ಸಾರಾಂಶ
೧೨ನೇ ಶತಮಾನದಲ್ಲಿ ಜರುಗಿದ ಶರಣರ ವಚನಗಳ ಕ್ರಾಂತಿಯಲ್ಲಿ ತುಂಬಾ ವೈಜ್ಞಾನಿಕವಾಗಿ ವಚನಗಳನ್ನು ಹೇಳಿರುವ ನಿಜಶರಣ ಅಂಬಿಗರ ಚೌಡಯ್ಯನ ವಚನಗಳು ಸಮಾಜಕ್ಕೆ ಅತ್ಯವಶ್ಯಕವಾಗಿವೆ.
ಕನ್ನಡಪ್ರಭ ವಾರ್ತೆ ಚಿತ್ತಾಪುರ
ಸಾಮಾಜಿಕ ಅಸಮಾನತೆಯ ವಿರುದ್ಧ ೧೨ನೇ ಶತಮಾನದಲ್ಲಿ ಜರುಗಿದ ಶರಣರ ವಚನಗಳ ಕ್ರಾಂತಿಯಲ್ಲಿ ತುಂಬಾ ವೈಜ್ಞಾನಿಕವಾಗಿ ವಚನಗಳನ್ನು ಹೇಳಿರುವ ನಿಜಶರಣ ಅಂಬಿಗರ ಚೌಡಯ್ಯನ ವಚನಗಳು ಸಮಾಜಕ್ಕೆ ಅತ್ಯವಶ್ಯಕವಾಗಿವೆ. ಅವುಗಳನ್ನು ಪ್ರತಿಯೊಬ್ಬರೂ ಅಧ್ಯಯನ ಮಾಡಿ ಜೀವನದಲ್ಲಿ ಅಳವಡಿಕೊಳ್ಳಬೇಕು ಎಂದು ತೊನಸನಹಳ್ಳಿ ಅಲ್ಲಮಪ್ರಭು ಸಂಸ್ಥಾನಮಠದ ಪೀಠಾಧಿಪತಿ ಮಲ್ಲಣಪ್ಪ ಸ್ವಾಮೀಜಿ ಹೇಳಿದರು.ದಂಡೋತಿ ಗ್ರಾಮದಲ್ಲಿ ಕೋಲಿ ಸಮಾಜದಿಂದ ಹಮ್ಮಿಕೊಂಡಿದ್ದ ನಿಜಶರಣ ಅಂಬಿಗರ ಚೌಡಯ್ಯನವರ ೯೦೪ನೇ ಜಯಂತಿ ಸಮರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಚೌಡಯ್ಯನ ನಿಷ್ಠುರತೆ, ನೇರ ಮಾತು, ನಿರ್ಭೀತಿ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು. ಅವರ ವಚನಗಳು ಸಾಮಾಜಿಕ ಅಸಮಾನತೆ, ಮೂಢನಂಬಿಕೆ, ಕಂದಾಚಾರ ತೊಲಗಿಸಲು ಮದ್ದಿನಂತಿವೆ ಎಂದು ಅವರು ಹೇಳಿದರು.
ಭೀಮಣ್ಣ ಸಾಲಿ ಮಾತನಾಡಿ, ಎಷ್ಟೇ ಕಷ್ಟವಿದ್ದರೂ ಮಕ್ಕಳಿಗೆ ಶಿಕ್ಷಣ ಕೊಡಿಸುವುದು ಯರೂ ಮರೆಯಬಾರದು. ಶಿಕ್ಷಣದಿಂದ ಮಾತ್ರ ಸಮಾಜದ ಬದಲಾವಣೆ ಸಾಧ್ಯವಿದೆ. ಚೌಡಯ್ಯನ ಬಂಡಾಯದ ಹೋರಾಟ, ಅಂಬೇಡ್ಕರ್ ಅವರ ಹೋರಾಟವನ್ನು ಅರಿತುಕೊಂಡು ಸಮಾಜದ ಸಂಘಟನೆ ಮಾಡುವುದು ಅತ್ಯಗತ್ಯವಾಗಿದೆ ಎಂದು ಅವರು ಹೇಳಿದರು.ಅವ್ವಣ್ಣಾ ಮ್ಯಾಕೇರಿ ಮಾತನಾಡಿ, ಶರಣರು ಎಷ್ಟೇ ಎಚ್ಚರಿಸಿದರೂ ಜನರು ಮೂಢ ನಂಬಿಕೆಯಲ್ಲಿಯೆ ಇದ್ದಾರೆ. ಜ್ವರ ಬಂದರೆ ಒಲೆಯಲ್ಲಿನ ಬೂದಿ ಹಣೆಗೆ ಬಳಿದುಕೊಂಡು ದೇವರಿಗೆ ಹರಕೆ ಹೊರುತ್ತಾರೆ. ಹರಕೆ ತೀರಿಸಲು ಲಕ್ಷಾಂತರ ಹಣ ಖರ್ಚು ಮಾಡುತ್ತಾರೆ. ಆಸ್ಪತ್ರೆಗೆ ಹೋದರೆ ಕಡಿಮೆ ಖರ್ಚಿನಲ್ಲಿ ಜ್ವರ ವಾಸಿಯಾಗುತ್ತದೆ. ಅನಾರೋಗ್ಯ ಉಂಟಾದರೆ ದೇವರಿಗೆ ಹರಕೆ ಹೊರುವವುದು ಬಿಡಬೇಕು ಎಂದು ಅವರು ಹೇಳಿದರು.
ಗ್ರಾಪಂ ಅಧ್ಯಕ್ಷೆ ಶಿವಲೀಲಾ ಪಾಳೇದಕರ್, ಹಣಮಂತ ಸಂಕನೂರು, ಮುಖಂಡರಾದ ಮುನಿಯಪ್ಪ ಕೊಳ್ಳಿ, ಡಾ.ದಾವೂರ್ ಪಟೇಲ್, ಭೀಮಣ್ಣ ಹೋತಿನಮಡಿ, ಬಸವರಾಜ ವಾರದ, ರಾಚಯ್ಯ ಸ್ವಾಮಿ ಮಠಪತಿ, ರಶೀದ್ ಪಠಾಣ್, ನಿಂಗಣ್ಣ ಹೆಗಲೇರಿ, ಸುರೇಶ ಬೆನಕನಳ್ಳಿ, ಗುಂಡು ಐನಾಪುರ, ಮಲ್ಲಿಕಾರ್ಜುನ ಸಂಗಾವಿ, ತಮ್ಮಣ್ಣ ಡಿಗ್ಗಿ, ದಶರಥ ದೊಡ್ಡಮನಿ, ಬಸವರಾಜ ಹೊಸಳ್ಳಿ ಗುಂಡಗುರ್ತಿ ಅನೇಕರು ಇದ್ದರು.