ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಲೋಕಸಭಾ ಚುನಾವಣೆ ಬಳಿಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರುತ್ತದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಭವಿಷ್ಯ ನುಡಿದರು.ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಶಿಕ್ಷಣ ನೀತಿ ತೆಗೆದು ಎಸ್ಇಪಿ ಮಾಡುತ್ತಿದ್ದಾರೆ. ಹಾಗಾಗಿ ಮಧು ಬಂಗಾರಪ್ಪನಿಗೆ ನಾನು ಹೇಳೋದು ಇಷ್ಟೇ, ನಿಮ್ಮ ಸರ್ಕಾರ ಬಹಳ ದಿನ ಇರಲ್ಲ. ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್ ಸರ್ಕಾರ ಬೀಳುವುದು ಖಚಿತ. ಬಳಿಕ ಮತ್ತೆ ರಾಜ್ಯದಲ್ಲಿ ನಾವು ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡುತ್ತೇವೆ. ಹಿಂದೂ ವಿರೋಧಿ ಬಗ್ಗೆ ಯಾವುದೇ ಪಠ್ಯಕ್ರಮದಲ್ಲಿ ಸೇರಿಸಿದರೂ ನಾವೆಲ್ಲ ತೆಗೆದು ಹಾಕಿ, ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡುತ್ತೇವೆ. ಆದ್ದರಿಂದ ಸಚಿವ ಮಧು ಬಂಗಾರಪ್ಪ ದುಡುಕಬಾರದು ಎಂದು ಹೇಳಿದರು.
ಭಾರತವನ್ನು ಇಸ್ಲಾಮಿಕರಣ ಮಾಡುವ ಸಂಚು:ಈ ಬಾಂಬ್ ಸ್ಫೋಟ ಒಂದು ವ್ಯವಸ್ಥಿತ ಜಾಲವಾಗಿದೆ. ಬಾಂಬ್ ಸ್ಫೋಟಕ್ಕೂ ಪಾಕಿಸ್ತಾನ್, ಐಎಸ್‌ಐಎಸ್‌ಗೂ ಲಿಂಕ್ ಇದೆ. ದೇಶವನ್ನು ಅಭದ್ರಗೊಳಿಸುವ ಸಂಚು ಪಿಎಫ್‌ಐ ಚಟುವಟಿಕೆಗಳಿಗೂ ಲಿಂಕ್ ಇದೆ. ಸ್ಫೋಟದ ಹಿಂದೆ ಭಾರತವನ್ನು ಇಸ್ಲಾಮಿಕರಣ ಮಾಡುವ ಸಂಚು ಇದೆ. ಕಾಂಗ್ರೆಸ್ ಸರ್ಕಾರ ಮುಸ್ಲಿಂ ತುಷ್ಟಿಕರಣದಿಂದ ಬಾಂಬರ್‌ಗಳಿಗೆ ಸ್ವಾತಂತ್ರ್ಯ ಸಿಕ್ಕಂತಾಗಿದೆ ಎಂದು ದೂರಿದ ಅವರು, ಸ್ಫೋಟದ ತನಿಖೆ ಇನ್ನೂ ಆಳವಾಗಿ ನಡೆಯಬೇಕು. ಇದು ಸಾಮಾನ್ಯ ಪ್ರಕರಣ ಅಲ್ಲವೇ ಅಲ್ಲ. ಕಾಂಗ್ರೆಸ್‌ನ ಕೆಲ ಮಂತ್ರಿಗಳು ಅಪ್ರಬುದ್ಧರಾಗಿ ಹೇಳಿಕೆ ಕೊಟ್ಟಿದ್ದಾರೆ ಎಂದು ಕಿಡಿಕಾರಿದರು.
ಅಂದು ಸಿಲ್ಲಿ ಹೇಳಿಕೆ ನೀಡಿದವರಿಗೆ ಇವತ್ತು ಮುಖವೇ ಇಲ್ಲ ಎಂದ ಅವರು, ಘಟನೆ ಕುರಿತು ಗೃಹ ಸಚಿವರೇ ಖರ್ಗೆಯವರಿಗೆ ಛೀಮಾರಿ ಹಾಕಿದ್ದಾರೆ. ಖರ್ಗೆ ಬೇಜವಾಬ್ದಾರಿ ಹೇಳಿಕೆ ಕೊಡುವುದನ್ನು ಬಿಟ್ಟು ತಮ್ಮ ಇಲಾಖೆಯಲ್ಲಿ ಚೆನ್ನಾಗಿ ಕೆಲಸ ಮಾಡಲಿ ಎಂದು ಸಲಹೆ ನೀಡಿದರು.ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಹರಿಹಾಯ್ದ ಯತ್ನಾಳ್, ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಕೆಲಸ ಮಾಡೋದು ಬಿಟ್ಟು ಹಿಂದೂಗಳಿಗೆ ಬೈಯ್ಯುತ್ತಿದ್ದಾರೆ. ಕಲಬುರ್ಗಿಯಲ್ಲಿ ನಿತ್ಯ ಬಿಜೆಪಿ ಕಾರ್ಯಕರ್ತರ ಕೊಲೆ ಆಗುತ್ತಿದೆ. ಕಾನೂನು ಸುವ್ಯವಸ್ಥೆ ಸರಿಪಡಿಸಬೇಕು. ಹೀಗೆ ಮಾಡಿದರೆ ಅವರ ಗೌರವ ಕಡಿಮೆ ಆಗುತ್ತೆ ಎಂದರು.
ನಾಸೀರ್‌ಗೆ ಪ್ರಮಾಣವಚನ ಬೋಧಿಸಬೇಡಿ:ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿರುವ ಕುರಿತು ಮಾತನಾಡಿದ ಅವರು, ಈ ಪ್ರಕರಣ ನಾಸೀರ್ ಹುಸೇಸ್‌ಗೆ ಸುತ್ತಿಕೊಳ್ಳುತ್ತಿರುವುದರಿಂದ, ಬಾಂಬ್ ಬ್ಲಾಸ್ಟ್ ಪ್ರಕರಣ ತನಿಖೆ ಮುಗಿಯುವವರೆಗೂ ನಾಸೀರ್ ಹುಸೇನ್‌ಗೆ ಪ್ರಮಾಣ ವಚನ ಬೋಧಿಸಬಾರದು. ಪ್ರಕರಣದ ತನಿಖೆ ಮುಗಿಯುವವರೆಗೂ ಪ್ರಮಾಣ ವಚನ ಬೋಧಿಸದಂತೆ ಉಪರಾಷ್ಟ್ರಪತಿಗಳಿಗೆ ಯತ್ನಾಳ್ ಮನವಿ ಮಾಡಿದರು. ಘೋಷಣೆ ಕೂಗಿದ ವ್ಯಕ್ತಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಜೊತೆಗೆ ನಿಕಟ ಸಂಬಂಧ ಹೊಂದಿದ್ದಾರೆ. ಇದರಲ್ಲಿ ನಾಸೀರ್ ಹುಸೇನ್ ಪಾತ್ರವೂ ಇದ್ದೆ ಇದೆ ಎಂದು ಹೇಳಿದರು.
ಒಂದು ಕೋಮಿಗೆ ₹10 ಸಾವಿರ ಕೋಟಿ ಹಣ, ವಕ್ಫ್ ಆಸ್ತಿ ರಕ್ಷಣೆಗೆ ಕಾಂಪೌಂಡ್ ನಿರ್ಮಾಣಕ್ಕೆ ₹100 ಕೋಟಿ, ಹೀಗೆ ನಮ್ಮ ಹಣವನ್ನೆಲ್ಲ ಅವರಿಗೆ ಕೊಡುತ್ತಿದ್ದಾರೆ. ಹಿಂದೂಗಳಿಗೆ ಒಂದು ಕಾನೂನು, ಅವರಿಗೆ ಒಂದು ಕಾನೂನು ಎಂದು ಆಕ್ರೋಶ ಹೊರಹಾಕಿದ ಅವರು, ಹೀಗೆ ಮಾಡುತ್ತಿರುವುದರಿಂದ ಸರ್ಕಾರ ಸಾಲದ ಸುಳಿಯಲಿ ಸಿಲುಕುತ್ತಿದೆ ಎಂದು ಆರೋಪಿಸಿದರು.ಜೆಪಿ ನಡ್ಡಾ ಜತೆ ಮಾತನಾಡಿರುವೆ:
ನಾನು ಜೆಪಿ ನಡ್ಡಾ ಜೊತೆಗೆ 15 ನಿಮಿಷಗಳ ಕಾಲ ಮಾತನಾಡಿದ್ದೇನೆ, ಲೋಕಸಭೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿರುವೆ. ನನಗೆ ಪ್ರಚಾರದ ಜವಾಬ್ದಾರಿ ವಹಿಸಲಿ, ನಾನು 28 ಕ್ಷೇತ್ರಗಳಿಗೆ ಹೋಗಿ ಪ್ರಚಾರ ನಡೆಸುವೆ ಎಂದಿದ್ದೇನೆ ಎಂದು ಹೇಳಿದರು.