ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಅ.26 ಹಾಗೂ 27 ರಂದು ಮೈಸೂರಿನಲ್ಲಿ ಎಐಯುಟಿಯುಸಿ ಸಂಘಟನೆಯಿಂದ 4ನೇ ರಾಜ್ಯಮಟ್ಟದ ಕಾರ್ಮಿಕ ಸಮ್ಮೇಳನ ನಡೆಯಲಿದ್ದು, ಎಲ್ಲ ಕಾರ್ಮಿಕರು ಭಾಗವಹಿಸಿ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕು ಎಂದು ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ವಿರೇಶ.ಎನ್.ಎಸ್. ಹೇಳಿದರು.ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಮ್ಮೇಳನದ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳಿಂದ ದುಡಿಯುವ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಸ್ವಾತಂತ್ರ್ಯಾನಂತರ ಇಲ್ಲಿಯವರೆಗಿನ ಸರ್ಕಾರಗಳು ಹಣದುಬ್ಬರಕ್ಕೆ ಕಾರಣವಾಗಿವೆ. ಸರ್ಕಾರಗಳ ನೀತಿಗಳು ಆಳುವ ಜನರ ಪರವಾಗಿದ್ದು, ದುಡಿಯುವ ಜನರ ವಿರೋಧಿಗಳಾಗಿವೆ. ಎಲ್ಲವನ್ನೂ ಖಾಸಗೀಕರಣ ಮಾಡುತ್ತಿದ್ದಾರೆ. ಶೇ.50 ರಷ್ಟು ಜನರು ಕೇವಲ 5 ಪರ್ಸೆಂಟ್ ಆಸ್ತಿ ಹೊಂದಿದ್ದಾರೆ. ಸರ್ಕಾರಿ ವ್ಯವಸ್ಥೆಯಲ್ಲಿ ಖಾಯಂ ಹುದ್ದೆಗಳು ಹೋಗಿ ಶೇ.50ರಷ್ಟು ಗುತ್ತಿಗೆ ಕಾರ್ಮಿಕರ ಮೇಲೆ ಕಡಿಮೆ ವೆಚ್ಚದಲ್ಲಿ ದುಡಿಸಿಕೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಅ.26ರಂದು ನಡೆಯಲಿರುವ ಸಮ್ಮೇಳನದ ಉದ್ಘಾಟನೆಯನ್ನು ಎಐಯುಟಿಯುಸಿ ಅಖಿಲ ಭಾರತ ಅಧ್ಯಕ್ಷರಾದ ಕೆ.ರಾಧಾಕೃಷ್ಣ ನೆರವೇರಿಸಲಿದ್ದಾರೆ. ಪ್ರಧಾನ ಕಾರ್ಯದರ್ಶಿ ಶಂಕರದಾಸ್ ಹಾಗೂ ರಾಜ್ಯಾಧ್ಯಕ್ಷ ಕೆ.ಸೋಮಶೇಖರ್ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ ಎಂದರು.ಈ ಬಹಿರಂಗ ಅಧಿವೇಷನದಲ್ಲಿ 600ಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸಿ, ಚರ್ಚಿಸಿ ಮುಂದಿನ ದಿನಗಳಲ್ಲಿ ಕಾರ್ಮಿಕರ ಬೇಡಿಕೆಯನ್ನು ಸರ್ಕಾರಗಳಿಗೆ ತಲುಪಿಸಲಿದ್ದೇವೆ ಎಂದರು.
ರಾಜ್ಯ ಸಮ್ಮೇಳನದ ಬಳಿಕ ಡಿಸೆಂಬರ್ 15,16 ಹಾಗೂ 17 ರಂದು ಭುವನೇಶ್ವರದಲ್ಲಿ ಅಖಿಲ ಭಾರತ ಕಾರ್ಮಿಕ ಸಮ್ಮೇಳನ ನಡೆಯಲಿದೆ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ್.ಎಚ್.ಟಿ, ಸಂಘಟಕರಾದ ಮಹಾದೇವಿ ಧರ್ಮಶೆಟ್ಟಿ, ಭಾರತಿ ದೇವಕತೆ, ಭಾರತಿ ಒಳಸಂಕ, ಲೈಲಾ ಪಠಾಣ, ಭರತಕುಮಾರ.ಎಚ್.ಟಿ, ಗೌರಮ್ಮ ಬಾಗೇವಾಡಿ ಉಪಸ್ಥಿತರಿದ್ದರು.