ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅತ್ತ ಬಜೆಟ್ ಮಂಡನೆಗೆ ಸಿದ್ಧಾರಾಗಿರುವಂತೆಯೇ ಇತ್ತ ಕಲ್ಯಾಣದ ಹೆಬ್ಬಾಗಿಲು ಕಲಬುರಗಿ ಜಿಲ್ಲೆಯಲ್ಲಿ ಜನರ ನಿರೀಕ್ಷೆಗಳು ಗರಿ ಗೆದರಿ ನಿಂತಿವೆ.ಕಳೆದ ಬಾರಿ ಅಷ್ಟಕ್ಕಷ್ಟೇ ಕಲ್ಯಾಣ ಎಂಬಂತಾಗಿದ್ದ ಜಿಲ್ಲೆಯ ಪಾಲಿಗೆ ಈ ಬಜೆಟ್ಟಾದರೂ ಸಂಪೂರಣ ಕಲ್ಯಾಣವಾಗುವಂತೆ ಮಾಡುವುದೆ? ಎಂದು ಜನ ಇದಿರು ನೋಡುತ್ತಿದ್ದಾರೆ.
ಆಳುವವರು ಕಲಬುರಗಿ ಸೇರಿದಂತೆ ಕಲ್ಯಾಣ ಭಾಗದ ಜಿಲ್ಲೆಗಳನ್ನು ಕಡೆಗಣಿಸಿದ್ದರಿಂದಲೇ ಅವು ಹಿಂದುಳಿದ ಜಿಲ್ಲೆಗಳಾಗಿ ಇಂದಿಗೂ ಅನೇಕ ಸಮಸ್ಯೆಗಳ ಸುಳಿಯಲ್ಲಿ ನರಳುತ್ತಿರೋದು, ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ನಿರೀಕ್ಷಿಸುತ್ತ ಜಿಲ್ಲೆಯ ಜನ ನಿಜಾರ್ಥದಲ್ಲಿ ಕಲ್ಯಾಣವಾಗಲಿ ಎಂದು ಹಾರೈಸುತ್ತಿದ್ದಾರೆ.ಕಲಬುರಗಿ ತೊಗರಿ ಕಣಜ, ಇಲ್ಲಿರುವ 5 ಲಕ್ಷದಷ್ಟು ಹೆಕ್ಟೇರ್ ಭೂಭಾಗದಲ್ಲಿ ತೊಗರಿ ಬೇಸಾಯವಾಗುತ್ತದೆ. ಸಾವಿರಾರು ಟನ್ ತೊಗರಿ ಬೇಳೆ ಇಳುವರಿಯೂ ಇಲ್ಲಿದೆ. ಹೀಗಿದ್ದರೂ ತೊಗರಿ ತಳಿ ಅಭಿವೃದ್ಧಿ, ಹೊಸ ಸಂಶೋಧನೆ ಇತ್ಯಾದಿಗಳಿಗಾಗಿ ಸ್ಥಾಪನೆಯಾಗಿರುವ ತೊಗರಿ ಅಭಿವೃದ್ಧಿ ಮಂಡಳಿ ಹೋಗಿ ಬೇಳೆಕಾಳು ಅಭಿವೃದ್ಧಿ ಮಂಡಳಿಯಾದರೂ ಕೂಡಾ ಇಂದಿಗೂ ಉದ್ದೇಶ ಮಾತ್ರ ಈಡೇರಿಲ್ಲ.
ತೊಗರಿಗೆ ವಾರ್ಷಿಕ ನೆಟೆರೋಗ ಕಾಡುತ್ತ ಸಾವಿರಾರು ಎಕರೆ ಬಿತ್ತಲ್ಪಟ್ಟ ತೊಗರಿ ನಾಶವಾಗಿ ರೈತರು ಕಂಗಾಲಾಗುತ್ತಿದ್ದಾರೆ. ನೆಟೆರೋಗ ರೋಧಕ ಶಕ್ತಿ ಇರುವ ಹಾಗೂ ಹೆಚ್ಚಿನ ಇಳುವರಿಯ ತೊಗರಿ ತಳಿ ಅಭಿವೃದ್ಧಿ ಕೆಲಸಗಳಿಗೆ ಪ್ರೇರಣೆಯ ರೂಪದಲ್ಲಿ ಇಲ್ಲಿನ ಬೇಳೆಕಾಳು ಮಂಡಳಿಗೆ ಕಾಯಕಲ್ಪ ಈ ಬಜೆಟ್‌ನಲ್ಲಿ ಸಿಗಬೇಕೆಂದು ರೈತರು ಆಗ್ರಹಿಸುತ್ತಿದ್ದಾರೆ.ಇಲ್ಲಿನ ತೊಗರಿಗೆ ಭೌಗೋಳಿಕ ಸೂಚ್ಯಂಕ ದೊರಕಿದೆ. ಈ ತೊಗರಿ ಪ್ರಪಂಚದಲ್ಲೇ ಶ್ರೇಷ್ಠವಾಗಿರೋದರಿಂದಾಗಿ ಇಲ್ಲಿನ ತೊಗರಿಗೆ ಭೀಮಾ ಪಲ್ಸ್ ಎಂಬ ಹೆಸರಲ್ಲಿ ಮಾರುಕಟ್ಟೆ ಒದಗಿಸುವ ಕೆಲಸವಾಗಬೇಕು. ಅದಕ್ಕೂ ಬೇಳೆಕಾಳು ಮಂಡಳಿ ಬಲವರ್ಧನೆಯೇ ಮದ್ದೆಂಬುದು ಸರ್ವವಿದಿತ. ಹೀಗಾಗಿ ಬಜೆಟ್ ಬೇಳೆಕಾಳು ಮಡಲಿಗೆ ಬಲ ತುಂಬುವ ಕೆಲಸ ಮಾಡಬೇಕೆಂಬ ಆಗ್ರಹ ಕೇಳಿಬರುತ್ತಿದೆ.
ಇನ್ನು ಕಲ್ಯಾಣ ನಾಡಿನಲ್ಲಿ ಜಾರಿಯಲ್ಲಿರುವ ಕಲಂ 371 (ಜೆ) ಕಾಯ್ದೆ, ಕಾನೂನುಗಳು, ಮೀಸಲಾತಿ ಎಲ್ಲವೂ ಸುಸೂತ್ರವಾಗಿ, ಯಾವುದೇ ಅಡ್ಡಿ, ಆತಂಕಗಳಿಲ್ಲದಂತೆ ಜಾರಿಗೊಳ್ಳುವಂತಾಗಲು ಕಲ್ಯಾಣಕ್ಕೊಂದು ಪ್ರತ್ಯೇಕ ಸಚಿವಾಲಯ ಬೇಕೆಂಬಲ ಬೇಡಿಕೆ ಮತ್ತೆ ಗರಿಗೆದರಿದೆ.2019ರಲ್ಲಿ ಅಂದಿನ ಸಿಎಂ ಯಡಿಯೂರಪ್ಪ ಹೈದ್ರಾಬಾದ್ ಹೆಸರು ಹೊಡೆದೋಡಿಸಿ ಕಲ್ಯಾಣ ನಾಡೆಂದು ಈ ಭೂಭಾಗಕ್ಕೆ ಮರು ನಾಮಕರಣ ಮಾಡಿದಾಗಲೇ ಪ್ರತ್ಯೇಕ ಸಚಿವಾಲಯ ಮಾಡುವುದಾಗಿ ನೀಡಿದ್ದ ಭರವಸೆ 5 ವರ್ಷವಾದರೂ ಈಡೇರಿಲ್ಲ. ಈ ಸರ್ಕಾರವಾದರೂ ಇದನ್ನು ಈಡೇರಿಸುವುದೆ ಎಂದು ಜನ ಇದಿರು ನೋಡುತ್ತಿದ್ದಾರೆ.
ಪ್ರತ್ಯೇಕ ಸಚಿವಾಲಯವಾದಲ್ಲಿ ಕಲಂ 371 (ಜೆ) ಪ್ರಕಾರ ದೊರಕುವ ಸವಲತ್ತುಗಳ ಉಸ್ತುವಾರಿ, ಉದ್ಯೋಗ, ವೃತ್ತಿ ಶಿಕ್ಷಣ, ಅಭಿವೃದ್ಧಿ ಅನುದಾನಲ್ಲಿ ಅನ್ವಯವಾಗಬೇಕಿರುವ ನಿಯಮಾವಳಿಗಳನ್ನೆಲ್ಲ ನಿರೂಪಿಸುವ, ಅನುಷ್ಠಾನಕ್ಕೆ ತರೋದು ಸುಲಭವಾಗಲಿದೆ.ಕಳೆದ ಬಜೆಟ್‌ನಲ್ಲಿನ ಘೋಷಣೆಯಂತೆ 5 ಸಾವಿರ ಕೋಟ ರುಪಾಯಿ ಅನುದಾನ ಇಲ್ಲಿನ ಕೆಕೆಆರ್‌ಡಿಬಿಗೆ ಬರಲೇ ಇಲ್ಲ. ಬಂದಿದ್ದು 3 ಸಾವಿರ ಕೋಟಿ ರುಪಾಯಿ ಮಾತ್ರ. ಆದಾಗ್ಯೂ ಈ ಬಾರಿಯಾದರೂ ಬಜೆಟ್‌ನಲ್ಲಿ 5 ಸಾವಿರ ಕೋಟಿ ಘೋಷಿಸಿ ಅದೆಲ್ಲವನ್ನೂ ಬಿಡುಗಡೆ ಮಾಡಲು ಸರ್ಕಾರ ಮುಂದಾಗಬೇಕೆಂಬ ಆಗ್ರಹ, ನಿರೀಕ್ಷೆಗಳು ಜನಮನದಲ್ಲಿವೆ.
ಇದಲ್ಲದೆ ಇಲ್ಲಿನ ವೈದ್ಯಕೀಯ ಸವಲತ್ತುಗಳಿಗೆ ಹೊಸರೂಪ ದೊರಕಿಸಿಕೊಡುವ ಕೆಲಸ, ಕೌಶಲ್ಯ ಕೇಂದ್ರ, ಕೌಶಲ್ಯ ತರಬೇತಿಯಲ್ಲಿ ಈ ಜಿಲ್ಲೆಗೆ ಆದ್ಯತೆ ದೊರಕುವಂತಾಗಲಿ ಎಂಬ ಮಾತುಗಳಿವೆ. ಕೌಶಲ್ಯ ವಿವಿ ಕಲಬುರಗಿಯಲ್ಲೇ ಶುರುವಾಗಲಿ ಎಂದೂ ಆಗ್ರಹಿಸಲಾಗುತ್ತಿದೆ.ರೋಗ ಪೀಡಿತ ತೊಗರಿ ಉದ್ದಿಮೆಗೆ ಪ್ರೋತ್ಸಾಹ ದೊರಕಿಸುವ ದಿಶೆಯಲ್ಲಿ ವಿಶೇಷ ಪ್ಯಾಕೇಜ್ ಘೋಷಣೆ, ಇಲ್ಲಿನ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ, ಕೆರೆ ತುಂಬವ ಯೋಜನೆಗೆ ಕಾಯಕಲ್ಪ ದೊರಕಲಿ ಎಂಬ ನಿರೀಕ್ಷೆಗಳೂ ಜನರಲ್ಲಿವೆ.
ಉದ್ಯಮಗಳಿಲ್ಲಿ ಯಥೇಚ್ಚವಾಗಿ ಬರುವಂತಾಗಲಿ, ಅದಕ್ಕೆ ಸಂಬಂಧಿಸಿದಂತೆ ವಸಾಹತುಗಳು ನಿರ್ಮಾಣ ಯೋಜನೆ ಕಲಬುರಗಿಗೆ ಲಭ್ಯವಾಗಲಿ, ಪ್ರವಾಸೋದ್ಯಮ ಬರಗೆಟ್ಟಿರುವ ಜಿಲ್ಲೆಯಲ್ಲಿ ಅದು ಹಸಿರು ಚಿಗುರುವಂತಾಗಲು ಬಜೆಟ್‌ನಲ್ಲಿ ಯೋಜನೆಗಳು ಘೋಷಣೆಯಾಗಲಿ ಎಂದೂ ಜನರು ಆಗ್ರಹಿಸುತ್ತಿದ್ದಾರೆ.ಜಿಲ್ಲೆಯಲ್ಲಿರುವ ಹೊಸ ತಾಲೂಕಗಳಿಗೆ ಆಡಳಿತ ಭವನಗಳೇ ಇಲ್ಲ. ಈ ಕೊರತೆ ಬಜೆಟ್ ನೀಗಿಸಲಿ, ರಸ್ತೆ, ಮೂಲ ಸವಲತ್ತು ಸುಧಾರಣೆಗೂ ಜಿಲ್ಲೆಗೆ ಬಜೆಟ್ ಆದ್ಯತೆ ಕೊಡಲಿ ಎಂದೂ ಜನ ಆಗ್ರಹಿಸುತ್ತಿದ್ದಾರೆ.