ಸಾರಾಂಶ
ಕನ್ನಡಪ್ರಭ ವಾರ್ತೆ ಸುಬ್ರಹ್ಮಣ್ಯ
ರಾಜ್ಯದ ಕಾಂಗ್ರೆಸ್ ಸರ್ಕಾರ ಜನಹಿತವನ್ನು ಸಂಪೂರ್ಣ ಮರೆತು ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಸ್ಥಗಿತವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆರೋಪಿಸಿದ್ದಾರೆ.ಅವರು ಸೋಮವಾರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪತ್ರಕರ್ತರ ಜೊತೆ ಮಾತನಾಡಿದರು. ಯಾವುದೋ ಗ್ಯಾರಂಟಿ ಯೋಜನೆಗಳನ್ನು ಕೊಡುತ್ತೇವೆ ಎಂದು ಎಲ್ಲಾ ನೀರಾವರಿ ಯೋಜನೆಗಳು, ಎಲ್ಲಾ ರಸ್ತೆ ಅಭಿವೃದ್ಧಿ ಯೋಜನೆಗಳು ನಿಂತು ಹೋಗಿದ್ದು, ಇದರ ಬಗ್ಗೆ ಅವರು ಮಾತನಾಡುತ್ತಿಲ್ಲ. ಮುಂದಿನ ವಿಧಾನ ಮಂಡಲ ಅಧಿವೇಶನದಲ್ಲಿ ಅಂಕಿ ಅಂಶಗಳ ಮೂಲಕ ವಾಸ್ತವಿಕ ವಿಚಾರಗಳನ್ನು ಸರಕಾರದ ಗಮನಕ್ಕೆ ತಂದು ಇನ್ನಾದರೂ ರಾಜ್ಯದಲ್ಲಿ ಸರ್ಕಾರ ಚೇತರಿಕೆಗೊಂಡು ರಾಜ್ಯದ ಅಭಿವೃದ್ಧಿ, ವಿಶೇಷವಾಗಿ ನೀರಾವರಿ ಕಡೆಗೆ ಒತ್ತು ನೀಡಲು ಒತ್ತಾಯಿಸಲಿದ್ದೇವೆ ಎಂದರು. ಆ ಒತ್ತಾಯಕ್ಕೂ ಸರ್ಕಾರ ಮಣಿಯದೇ ಇದ್ದಲ್ಲಿ ಮುಂದಿನ ಹೋರಾಟದ ರೂಪವಾಗಿ ಈಗಾಗಲೇ ಬಿಜೆಪಿ ರಾಜ್ಯಾಧ್ಯಾಕ್ಷ ಬಿ.ವೈ.ವಿಜಯೇಂದ್ರ ಅವರು ಪ್ರತೀ ಜಿಲ್ಲೆಗೆ ತೆರಳಿ ಅಲ್ಲಿಯ ಮುಖಂಡರ ಜೊತೆ ಸಮಾಲೋಚನೆ ನಡೆಸಿ ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ನಿರ್ಧಾರ ಮಾಡುತ್ತಿದ್ದಾರೆ. ಬಳಿಕ ತೀರ್ಮಾನಕೈಗೊಳ್ಳುತ್ತೇವೆ ಎಂದರು.
ಎಲ್ಲ ಚುನಾವಣೆಗಳಲ್ಲಿ ಜೆಡಿಎಸ್ ಮೈತ್ರಿ:ಜೆಡಿಎಸ್ ಹಾಗೂ ಬಿಜೆಪಿ ಮುಂಬರುವ ಗ್ರಾ.ಪಂ., ಜಿ.ಪಂ., ತಾ.ಪಂ. ಸೇರಿದಂತೆ ಎಲ್ಲಾ ಚುನಾವಣೆಗಳಲ್ಲಿ ಹೊಂದಾಣಿಕೆ ಮಾಡಿಕೊಂಡು ಮುಂದುವರಿಯಲು ಯೋಜಿಸಿದ್ದೇವೆ. ಹೈಕಮಾಂಡ್ ಒಪ್ಪಿಗೆ ನೀಡುವ ವಿಶ್ವಾಸವಿದೆ. ಅಭಿವೃದ್ಧಿ ದೃಷ್ಟಿಯಿಂದ ಕುಮಾರಸ್ವಾಮಿಯವರೂ ನಮ್ಮ ಜೊತೆಗಿರಲಿದ್ದಾರೆ ಎಂದರು.
ಎಂಎಲ್‌ಸಿ ಟಿಕೇಟ್ ಹಂಚಿಕೆಯಲ್ಲಿ ಯಾವುದೇ ಗೊಂದಲ ಇಲ್ಲ ಎಂದರು. ಉಪ ಚುನಾವಣೆಗೆ ಸಂಬಂಧಿಸಿದಂತೆ ವಾತಾವರಣ ಚೆನ್ನಾಗಿದೆ ಎಂದು ಪ್ರಶ್ನೆಗೆ ಬಿಎಸ್‌ವೈ ಉತ್ತರಿಸಿದರು.ಕಾಂಗ್ರೆಸ್ ಸರ್ಕಾರವನ್ನು ಬೀಳಿಸಲಿದ್ದೇವೆ ಎಂದು ಕೆಲವು ಮುಖಂಡರ ಹೇಳುತ್ತಿರು ಬಗ್ಗೆ ಪ್ರಶ್ನಿಸಿದಾಗ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ಇಷ್ಟಪಡುವುದಿಲ್ಲ ಎಂದು ಉತ್ತರಿಸಿದರು. ಕಾಂಗ್ರೆಸ್ ಸರ್ಕಾರ ಬಿಜೆಪಿಯನ್ನು ಟಾರ್ಗೆಟ್ ಮಾಡುತ್ತಿದ್ದೇಯಾ ಎಂಬ ಪ್ರಶ್ನೆಗೆ, ನೋಡೋಣ. ನಾನು ವಿರೋಧ ನಾಯಕರು, ಪಕ್ಷದ ಮುಖಂಡರ ಭಾವನೆಗಳನ್ನು ಪಡೆದು ಮಾಹಿತಿ ತಿಳಿಸುತ್ತೇನೆ ಎಂದರು.
ಏಕಾಏಕಿ ಗ್ಯಾರಂಟಿ ಯೋಜನೆಗಳಿಗಾಗಿ ಪೆಟ್ರೋಲ್, ಡೀಸೆಲ್ ದರ ಏರಿಕೆ ಖಂಡನೀಯ. ರಾಜ್ಯದಲ್ಲಿನ ಪೆಟ್ರೋಲ್, ಡೀಸೆಲ್ ದರ ಏರಿಕೆ ವಾಪಸ್ ಪಡೆದುಕೊಳ್ಳಬೇಕು ಎಂದು ಒತ್ತಾಯಿಸುತ್ತೇವೆ ಎಂದರು.