಷ್ಠ ೧೦೦ ಕೋಟಿ ರು. ಹಣ ಬಿಡುಗಡೆ ಮಾಡಿದರೆ ನಗರ ರಸ್ತೆಗಳೆಲ್ಲವೂ ಹೊಸ ಸ್ವರೂಪವನ್ನು ಪಡೆದುಕೊಳ್ಳಲಿವೆ. ಇದಕ್ಕೆ ಸರ್ಕಾರದ ಪ್ರತಿಕ್ರಿಯೆ ಹೇಗಿರಲಿದೆ ಎನ್ನುವುದೂ ಮುಖ್ಯವಾಗಿದೆ..ರಸ್ತೆಗಳ ಅಭಿವೃದ್ಧಿ, ಮುಖ್ಯ ವೃತ್ತಗಳ ಸೌಂದರ್ಯೀಕರಣ, ಆಕರ್ಷಕ ಫುಟ್‌ಪಾತ್‌ಗಳ ನಿರ್ಮಾಣ ಎಲ್ಲವೂ ಜನಪ್ರತಿನಿಧಿಗಳ ಬಾಯಿಮಾತಿಗಷ್ಟೇ ಸೀಮಿತವಾಗಿ ಉಳಿದುಕೊಂಡಿದೆ. ಗುದ್ದಲಿ ಪೂಜೆಗಳು ನಿರಂತರವಾಗಿ ನಡೆದರೂ ಅಷ್ಟೇ ವೇಗವಾಗಿ ಕಾಮಗಾರಿಗಳು ಆರಂಭಗೊಳ್ಳುತ್ತಿಲ್ಲ.
ಉಳಿದಂತೆ ಕೃಷಿ ಉತ್ಪನ್ನಗಳ ಶೀತಲೀಕರಣ ಘಟಕ, ಕೈಗಾರಿಕೆ ಅಭಿವೃದ್ಧಿ, ರೇಷ್ಮೆ ಹುಳು ಸಂಸ್ಕರಣಾ ಘಟಕ, ಕೆರೆಗಳಿಗೆ ನಾಲಾ ಸಂಪರ್ಕ ಜಾಲ, ಕೆಆರ್‌ಎಸ್ ಮೇಲ್ಗಾಲುವೆ ಯೋಜನೆ, ಕೆರೆಗಳನ್ನು ತುಂಬಿಸುವುದಕ್ಕೆ ಪ್ರಾಮುಖ್ಯತೆ, ಉಪನಗರ ನಿರ್ಮಾಣ, ಉದ್ಯಮಗಳ ಸ್ಥಾಪನೆ ಸೇರಿದಂತೆ ಹತ್ತು ಹಲವು ಯೋಜನೆಗಳು ದಶಕಗಳಿಂದ ಮಂಡ್ಯಕ್ಕೆ ಸಿಗದೆ ದೂರವೇ ಉಳಿದಿವೆ. ಆದ್ಯತೆಯ ಮೇಲೆ ಜಾರಿಗೆ ತರುವುದಕ್ಕೆ ಸರ್ಕಾರಗಳು ಮನಸ್ಸು ಮಾಡದಿರುವುದು ತೀರಾ ನೋವಿನ ಸಂಗತಿಯಾಗಿದೆ.ಬಜೆಟ್‌ನಲ್ಲಿ ರೈತರ ಬೇಡಿಕೆಗಳೇನು?ರಾಜ್ಯ ಬಜೆಟ್‌ನಲ್ಲಿ ಸಮಸ್ತ ಕರ್ನಾಟಕದ ನೀರಾವರಿ ಅಭಿವೃದ್ಧಿ, ಅಂತರ್ಜಲ ಅಭಿವೃದ್ಧಿ, ವಿದ್ಯುತ್ ಅಭಿವೃದ್ಧಿಗೆ ಶೇ.೩೦ರಷ್ಟು ಅನುದಾನ ಒದಗಿಸಬೇಕು. ಈ ಸಂಬಂಧ ೧ ಲಕ್ಷ ಕೋಟಿ ರು. ಹಣ ಘೋಷಿಸಬೇಕು. ಕಾವೇರಿ ನದಿ ನೀರು ನ್ಯಾಯಮಂಡಳಿ ಕರ್ನಾಟಕದ ಕಾವೇರಿ ಕಣಿವೆ ಪ್ರದೇಶದಲ್ಲಿ ನೀರಾವರಿ ಪ್ರದೇಶವನ್ನು ೧೧ ಲಕ್ಷ ಹೆಕ್ಟೇರ್‌ನಿಂದ ೧೮.೮ ಲಕ್ಷ ಹೆಕ್ಟೇರ್‌ಗೆ ಹೆಚ್ಚಿಸಿಕೊಳ್ಳಲು ಅನುಮತಿ ನೀಡಿದೆ. ಇನ್ನೂ ೭.೮ ಲಕ್ಷ ಹೆಕ್ಟೇರ್‌ಗೆ ನೀರಾವರಿ ಪ್ರದೇಶ ವಿಸ್ತರಣೆ. ಕರ್ನಾಟಕ ೨೮೪ ಟಿಎಂಸಿ ನೀರಿನಲ್ಲಿ ೧೭೪ ಟಿಎಂಸಿ ನೀರು ಮಾತ್ರ ಬಳಸುತ್ತಿದ್ದು, ಉಳಿದ ೧೧೦ ಟಿಎಂಸಿ ನೀರು ಉಪಯೋಗಕ್ಕೆ ಯೋಜನೆ ರೂಪಿಸಬೇಕು. ರೈತರ ಬೆಳೆಗಳನ್ನು ಬೆಂಬಲ ಬೆಲೆಯಲ್ಲಿ ಖರೀದಿ ಮಾಡಬೇಕಿದ್ದು, ಸರ್ಕಾರ ಶಾಶ್ವತ ಖರೀದಿ ಕೇಂದ್ರಗಳನ್ನು ತೆರೆಯಬೇಕು. ರೈತರ ಬೆಳೆಗಳಿಗೆ ಬೆಂಬಲ ಬೆಲೆ ನೀಡಲು ಆವರ್ತನಿಧಿ ಹೆಚ್ಚಿಸುವುದು. ಕಬ್ಬು ಬೆಳೆಗೆ ಎಫ್‌ಆರ್‌ಪಿ ಬೆಂಬಲ ಬೆಲೆ ಜೊತೆಗೆ ರಾಜ್ಯಸರ್ಕಾರ ಪ್ರೋತ್ಸಾಹಧನ ನೀಡಲು ಕ್ರಮ ವಹಿಸುವುದು. ವಿ.ಸಿ.ಫಾರಂನಲ್ಲಿ ಸಮಗ್ರ ಕೃಷಿ ವಿಶ್ವವಿದ್ಯಾಲಯ ಸ್ಥಾಪಿಸಲು ಕ್ರಮ. ಕೃಷಿ ಕಾಲೇಜಿನಲ್ಲಿರುವ ಜೈವಿಕ ಗೊಬ್ಬರಗಳ ಉತ್ಪಾದನಾ ಘಟಕದ ಬಲವರ್ಧನೆ, ಗುಣಮಟ್ಟ ನಿಯಂತ್ರಣ ಹಾಗೂ ಪ್ರಯೋಗಾಲಯ ಸ್ಥಾಪನೆಗೆ ಸರ್ಕಾರ ಬಜೆಟ್‌ನಲ್ಲಿ ಅವಕಾಶ ಮಾಡಿಕೊಡಬೇಕು ಎನ್ನುವುದು ರೈತರ ಆಗ್ರಹವಾಗಿದೆ.