ಸಾರಾಂಶ
ಹಾವೇರಿ: ಭ್ರಷ್ಟಾಚಾರ, ಹಗರಣ, ಅಲ್ಪಸಂಖ್ಯಾತರ ತುಷ್ಠೀಕರಣವೇ ಕಾಂಗ್ರೆಸ್ ಸರ್ಕಾರದ ಸಾಧನೆಯಾಗಿದೆ. ಅಗತ್ಯ ವಸ್ತುಗಳ ಬೆಲೆಯೇರಿಕೆ ಮೂಲಕ ರಾಜ್ಯ ಸರ್ಕಾರ ಜನರ ಜೇಬಿಗೆ ನೇರವಾಗಿ ಕನ್ನ ಹಾಕುವ ಕೆಲಸ ಮಾಡುತ್ತಿದೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಹರಿಹಾಯ್ದರು.
ನಗರದ ಮೈಲಾರ ಮಹದೇವಪ್ಪ ವೃತ್ತದಲ್ಲಿ ಸೋಮವಾರ ಸಂಜೆ ಏರ್ಪಡಿಸಿದ್ದ ಬಿಜೆಪಿ ಜನಾಕ್ರೋಶ ಯಾತ್ರೆ ಸಮಾವೇಶದಲ್ಲಿ ಮಾತನಾಡಿದರು. ಜನಾಕ್ರೋಶ ಯಾತ್ರೆಗೆ ಇಷ್ಟೊಂದು ಜನರ ಸೇರಿದ್ದನ್ನು ನೋಡಿದರೆ ಸರ್ಕಾರ ವಿರುದ್ಧ ನಿಮ್ಮ ಆಕ್ರೋಶ ಎಷ್ಟಿದೆ ಎಂಬುದು ಗೊತ್ತಾಗುತ್ತದೆ. ರಾಜ್ಯದಲ್ಲಿ ಪ್ರತಿಯೊಂದು ವಸ್ತುಗಳ ದರ ಏರಿಕೆ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯನವರು 10 ಕೆಜಿ ಅಕ್ಕಿ ಕೊಡುತ್ತೇವೆ ಅಂದಿದ್ದರು.
ಕೇಂದ್ರ ಸರ್ಕಾರ ಕೊಡುವ ಅಕ್ಕಿಗೆ ತಮ್ಮ ಸರ್ಕಾರದ ಲೇಬಲ್ ಹಾಕಿ ಕೊಡುತ್ತಿದ್ದಾರೆ. ಗೃಹಲಕ್ಷ್ಮಿ ಯೋಜನೆ ಹಣವನ್ನು ಬಿಡುಗಡೆ ಮಾಡುತ್ತಿಲ್ಲ. 24 ತಿಂಗಳಲ್ಲಿ 10 ತಿಂಗಳು ಸಹ ಹಣ ಕೊಟ್ಟಿಲ್ಲ. ಎಲ್ಲೆಲ್ಲಿ ಉಪಚುನಾವಣೆ ಬರುತ್ತೋ ಆಗ ಮಾತ್ರ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಕೊಡುತ್ತಿದ್ದಾರೆ ಎಂದು ಆರೋಪಿಸಿದರು. ಸಿಇಟಿ ಪ್ರವೇಶ ಪರೀಕ್ಷೆಗೆ ತೆರಳಿದ ಮಕ್ಕಳ ಜನಿವಾರ, ಶಿವದಾರ ತೆಗೆಸುವ ಮೂಲಕ ಈ ಸರ್ಕಾರದ ದುರಾಡಳಿತದ ಮೇರೆ ಮೀರಿದೆ. ಇದಕ್ಕಾಗಿ ಜನರು ಈ ಸರ್ಕಾರಕ್ಕೆ ಉಗಿಯುತ್ತಿದ್ದು, ಈ ಸರ್ಕಾರ ಯಾವಾಗ ತೊಲಗೀತು ಎನ್ನುತ್ತಿದ್ದಾರೆ. ಇಂಥ ವಿಚಾರಗಳನ್ನು ಮರೆಮಾಚಲು ಜಾತಿಗಣತಿ, ಹನಿಟ್ರ್ಯಾಪ್‌ನಂತಹ ವಿಷಯ ತಂದು ಜನರ ಗಮನ ಬೇರೆಡೆ ಸೆಳೆಯಲು ಯತ್ನಿಸುತ್ತಿದ್ದಾರೆ. ಈ ಸರ್ಕಾರಕ್ಕೆ ಉಳಿಗಾಲ ಇಲ್ಲ, ಯಾವಾಗ ಬೀಳುತ್ತೋ ಗೊತ್ತಿಲ್ಲ. ಒಂದು ಕಡೆ ಡಿಕೆ, ಸಿದ್ದು ಕುರ್ಚಿಗಾಗಿ ಕಿತ್ತಾಡುತ್ತಿದ್ದಾರೆ. ರಾಜ್ಯದಲ್ಲಿ ಚುನಾವಣೆ ನಡೆದರೆ ಜಿಲ್ಲೆಯಲ್ಲಿ 6ಕ್ಕೆ 6 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಯುವ ಮುಖಂಡ ಭರತ್ ಬೊಮ್ಮಾಯಿ ಮಾತನಾಡಿ, ರಾಜ್ಯ ಬಿಜೆಪಿ ಜನರಿಂದ, ಜನರಿಗಾಗಿ ಹೋರಾಟ ಮಾಡುವ ಮತ್ತು ಅವರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡುವ ಪಕ್ಷವಾಗಿದೆ. ಬಿಜೆಪಿ ಜನರಿಗಾಗಿ ರಾಜಕಾರಣ ಮಾಡಿದರೆ, ಕಾಂಗ್ರೆಸ್ ಅಧಿಕಾರಕ್ಕಾಗಿ ರಾಜಕಾರಣ ಮಾಡುತ್ತದೆ. ಅಧಿಕಾರದ ಆಸೆಗಾಗಿ ಕಾಂಗ್ರೆಸ್ ಗ್ಯಾರಂಟಿಗಳನ್ನು ಘೋಷಣೆ ಮಾಡಿ ರಾಜ್ಯವನ್ನು ಆರ್ಥಿಕ ದಿವಾಳಿತನಕ್ಕೆ ದೂಡುತ್ತಿದೆ.
ಈ ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯುವವರೆಗೂ ಸುಮ್ಮನಿರಲ್ಲ, ಇದಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು. ಬಿಜೆಪಿ ಜಿಲ್ಲಾಧ್ಯಕ್ಷ ಅರುಣಕುಮಾರ ಪೂಜಾರ ಮಾತನಾಡಿ, ಜಿಲ್ಲೆಯಲ್ಲಿ 6 ಜನ ಕಾಂಗ್ರೆಸ್ ಶಾಸಕರಿದ್ದಾರೆ. ಆದರೆ, ಜಿಲ್ಲೆಯಲ್ಲಿ ಏನು ಅಭಿವೃದ್ಧಿ ಆಗಿದೆ ಎಂಬುದನ್ನು ಜನತೆ ನೋಡಬೇಕು. ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಇವತ್ತೇ ಚುನಾವಣೆ ನಡೆದರೆ ಜಿಪಂ, ತಾಪಂನಲ್ಲಿ ಬಿಜೆಪಿ ಬಾವುಟ ಹಾರಲಿದೆ. ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರ ಅವಧಿಯಲ್ಲಿ ಜಿಲ್ಲೆಗೆ ಸಾವಿರಾರು ಕೋಟಿ ರು. ಅನುದಾನ ತಂದು ಅಭಿವೃದ್ಧಿ ಮಾಡಿದ್ದೆವು. ಆದರೆ, ಈ ಸರ್ಕಾರದ ಅವಧಿಯಲ್ಲಿ ಅಭಿವೃದ್ಧಿ ಶೂನ್ಯವಾಗಿದೆ ಎಂದರು.