ಬರಗಾಲಕ್ಕೆ ತುತ್ತಾಗಿರುವ ರಾಜ್ಯದ ರೈತರ ಕಣ್ಣೀರು ಒರೆಸಲು ಕಾಂಗ್ರೆಸ್ ಸರ್ಕಾರದಿಂದ ಆಗುತ್ತಿಲ್ಲ ಎಂದು ಟೀಕಿಸಿದರಲ್ಲದೆ, ಬಿಡದಿ ಟೌನ್ ಶಿಪ್ ವಿರೋಧಿಸಿ ಬೆಂಗಳೂರಿನಿಂದ ಬಿಡದಿವರೆಗೂ ಬಿಜೆಪಿಯಿಂದ ಪಾದಯಾತ್ರೆ ಮಾಡಲಾಗುತ್ತದೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ವಿಜಯೇಂದ್ರ ರಾಜ್ಯಾದ್ಯಂತ ಬರಗಾಲ ನಿವಾರಣೆ ಮಾಡಲು ಪ್ರವಾಸ ಮಾಡುತ್ತಿದ್ದು, ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದರು.
ಕನ್ನಡಪ್ರಭ ವಾರ್ತೆ ಮುಳಬಾಗಿಲು
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ತಮ್ಮ ಪುತ್ರಿಯೊಂದಿಗೆ ತಾಲೂಕಿನ ಪುರಾಣ ಪ್ರಸಿದ್ಧ ಕುರುಡುಮಲೆ ಶ್ರೀ ಲಕ್ಷ್ಮೀ- ಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ವಿನಾಯಕನ ದರ್ಶನ ಭಾಗ್ಯ ಪಡೆದುಕೊಂಡರು.ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಬರಗಾಲ ತಾಂಡವವಾಡುತ್ತಿದೆ, ಸರಿಯಾದ ಮಳೆ ಬಿದ್ದಿಲ್ಲ, ಇದರಿಂದ ರೈತಾಪಿ ವರ್ಗ ಸಂಕಷ್ಟದಲ್ಲಿದ್ದಾರೆ, ಬರಗಾಲದಿಂದ ಜನತೆ ಪರಿತಪಿಸುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರಲ್ಲದೆ, ಬರಗಾಲ ನಿವಾರಣೆ ಮಾಡುವಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿದರು.
ಬರಗಾಲಕ್ಕೆ ತುತ್ತಾಗಿರುವ ರಾಜ್ಯದ ರೈತರ ಕಣ್ಣೀರು ಒರೆಸಲು ಕಾಂಗ್ರೆಸ್ ಸರ್ಕಾರದಿಂದ ಆಗುತ್ತಿಲ್ಲ ಎಂದು ಟೀಕಿಸಿದರಲ್ಲದೆ, ಬಿಡದಿ ಟೌನ್ ಶಿಪ್ ವಿರೋಧಿಸಿ ಬೆಂಗಳೂರಿನಿಂದ ಬಿಡದಿವರೆಗೂ ಬಿಜೆಪಿಯಿಂದ ಪಾದಯಾತ್ರೆ ಮಾಡಲಾಗುತ್ತದೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ವಿಜಯೇಂದ್ರ ರಾಜ್ಯಾದ್ಯಂತ ಬರಗಾಲ ನಿವಾರಣೆ ಮಾಡಲು ಪ್ರವಾಸ ಮಾಡುತ್ತಿದ್ದು, ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದರು.ರಾಜ್ಯ ಕಾಂಗ್ರೆಸ್ ಆಡಳಿತಕ್ಕೆ ಜನ ಬೇಸತ್ತಿದ್ದು ಬದಲಾವಣೆ ಬಯಸುತ್ತಿದ್ದಾರೆ ಎಂದು ಪ್ರಶ್ನೆ ಒಂದಕ್ಕೆ ಉತ್ತರಿಸಿದ ಅವರು, ರಾಜ್ಯದಲ್ಲಿ ಸಕಾಲಕ್ಕೆ ಮಳೆ ಬಂದು ಸಂಕಷ್ಟದಲ್ಲಿರುವ ರೈತರಿಗೆ ಆ ದೇವರು ಅನುಕೂಲ ಮಾಡಲಿ ಎಂದು ವಿನಾಯಕ ದೇವರಲ್ಲಿ, ಪ್ರಾರ್ಥನೆ ಮಾಡಿದ್ದೇನೆ ಎಂದು ತಿಳಿಸಿದರು.
ಮುಳಬಾಗಿಲಿನ ಸುಂಕು ಬಡಾವಣೆಯ ಬಿಜೆಪಿ ತಾಲೂಕು ಉಪಾಧ್ಯಕ್ಷ ಪ್ರಕಾಶ್ ರೆಡ್ಡಿ ನಿವಾಸದಲ್ಲಿ ಮುಳಬಾಗಿಲು ದೋಸೆ, ಇಡ್ಲಿ ಮತ್ತು ಚಿತ್ರಾನ್ನ ಸವಿದು ತುಂಬಾ ರುಚಿಕರವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಮಾಜಿ ಶಾಸಕರಾದ ಬಿ.ಪಿ.ವೆಂಕಟಮುನಿಯಪ್ಪ, ವೈ.ಸಂಪಂಗಿ, ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ, ಶೈಲಜಾ ಮುನಿಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ಪಿ.ಎಂ.ಕೃಷ್ಣಮೂರ್ತಿ, ತಾಲೂಕು ಉಪಾಧ್ಯಕ್ಷ ಪ್ರಕಾಶ್ ರೆಡ್ಡಿ, ಬಿಜೆಪಿ ಓಬಿಸಿ ಜಿಲ್ಲಾಧ್ಯಕ್ಷ ಬಾಲಾಜಿ, ಗ್ರಾಮಾಂತರ ಅಧ್ಯಕ್ಷ ಸುರೇಶ್ ರಾಜು, ತಾಲೂಕು ಪ್ರಧಾನ ಕಾರ್ಯದರ್ಶಿಗಳಾದ ಮಲ್ಲೆಕೊಪ್ಪ, ಸೋಮಶೇಖರ್ ಮಂಜುನಾಥ್, ಯುವ ಮೋರ್ಚಾ ಉಪಾಧ್ಯಕ್ಷ ಗರಡಿ ಕಿರಣ್ ಕುಮಾರ್ ಇದ್ದರು.