ಬರ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲ: ನಾಡಗೌಡ

| Published : Nov 18 2023, 01:00 AM IST

ಸಾರಾಂಶ

ಬರ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲ: ನಾಡಗೌಡ

ರಾಯಚೂರು, ಮಾನ್ವಿ, ಸಿರವಾರದಲ್ಲಿ ಜೆಡಿಎಸ್ ಪಕ್ಷದಿಂದ ಬರ ವೀಕ್ಷಣೆ । ಆತ್ಮಹತ್ಯೆ ಮಾಡಿಕೊಂಡ ರೈತ ಬಸವರಾಜ ಕುಟುಂಬಕ್ಕೆ ಸಾಂತ್ವಾನಕನ್ನಡಪ್ರಭ ವಾರ್ತೆ ರಾಯಚೂರು/ಮಾನ್ವಿ

ಜಿಲ್ಲೆಯಲ್ಲಿ ತೀವ್ರ ಬರ ಆವರಿಸಿದ ಹಿನ್ನೆಲೆಯಲ್ಲಿ ಜೆಡಿಎಸ್‌ ಪಕ್ಷದ ಬರ ಅಧ್ಯಯನ ತಂಡ ರಾಯಚೂರು ಸೇರಿ ಮಾನ್ವಿ ಮತ್ತು ಸಿರವಾರ ತಾಲೂಕುಗಳ ವಿವಿಧ ಗ್ರಾಮಗಳಿಗೆ ತೆರಳಿ ಬರ ಪರಿಸ್ಥಿತಿಯನ್ನು ಶುಕ್ರವಾರ ವೀಕ್ಷಣೆಯನ್ನು ಮಾಡಿತು.

ಮಾಜಿ ಸಚಿವ ವೆಂಕಟರಾವ್‌ ನಾಡಗೌಡ ನೇತೃತ್ವದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ರಾಯಚೂರು ತಾಲೂಕಿನ ಗೋನಾಳ ಗ್ರಾಮದ ರೈತರ ಜಮೀನುಗಳಿಗೆ ಭೇಟಿ ನೀಡಿ ಬೆಳೆ ಹಾನಿಯ ಪರಿಶೀಲನೆ ನಡೆಸಿ, ನಂತರ ಆತ್ಮಹತ್ಯೆ ಮಾಡಿಕೊಂಡ ರೈತ ಬಸವರಾಜ ಕುಟುಂಬಕ್ಕೆ ಸಾಂತ್ವಾನ ಹೇಳಿ 20 ಸಾವಿರ ರು. ಸಹಾಯಧನ ವಿತರಿಸಿದರು.

ಬಳಿಕ ಸಿರವಾರ ತಾಲೂಕಿನ ಕಲ್ಲೂರು, ಮಾನ್ವಿ ಪಟ್ಟಣ, ಹಿರೇಕೊಟ್ನಿಕಲ್ ಹಾಗೂ ಪೋತ್ನಾಳದಲ್ಲಿರುವ ರೈತ ಸಂಪರ್ಕ ಕೇಂದ್ರಗಳ ವ್ಯಾಪ್ತಿಗೆ ಸೇರಿದಂತೆ ವಿವಿಧ ಗ್ರಾಮಗಳ ಜಮೀನುಗಳಿಗೆ ಭೇಟಿ ನೀಡಿ ಮಳೆಯ ಕೊರತೆಯಿಂದ ಹಾಳಾದ ತೊಗರಿ, ಹತ್ತಿ, ಮೆಣಸಿನಕಾಯಿ, ಜೋಳ, ಭತ್ತ, ಸೂರ್ಯಕಾಂತಿ ಬೆಳೆಗಳನ್ನು ವೀಕ್ಷಿಸಿ ರೈತರಿಂದ ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ವೆಂಕಟರಾವ್ ನಾಡಗೌಡ, ರಾಜ್ಯ ಸರ್ಕಾರವು ಬರ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದ್ದು, ಈಗ ಕೇಂದ್ರ ಸರ್ಕಾರದ ಮೇಲೆ ಗೂಬೆಕೂರಿಸುವ ಕೆಲಸ ಮಾಡುತ್ತಿರುವುದು ಸರಿಯಲ್ಲ ಎಂದರು.

ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಇತ್ತೀಚೆಗೆ ವಿವಿಧ ಹೊಲಗಳಿಗೆ ಭೇಟಿ ನೀಡಿದರು, ಅದರೆ ಇದುವರೆಗೆ ಯಾವುದೇ ರೀತಿ ಸರ್ವೆಯಾಗಿಲ್ಲ ಮತ್ತು ಪರಿಹಾರವನ್ನು ನೀಡಿಲ್ಲ. ಅದೇ ರೀತಿ ಆತ್ಮಹತ್ಯೆ ಮಾಡಿಕೊಂಡ ರೈತ ಬಸವರಾಜ್ ಇವರ ಮನೆಗೆ ಇದುವರೆಗೂ ಜಿಲ್ಲಾಡಳಿತ ಯಾವುದೇ ಅಧಿಕಾರಿಗಳು ಭೇಟಿ ನೀಡಿಲ್ಲ. ಇದು ರೈತರ ಬಗ್ಗೆ ರಾಜ್ಯ ಸರ್ಕಾರದ ಸಂಪೂರ್ಣ ನಿರ್ಲಕ್ಷ್ಯ ತೋರಿಸುತ್ತಿರುವುದನ್ನು ತೋರುತ್ತದೆ. ತಕ್ಷಣವೇ ಮೃತ ರೈತನ ಕುಟುಂಬಕ್ಕೆ ಪರಿಹಾರ ನೀಡಬೇಕು ಮತ್ತು ಬೆಳೆ ಪರಿಹಾರ ಸರ್ವೇ ಮಾಡಿ ಪರಿಹಾರ ನೀಡಬೇಕೆಂದು ಹೇಳಿದರು.

ಮಾಜಿ ಶಾಸಕ ವೆಂಕಟಪ್ಪ ನಾಯಕ ಮಾತನಾಡಿ, ಮಳೆಯ ಕೊರತೆಯಿಂದಾಗಿ ಬಹುತೇಕ ರೈತರು ಬೆಳೆಗಳನ್ನು ಕಳೆದುಕೊಂಡಿದ್ದಾರೆ. ಈಗಾಗಲೇ ಬಿತ್ತನೆ ಮಾಡಿದ ಬೆಳೆ ಚೆನ್ನಾಗಿ ಮೊಳಕೆ ಬಂದಿದೆಯಾದರೂ ಸರಿಯಾದ ಸಮಯಕ್ಕೆ ಮಳೆ ಬಾರದ ಕಾರಣ ಫಸಲು ಬರಬೇಕಾದ ಬೆಳೆ ಕೈ ಕೊಟ್ಟಿದೆ. ಆದ್ದರಿಂದ ಸರ್ಕಾರ ಕೂಡಲೇ ರೈತರಿಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

ಈ ಭಾಗದ ರೈತರಿಗೆ ಜೀವನಾಡಿಯಾದ ತುಂಗಭದ್ರಾ ಎಡದಂಡೆ ಕಾಲುವೆಗೆ ಸರಿಯಾದ ಸಮಯಕ್ಕೆ ನೀರು ಬಿಡದ ಕಾರಣ ಈಗ ಭತ್ತ ಬೆಳೆಯುವ ರೈತರು ಸಮಸ್ಯೆ ಎದರಿಸುವಂತಾಗಿದೆ. ವರುಣನ ಅವಕೃಪೆಯಿಂದ ಧರೆಗುರುಳಿ ಶೇ. 50ರಷ್ಟು ಬೆಳೆ ನಾಶವಾಗಿದೆ. ಆದ್ದರಿಂದ ರಾಜ್ಯ ಸರ್ಕಾರ ಬೆಳೆ ಹಾನಿಗೆ ಪ್ರತಿ ಎಕರೆಗೆ 25 ಸಾವಿರ ರು.ಗಳ ಪರಿಹಾರ ನೀಡಬೇಕೆಂದು ಸರ್ಕಾರಕ್ಕೆ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಪಕ್ಷದ ರಾಜ್ಯ ಉಪಾಧ್ಯಕ್ಷ ಮಹಾಂತೇಶ ಪಾಟೀಲ್, ಜಿಲ್ಲಾಧ್ಯಕ್ಷ ಎಂ. ವಿರುಪಾಕ್ಷಿ, ಮುಖಂಡರಾದ ಸಿದ್ದು ಬಂಡಿ, ನರಸಿಂಹ ನಾಯಕ್, ಎನ್‌. ಶಿವಶಂಕರ ವಕೀಲರು, ಲಕ್ಷ್ಮಿಪತಿ ಗಾಣದಾಳ್ ಸೇರಿದಂತೆ ವಿವಿಧ ಘಟಕಗಳ ನಾಯಕರು, ಕಾರ್ಯಕರ್ತರು ಇದ್ದರು.

- - -

17ಕೆಪಿಆರ್‌ಸಿಆರ್‌01:

ರಾಯಚೂರು ಜಿಲ್ಲೆ ವಿವಿಧ ತಾಲೂಕುಗಳಿಗೆ ಜೆಡಿಎಸ್‌ ಸದಸ್ಯರು ಭೇಟಿ ನೀಡಿ ಬರ ಅಧ್ಯಯನ ನಡೆಸಿದರು.