ಸಾರಾಂಶ
ಶಿರಸಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನೇತೃತ್ವದ ಕಾಂಗ್ರೆಸ್ ಸರ್ಕಾರ ಭದ್ರವಾಗಿದ್ದು, ಎಲ್ಲರೂ ಒಗ್ಗಟ್ಟಾಗಿ ಜನರ ಕಲ್ಯಾಣ ಮಾಡುತ್ತಿದ್ದೇವೆ. ಸಮಯದಿಂದ ಸಮಯಕ್ಕೆ ರಾಜಕೀಯ ಬದಲಾವಣೆ ಸಹಜ. ರಾಜಕೀಯ ಗಾಳಿಮಾತು ಹಾಗೂ ಉಹಾಪೋಹದಿಂದ ಹೊಟ್ಟೆ ತುಂಬುವುದಿಲ್ಲ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಶಿರಸಿಯಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿ, ಉಪಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಹಾಲಿ ಸಂಸದ ಬಸವರಾಜ ಬೊಮ್ಮಾಯಿ ಕ್ಷೇತ್ರದಲ್ಲಿ, ಹಾಲಿ ಕೇಂದ್ರ ಸಚಿವ ಕುಮಾರಸ್ವಾಮಿ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಿದೆ. ನಾವು ಗೆಲ್ಲಿಸಿಲ್ಲ. ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿಪರ ಆಡಳಿತದಿಂದ ಜನರು ಗೆಲ್ಲಿಸಿದ್ದಾರೆ. ಇಲಿ ಹೋದರೆ ಹುಲಿ ಹೋಯಿತು ಎಂದು ತಪ್ಪು ಹೇಳುವುದರಿಂದ ಯಾರ ಹೊಟ್ಟೆಯೂ ತುಂಬುವುದಿಲ್ಲ. ಸದ್ಯಕ್ಕೆ ಮುಖ್ಯಮಂತ್ರಿ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಕೇಂದ್ರ ಸರ್ಕಾರವು ವಕ್ಫ್ ಕಾನೂನು ತಿದ್ದುಪಡಿ ಮಾಡಲು ಹೊರಟಿದ್ದು, ಆ ನಂತರ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಈಗ ಏನೂ ಹೇಳಲು ಸಾಧ್ಯವಿಲ್ಲ. ಕಾನೂನು ಪ್ರಕ್ರಿಯೆ ಮೂಲಕ ಪರಿಹಾರ ಮಾಡಲು ಸೂಚನೆ ನೀಡಲಾಗಿದ್ದು, ತಹಸೀಲ್ದಾರರು ಹಿಯರಿಂಗ್ ಮಾಡಿ ಅಭಿಪ್ರಾಯ ಪಡೆಯಲಾಗುತ್ತಿದೆಯೇ ಹೊರತು ಬದಲಾವಣೆ ಮಾಡಲಾಗುತ್ತಿಲ್ಲ.
ಬ ಕರಾಬನಿಂದ ಇಲ್ಲಿನ ರೈತರು ಸಮಸ್ಯೆ ಎದುರಿಸುತ್ತಿರುವ ವಿಷಯದ ಕುರಿತು ಶಿರಸಿ ಶಾಸಕ ಭೀಮಣ್ಣ ನಾಯ್ಕ ನನ್ನ ಗಮನಕ್ಕೆ ತಂದಿದ್ದಾರೆ. ಅದರ ಕುರಿತು ಸ್ಪಷ್ಟ ಮಾಹಿತಿ ಇಲ್ಲ. ಹಿನ್ನೆಲೆ ತಿಳಿದು ಮಾತನಾಡುತ್ತೇನೆ. ಅಲ್ಲದೇ ಅದರ ಕುರಿತು ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದೇನೆ. ಕಾನೂನು ವಿರುದ್ಧ ಸೂಚನೆ ನೀಡುವುದು ತಪ್ಪಾಗುತ್ತದೆ.
ಕಾನೂನಿನ ಪ್ರಕಾರ ತಪ್ಪಿದ್ದರೆ ಸರಿಪಡಿಸಲಾಗುತ್ತದೆ ಎಂದರು.ಕಂದಾಯ ಇಲಾಖೆಯಲ್ಲಿ ಸರ್ವೇಯರ್ ಕೊರತೆ ಇರುವುದು ನಿಜ. ಎಲ್ಲ ಖಾಲಿ ಹುದ್ದೆ ಭರ್ತಿಗೆ ಮುಖ್ಯಮಂತ್ರಿ ಒಪ್ಪಿಗೆ ನೀಡಿದ್ದು, ಆ ಕುರಿತು ಕ್ರಮ ತೆಗೆದುಕೊಳ್ಳಲಾಗುವುದು. ೭೪೬ ಸರ್ವೇಯರ್ ಹಾಗೂ 34 ಎಡಿಆರ್ ಹುದ್ದೆ ಭರ್ತಿ ಮಾಡಿಕೊಳ್ಳಲಾಗುತ್ತಿದೆ. ನೇಮಕ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಉತ್ತರಕನ್ನಡ ಜಿಲ್ಲೆಗೂ ನೇಮಕ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಶಾಸಕರಾದ ಭೀಮಣ್ಣ ನಾಯ್ಕ, ಶಿವರಾಮ ಹೆಬ್ಬಾರ ಮತ್ತಿತರರು ಇದ್ದರು.
ಅಶಿಸ್ತಿನ ಆರಂಭದಲ್ಲೇ ಇಂಜೆಕ್ಷನ್ ನೀಡಬೇಕು: ಹೆಬ್ಬಾರ
ಶಿರಸಿ: ಸದಾನಂದ ಗೌಡ ಅವರಿಗೆ ಮೊದಲೇ ಗೊತ್ತಾಗಬೇಕಾಗಿದ್ದ ಸಂಗತಿ ಈಗಲಾದರೂ ಗೊತ್ತಾಯಿತು. ಅಲ್ಲದೇ ಅಶಿಸ್ತಿಗೆ ಆರಂಭದಲ್ಲೇ ಇಂಜೆಕ್ಷನ್ ನೀಡಬೇಕು ಎಂದು ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ ತಿರುಗೇಟು ನೀಡಿದರು.ನಗರದಲ್ಲಿ ಬುಧವಾರ ಮಾಧ್ಯಮದವರ ಜತೆ ಸದಾನಂದ ಗೌಡ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸದಾನಂದ ಗೌಡ ಅವರು ಮಾಜಿ ಮುಖ್ಯಮಂತ್ರಿ. ಹಿಂದೆಯೇ ಗೊತ್ತಾಗಬೇಕಿರುವ ವಿಷಯ ಈಗಲಾದರೂ ತಿಳಿದಿರುವುದು ಖುಷಿಯ ಸಂಗತಿ. ಅಶಿಸ್ತಿಗೆ ಆರಂಭದಲ್ಲೇ ಇಂಜೆಕ್ಷನ್ ನೀಡಬೇಕು. ಅತಿರೇಕವಾದರೆ ಗುಣಮುಖವಾಗುವುದಿಲ್ಲ. ಅದು ಮತ್ತಷ್ಟು ರೋಗಕ್ಕೆ ಕಾರಣವಾಗಬಲ್ಲದು ಎಂದು ಹೇಳಿದ್ದೆ. ಅದು ನಿಜವಾಯಿತು ಎಂದರು.