ಸಾರಾಂಶ
ಬಳ್ಳಾರಿ: ಆಶಾ ಕಾರ್ಯಕರ್ತೆಯರನ್ನು ಸಂಘಟಿಸಿ ಅವರ ಹಕ್ಕುಗಳನ್ನು ರಕ್ಷಿಸಿಕೊಳ್ಳುವ ಉದ್ದೇಶದಿಂದ ಸೆ. 13 ಮತ್ತು 14ರಂದು ಕಲಬುರಗಿಯಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿಂದ (ಎಐಯುಟಿಯುಸಿ ಸಂಯೋಜಿತ) ರಾಜ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ರಾಜ್ಯ ಕಾರ್ಯದರ್ಶಿ ಡಿ. ನಾಗಲಕ್ಷ್ಮೀ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಮ್ಮೇಳನದಲ್ಲಿ ರಾಜ್ಯದ 31 ಜಿಲ್ಲೆಗಳಿಂದ ಆಶಾ ಪ್ರತಿನಿಧಿಗಳು ಭಾಗವಹಿಸುತ್ತಾರೆ. ಬಹಿರಂಗ ಅಧಿವೇಶನಕ್ಕೆ ಸುಮಾರು 6 ಸಾವಿರಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು ಹಾಗೂ ಪ್ರತಿನಿಧಿ ಅಧಿವೇಶನಕ್ಕೆ 600 ಆಶಾ ಕಾರ್ಯಕರ್ತೆಯರು ಸಮ್ಮೇಳನದಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.ಆಶಾ ಕಾರ್ಯಕರ್ತೆಯರು ಆರೋಗ್ಯ ಇಲಾಖೆಯ ತಾಯಿಬೇರುಗಳಂತೆ ಕಾರ್ಯನಿರ್ವಹಿಸಿ ಜನಮನ್ನಣೆ ಗಳಿಸಿಕೊಂಡಿದ್ದಾರೆ. ಆಶಾಗಳ ಶ್ರಮದಿಂದ ರೋಗಗ್ರಸ್ತ ಇಲಾಖೆಯಂತಿದ್ದ ಆರೋಗ್ಯ ಇಲಾಖೆಗೂ ಮರು ಜೀವ ಬಂದಂತಾಗಿದೆ. ಆದರೆ, ಆಶಾಗಳ ಸ್ಥಿತಿ ಮಾತ್ರ ಶೋಚನೀಯವಾಗಿದೆ. ನಿರಂತರ ಹೋರಾಟದ ಪರಿಣಾಮವಾಗಿ ಕೇಂದ್ರ ಸರ್ಕಾರದ ಪ್ರೋತ್ಸಾಹ ಧನಕ್ಕೆ ಸರಿ ಸಮಾನವಾಗಿ ರಾಜ್ಯ ಸರ್ಕಾರ ಮ್ಯಾಚಿಂಗ್ ಗ್ರ‍್ಯಾಂಟ್ ನೀಡಲು ಒಪ್ಪಿಗೆ ಸೂಚಿಸಿತು. ಬಳಿಕ ನಿಶ್ಚಿತ ವೇತನಕ್ಕಾಗಿ ನಡೆದ ಹೋರಾಟಕ್ಕೆ ಮಣಿದ ರಾಜ್ಯ ಸರ್ಕಾರ ನಿಶ್ಚಿತ ವೇತನವನ್ನು ಜಾರಿಗೊಳಿಸಿತು. ಆದರೆ, ರಾಜ್ಯದಲ್ಲಿ ಕೇಂದ್ರದ ಪ್ರೋತ್ಸಾಹ ಧನ ನೀಡಲು ಕೇಂದ್ರದ ಆರ್‌ಸಿಎಚ್ ಪೋರ್ಟಲ್‌ಗೆ ಲಿಂಕ್ ಮಾಡಿ ಆಶಾ ನಿಧಿ ಎಂಬ ಸಾಫ್ಟ್‌ವೇರ್‌ಗೆ ಅಳವಡಿಸಿ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಈ ಕಾರಣದಿಂದಾಗಿ ವಿವಿಧ ರೀತಿಯ ಸಮಸ್ಯೆಗಳು ಸೃಷ್ಟಿಯಾಗಿದ್ದು ಕಳೆದ 8-9 ವರ್ಷಗಳಿಂದ ಕಾರ್ಯಕರ್ತೆಯರಿಗೆ ಆರ್ಥಿಕ ನಷ್ಟವನ್ನು ಅನುಭವಿಸುತ್ತಿದ್ದಾರೆ. ಸರಕಾರದ ಇಲಾಖೆಯಲ್ಲಿ ಕೆಲಸ ಮಾಡುತ್ತಾ ಅತ್ಯಲ್ಪ ಗೌರವಧನಕ್ಕೆ ದುಡಿಯುತ್ತಿರುವ ಆಶಾ ಕಾರ್ಯಕರ್ತೆಯರ ಬಗ್ಗೆ ಇಲಾಖೆಯು ಅತ್ಯಂತ ನಿರ್ಲಕ್ಷ್ಯ ಧೋರಣೆಯನ್ನು ಹೊಂದಿದೆ ಎಂದು ದೂರಿದರು.
ಆಶಾ ಕಾರ್ಯಕರ್ತೆಯರು ಆರೋಗ್ಯ ಇಲಾಖೆಯಂತಹ ಸರಕಾರಿ ಇಲಾಖೆಯಡಿ ಕೆಲಸ ಮಾಡುತ್ತಿದ್ದರೂ ಸರಕಾರಿ ನೌಕರರು ಎಂದು ಪರಿಗಣಿಸಲಾಗಿಲ್ಲ. ಕನಿಷ್ಠ ವೇತನ ನಿಗದಿಯಾಗಿಲ್ಲ. ಜೀವನಯೋಗ್ಯ ವೇತನ ನೀಡಿ ಗೌರವಯುತವಾಗಿ ಬದುಕುವಂತೆ ಏರ್ಪಾಡು ಮಾಡುವ ಇಚ್ಚಾಶಕ್ತಿ ಸರ್ಕಾರಕ್ಕಿಲ್ಲ. ಆರೋಗ್ಯ ಇಲಾಖೆ ಇನ್ನಾದರೂ ಆರ್‌ಸಿಎಚ್ ಪೋರ್ಟಲ್‌ಗೆ ಲಿಂಕ್ ಮಾಡಿ ಕಾಂಪೊನೆಂಟ್ ಮಾದರಿಯಲ್ಲಿ ಪ್ರೋತ್ಸಾಹ ಧನ ನೀಡುವ ಮಾದರಿಯನ್ನು ತಕ್ಷಣವೇ ನಿಲ್ಲಿಸಬೇಕು. ಆಶಾಗಳನ್ನು ಸರಕಾರಿ ನೌಕರರೆಂದು ಪರಿಗಣಿಸಬೇಕು. ಅಲ್ಲಿಯವರೆಗೆ ಐಎಲ್‌ಒ ಶಿಫಾರಸಿನಂತೆ ಕಾರ್ಮಿಕರೆಂದು ಪರಿಗಣಿಸಿ ಕನಿಷ್ಠ ವೇತನ ಜೊತೆಗೆ ವಿವಿಧ ಕಾರ್ಮಿಕರ ಸೌಲಭ್ಯಗಳನ್ನು ಖಾತ್ರಿ ಪಡಿಸಬೇಕು. ₹15 ಸಾವಿರ ವೇತನ ನಿಗದಿಗೊಳಿಸಬೇಕು ಎಂಬುದು ಸೇರಿದಂತೆ ಅನೇಕ ಬೇಡಿಕೆಗಳ ಈಡೇರಿಕೆಗೆ ಮತ್ತಷ್ಟು ಬಲಿಷ್ಠ ಹೋರಾಟ ಕಟ್ಟುವ ಕುರಿತು ಸಮ್ಮೇಳನದಲ್ಲಿ ಚರ್ಚೆಯಾಗಲಿದೆ ಎಂದು ವಿವರಿಸಿದರು.ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಬಳ್ಳಾರಿ ಜಿಲ್ಲಾ ಗೌರವಾಧ್ಯಕ್ಷೆ ಎ. ಶಾಂತಾ, ಜಿಲ್ಲಾಧ್ಯಕ್ಷೆ ಎಂ. ಗೀತಾ, ಜಿಲ್ಲಾ ಜಂಟಿ ಕಾರ್ಯದರ್ಶಿ ಯಶೋಧಾ, ಬಳ್ಳಾರಿ ನಗರ ಘಟಕ ಅಧ್ಯಕ್ಷೆ ರೇಷ್ಮಾ ಸುದ್ದಿಗೋಷ್ಠಿಯಲ್ಲಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))