ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಹಣದಲ್ಲಿ ಚಿಲ್ಲರೆ ಅಂಗಡಿ ಪ್ರಾರಂಭಿಸಿದ ಮಹಿಳೆ!

| N/A | Published : Apr 03 2025, 09:27 AM IST

Gruhalakshmi Yojane

ಸಾರಾಂಶ

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಮಹಿಳೆಯೊಬ್ಬರು ಸದುಪಯೋಗಪಡಿಸಿಕೊಂಡು ಚಿಲ್ಲರೆ ಅಂಗಡಿಯೊಂದನ್ನು ಪ್ರಾರಂಭಿಸಿದ್ದಾರೆ.

  ಮೈಸೂರು : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಮಹಿಳೆಯೊಬ್ಬರು ಸದುಪಯೋಗಪಡಿಸಿಕೊಂಡು ಚಿಲ್ಲರೆ ಅಂಗಡಿಯೊಂದನ್ನು ಪ್ರಾರಂಭಿಸಿದ್ದಾರೆ.

ತಾಲೂಕಿನ ಕುಂಬ್ರಳ್ಳಿಮಠ ಗ್ರಾಮದ ನಿವಾಸಿ ರಾಜು ಅವರ ಪತ್ನಿ ಆಶಾ ಅವರು ಗೃಹಲಕ್ಷ್ಮಿ ಹಣದಿಂದ ಚಿಲ್ಲರೆ ಅಂಗಡಿ ಪ್ರಾರಂಭಿಸಿರುವ ಮಹಿಳೆ.

ಗೃಹಲಕ್ಷ್ಮಿ ಯೋಜನೆಯಿಂದ ನಮಗೆ ತುಂಬಾ ಸಹಾಯವಾಗಿದೆ. ಮನೆಯಲ್ಲಿ ನಮ್ಮ ಯಜಮಾನರು ಒಬ್ಬರೆ ದುಡಿಯುವವರು, ಮನೆಯಲ್ಲಿ ಮಕ್ಕಳು, ವಯಸ್ಸಾದ ಅತ್ತೆ-ಮಾವ ಮತ್ತು ಅಜ್ಜಿ ಇದ್ದಾರೆ. ಮಕ್ಕಳ ವಿದ್ಯಾಭ್ಯಾಸಕ್ಕೆ, ಬಟ್ಟೆ, ಪೆನ್ನು-ಪೆನ್ಸಿಲ್‌, ಪುಸ್ತಕಗಳನ್ನು ತೆಗೆದುಕೊಳ್ಳಲು ಇದರಿಂದ ಸಹಾಯವಾಗಿದೆ. ಗೃಹಲಕ್ಷ್ಮಿ ಯೋಜನೆಯ ಹಣದಿಂದ ಅತ್ತೆ ಮಾವನವರಿಗೆ ಆಸ್ಪತ್ರೆ ಖರ್ಚು ಹಾಗೂ ಔಷಧಿಗಳನ್ನು ಖರೀದಿಸಲು ಸಹಾಯವಾಗಿದೆ ಎಂದು ಅವರು ತಿಳಿಸಿದರು.

ಈಗ ಈ ಹಣದಿಂದ ಸ್ಥಳೀಯವಾಗಿ ಸಣ್ಣದಾಗಿ ಚಿಲ್ಲರೆ ಅಂಗಡಿಯೊಂದನ್ನು ಹಾಕಿಕೊಂಡಿದ್ದೇವೆ. ಈ ಹಣದಿಂದ ಅಂಗಡಿಗೆ ಬೇಕಾದ ಸರಕುಗಳನ್ನು ತೆಗೆದುಕೊಂಡು ಮಾರಾಟ ಮಾಡಿ ಸ್ವಾವಲಂಬನೆ ಜೀವನವನ್ನು ಮಾಡಿಕೊಂಡಿದ್ದೇನೆ. 

ಮನೆಯ ಯಜಮಾನರ ದುಡಿಮೆಯಿಂದ ಮನೆಯನ್ನು ನಡೆಸಲು, ಮಕ್ಕಳ ವಿದ್ಯಾಭ್ಯಾಸದ ಖರ್ಚನ್ನು ನೋಡಿಕೊಳ್ಳಲು ಕಷ್ಟವಾಗುತ್ತಿತ್ತು, ಗೃಹಲಕ್ಷ್ಮೀ ಯೋಜನೆಯ ಹಣದಿಂದ ತುಂಬಾ ಸಹಾಯವಾಗಿದೆ. ಈ ಯೋಜನೆಯಿಂದ ನಮ್ಮ ಕಷ್ಟಕಾಲದಲ್ಲಿ ಸಹಾಯವಾಗಿದೆ. ಗೃಹಲಕ್ಷ್ಮಿ ಯೋಜನೆಯನ್ನು ನಿಲ್ಲಿಸಿದರೆ ನಮಗೆ ಮತ್ತೆ ತೊಂದರೆಯಾಗುತ್ತದೆ. ಅದಕ್ಕಾಗಿ ಈ ಯೋಜನೆಯನ್ನು ನಿಲ್ಲಿಸದೆ ಮುಂದವರಿಸಿದರೆ ನನ್ನಂತ ಹಲವಾರು ಕಷ್ಟದಲ್ಲಿರುವ ಮಹಿಳೆಯರಿಗೆ ಸಹಾಯವಾಗಲಿದೆ ಎಂದು ಅವರು ಮನವಿ ಮಾಡಿದ್ದಾರೆ.