ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಯಶಸ್ವಿ ಅನುಷ್ಠಾನದ ಟ್ರಂಪ್ ಕಾರ್ಡ್ ಮುಂದಿಟ್ಟುಕೊಂಡು ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲುವ ಸಲುವಾಗಿ 4.5 ಕೋಟಿ ಫಲಾನುಭವಿಗಳಿಗೆ ಗ್ಯಾರಂಟಿ ಸ್ಮಾರ್ಟ್ ಕಾರ್ಡ್ ವಿತರಣೆ ಸೇರಿ ಹಲವು ಮಹತ್ವದ ಕಾರ್ಯಕ್ರಮಗಳನ್ನು ರೂಪಿಸಲು ಕಾಂಗ್ರೆಸ್ ಪಕ್ಷ ನಿರ್ಧಾರ ಮಾಡಿದೆ.
ಜತೆಗೆ ರಾಜ್ಯ ಮಟ್ಟದ ಕಾರ್ಯಕರ್ತರ ಸಮಾವೇಶ, ಜಿಲ್ಲಾ ಹಾಗೂ ವಿಧಾನಸಭಾ ಮಟ್ಟದ ಗ್ಯಾರಂಟಿ ಯೋಜನಾ ಫಲಾನುಭವಿಗಳ ಸಮಾವೇಶ ನಡೆಸುವುದು. ಪ್ರತಿ ಮನೆ-ಮನೆಗೂ ಕಾಂಗ್ರೆಸ್ ಸಾಧನೆಗಳನ್ನು ತಲುಪಿಸುವ ‘ಮನೆ-ಮನೆಗೆ ಕಾಂಗ್ರೆಸ್’ ಕಾರ್ಯಕ್ರಮ ರೂಪಿಸುವುದು, ಸೂಕ್ತ ಅಭ್ಯರ್ಥಿ ಆಯ್ಕೆಗೆ ಮೂರು ಹಂತದ ಸಮೀಕ್ಷೆ ನಡೆಸುವುದು ಸೇರಿ ಹಲವು ಮಹತ್ವದ ನಿರ್ಧಾರ ಮಾಡಲಾಗಿದೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಡೆದ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಯಿತು.
4.5 ಕೋಟಿ ಸ್ಮಾರ್ಟ್ ಕಾರ್ಡ್ ವಿತರಣೆ: ಪ್ರಸಕ್ತ ಸಾಲಿನಲ್ಲಿ ಗ್ಯಾರಂಟಿ ಯೋಜನೆಗಳ ಮೂಲಕ ಯಾವುದೇ ಮಧ್ಯವರ್ತಿಗಳ ಸಹಾಯವಿಲ್ಲದೆ, ಭ್ರಷ್ಟಾಚಾರಕ್ಕೆ ಆಸ್ಪದವಿಲ್ಲದೆ 38,000 ಕೋಟಿ ರು. ಹಣವನ್ನು ನೇರವಾಗಿ 4.30 ಕೋಟಿ ಜನ ಫಲಾನುಭವಿಗಳಿಗೆ ತಲುಪಿಸಲಾಗಿದೆ.
ಯುವನಿಧಿ ಅನುಷ್ಠಾನದ ಬಳಿಕ 4.50 ಕೋಟಿ ಜನ ಫಲಾನುಭವಿಗಳಿಗೆ ಯೋಜನೆ ತಲುಪಲಿದ್ದು, ಲೋಕಸಭೆ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆಗಳನ್ನೇ ಟ್ರಂಪ್ ಕಾರ್ಡ್ ಆಗಿ ಇಟ್ಟುಕೊಂಡು ಜನರ ಮುಂದೆ ಹೋಗಬೇಕು ಎಂದು ನಿರ್ಧರಿಸಲಾಗಿದೆ.
ಸಭೆಯಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ಗ್ಯಾರಂಟಿ ಯೋಜನೆಗಳ ಲಾಭವನ್ನು ಪಕ್ಷಕ್ಕೆ ತಲುಪಿಸಲು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಿಗೆ ಸ್ಮಾರ್ಟ್ ಗುರುತಿನ ಚೀಟಿ ನೀಡಲು ಚರ್ಚಿಸಿದ್ದೇವೆ. ಅದನ್ನು ಕಾರ್ಯಕರ್ತರ ಕೈಯಿಂದಲೇ ಹಂಚಿಕೆ ಮಾಡಲು ತೀರ್ಮಾನಿಸಿದ್ದೇವೆ ಎಂದು ಘೋಷಿಸಿದರು.
ಮನೆ-ಮನೆಗೆ ಕಾಂಗ್ರೆಸ್: ಜತೆಗೆ ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ಮನೆ-ಮನೆಗೂ ತಲುಪಿಸಲು ಮನೆ-ಮನೆಗೂ ಕಾಂಗ್ರೆಸ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಇದರಡಿ ಗ್ಯಾರಂಟಿ ಸೇರಿದಂತೆ ಸರ್ಕಾರದ ಸಾಧನೆಗಳನ್ನು ಕರಪತ್ರದ ಮೂಲಕ ಮನೆ ಮನೆಗೂ ತಲುಪಿಸಲು ನಿರ್ಧರಿಸಲಾಗಿದೆ.
ಜ.21ಕ್ಕೆ ರಾಜ್ಯಮಟ್ಟದ ಕಾರ್ಯಕರ್ತರ ಸಮಾವೇಶ: ಯುವನಿಧಿಗೆ ಜ.12 ರಂದು ವಿವೇಕಾನಂದರ ಜಯಂತಿ ದಿನ ಶಿವಮೊಗ್ಗದಲ್ಲಿ ಚಾಲನೆ ನೀಡಲಾಗುವುದು. ಇನ್ನು ಗ್ಯಾರಂಟಿ ಯೋಜನೆಗಳ ಬಗ್ಗೆ ಜನಾಭಿಪ್ರಾಯ ಮೂಡಿಸಲು ಜಿಲ್ಲಾ ಮಟ್ಟ ಹಾಗೂ ವಿಧಾನಸಭಾ ಮಟ್ಟದಲ್ಲಿ ಫಲಾನುಭವಿಗಳ ಸಭೆ ನಡೆಸಬೇಕು. ಜತೆಗೆ ಚುನಾವಣೆಗೆ ಕಾರ್ಯಕರ್ತರನ್ನು ಸಜ್ಜುಗೊಳಿಸಲು ಜ.21 ರಂದು ರಾಜ್ಯಮಟ್ಟದ ಕಾರ್ಯಕರ್ತರ ಸಮಾವೇಶ ನಡೆಸಬೇಕು ಎಂದು ತೀರ್ಮಾನಿಸಲಾಗಿದೆ.
ರಾಜ್ಯ ಮಟ್ಟದ ಕಾರ್ಯಕರ್ತರ ಸಮಾವೇಶದಲ್ಲಿ ಶಾಸಕರು, ಜಿಲ್ಲಾ ಮತ್ತು ಬ್ಲಾಕ್ ಕಾಂಗ್ರೆಸ್ ಮುಖಂಡರು, ಸಹಕಾರ ಸಂಸ್ಥೆಗಳ ಪ್ರತಿನಿಧಿಗಳು, ಪದಾಧಿಕಾರಿಗಳು, ವಿವಿಧ ಘಟಕಗಳ ಪದಾಧಿಕಾರಿಗಳು, ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಗೆದ್ದವರು, ಸೋತವರು, ಬೂತ್ ಮಟ್ಟದ ಪ್ರತಿನಿಧಿಗಳನ್ನು ಸೇರಿಸಲು ಸಭೆಯಲ್ಲಿ ಡಿ.ಕೆ. ಶಿವಕುಮಾರ್ ಸೂಚನೆ ನೀಡಿದ್ದಾರೆ. ಜತೆಗೆ ಎರಡು ದಿನದಲ್ಲಿ ಸಮಾವೇಶದ ರೂಪುರೇಷೆಗಳನ್ನು ಅಂತಿಮಗೊಳಿಸುವುದಾಗಿಯೂ ತಿಳಿಸಿದ್ದಾರೆ.
ವಿವಿಧ ಸಮಿತಿಗಳಿಗೆ ಕಾರ್ಯಕರ್ತರ ನೇಮಕ: ಮೂರು ವಾರದ ಒಳಗಾಗಿ ಗ್ಯಾರಂಟಿ ಅನುಷ್ಠಾನ ಸಮಿತಿ ಸಹಿತ ನಿಗಮ-ಮಂಡಳಿ ಹಾಗೂ ಎಲ್ಲಾ ರೀತಿಯ ಸಮಿತಿಗಳಿಗೆ ಕಾರ್ಯಕರ್ತರನ್ನು ನೇಮಕ ಮಾಡಬೇಕು. ಜಿಲ್ಲಾಧ್ಯಕ್ಷರು ಹಾಗೂ ಸ್ಥಳೀಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ತಿಂಗಳಾಂತ್ಯದ ಒಳಗಾಗಿ ಜಿಲ್ಲಾ ಮಂತ್ರಿಗಳು ನಾಮ ನಿರ್ದೇಶನ ಮಾಡಿ ಕಾರ್ಯಕರ್ತರಿಗೆ ಶಕ್ತಿ ತುಂಬಬೇಕು ಎಂದು ಶಿವಕುಮಾರ್ ಸೂಚಿಸಿದ್ದಾರೆ.
ಕ್ಷೇತ್ರ ಮಟ್ಟದಲ್ಲಿ ಚುನಾವಣೆ ಸಿದ್ಧತೆ: ಸಂಸತ್ ಚುನಾವಣೆ ದೃಷ್ಟಿಯಿಂದ ಪ್ರತಿ ಜಿಲ್ಲೆಗೂ ಒಬ್ಬ ಸಚಿವರಿಗೆ ಜವಾಬ್ದಾರಿ ನೀಡಲಾಗಿದೆ. ಗುರುವಾರ ಎಐಸಿಸಿ ಕೇಂದ್ರ ಕಚೇರಿಯಲ್ಲಿ ನಾಲ್ಕು ರಾಜ್ಯಗಳ ಸಚಿವರ ಸಭೆ ಕರೆಯಲಾಗಿದೆ.
ಅಲ್ಲಿ ಯಾವ ರೀತಿ ಕೆಲಸ ಮಾಡಬೇಕು ಎಂಬುದರ ಬಗ್ಗೆ ತಿಳಿಸಲಿದ್ದಾರೆ. ಸಚಿವರ ಕೆಳಗೆ ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಹಾಗೂ ವಿಧಾನಪರಿಷತ್ ಸದಸ್ಯರನ್ನು ನಿಯೋಜಿಸಿದ್ದೇವೆ.ಬ್ಲಾಕ್ ಮಟ್ಟದಲ್ಲಿ ಜವಾಬ್ದಾರಿಯನ್ನು ಹಂಚಿಕೆ ಮಾಡಿ ಮತದಾರರ ಪಟ್ಟಿ ಪರಿಷ್ಕರಣೆ, ಬಿಎಲ್‌ಎಗಳ ನೇಮಕ ಮಾಡಲಾಗುವುದು.
ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಪಕ್ಷದ ಸಂಘಟನೆಗಳು, ಬ್ಲಾಕ್ ಮಟ್ಟದಲ್ಲಿ ಬದಲಾವಣೆ ಮಾಡಿ ಆದಷ್ಟು ಬೇಗ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದ್ದೇನೆ ಎಂದು ಸಭೆ ಬಳಿಕ ಡಿ.ಕೆ. ಶಿವಕುಮಾರ್ ಮಾಹಿತಿ ನೀಡಿದರು.
ಬರದಿಂದ ತತ್ತರಿಸಿರುವ ಕುಟುಂಬಗಳಿಗೆ ಗ್ಯಾರಂಟಿ ಯೋಜನೆಗಳ ಮೂಲಕ ಪ್ರತಿ ತಿಂಗಳು 4-5 ಸಾವಿರ ರು. ಲಾಭ ಸಿಗುತ್ತಿದೆ. ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೆ ನೇರವಾಗಿ ಖಾತೆಗೆ ವರ್ಗಾವಣೆ ಆಗುತ್ತಿದೆ. ಗ್ಯಾರಂಟಿಗಳಿಂದ ಜನರಿಗೆ ಆಗುತ್ತಿರುವ ಅನುಕೂಲ ಹಾಗೂ ಕೇಂದ್ರದಿಂದ ಆಗುತ್ತಿರುವ ಅನ್ಯಾಯವನ್ನು ಜನರಿಗೆ ತಲುಪಿಸಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆಯಲ್ಲಿ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
3 ಹಂತದ ಸಮೀಕ್ಷೆಗೆ ನಿರ್ಧಾರ: ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ನನಗೆ ಬಂದಿರುವ ವರದಿಗಳು ತೃಪ್ತಿಕರವಾಗಿಲ್ಲ. ಲೋಕಸಭೆ ಚುನಾವಣೆ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಮುಖ್ಯಮಂತ್ರಿಗಳು, ನಾನು ಹಾಗೂ ಎಐಸಿಸಿ ಪ್ರತ್ಯೇಕ ಸಮೀಕ್ಷೆ ನಡೆಸುತ್ತಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ 28ಕ್ಕೆ ಕನಿಷ್ಠ 26 ಸ್ಥಾನ ಗೆಲ್ಲಬೇಕು ಲೋಕಸಭೆ ಚುನಾವಣೆಯಲ್ಲಿ ನಾವು ಹೆಚ್ಚು ಸ್ಥಾನ ಗೆಲ್ಲಲೇಬೇಕು. ಇಷ್ಟೆಲ್ಲಾ ಮಾಡಿಯೂ ಗೆಲ್ಲದೆ ಹೋದರೆ ಅದು ನಮಗೆ ಹಿನ್ನಡೆಯಾಗಲಿದೆ. 28 ಸ್ಥಾನಕ್ಕೆ ಕನಿಷ್ಠ 26 ಸೀಟು ಗೆಲ್ಲಬೇಕು. ಜನರ ನಾಡಿ ಮಿಡಿತ ನಮ್ಮ ಪರವಾಗಿರುವುದರಿಂದ ಅಪಪ್ರಚಾರದಿಂದ ನಾವು ಯಾರೂ ಹತಾಶರಾಗಬಾರದು ಎಂದರು.
ಗ್ಯಾರಂಟಿ ಜಾರಿಗೆ 5000 ಕೈ ಕಾರ್ಯಕರ್ತರ ನೇಮಕ: ಶಾಸಕರು ಹಾಗೂ ಪಕ್ಷದ ಮುಖಂಡರಿಗೆ ಮಾತ್ರ ಮಣೆ ಹಾಕಲಾಗುತ್ತಿದೆ ಎಂಬ ಕಾರ್ಯಕರ್ತರ ವ್ಯಾಪಕ ಆಕ್ರೋಶವನ್ನು ಒಂದೇ ನಡೆಯಿಂದ ಶಮನಗೊಳಿಸಲು ಮುಂದಾಗಿರುವ ಕಾಂಗ್ರೆಸ್ ನಾಯಕತ್ವ, ಮಹತ್ವದ ಗ್ಯಾರಂಟಿ ಯೋಜನೆಗಳ ಜಾರಿಗೆ ಹಾಗೂ ವಿವಿಧ ಉದ್ದೇಶಗಳಿಗೆ ಸರ್ಕಾರದ ವಿವಿಧ ಹಂತಗಳಲ್ಲಿ ಬರೋಬ್ಬರಿ 5 ಸಾವಿರ ಹುದ್ದೆಗಳಿಗೆ ಪಕ್ಷದ ಕಾರ್ಯಕರ್ತರನ್ನು ನೇಮಿಸಿಕೊಳ್ಳುವ ಅಭಯ ನೀಡಿದೆ.
ಈ ನೇಮಕ ಪ್ರಕ್ರಿಯೆ ಈ ಮಾಸಾಂತ್ಯದ ವೇಳೆಗೆ ಪೂರ್ಣಗೊಳಿಸುವ ಸ್ವಯಂ ಗಡುವು ಸಹ ವಿಧಿಸಿಕೊಂಡಿದೆ.ವಿಶೇಷವೆಂದರೇ ಕಾರ್ಯಕರ್ತರಿಗೆ ಸಂಪುಟ ದರ್ಜೆಯ ಸ್ಥಾನ ಮಾನ ದೊರೆಯುವಂತೆಯೂ ಮಾಡಲು ಹೊಸ ಸಮಿತಿ ಸೃಷ್ಟಿಸಲು ಮುಂದಾಗಿದೆ.
ಕಾಂಗ್ರೆಸ್‌ನ ಟ್ರಂಪ್ ಕಾರ್ಡ್ ಎನಿಸಿರುವ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಎಂಬ ಹೊಸ ವ್ಯವಸ್ಥೆಯನ್ನು ರಾಜ್ಯ, ಜಿಲ್ಲಾ ಹಾಗೂ ವಿಧಾನಸಭಾವಾರು ಸಮಿತಿ ರಚನೆ ಮೂಲಕ ಸೃಷ್ಟಿಸಲು ಮುಂದಾಗಿದ್ದು, ಈ ಪೈಕಿ ರಾಜ್ಯ ಮಟ್ಟದ ಸಮಿತಿ ಅಧ್ಯಕ್ಷರಿಗೆ ಸಂಪುಟ ದರ್ಜೆ ಸ್ಥಾನಮಾನ ದಯಪಾಲಿಸುವ ಭರವಸೆ ನೀಡಿದೆ.
ಲೋಕಸಭಾ ಚುನಾವಣೆ ಸಿದ್ಧತೆ ಹಿನ್ನೆಲೆಯಲ್ಲಿ ರಾಜ್ಯ ಉಸ್ತುವಾರಿ ರಣದೀಪಸಿಂಗ್ ಸುರ್ಜೇವಾಲ ನೇತೃತ್ವದಲ್ಲಿ ಕೆಪಿಸಿಸಿ ಕಚೇರಿಯ ಇಂದಿರಾಭವನದಲ್ಲಿ ಬುಧವಾರ ನಡೆದ ಸಚಿವರು, ಶಾಸಕರು ಹಾಗೂ ಪಕ್ಷದ ಪ್ರಮುಖರ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಸಭೆಯ ನಂತರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ, ಜಿಲ್ಲಾ ಹಾಗೂ ವಿಧಾನಸಭೆ ಮಟ್ಟದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗಳನ್ನು ರಚಿಸಲಾಗುವುದು. ರಾಜ್ಯಮಟ್ಟದಲ್ಲಿ ಒಬ್ಬರು ಅಧ್ಯಕ್ಷರು ಹಾಗೂ ಐದು ಜನ ಉಪಾಧ್ಯಕ್ಷರು ಇರಲಿದ್ದಾರೆ.
ಅಧ್ಯಕ್ಷರಾದವರಿಗೆ ಸಂಪುಟ ದರ್ಜೆ ಸ್ಥಾನಮಾನ ಹಾಗೂ ಉಪಾಧ್ಯಕ್ಷರಿಗೆ ರಾಜ್ಯ ಸಚಿವ ಸ್ಥಾನ ನೀಡಲಾಗುವುದು. ಇವರೆ ಜತೆಗೆ 31 ಮಂದಿ ಕಾಂಗ್ರೆಸ್ ಕಾರ್ಯಕರ್ತರನ್ನು ಸದಸ್ಯರನ್ನಾಗಿ ನೇಮಿಸಲಾಗುವುದು ಎಂದು ಘೋಷಿಸಿದರು
ಇನ್ನು 31 ಜಿಲ್ಲಾ ಮಟ್ಟದ ಸಮಿತಿಗಳಲ್ಲಿ ಒಬ್ಬ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಹಾಗೂ 21 ಮಂದಿ ಸದಸ್ಯರು ಇರಲಿದ್ದಾರೆ. ಅವರಿಗೆ ಕಚೇರಿ ವ್ಯವಸ್ಥೆ ಹಾಗೂ ಗೌರವ ಧನ ನೀಡುವ ವ್ಯವಸ್ಥೆ ಆಗಲಿದೆ. ಅಧ್ಯಕ್ಷರಿಗೆ ಪ್ರತಿ ತಿಂಗಳು 50 ಸಾವಿರ ರು. ಗೌರವಧನ ನೀಡಲಾಗುವುದು.
224 ಕ್ಷೇತ್ರಗಳಲ್ಲಿ ವಿಧಾನಸಭಾ ಮಟ್ಟದ ಸಮಿತಿ ರಚಿಸಿ ಅಧ್ಯಕ್ಷರು ಹಾಗೂ 11 ಸದಸ್ಯರನ್ನು ನೇಮಿಸಲಾಗುವುದು. ಅಧ್ಯಕ್ಷರಿಗೆ 20-25 ಸಾವಿರ ರು. ಗೌರವ ಧನ ನಿಗದಿ ಮಾಡಲಾಗುವುದು. ಇನ್ನು ಸಮಿತಿಗಳ ಸದಸ್ಯರಿಗೆ ಸಭೆ ಹಾಜರಾತಿ ಭತ್ಯೆ ಮಾತ್ರ ನೀಡಲಾಗುವುದು. ಇದನ್ನು ರಾಜ್ಯ ಸರ್ಕಾರದ ಖಜಾನೆಯಿಂದ ಭರಿಸಲಾಗುವುದು ಎಂದು ಮಾಹಿತಿ ನೀಡಿದರು.
ಕೈ ಕಾರ್ಯಕರ್ತರಿಗೆ ಅವಕಾಶ ಎಂದ ಸಿಎಂ: ಒಂದು ವಾರದ ಒಳಗಾಗಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ನೇಮಕಾತಿ ಆದೇಶ ಹೊರಬೀಳಲಿದೆ. ತಕ್ಷಣದಿಂದ ಸಮಿತಿಗಳ ಕಾರ್ಯ ನಿರ್ವಹಣೆಯೂ ಶುರುವಾಗಲಿದೆ.
ಇನ್ನು ಈ ಸಮಿತಿಗಳಲ್ಲಿ ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರಿಗಷ್ಟೇ ಅವಕಾಶ ನೀಡಲಾಗುವುದು. ಇದನ್ನು ಪುನರ್‌ವಸತಿ ಕೇಂದ್ರ ಎನ್ನಲು ಸಾಧ್ಯವಿಲ್ಲ. 60 ಸಾವಿರ ಕೋಟಿ ರು. ಖರ್ಚು ಮಾಡಿ ಜನರಿಗೆ ನೀಡುವ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ವರ್ಷಕ್ಕೆ 6 ಕೋಟಿ ರು. ಖರ್ಚು ಮಾಡುವುದರಲ್ಲಿ ತಪ್ಪೇನಿಲ್ಲ ಎಂದು ಸಿದ್ದರಾಮಯ್ಯ ಸಮರ್ಥಿಸಿಕೊಂಡರು.
ಕಾರ್ಯಕರ್ತರಿಗೆ 5000 ಸ್ಥಾನಮಾನ: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, ಸುರ್ಜೇವಾಲಾ ಅವರ ಆಶಯದಂತೆ ಗ್ಯಾರಂಟಿಗಳ ಅನುಷ್ಠಾನ ಸಮಿತಿ ಮಾತ್ರವಲ್ಲದೆ ತಾಲೂಕು ಮಟ್ಟದಿಂದ ರಾಜ್ಯ ಮಟ್ಟದವರೆಗೆ ಸುಮಾರು 5 ಸಾವಿರ ವಿವಿಧ ಹುದ್ದೆಗಳಿಗೆ ಕಾರ್ಯಕರ್ತರು ಹಾಗೂ ಜನಸಾಮಾನ್ಯರಿಗೆ ಅವಕಾಶ ನೀಡುವ ಮೂಲಕ ಈ ಸರ್ಕಾರವನ್ನು ಜನರ ಸರ್ಕಾರ ಮಾಡುವುದಾಗಿ ತಿಳಿಸಿದರು.
ವಿಧಾನಸಭಾವಾರು ಇರುವ ಆಶ್ರಯ ಸಮಿತಿ, ಆರಾಧನಾ ಸಮಿತಿ, ನೀರಾವತಿ ಇಲಾಖೆ ಕೆರೆಗಳ ಸಮಿತಿ, ಬಗರ್ ಹುಕುಂ ಸಾಗುವಳಿ ಸಮಿತಿ, ಕೆಡಿಪಿ ಸೇರಿದಂತೆ ತಾಲೂಕು ಮಟ್ಟದಿಂದ ರಾಜ್ಯ ಮಟ್ಟದವರೆಗಿನ ವಿವಿಧ ಹುದ್ದೆಗಳಿಗೆ ಸೇರಿದಂತೆ ಎಲ್ಲಾ ಸಮಿತಿಗಳಿಗೆ ನಾಮನಿರ್ದೇಶನ ಮಾಡಬೇಕು.
ಜಿಲ್ಲಾಧ್ಯಕ್ಷರು ಹಾಗೂ ಸ್ಥಳೀಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ತಿಂಗಳಾಂತ್ಯದ ಒಳಗಾಗಿ ಜಿಲ್ಲಾ ಮಂತ್ರಿಗಳು ನಾಮ ನಿರ್ದೇಶನ ಮಾಡಿ ಕಾರ್ಯಕರ್ತರಿಗೆ ಶಕ್ತಿ ತುಂಬಬೇಕು ಎಂದು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ತಿಳಿಸಿದರು.