ಸಣ್ಣ ಮತ್ತು ಮಧ್ಯಮ ಪಟ್ಟಣಗಳಲ್ಲಿನ ಸಂಚಾರ ದಟ್ಟಣೆ ನಿಯಂತ್ರಿಸುವ ನಿಟ್ಟಿನಲ್ಲಿ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯು ವರ್ತುಲ ರಸ್ತೆ ನಿರ್ಮಿಸಲು ಆ.29ರಂದು ರಾಜ್ಯ ಸರಕಾರ ಅಧಿಕೃತ ಅಧಿಸೂಚನೆ ಹೊರಡಿಸಿದೆ.
ಭೂ ಸ್ವಾಧೀನದ ಸಾಧ್ಯತೆ, ರೈತರಲ್ಲಿ ಆತಂಕ
ವಿಶೇಷ ವರದಿ
ಕನ್ನಡಪ್ರಭ ವಾರ್ತೆ ಮುಳಗುಂದಸಣ್ಣ ಮತ್ತು ಮಧ್ಯಮ ಪಟ್ಟಣಗಳಲ್ಲಿನ ಸಂಚಾರ ದಟ್ಟಣೆ ನಿಯಂತ್ರಿಸುವ ನಿಟ್ಟಿನಲ್ಲಿ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯು ವರ್ತುಲ ರಸ್ತೆ ನಿರ್ಮಿಸಲು ಆ.29ರಂದು ರಾಜ್ಯ ಸರಕಾರ ಅಧಿಕೃತ ಅಧಿಸೂಚನೆ ಹೊರಡಿಸಿದೆ.
ರಾಜ್ಯದ 108 ಸಣ್ಣ ಹಾಗೂ ಮಧ್ಯಮ ಪಟ್ಟಣಗಳಲ್ಲಿ ಜಿಐಎಸ್ ಆಧಾರಿತ ರೋಡ್ ನೆಟ್‌ವರ್ಕಿಂಗ್ ಗ್ರಿಡ್ ಪ್ಲಾನಡಿಯಲ್ಲಿ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಸರಕಾರದ ಕ್ರಮ ಕೈಗೊಂಡಿದೆ. ಅದರ ಅಡಿಯಲ್ಲಿ ಗದಗ ಜಿಲ್ಲೆಯ ಮುಳಗುಂದ, ಮುಂಡರಗಿ, ನರೇಗಲ್ ಹಾಗೂ ಗಜೇಂದ್ರಗಡ ಪಟ್ಟಣಗಳಲ್ಲಿ ವರ್ತುಲ ರಸ್ತೆಗಳ ನಿರ್ಮಾಣವಾಗಲಿವೆ.ನಿಯೋಜಿತ ವರ್ತುಲ ರಸ್ತೆಯು 100 ಅಡಿ ಅಗಲ, ಎರಡು ಬದಿ ಎರಡು ಕಿಮೀ ಪ್ರಭಾವ ವಲಯವನ್ನು ಒಳಗೊಳ್ಳಲಿದೆ.
ಮುಳಗುಂದ ಪಟ್ಟಣವನ್ನು ಕೇಂದ್ರವಾಗಿಟ್ಟುಕೊಂಡು ಪಟ್ಟಣದ ಸುತ್ತಲಿನ ಶಿರಹಟ್ಟಿ, ಮಾಗಡಿ, ಖಾನಾಪೂರ, ಹೋಳಲಾಪೂರ, ಮಲ್ಲಸಮುದ್ರ, ಅಸುಂಡಿ, ಚಿಂಚಲಿ, ಯಳವತ್ತಿ, ಗ್ರಾಮಗಳನ್ನು ಒಳಗೊಂಡು ವೃತ್ತಾಕಾರವಾಗಿ ವರ್ತುಲ ರಸ್ತೆ ನಿರ್ಮಾಣವಾಗಲಿದೆ. ಈ ಗ್ರಾಮಗಳ ಜಮೀನುಗಳನ್ನು ವರ್ತುಲ ರಸ್ತೆ ನಿರ್ಮಾಣಕ್ಕಾಗಿ ಭೂ ಸ್ವಾಧೀನ ಮಾಡಿಕೊಳ್ಳುವ ಸಾಧ್ಯತೆ ಇದೆ.ಇಲ್ಲಿನ ಪಪಂ ಸೂಚನಾ ಫಲಕದಲ್ಲಿ ವರ್ತುಲ ರಸ್ತೆಯ ನಕ್ಷೆ ಹಾಗೂ ನಿಬಂಧನೆಗಳನ್ನು ಒಳಗೊಂಡು ಸರಕಾರದ ಆದೇಶ ಪ್ರತಿಗಳನ್ನು ಪ್ರಕಟಿಸಲಾಗಿದೆ. ವರ್ತುಲ ರಸ್ತೆಗೆ ಹಾಯ್ದು ಹೋಗುವ ಸುತ್ತಲಿನ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೂ ಅಧಿಸೂಚನಾ ಪ್ರತಿ ರವಾನಿಸಲಾಗಿದೆ. ನಿಯೋಜಿತ ನಕ್ಷೆಯನ್ನು ಸಾರ್ವಜನಿಕರಿಗೆ ತಿಳಿಸುವಂತೆ ಸೂಚಿಸಲಾಗಿದೆ.
ವರ್ತುಲ ರಸ್ತೆ ನಿರ್ಮಿಸುವ ಕುರಿತು ಸಲಹೆ, ಸೂಚನೆ ಹಾಗೂ ಆಕ್ಷೇಪಣೆಗಳಿದ್ದಲ್ಲಿ ಅಧಿಸೂಚನೆ ಹೊರಡಿಸಿದ 2 ತಿಂಗಳೊಳಗೆ ಸಾರ್ವಜನಿಕರು ನಗರ ಹಾಗೂ ಗ್ರಾಮಾಂತರ ಯೋಜನಾ ಇಲಾಖೆಗೆ ಲಿಖಿತವಾಗಿ ದೂರು ಸಲ್ಲಿಸಬಹುದು ಎಂದು ತಿಳಿಸಲಾಗಿದೆ.ಸಂಚಾರ ದಟ್ಟಣೆಗೆ ನಿಯಂತ್ರಣ:ಪಟ್ಟಣದ ಸುತ್ತ ವರ್ತುಲ ರಸ್ತೆ ನಿರ್ಮಾಣವಾಗುವುದರಿಂದ ಸಂಚಾರ ದಟ್ಟಣೆ ನಿಯಂತ್ರಣ ಆಗುತ್ತದೆ. ವರ್ತುಲ ರಸ್ತೆಯ ಸುತ್ತಮುತ್ತ ವ್ಯಾಪಾರ, ಕೈಗಾರಿಕೆ, ಗೋದಾಮು ಹಾಗೂ ವಸತಿ ಪ್ರದೇಶಗಳ ಅಭಿವೃದ್ಧಿಗೆ ಅವಕಾಶಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ. ಉತ್ತಮ ರಸ್ತೆ ಸಂಪರ್ಕದಿಂದ ಮುಳಗುಂದ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಆರ್ಥಿಕ ಚಟುವಟಿಕೆಗಳಿಗೂ ಉತ್ತೇಜನ ದೊರೆಯಬಹುದು. ಪಟ್ಟಣದ ಭವಿಷ್ಯದ ವಿಸ್ತರಣೆ ಹಾಗೂ ಸುಗಮ ಸಂಚಾರ ವ್ಯವಸ್ಥೆಗೆ ವರ್ತುಲ ರಸ್ತೆ ಪ್ರಮುಖ ಮೂಲಸೌಕರ್ಯವಾಗಲಿದ್ದು, ಯೋಜನೆಯ ಕಾಮಗಾರಿ ತ್ವರಿತವಾಗಿ ಅನುಷ್ಠಾನಗೊಳ್ಳಬೇಕು ಎಂಬುದು ಸ್ಥಳೀಯರ ಆಶಯವಾಗಿದೆ.ರೈತರಲ್ಲಿ ಭೂಸ್ವಾಧೀನದ ಆತಂಕ:
ಮುಳಗುಂದ ಪಟ್ಟಣದ ಸುತ್ತ ವರ್ತುಲ ರಸ್ತೆ ನಿರ್ಮಾಣಕ್ಕಾಗಿ ಕೃಷಿ ಜಮೀನು ಭೂ-ಸ್ವಾಧೀನಕ್ಕೆ ಒಳಪಡುತ್ತದೆ. ರಸ್ತೆಯ ಎರಡು ಬದಿಗಳಲ್ಲಿ ಎರಡು ಕಿಮೀ ವ್ಯಾಪ್ತಿಯ ಜಮೀನುಗಳನ್ನು ಪ್ರಭಾವ ವಲಯವಾಗಿದ್ದು. ಈ ಜಮೀನನ್ನು ಅನ್ಯ ಉದ್ದೇಶಕ್ಕೆ ಬಳಿಸಲು ಬರುವುದಿಲ್ಲ. ಕೃಷಿಯೇತರ(ಎನ್.ಎ) ಜಮೀನನ್ನಾಗಿ ಪರಿವರ್ತಿಸಲು ಆಗುವುದಿಲ್ಲ ಎಂಬುವ ಆತಂಕ ರೈತರಲ್ಲಿ ಮೂಡಿದೆ ಎಂದು ಸ್ಥಳೀಯ ರೈತ ಸಂಘದ ಅಧ್ಯಕ್ಷ ದೇವಪ್ಪ ಅಣ್ಣಿಗೇರಿ ತಿಳಿಸಿದ್ದಾರೆ.ವರ್ತುಲ ರಸ್ತೆ ನಿರ್ಮಾಣದಿಂದ ಪ್ರತಿಯೊಂದು ಹಳ್ಳಿಗಳ ಸಂಪರ್ಕ ರಸ್ತೆ ಪಟ್ಟಣಕ್ಕೆ ಸಹಕಾರಿಯಾಗುವುದರ ಜೊತೆಯಲ್ಲಿ ಪಟ್ಟಣದ ಸೌಕರ್ಯ ಹೆಚ್ಚುವುದು ಸಾರ್ವಜನಿಕರಿಗೆ ತುಂಬಾ ಸಹಕಾರಿಯಾಗಲಿದೆ ಎಂದುನಗರ ಮತ್ತು ಗ್ರಾಮಾಂತರ ಯೋಜನಾ ಆಯುಕ್ತರ ಕಚೇರಿಯ ಸಹಾಯಕ ನಿರ್ದೇಶಕರಾದ ಬಸವಂತಿ ಪಾಟೀಲ ತಿಳಿಸಿದ್ದಾರೆ.