ನಾಳೆ ಚಿತ್ರದುರ್ಗದಲ್ಲಿ ಶೋಷಿತರ ಜಾಗೃತಿಗಾಗಿ ರಾಜ್ಯ ಸಮಾವೇಶ

| Published : Jan 27 2024, 01:19 AM IST

ಸಾರಾಂಶ

ಜ.28ರಂದು ಚಿತ್ರದುರ್ಗದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಅಹಿಂದ ಸಮಾಜದ ಅಧ್ಯಕ್ಷ ಎಚ್.ಎನ್. ಮಂಜುನಾಥ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ರಾಜ್ಯ ಶೋಷಿತ ಸಮುದಾಯಗಳ ಒಕ್ಕೂಟ, ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಇವ ಸಂಯುಕ್ತಾಶ್ರಯದಲ್ಲಿ ಸಂವಿಧಾನ, ಸಾಮಾಜಿಕ ನ್ಯಾಯ, ಸಹಬಾಳ್ವೆ ಮತ್ತು ಸ್ವಾಭಿಮಾನದ ಸಂರಕ್ಷಣೆಗಾಗಿ ಶೋಷಿತರ ಜಾಗೃತಿಗಾಗಿ ರಾಜ್ಯ ಸಮಾವೇಶವನ್ನು ಜ.28ರಂದು ಚಿತ್ರದುರ್ಗದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಅಹಿಂದ ಸಮಾಜದ ಅಧ್ಯಕ್ಷ ಎಚ್.ಎನ್. ಮಂಜುನಾಥ್ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಈ ಸಮಾವೇಶ ನಡೆಸಲಾಗುತ್ತಿದ್ದು, ಶೋಷಿತ ಸಮುದಾಯಗಳು ತಮ್ಮ ಹಕ್ಕು ಮತ್ತು ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕಾದರೆ ಹೋರಾಟವೇ ಅಸ್ತ್ರವಾಗಿದೆ. ಹಲವಾರು ವರ್ಷಗಳಿಂದಲೂ ಎಚ್. ಕಾಂತರಾಜು ವರದಿಯನ್ನು ಜಾರಿಗೆ ತರಬೇಕೆಂದು ಆಗ್ರಹಿಸುತ್ತಲೇ ಬರುತ್ತಿದ್ದು ಆದರೆ ಮೇಲ್ವರ್ಗದ ಸಮುದಾಯಗಳು ಇದನ್ನು ತಡೆಯಿಡಿಯುತ್ತಿದ್ದಾರೆ. ಬ್ರಾಹ್ಮಣ ಶಾಹಿಯ ಕುತಂತ್ರದಿಂದಾಗಿ ದೇಶದ ಸಂಪತ್ತು ಸಮಾನವಾಗಿ ಹಂಚಿಕೆಯಾಗದೆ ತಳ ಸಮುದಾಯಗಳ ಸಾವಿರಾರು ವರ್ಷಗಳಿಂದ ಸಂಕಷ್ಟವನ್ನು ಅನುಭವಿಸುವಂತಾಗಿದೆ. ಆದ್ದರಿಂದ ಅಹಿಂದ, ಹಿಂದುಳಿದ ಜಾತಿಗಳು, ಶೋಷಿತ ಸಮುದಾಯಗಳು ಒಗ್ಗೂಡಿ ಸಮಾವೇಶವನ್ನು ಹಮ್ಮಿಕೊಂಡಿದ್ದು ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಕುರುಬ ಸಮಾಜದ ತಾಲೂಕು ಅಧ್ಯಕ್ಷ ಚಂದ್ರೇಗೌಡ ಮಾತನಾಡಿ, ಪರಿಶಿಷ್ಟ ಜಾತಿ, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು, ದಲಿತರು, ಅದಿವಾಸಿಗಳು ಸಮಾಜದ ಮುಖ್ಯವಾಹಿನಿಗೆ ತರಬೇಕಿದೆ. ಆದ್ದರಿಂದ ಎಚ್. ಕಾಂತರಾಜು ವರದಿಯನ್ನು ಜಾರಿಗೊಳಿಸುವಂತೆ ಒಕ್ಕೊರಲಿನಿಂದ ಮುಖ್ಯಮಂತ್ರಿಗಳಲ್ಲಿ ಒತ್ತಾಯಿಸುತ್ತಿದ್ದೇವೆ. ನಮ್ಮ ಬೇಡಿಕೆಯನ್ನು ಈಗಲಾದರೂ ಈಡೇರಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು. ಸಮಾವೇಶಲ್ಲಿ ಸುಮಾರು 10-15 ಲಕ್ಷ ಜನರು ಸೇರುವ ನಿರೀಕ್ಷೆಯಿದೆ ಎಂದರು.

ಪೂರ್ವಬಾವಿ ಸಭೆಯಲ್ಲಿ ಮುಖಂಡ ಹೊನ್ನವಳ್ಳಿ ಎ.ಆರ್‌. ನಂಜಪ್ಪ, ಅಹಿಂದ ಸಮಾಜದ ಜಿಲ್ಲಾಧ್ಯಕ್ಷ ಲಿಂಗರಾಜು, ಜಿಲ್ಲಾ ಕಾರ್ಯದರ್ಶಿ ವಿರುಪಾಕ್ಷಯ್ಯ, ಪ್ರಧಾನ ಕಾರ್ಯದರ್ಶಿ ಹರೀಶ್, ಮುಖಂಡರಾದ ವೆಂಕಟೇಶ್, ಮೋಹನ್‌ ರಾಜ್, ಕೆಂಪಾಚಾರ್, ಶ್ರೀನಿವಾಸಮೂರ್ತಿ, ರಘು ಕಾಂತರಾಜು ಮತ್ತಿತರರಿದ್ದರು.